
Cinema Review| ನಂಬಿಕೆ ಎಂಬ ‘ಫೈರ್ ಫ್ಲೈ’ ಸದಾ ಮಿನುಗಲಿ
‘ಫೈರ್ ಫ್ಲೈ’ ಚಿತ್ರದ ದೊಡ್ಡ ಮೈನಸ್ ಎಂದರೆ ಅದರ ಶೀರ್ಷಿಕೆ. ಹೆಸರು ಕೇಳಿದರೆ, ಚಿತ್ರ ಏನಿರಬಹುದು, ಏನು ಹೇಳುವುದಕ್ಕೆ ಹೊರಟಿರಬಹುದು ಎಂದು ಗೊತ್ತಾಗುವುದಿಲ್ಲ. ಆದರೆ, ಇದೊಂದು Gen Z ಸಿನಿಮಾ ಆದ್ದರಿಂದ, ಆ ವರ್ಗದವರನ್ನು ಸೆಳೆಯುವುದಕ್ಕೆ ಇಂಥೆ ಹೆಸರು ಇಟ್ಟಿರುವ ಸಾಧ್ಯತೆ ಇದೆ.
ಎಲ್ಲರಿಗೂ ನಿದ್ದೆಯಲ್ಲಿ ಕನಸು ಬಿದ್ದರೆ, ಅವನಿಗೆ ನಿದ್ದೆಯೆ ಕನಸು …
195 ದಿನಗಳ ನಂತರ ಅವನು ಅತ್ತಿರುತ್ತಾನೆ. ಅದಕ್ಕೂ ಮುನ್ನ ಹತಾಶೆ, ಖಿನ್ನತೆ, ಒಂಟಿತನ ಅವನನ್ನು ಆವರಿಸಿಕೊಂಡಿರುತ್ತದೆ. ಏನು ಮಾಡಬೇಕು ಎಂದು ತೋಚುವುದಿಲ್ಲ. ತನ್ನ ನೋವನ್ನು ಹೇಳಿಕೊಳ್ಳುವುದಕ್ಕೆ ಆಗುತ್ತಿಲ್ಲ. ಹೇಳಿಕೊಳ್ಳಬೇಕೆನಿಸಿದರೂ ಸಾಧ್ಯವಾಗುತ್ತಿಲ್ಲ. ಇಂಥ ಅಂಧಕಾರದಲ್ಲಿರುವವನಿಗೆ ನಂಬಿಕೆ ಎಂಬ ಮಿಂಚುಹುಳ ಕಾಣುತ್ತದೆ. ಅದು ಅವನನ್ನು ಬೆಳಕಿನೆಡೆಗೆ ಕರೆದೊಯ್ಯುತ್ತದೆ.
‘ಫೈರ್ ಫ್ಲೈ’ ಚಿತ್ರದ ದೊಡ್ಡ ಮೈನಸ್ ಎಂದರೆ ಅದರ ಶೀರ್ಷಿಕೆ. ಹೆಸರು ಕೇಳಿದರೆ, ಚಿತ್ರ ಏನಿರಬಹುದು, ಏನು ಹೇಳುವುದಕ್ಕೆ ಹೊರಟಿರಬಹುದು ಎಂದು ಗೊತ್ತಾಗುವುದಿಲ್ಲ. ಆದರೆ, ಇದೊಂದು Gen Z ಸಿನಿಮಾ ಆದ್ದರಿಂದ, ಆ ವರ್ಗದವರನ್ನು ಸೆಳೆಯುವುದಕ್ಕೆ ಇಂಥೆ ಹೆಸರು ಇಟ್ಟಿರುವ ಸಾಧ್ಯತೆ ಇದೆ. ಚಿತ್ರದಲ್ಲೊಂದು ಅದ್ಭುತವಾದ ಸಂದೇಶವಿದೆ. ಜೀವನದ ದರ್ಶನವಿದೆ. ಇವೆಲ್ಲವನ್ನೂ ಸ್ವಲ್ಪ ಹಾಸ್ಯಮಯವಾಗಿ ಮತ್ತು ಸ್ವಲ್ಪ ಗಂಭೀರತೆಯೊಂದಿಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಂಶಿ.
ಚಿತ್ರ: ಫೈರ್ ಫ್ಲೈ ನಿರ್ದೇಶನ: ವಂಶಿ ನಿರ್ಮಾಣ: ನಿವೇದಿತಾ ಶಿವರಾಜಕುಮಾರ್ ತಾರಾಗಣ: ವಂಶಿ, ರಚನಾ ಇಂದರ್, ಶಿವರಾಜಕುಮಾರ್, ಅಚ್ಯುತ್ ಕುಮಾರ್, ಸುಧಾರಾಣಿ ಮುಂತಾದವರು |
ಇಷ್ಟಕ್ಕೂ ಆ ಸಂದೇಶವೇನು? ಅದು ಗೊತ್ತಾಗಬೇಕಿದ್ದರೆ ಒಮ್ಮೆ ಕಥೆ ಕೇಳಿ. ನಾಲ್ಕು ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿರುವ ವಿಕ್ಕಿ (ವಂಶಿ), ತನ್ನ ದೊಡ್ಡಪ್ಪನ ಮಗನ ಮದುವೆಗೆಂದು ಮೈಸೂರಿಗೆ ಬರುತ್ತಾನೆ. ನಾಲ್ಕು ವರ್ಷಗಳ ಕಾಲ ಅಪ್ಪ-ಅಮ್ಮನಿಂದ ದೂರವಿದ್ದ ಅವನು ಖುಷಿಯಲ್ಲಿ ತೇಲುತ್ತಿರುವಾಗಲೇ, ಒಂದು ದೊಡ್ಡ ಆಪಘಾತವಾಗುತ್ತದೆ. ಈ ಅಪಘಾತದಲ್ಲಿ ಅಪ್ಪ-ಅಮ್ಮ ನಿಧನರಾದರೆ, ವಿಕ್ಕಿ ಕೋಮಾಗೆ ಜಾರುತ್ತಾನೆ. ಮೂರು ನಂತರ ಪ್ರಜ್ಞೆ ಬರತ್ತದೆ. ಅಲ್ಲಿಂದ ಹೊಸ ಅಧ್ಯಾಯ ಶುರು. ತಂದೆ-ತಾಯಿಯ ಸಾವಿನ ನೋವು, ಹತಾಶೆ, ಖಿನ್ನತೆಯಲ್ಲಿ ಮುಳುಗುವ ಅವನಿಗೆ ಕೊನೆಗೆ ಆಗಿದ್ದನ್ನು ತಡೆಯೋಕ್ಕಾಗಲ್ಲ, ಆಗೋದನ್ನು ತಪ್ಪಿಸುವುದಕ್ಕಾಗಲ್ಲ ಎಂಬುದು ಗೊತ್ತಾಗುತ್ತದೆ. ನಾವು ನಮ್ಮ ಕೆಲಸ ಮಾಡುತ್ತಾ ಹೋಗಬೇಕು ಎಂದು ಅರ್ಥವಾಗುತ್ತದೆ. ಈ ಭರವಸೆಯ ಮಿಂಚುಹುಳದಿಂದ ವಿಕ್ಕಿ ಹೇಗೆ ಬದಲಾಗುತ್ತಾನೆ ಎಂಬುದೇ ಚಿತ್ರದ ಕಥೆ.
ಖಿನ್ನತೆ, ಹತಾಶೆಯಿಂದ ವಿರುದ್ಧ ಹೋರಾಡುವ ಕೆಲವು ಚಿತ್ರಗಳು ಕನ್ನಡದಲ್ಲಿ ಬಂದಿದ್ದರೂ, ಅವು ಹೆಚ್ಚು ಸುದ್ದಿಯಾಗಿಲ್ಲ. ‘ಫೈರ್ ಫ್ಲೈ’ ಚಿತ್ರದ ಮೂಲಕ ವಂಶಿ ಸಹ ಇಂಥದ್ದೊಂದ ಪ್ರಯತ್ನ ಮಾಡಿದ್ದಾರೆ. ಒಂದು ಸರಳ ಕಥೆಯನ್ನು ವಿಭಿನ್ನವಾಗಿ ಮತ್ತು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಮಾಸ್ ಅಂಶಗಳು, ಹಾಡು, ಫೈಟು ಇಷ್ಟಪಡುವವರಿಗೆ ಈ ಚಿತ್ರ ಏಕ್‌ದಂ ರುಚಿಸುವುದು ಕಷ್ಟ. ಏಕೆಂದರೆ, ಇಲ್ಲಿ ಅದ್ಯಾವುದೂ ಇಲ್ಲ. ಇವತ್ತಿನ ತಲೆಮಾರಿನವರು ಎದುರಿಸುವಂತ ಮಾನಸಿಕ ತೊಳಲಾಟವನ್ನು ಸ್ವಲ್ಪ ಹಾಸ್ಯಮಯವಾಗಿ ಮತ್ತು ಸ್ವಲ್ಪ ಭಾವುಕರಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ವಂಶಿ. ಈ ಚಿತ್ರ ಮೇಕಿಂಗ್‍ನಿಂದ ಇಷ್ಟವಾಗುತ್ತದೆ. ಆದರೆ, ನಿರೂಪಣೆ ಇನ್ನಷ್ಟು ವೇಗವಾಗಿದ್ದರೆ, ಚಿತ್ರವನ್ನು ಟ್ರಿಮ್ ಮಾಡಿದ್ದರೆ ಚಿತ್ರ ಹೆಚ್ಚು ನೋಡಿಸಿಕೊಂಡು ಹೋಗುತ್ತಿತ್ತು.
ವಂಶಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿರುವ ವಿಕ್ಕಿ ಪಾತ್ರವನ್ನು ಜೀವಿಸಿದ್ದಾರೆ. ತೆರೆಯ ಮೇಲೆ ಸ್ವಲ್ಪ ಹೊತ್ತು ಬಂದರೂ ಅಚ್ಯುತ್ ಕುಮಾರ್ ಮತ್ತು ಸುಧಾರಾಣಿ ಮನಸ್ಸಿನಲ್ಲುಳಿಯುತ್ತಾರೆ. ಆನಂದ್ ನೀನಾಸಂ, ಚಿತ್ಕಲಾ ಬಿರಾದಾರ್, ಮೂಗು ಸುರೇಶ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಚನಾ ಇಂದರ್‍ಗೆ ಹೆಚ್ಚು ಕೆಲಸವಿಲ್ಲ. ಶಿವರಾಜಕುಮಾರ್ ಚಿತ್ರದಲ್ಲಿ ಯಾಕಿದ್ದಾರೆ ಎಂದು ಗೊತ್ತಾಗುವುದಕ್ಕೆ ಕೊನೆಯವರೆಗೂ ಕಾಯಬೇಕು. ಚಿತ್ರವನ್ನು ನೋಡಿಸಿಕೊಂಡು ಹೋಗುವುದು ಅಭಿಲಾಷ್ ಕಲ್ಲತ್ತಿ ಅವರ ಛಾಯಾಗ್ರಹಣ ಮತ್ತು ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ.
ಮಾಮೂಲಿ ಕಮರ್ಷಿಯಲ್ ಚಿತ್ರಗಳನ್ನು ಬಯಸುವವರಿಗೆ ‘ಫೈರ್ ಫ್ಲೈ’ ಹಿಡಿಸುವುದು ಕಷ್ಟ. ಒಂದು ವಿಭಿನ್ನ ಪ್ರಯತ್ನ ಮತ್ತು ಪ್ರಯೋಗವನ್ನು ಇಷ್ಟಪಡುವವರು ‘ಫೈರ್ ಫ್ಲೈ’ ಚಿತ್ರವನ್ನು ಖಂಡಿತಾ ನೋಡಬಹುದು.