ಚಂದನವನ 2026| ಮೊದಲ ಆರು ತಿಂಗಳು  ಇರಲಿದೆ ಸ್ಟಾರ್ ‍ನಟರ ಚಿತ್ರೋತ್ಸವ
x

ಮಾರ್ಚ್‌ ತಿಂಗಳಲ್ಲಿ ಯಶ್‍ ಅಭಿನಯದ ‘ಟಾಕ್ಸಿಕ್‍’ ಬಿಡುಗಡೆ ಆಗುತ್ತಿದೆ.

ಚಂದನವನ 2026| ಮೊದಲ ಆರು ತಿಂಗಳು ಇರಲಿದೆ ಸ್ಟಾರ್ ‍ನಟರ ಚಿತ್ರೋತ್ಸವ

ದುನಿಯಾ ವಿಜಯ್ ಅಭಿನಯದ 'ಲ್ಯಾಂಡ್‍ಲಾರ್ಡ್' ಮತ್ತು ಝೈದ್ ಖಾನ್ ಅವರ 'ಕಲ್ಟ್' ಚಿತ್ರಗಳು ಬಿಡುಗಡೆಯಾಗುತ್ತಿವೆ. ತಿಂಗಳ ಕೊನೆಯಲ್ಲಿ 'ಚೌಕಿದಾರ್' ಮತ್ತು 'ಮುಧೋಳ್' ಚಿತ್ರಗಳ ನಿರೀಕ್ಷೆಯಿದೆ.


Click the Play button to hear this message in audio format

ಕಳೆದ ವರ್ಷ ಕನ್ನಡದ ಕೆಲವು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಿದ್ದು ಬಿಟ್ಟರೆ, ಹಲವು ನಟರು ದರ್ಶನವೇ ಕೊಡಲಿಲ್ಲ. ಸ್ಟಾರ್ ಚಿತ್ರಗಳು ಬಿಡುಗಡೆಯಾಗಿದ್ದೂ ವರ್ಷದ ದ್ವಿತೀಯಾರ್ಧದಲ್ಲಿ. ಅದರಲ್ಲೂ ಅಕ್ಟೋಬರ್ 02ರಂದು ರಿಷಭ್‍ ಶೆಟ್ಟಿ ಅಭಿನಯದ ‘ಕಾಂತಾರ – ಚಾಪ್ಟರ್ 1’ ಬಿಡುಗಡೆಯಾಯಿತು. ನಂತರದ ದಿನಗಳಲ್ಲಿ ದರ್ಶನ್‍, ಶಿವರಾಜಕುಮಾರ್, ಸುದೀಪ್‍, ಉಪೇಂದ್ರ, ‘ದುನಿಯಾ’ ವಿಜಯ್‍ ಮತ್ತು ರಾಜ್‍ ಬಿ. ಶೆಟ್ಟಿ ಅಭಿನಯದ ಚಿತ್ರಗಳು ಬಿಡುಗಡೆಯಾದವು. ಮೂರು ತಿಂಗಳುಗಳಲ್ಲಿ ಆರು ನಟರ ಚಿತ್ರಗಳು ಬಿಡುಗಡೆಯಾದವು.

ಇದು ಬರೀ ಕಳೆದ ವರ್ಷವಷ್ಟೇ ಅಲ್ಲ, 2024ರಲ್ಲೂ ಇದೇ ರೀತಿ ಆಗಿತ್ತು. ಸ್ಟಾರ್ ನಟರ ಚಿತ್ರ ಬಿಡುಗಡೆ ಆಗುವುದಕ್ಕೆ ಆಗಸ್ಟ್ ಬರಬೇಕಾಯಿತು. ಆಗಸ್ಟ್ ತಿಂಗಳಲ್ಲಿ ‘ದುನಿಯಾ’ ವಿಜಯ್‍ ಅಭಿನಯದ ‘ಭೀಮ’ ಮೊದಲು ಬಿಡುಗಡೆಯಾಯಿತು. ನಂತರದ ದಿನಗಳಲ್ಲಿ ಗಣೇಶ್‍ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’, ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್‍’, ಉಪೇಂದ್ರ ಅಭಿನಯದ ‘UI’, ಶ್ರೀಮುರಳಿ ಅಭಿನಯದ ‘ಬಘೀರ’ ಮತ್ತು ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರಗಳು ಬಿಡುಗಡೆಯಾದವು.

ಟಾಕ್ಸಿಕ್‌ನಲ್ಲಿ ನಯನಾತಾರಾ ಲುಕ್‌

ಮೊದಲ ತಿಂಗಳಿನಿಂದಲೇ ಆರಂಭ

ಆದರೆ, ಈ ವರ್ಷ ಪರಿಸ್ಥಿತಿ ಬೇರೆಯದೇ ಇದೆ. ಈ ವರ್ಷದ ಆರಂಭದಿಂದಲೇ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುವುದಕ್ಕಿವೆ. ಜನವರಿ 23ರಂದು ‘ದುನಿಯಾ’ ವಿಜಯ್‍ ಅಭಿನಯದ ‘ಲ್ಯಾಂಡ್‍ಲಾರ್ಡ್’ ಚಿತ್ರ ಬಿಡುಗಡೆ ಆಗಲಿದೆ. ಫೆಬ್ರವರಿ 19ರಂದು ಶಿವರಾಜಕುಮಾರ್ ಅಭಿನಯದ ‘ಡ್ಯಾಡ್‍’ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದು ಶಿವರಾಜಕುಮಾರ್ ಪಾಲಿಗೆ ವಿಶೇಷವಾದ ಚಿತ್ರ. ಅವರ ಮೊದಲ ಚಿತ್ರ ‘ಆನಂದ್‍’, 1986 ಫೆಬ್ರವರಿ 16ರಂದು ಪ್ರಾರಂಭವಾಗಿತ್ತು. ಚಿತ್ರರಂಗಕ್ಕೆ ಬಂದ 40 ವರ್ಷಗಳ ಸಂಭ್ರಮದಲ್ಲಿ ‘ಡ್ಯಾಡ್‍’ ಬಿಡುಗಡೆಯಾಗುತ್ತಿದೆ.

ಡಾರ್ಲಿಂಗ್‌ ಕೃಷ್ಣ ಅಭಿನಯದ ‘ಫಾದರ್’

ಮಾರ್ಚ್‍ನಲ್ಲಿ ಕನ್ನಡದ ಮೊದಲ ಪ್ಯಾನ್‍ ವರ್ಲ್ಡ್ ಚಿತ್ರ ತೆರೆಗೆ

ಮಾರ್ಚ್‌ ತಿಂಗಳಲ್ಲಿ ಯಶ್‍ ಅಭಿನಯದ ‘ಟಾಕ್ಸಿಕ್‍’ ಬಿಡುಗಡೆ ಆಗುತ್ತಿದೆ. ಇದು ಬರೀ ಪ್ಯಾನ್‍ ಇಂಡಿಯಾ ಚಿತ್ರವಷ್ಟೇ ಅಲ್ಲ, ಪ್ಯಾನ್‍ ವರ್ಲ್ಡ್ ಚಿತ್ರವೂ ಹೌದು. ಕನ್ನಡ ಮತ್ತು ಇಂಗ್ಲೀಷ್‍ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿರುವ ಈ ಚಿತ್ರವು, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಮಾರ್ಚ್ 19ರಂದು ಯುಗಾದಿ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರಚಾರದ ಕೆಲಸಗಳು ಶುರುವಾಗಿದ್ದು, ದಿನಕ್ಕೊಂದು ಪೋಸ್ಟರ್ ಬಿಡುಗಡೆ ಆಗುತ್ತಿದೆ.

ಏಪ್ರಿಲ್‍ನಲ್ಲಿ ಬರ್ತಾನೆ ‘ಕೆಡಿ – ದಿ ಡೆವಿಲ್’

ಏಪ್ರಿಲ್‍ ತಿಂಗಳಲ್ಲಿ ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್‍’ ಬಿಡುಗಡೆಯಾಗಲಿದೆ. 2024ರಲ್ಲಿ ಬಿಡುಗಡೆ ಎಂದು ಮೊದಲು ಹೇಳಲಾಗಿತ್ತು. 2025 ಮುಗಿದರೂ ಚಿತ್ರ ಬಿಡುಗಡೆಯಾಗಿರಲಿಲ್ಲ. ಈಗ ಏಪ್ರಿಲ್‍ 30ರಂದು ಚಿತ್ರ ಬಿಡುಗಡೆ ಮಾಡುವುದಕ್ಕೆ ನಿರ್ದೇಶಕ ‘ಜೋಗಿ’ ಪ್ರೇಮ್‍ ಘೋಷಿಸಿದ್ದಾರೆ. ಇದು ಸಹ ಪ್ಯಾನ್‍ ಇಂಡಿಯಾ ಚಿತ್ರವಾಗಿದ್ದು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು, ಜೂನ್‍ ತಿಂಗಳಲ್ಲಿ ಉಪೇಂದ್ರ ಅಭಿನಯದ ‘ಭಾರ್ಗವ’ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಏಪ್ರಿಲ್‍ ತಿಂಗಳಲ್ಲಿ ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್‍’ ಬಿಡುಗಡೆಯಾಗಲಿದೆ.

ಮೇ ತಿಂಗಳಲ್ಲಿ ಐಪಿಎಲ್‍ನಿಂದ ಅಲ್ಪವಿರಾಮ

ಮೇ ತಿಂಗಳಲ್ಲಿ ಮಾತ್ರ ಯಾವುದೇ ಚಿತ್ರ ಬಿಡುಗಡೆಗೆ ಸಿದ್ಧವಾಗಿರುವ ಹಾಗಿಲ್ಲ. ಅದಕ್ಕೆ ಕಾರಣವೂ ಇದೆ. ಐಪಿಎಲ್‍ ಪಂದ್ಯಾವಳಿಗಳು ಮಾರ್ಚ್ 26ರಂದು ಪ್ರಾರಂಭವಾಗಿ ಮೇ 31ರಂದು ಮುಗಿಯಲಿದೆ. ಮೇ ತಿಂಗಳ ಹೊತ್ತಿಗೆ ಲೀಗ್‍ ಪಂದ್ಯಗಳೆಲ್ಲಾ ಮುಗಿದು, ಮುಂದಿನ ಘಟ್ಟ ಶುರುವಾಗಿರುತ್ತದೆ. ಅಷ್ಟರಲ್ಲಿ ವಾತಾವರಣ ರಂಗೇರಿರುತ್ತದೆ. ಇಂಥ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾದರೆ ಜನ ಬರುತ್ತಾರೋ ಇಲ್ಲವೋ, ಎಂಬ ಭಯ ಸಹಜವಾಗಿಯೇ ಚಿತ್ರರಂಗದವರಿಗಿದೆ. ಜೊತೆಗೆ ಕಾಲೇಜು ಅಡ್ಮಿಷನ್‍ ಸಮಯ. ಇಂಥ ಸಮಯದಲ್ಲಿ ಜನ ಬರುತ್ತಾರೋ ಇಲ್ಲವೋ ಎಂಬ ಭಯ ಇರುವುದರಿಂದ, ಮೇ ತಿಂಗಳಲ್ಲಿ ಸದ್ಯದ ಮಟ್ಟಿಗೆ ಯಾವುದೇ ದೊಡ್ಡ ಬಿಡುಗಡೆ ಇಲ್ಲ.

ಉಪೇಂದ್ರ ನಟನೆಯ ಭಾರ್ಗವ ಪೋಸ್ಟ್‌

ಕೆಲವು ಚಿತ್ರಗಳ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ

ಇದಲ್ಲದೆ, ಝೈದ್‍ ಖಾನ್‍ ಅಭಿನಯದ ‘ಕಲ್ಟ್’ ಚಿತ್ರವು ಜನವರಿ 23ರಂದು ಬಿಡುಗಡೆ ಆಗುತ್ತಿದೆ. ಪೃಥ್ವಿ ಅಂಬಾರ್ ಅಭಿನಯದ ‘ಚೌಕಿದಾರ್’, ಜನವರಿ 30ಕ್ಕೆ ಬರಲಿದೆ. ವಿಕ್ರಮ್‍ ರವಿಚಂದ್ರನ್‍ ಅಭಿನಯದ ‘ಮುಧೋಳ್‍’ ಸಹ ಅದೇ ದಿನ ಬರುವ ನಿರೀಕ್ಷೆ ಇದೆ. ರಾಜ್‍ ಬಿ. ಶೆಟ್ಟಿ ಅಭಿನಯದ ‘ರಕ್ಕಸಪುರದೊಳ್‍’, ಫೆ.06ಕ್ಕೆ ಬಂದರೆ, ಕೃಷ್ಣ ಅಭಿನಯದ ‘ಲವ್‍ ಮಾಕ್ಟೇಲ್‍ 3’ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದಲ್ಲದೆ, ಸತೀಶ್‍ ನೀನಾಸಂ ಅಭಿನಯದ ‘ದಿ ರೈಸ್‍ ಆಫ್‍ ಅಶೋಕ’, ಉಪೇಂದ್ರ ಅಭಿನಯದ ‘ರಕ್ತ ಕಾಶ್ಮೀರ’, ಪ್ರಜ್ವಲ್‍ ಅಭಿನಯದ ‘ಕರಾವಳಿ’, ಕೃಷ್ಣ ಅಭಿನಯದ ‘ಫಾದರ್’ ಮುಂತಾದ ಚಿತ್ರಗಳು ಸಹ ಮೊದಲ ಆರು ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ನೀನಾಸಂ ಅಭಿನಯದ ‘ದಿ ರೈಸ್‍ ಆಫ್‍ ಅಶೋಕ’

ಕನ್ನಡ ಚಿತ್ರಗಳನ್ನು ಜನ ನೋಡುವುದಕ್ಕೆ ಚಿತ್ರಮಂದಿರಗಳತ್ತ ಬರುತ್ತಿಲ್ಲ ಎಂಬ ಪ್ರಶ್ನೆಗೆ, ಸ್ಟಾರ್ ‍ಚಿತ್ರಗಳ ಕೊರತೆ ಎಂದು ಹಲವು ವಿತರಕರು ಮತ್ತು ಚಲನಚಿತ್ರಮಂದಿರದವರು ಹೇಳಿಕೊಂಡಿದ್ದಾರೆ. ಇದೀಗ ಸ್ಟಾರ್‍ ಮತ್ತು ಜನಪ್ರಿಯ ನಟರ ಚಿತ್ರಗಳು ದೊಡ್ಡ ಸಂಖ್ಯೆಯಲ್ಲಿರುವುದರಿಂದ, ಈ ವರ್ಷವಾದರೂ ಪ್ರೇಕ್ಷಕರು ಚಿತ್ರಗಳನ್ನು ನೋಡುವುದಕ್ಕೆ ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳತ್ತ ಬರುತ್ತಾರಾ ಎಂದು ಕಾದು ನೋಡಬೇಕಿದೆ.

Read More
Next Story