ʻಜೀನಿಯಸ್ ಮುತ್ತʼನಿಗೆ ಸಾಥ್ ನೀಡಿದ ʻಚಿನ್ನಾರಿ ಮುತ್ತಾʼ
x
ವಿಜಯ ರಾಘವೇಂದ್ರ ಅವರೊಂದಿಗೆ ಹಿರಿಯ ನಟಿ ಗಿರಿಜಾ ಲೋಕೇಶ್‌

ʻಜೀನಿಯಸ್ ಮುತ್ತʼನಿಗೆ ಸಾಥ್ ನೀಡಿದ ʻಚಿನ್ನಾರಿ ಮುತ್ತಾʼ

ವಿಶೇಷ ಪಾತ್ರದಲ್ಲಿ ʼಚಿನ್ನಾರಿಮುತ್ತಾʼನಾಗಿ ಮೆಚ್ಚುಗೆ ಪಡೆದಿರುವ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ.


Click the Play button to hear this message in audio format

ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ಪತ್ನಿ ನಾಗಿಣಿ ಭರಣ ನಿರ್ದೇಶನದ ಮೊದಲ ಚಿತ್ರ ʼಜೀನಿಯಸ್ ಮುತ್ತʼ ತೆರೆಗೆ ಬರಲು ಸಿದ್ದವಾಗಿದೆ. ಆಗಸ್ಟ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಜಿ.ಎಸ್ ಲತಾ ಜೈಪ್ರಕಾಶ್ ನಿರ್ಮಾಣದ ಈ ಚಿತ್ರದಲ್ಲಿ ʼಜೀನಿಯಸ್ ಮುತ್ತ' ನಾಗಿ ಮಾಸ್ಟರ್ ಶ್ರೇಯಸ್ ಜೈಪ್ರಕಾಶ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ʼಚಿನ್ನಾರಿಮುತ್ತ' ನಾಗಿ ಮೆಚ್ಚುಗೆ ಪಡೆದಿರುವ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ನಿರ್ದೇಶಕಿ ನಾಗಿಣಿ ಭರಣ, ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಹೆಚ್ಚಾಗಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ. ಮಾಸ್ಟರ್ ಶ್ರೇಯಸ್‌, ವಿಜಯ ರಾಘವೇಂದ್ರ, ಟಿ.ಎಸ್.ನಾಗಾಭರಣ, ಗಿರಿಜಾ ಲೋಕೇಶ್, ಸುಂದರರಾಜ್, ಪನ್ನಗಾಭರಣ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಒಂದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಾಗೂ ವಿದೇಶಗಳಲ್ಲಿ ನಮ್ಮ ಚಿತ್ರದ ಪ್ರದರ್ಶನವಾಗಿದೆ. ಸಿನಿಮಾ ನೋಡಿದವರು ಮೆಚ್ಚುಗೆ ಮಾತುಗಳಾಡಿದ್ದಾರೆ. ಆಗಸ್ಟ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ನಿರ್ದೇಶಕ ಟಿ.ಎಸ್ ನಾಗಾಭರಣ ಮಾತನಾಡಿ, ನಾಗಿಣಿ ಅವರು ಈಗ ಸ್ವತಂತ್ರ ನಿರ್ದೇಶನ ಮಾಡಿದರಷ್ಟೇ. ಆದರೆ ನನ್ನ ಎಲ್ಲಾ ಸಿನಿಮಾ, ಧಾರಾವಾಹಿಗಳ ನಿರ್ದೇಶನಕ್ಕೆ ಹಿಂದಿನಿಂದ ಸಹಕಾರ ನೀಡುತ್ತಿದ್ದರು. ಈಗ ಮೊದಲ ಚಿತ್ರ ನಿರ್ದೇಶನ ಮಾಡಿದ್ದಾರೆ. ನಾನು ಈ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದೇನೆ ಎಂದರು.

ಸಿನಿಮಾದಲ್ಲಿ ಮುಖ್ಯ ಪಾತ್ರ ನಿರ್ವಹಿಸಿರುವ ಮಾಸ್ಟರ್ ಶ್ರೇಯಸ್ ಮಾತನಾಡಿ, ನಾನು ಭರಣ ಸರ್ ಅವರ ಬಳಿ ನಟನೆ ಕಲಿತಿದ್ದೇನೆ. ಆ‌ ನಂತರ ಅಮ್ಮನಿಗೆ ನಾನು ನಟಿಸಬೇಕೆಂದು ಆಸೆಯಾಯಿತು. ಈ ಚಿತ್ರದಲ್ಲಿ ʻಜೀನಿಯಸ್ ಮುತ್ತʼನಾಗಿ ಅಭಿನಯಿಸಿದ್ದೇನೆ. ಅವಕಾಶ ನೀಡಿದ ಅಮ್ಮನಿಗೆ ಹಾಗೂ ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು

ನಾನು ಯಾವಾಗಲೂ ನಾಗಾಭರಣ್ ಸರ್ ಅವರಿಗೆ ಆಬಾರಿ. ಏಕೆಂದರೆ ನನ್ನನ್ನು ಎಲ್ಲರು ವಿಜಯ ರಾಘವೇಂದ್ರ ಅನ್ನುವುದಕ್ಕಿಂತ ಚಿನ್ನಾರಿಮುತ್ತ ಎನ್ನುವುದೇ ಹೆಚ್ಚು. ಅಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದವರು ನಾಗಾಭರಣ್ ಸರ್. ಈಗ ನಾಗಿಣಿ ಭರಣ ಅವರ ಮೊದಲ ನಿರ್ದೇಶನದಲ್ಲೂ ನಾನು ನಟಿಸಿರುವುದು ಖುಷಿಯಾಗಿದೆ ಎಂದು ನಟ ವಿಜಯ ರಾಘವೇಂದ್ರ ತಿಳಿಸಿದರು.

ನಿರ್ಮಾಪಕಿ ಲತಾ ಜೈಪ್ರಕಾಶ್ ಮಾತನಾಡಿ, ನಾಗಿಣಿ ಭರಣ ಅವರು ನನಗೆ ಹತ್ತು ವರ್ಷಗಳ ಪರಿಚಯ. ನನ್ನ ಮಗನಿಗಾಗಿ ಒಂದೊಳ್ಳೆ ಕಥೆ ಮಾಡಿ ನೀವೇ ನಿರ್ದೇಶನ ಮಾಡಬೇಕೆಂದು ನಾಗಿಣಿ ಭರಣ ಅವರ ಬಳಿ ಹೇಳಿದೆ. ಅವರು ಒಳ್ಳೆಯ ಕಥೆ ಸಿದ್ದ ಮಾಡಿಕೊಂಡು ನನಗೆ ಕಥೆ ಹೇಳಿದರು. ನಂತರ ʻಜೀನಿಯಸ್ ಮುತ್ತʼ ಸಿನಿಮಾ ಆರಂಭವಾಯಿತು. ಈಗ ಬಿಡುಗಡೆ ಹಂತ ತಲುಲಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು

ಚಿತ್ರದಲ್ಲಿ ನಟಿಸಿರುವ ಗಿರಿಜಾ ಲೋಕೇಶ್, ಪನ್ನಗಾ ಭರಣ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತದ ಬಗ್ಗೆ ಬಾಪು ಪದ್ಮನಾಭ ಮಾಹಿತಿ ನೀಡಿದರು.

Read More
Next Story