ನಟ ಶಾರೂಖ್‌ ಖಾನ್‌, ನಟಿ ದೀಪಿಕಾ ಪಡುಕೋಣೆ ವಿರುದ್ಧ ವಂಚನೆ ಪ್ರಕರಣ ದಾಖಲು
x

ನಟ ಶಾರೂಖ್‌ ಖಾನ್‌, ನಟಿ ದೀಪಿಕಾ ಪಡುಕೋಣೆ ವಿರುದ್ಧ ವಂಚನೆ ಪ್ರಕರಣ ದಾಖಲು

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅವರು ಹ್ಯುಂಡೈ ಇಂಡಿಯಾದ ಪ್ರಚಾರ ರಾಯಭಾರಿಗಳಾಗಿದ್ದಾರೆ. ಈ ಕಾರಣಕ್ಕಾಗಿ ಕಾನೂನು ಸಂಕಷ್ಟ ಎದುರಿಸುವಂತಾಗಿದೆ.


ಬಾಲಿವುಡ್‌ ಸ್ಟಾರ್‌ ನಟರಾದ ಶಾರೂಖ್‌ ಖಾನ್‌ ಹಾಗೂ ನಟಿ ದೀಪಿಕಾ ಪಡುಕೋಣೆ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಕಾನೂನು ಸಂಕಷ್ಟ ಎದುರಾಗಿದೆ.

ಈ ಇಬ್ಬರು ನಟರು ತಾಂತ್ರಿಕ ಸಮಸ್ಯೆ ಮತ್ತು ಎಂಜಿನ್ ಸಮಸ್ಯೆ ಹೊಂದಿರುವ ವಾಹನಗಳನ್ನು ಖರೀದಿಸುವಂತೆ ಜಾಹೀರಾತು ಮೂಲಕ ಜನರನ್ನು ದಿಕ್ಕುತಪ್ಪಿಸಿ ವಂಚಿಸಿದ್ದಾರೆ ಎಂದು ಭರತ್‌ಪುರ್ ನಿವಾಸಿ ಕೀರ್ತಿ ಸಿಂಗ್ ಎಂಬುವರು ನ್ಯಾಯಾಲಯ ಮೆಟ್ಟಿಲೇರಿದ್ದರು. ಈಗ ನ್ಯಾಯಾಲಯದ ಸೂಚನೆ ಮೇರೆಗೆ ಮಥುರಾ ಪೊಲೀಸರು ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಹ್ಯುಂಡೈ ಇಂಡಿಯಾ ಮ್ಯಾನೇಜರ್ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಹ್ಯುಂಡೈ ಇಂಡಿಯಾದ ಪ್ರಚಾರ ರಾಯಭಾರಿಗಳಾಗಿದ್ದು, ಹುಂಡೈ ಕಾರುಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಕಾರಣಕ್ಕಾಗಿ ಕಾನೂನು ಸಂಕಷ್ಟ ಎದುರಿಸುವಂತಾಗಿದೆ.

ದೂರುದಾರ ಕೀರ್ತಿ ಸಿಂಗ್ 2022ರಲ್ಲಿ ಹ್ಯುಂಡೈ ಅಲ್ಕಜರ್ ಕಾರು ಖರೀದಿಸಿದ್ದರು. ಹುಂಡೈ ಕಾರು ಹೆಚ್ಚು ಸುರಕ್ಷಿತ, ಉತ್ತಮ ಎಂಜಿನ್ ಪರ್ಫಾಮೆನ್ಸ್, ಸ್ಥಳಾವಕಾಶ ಸೇರಿದಂತೆ ಹಲವು ಮಾಹಿತಿಗಳ ಕುರಿತು ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಜಾಹೀರಾತಿನಲ್ಲಿ ಹೇಳಿದ್ದರು. ಜಾಹೀರಾತು ನೋಡಿ ಕೀರ್ತಿಸಿಂಗ್‌ ಅವರು 24 ಲಕ್ಷ ರೂ. ನೀಡಿ ಕಾರು ಖರೀದಿಸಿದ್ದರು. ಕಾರು ಖರೀದಿಸಿದ 6 ರಿಂದ 7 ತಿಂಗಳಲ್ಲಿ ಕಾರಿನಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡವು. ಡೀಲರ್ ಬಳಿ ತೆರಳಿದಾಗ ಇದು ಮ್ಯಾನ್ಯುಫಾಕ್ಚರ್ ಡಿಫಾಲ್ಟ್ ಎಂದಿದ್ದಾರೆ. ಹೈಸ್ಪೀಡ್‌ನಲ್ಲಿ ತೆರಳುವಾಗ ಕಾರು ವೈಬ್ರೇಟ್ ಆಗುತ್ತಿದೆ. ಜೊತೆಗೆ ಭಾರೀ ಶಬ್ದ ಬರುತ್ತಿದೆ. ಇಷ್ಟೇ ಅಲ್ಲ ಎಂಜಿನ್ ಮ್ಯಾನೇಜ್ಮೆಂಟ್ ಸಿಸ್ಟಮ್‌ನಲ್ಲೂ ಸಮಸ್ಯೆಗಳಿವೆ ಎಂದು ಕೀರ್ತಿ ಸಿಂಗ್ ಹೇಳಿದ್ದರು.

ಕಂಪನಿಯ ಉತ್ಪಾದನೆ ಸಮಸ್ಯೆ ಎಂದು ಡೀಲರ್ ಪರಿಶೀಲಿಸಿ ಹೇಳಿರುವ ಕಾರಣ ಇದೇ ಆಧಾರವಾಗಿಟ್ಟುಕೊಂಡ ಕೀರ್ತಿ ಸಿಂಗ್ ನ್ಯಾಯಾಲಯ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಥುರಾ ಪೊಲೀಸರಿಗೆ ಈ ಕುರಿತು ದೂರು ದಾಖಲಿಸಿಕೊಳ್ಳಲು ಸೂಚಿಸಿದೆ. ಇದರಂತೆ ಮಥುರಾ ಪೊಲೀಸರು, ಬ್ರ್ಯಾಂಡ್ ಅಂಬಾಸಿಡರ್ ಆದ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಹ್ಯುಂಡೈ ಇಂಡಿಯಾ ಮ್ಯಾನೇಜರ್ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಯಾವುದೇ ಉತ್ಪನ್ನಗಳ ಕುರಿತು ತಪ್ಪು ಮಾಹಿತಿ, ಸುಳ್ಳು ಮಾಹಿತಿ ನೀಡುವಂತಿಲ್ಲ. ಉತ್ಪನ್ನದ ಬ್ರ್ಯಾಂಡ್ ಅಂಬಾಸಿಡರ್ ಕೂಡ ತಾವು ಪ್ರಚಾರ ಮಾಡುವ ಮುನ್ನ ಎಲ್ಲಾ ಪರಿಶೀಲಿಸಿ ಪ್ರಚಾರ ಮಾಡಬೇಕು. ಉತ್ಪನ್ನ ಅಥವಾ ಕಂಪನಿ ಸುಳ್ಳು ಹೇಳಿದರೂ ಪ್ರಚಾರ ಮಾಡುವ ರಾಯಭಾರಿ ಕೂಡ ಹೊಣೆಯಾಗಿರುತ್ತಾರೆ. ಈ ರಾಯಭಾರಿ ಮುಖ ನೋಡಿ ಹಲವರು ಉತ್ಪನ್ನ ಅಥವಾ ಸೇವೆ ಬಳಸಿಕೊಳ್ಳುತ್ತಾರೆ ಎಂದಿದೆ.

Read More
Next Story