ಸೆನ್ಸಾರ್ ಅಧಿಕಾರಿ ಬಂಧನ: 100ಕ್ಕೂ ಹೆಚ್ಚು ಕನ್ನಡ ಚಿತ್ರಗಳ ಬಿಡುಗಡೆಗೆ ವಿಘ್ನ
x

ಸೆನ್ಸಾರ್ ಅಧಿಕಾರಿ ಬಂಧನ: 100ಕ್ಕೂ ಹೆಚ್ಚು ಕನ್ನಡ ಚಿತ್ರಗಳ ಬಿಡುಗಡೆಗೆ ವಿಘ್ನ

ಸಿಬಿಎಫ್‌ಸಿ ಪ್ರಾದೇಶಿಕ ಅಧಿಕಾರಿ ಕೆ. ಪ್ರಶಾಂತ್ ಕುಮಾರ್ ಬಂಧನವು 130 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳ ಬಿಡುಗಡೆಗೆ ವಿಘ್ನ ಒಡ್ಡಿದೆ.


ಕೇಂದ್ರ ಸಿನಿಮಾ ಸೆನ್ಸಾರ್‌ ಮಂಡಳಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್-CBFC) ಪ್ರಾದೇಶಿಕ ಅಧಿಕಾರಿ ಕೆ. ಪ್ರಶಾಂತ್ ಕುಮಾರ್ ಅವರ ಬಂಧನದಿಂದ ಮುಂದಿನ ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಬೇಕಿದ್ದ 130 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳ ಭವಿಷ್ಯ ಡೋಲಾಯಮಾನವಾಗಿದೆ.

ಕೇಂದ್ರ ಸೆನ್ಸಾರ್‌ ಮಂಡಳಿಯ ಪ್ರಾದೇಶಿಕ ಅಧಿಕಾರಿಯ ಅನುಪಸ್ಥಿತಿಯಲ್ಲಿ ಬಿಡುಗಡೆಗೆ ಬಾಕಿ ಇರುವ ಚಲನಚಿತ್ರಗಳನ್ನು ವೀಕ್ಷಿಸಲು ಮತ್ತು ಪ್ರಮಾಣೀಕರಿಸಲು ಪರ್ಯಾಯ ವ್ಯವಸ್ಥೆಯನ್ನು ಮಾಡಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MoI&B) ಇದುವರೆಗೆ ಯಾವುದೇ ಪ್ರಯತ್ನ ಮಾಡಿಲ್ಲ.

ಇತ್ತೀಚೆಗೆ, ಸಿನಿಮಾಗಳಿಗೆ 'ಸೆನ್ಸಾರ್' ಪ್ರಮಾಣಪತ್ರ ನೀಡಲು ಲಂಚ ಪಡೆದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ), ಸಿಬಿಎಫ್‌ಸಿಯ ಪ್ರಾದೇಶಿಕ ಅಧಿಕಾರಿಯನ್ನು ಅವರ ಇಬ್ಬರು ಸಹಚರರೊಂದಿಗೆ ಬಂಧಿಸಿತ್ತು. ಆದರೆ, ಅವರ ಬಂಧನದ ಬಳಿಕ ಸಿನಿಮಾಗಳ ಸೆನ್ಸಾರ್‌ ನಡೆಸಿ, ಪ್ರಮಾಣೀಕರಿಸುವ ಪರ್ಯಾಯ ವ್ಯವಸ್ಥೆಯನ್ನೇ ಮಾಡದೇ ಇರುವುದರಿಂದ ನೂರಾರು ಕನ್ನಡ ಚಲನಚಿತ್ರಗಳ ಬಿಡುಗಡೆಗೆ ವಿಘ್ನ ಎದುರಾಗಿದೆ. ಆ ಹಿನ್ನೆಲೆಯಲ್ಲಿ, ಪರ್ಯಾಯ ವ್ಯವಸ್ಥೆಯ ಕುರಿತು ಮಾಹಿತಿಗಾಗಿ ಸಿಬಿಎಫ್‌ ಸಿಯ ಬೆಂಗಳೂರು ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಿ ಸ್ಪಷ್ಟೀಕರಣ ಪಡೆಯಲು ʼದ ಫೆಡರಲ್ ʼ ಪ್ರಯತ್ನಿಸಿದರೂ, ನಮ್ಮ ಕರೆಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.

ಆದಾಗ್ಯೂ, ಅಲ್ಲಿನ ಮೂಲವೊಂದರ ಪ್ರಕಾರ, “ವರ್ಷಾಂತ್ಯದಲ್ಲಿ ಬಿಡುಗಡೆಗೆ ಅತಿಹೆಚ್ಚು ಚಲನಚಿತ್ರಗಳು ಸರದಿಯಲ್ಲಿ ಸೆನ್ಸಾರ್‌ ಮಂಡಳಿ ಮುಂದೆ ಬರುವುದರಿಂದ ಸಿಬಿಎಸ್‌ಸಿ, ಸೆನ್ಸಾರ್‌ಗೆ ಚಲನಚಿತ್ರಗಳನ್ನು ಸಲ್ಲಿಸಲು ನವೆಂಬರ್ 15 ರ ಗಡುವು ನೀಡಿತ್ತು. ಹಾಗಾಗಿ ಅರ್ಜಿ ಸಲ್ಲಿಸಿದವರು ಯಾವುದೇ ತೊಂದರೆಯಿಲ್ಲದೆ ಪ್ರಮಾಣಪತ್ರ ಪಡೆಯುತ್ತಾರೆ".

ಅಚ್ಚರಿಯೆಂದರೆ ಸಿಬಿಐನಿಂದ ಬಂಧನಕ್ಕೊಳಗಾದ ಪ್ರಾದೇಶಿಕ ಅಧಿಕಾರಿಯ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಮೃದು ಧೋರಣೆ ಎದ್ದುಕಾಣುತ್ತಿದೆ. ಮಂಡಳಿಯ ಪ್ರಾದೇಶಿಕ ಅಧಿಕಾರಿಗಳ ಹೆಸರಿನಲ್ಲಿ ಮಧ್ಯವರ್ತಿಗಳು, ಸಿನಿಮಾ ನಿರ್ಮಾಪಕರು ಮತ್ತು ನಿರ್ದೇಶಕರನ್ನು ಶೋಷಿಸುತ್ತಿದ್ದಾರೆ ಎಂದು ಚಿತ್ರರಂಗ ಆರೋಪಿಸುತ್ತಿದೆ. ಆದರೆ, ನಿರ್ದಿಷ್ಟವಾಗಿ ಯಾವುದೇ ನಿರ್ಮಾಪಕ ಅಥವಾ ನಿರ್ದೇಶಕರಿಂದ ಸಿನಿಮಾ ಸೆನ್ಸಾರ್‌ ಗೆ ಪ್ರಾದೇಶಿಕ ಅಧಿಕಾರಿ ಲಂಚ ಕೇಳಿದ ಆರೋಪದ ಕುರಿತು ಯಾವುದೇ ದೂರು ಬಂದಿಲ್ಲ ಎಂದು ಕರ್ನಾಟಕ ಫಿಲಂ ಚೇಂಬರ್‌ನ ಹಾಲಿ ಅಧ್ಯಕ್ಷರು ಹೇಳಿದ್ದಾರೆ.

ಸೆನ್ಸಾರ್‌ ನಲ್ಲಿ ಸಿಲುಕಿದ ದರ್ಶನ್ ಸಿನಿಮಾ

ಸಿಬಿಎಫ್‌ಸಿಯ ಪ್ರಾದೇಶಿಕ ಅಧಿಕಾರಿಯ ಗೈರುಹಾಜರಿಯು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮತ್ತು ತರುಣ್ ಸುಧೀರ್ ನಿರ್ದೇಶನದ ಕಾಟೇರ ಸೇರಿದಂತೆ ಅನೇಕ ಸ್ಟಾರ್ ನಟರ ಚಲನಚಿತ್ರಗಳ ಬಿಡುಗಡೆಗೆ ವಿಘ್ನ ಒಡ್ಡಿದೆ. ಆ ಬಗ್ಗೆ ದ ಫೆಡರಲ್‌ ಗೆ ಪ್ರತಿಕ್ರಿಯಿಸಿದ ರಾಕ್‌ ಲೈನ್ ವೆಂಕಟೇಶ್‌, "ನಾನು ಈ ಸಮಸ್ಯೆಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದೊಂದಿಗೆ ಚರ್ಚಿಸಿದ್ದೇನೆ ಮತ್ತು ಮುಂದಿನ ಎರಡು ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆ" ಎಂದರು.

ʼಕಾಟೇರಾʼ ನಿಗದಿಯಂತೆ ಡಿಸೆಂಬರ್ 29 ರಂದು ಬಿಡುಗಡೆಯಾಗಲಿದೆ ಮತ್ತು ಪ್ರದರ್ಶನಕ್ಕೆ ಯಾವುದೇ ಅಡೆತಡೆಗಳಿಲ್ಲ ಎಂದು ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ಮೂಲಗಳು ಹೇಳಿವೆ. ಸಂಬಂಧಪಟ್ಟ ಅಧಿಕಾರಿಯ ಬಂಧನದ ಹಿನ್ನೆಲೆಯಲ್ಲಿ ನ. 30 ರಿಂದ ಸಿಬಿಎಫ್‌ಸಿ ಸಿನಿಮಾಗಳ ಸೆನ್ಸಾರ್ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಮೂಲಗಳು ತಿಳಿಸಿವೆ.

ಚೇಂಬರ್‌ ಕೋಶಾಧಿಕಾರಿ ಬಾ. ಮಾ. ಹರೀಶ್‌, "ಕೆಎಫ್‌ಸಿಸಿಯು ಈ ಸಮಸ್ಯೆಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದೆ ಮತ್ತು ಚಲನಚಿತ್ರಗಳನ್ನು ವೀಕ್ಷಿಸಿ, ಪ್ರಮಾಣೀಕರಿಸಲು ಸಿಬಿಎಫ್‌ ಸಿಯ ಸದಸ್ಯರ ಮೂರು ತಂಡಗಳನ್ನು ರಚಿಸುವಂತೆ ಮನವಿ ಮಾಡಿದೆ" ಎಂದು ಫೆಡರಲ್‌ಗೆ ತಿಳಿಸಿದರು.

"ಕನ್ನಡ ಚಿತ್ರರಂಗ ಎದುರಿಸುತ್ತಿರುವ ಈ ಬಿಕ್ಕಟ್ಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಕೆಎಫ್‌ಸಿಸಿ ತಂದಿತ್ತು. ಕೇಂದ್ರ ಸಚಿವಾಲಯದೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಅವರೂ ಅಧಿಕಾರಿಗಳಿಗೆ ಸೂಚಿಸಿದ್ದರು. ಕರ್ನಾಟಕ ಸರ್ಕಾರವೂ ತನ್ನ ಪ್ರಯತ್ನ ಮಾಡುತ್ತಿದೆ" ಎಂದು ಹರೀಶ್‌ ತಿಳಿಸಿದರು.

ಆನ್‌ಲೈನ್ ಸೌಲಭ್ಯ

ಸಿಬಿಎಫ್‌ಸಿ ಪ್ರಮಾಣಪತ್ರ ಪಡೆಯಲು ಚಲನಚಿತ್ರ ನಿರ್ಮಾಪಕರು ಅರ್ಜಿ ಸಲ್ಲಿಸಲು ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೇ ಮಾನದಂಡವೆಂದರೆ ಅವರು ಅರ್ಜಿಯಲ್ಲಿ ಕೋರಿದ ಪ್ರತಿ ಪೂರಕ ದಾಖಲೆಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಪ್ರಾದೇಶಿಕ ಅಧಿಕಾರಿಯನ್ನು ವೈಯಕ್ತಿಕವಾಗಿ ಸಂಪರ್ಕಿಸುವ ಅಗತ್ಯವಿಲ್ಲ. ಆದರೆ ಸಿಬಿಎಫ್‌ಸಿ ಪ್ರಮಾಣ ಪತ್ರ ನೀಡುವ ಅಧಿಕಾರ ಇರುವುದು ಪ್ರಾದೇಶಿಕ ಅಧಿಕಾರಿಗೆ ಮಾತ್ರ ಎಂದು ಸಿಬಿಎಫ್‌ಸಿ ಮೂಲಗಳು ತಿಳಿಸಿವೆ.

ವರ್ಷಾಂತ್ಯದಲ್ಲಿ ಚಲನಚಿತ್ರಗಳ ದಟ್ಟಣೆಯನ್ನು ಕುರಿತು ಮಾತನಾಡಿದ, ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು, “ಸಾಮಾನ್ಯ ಚಲನಚಿತ್ರಗಳಲ್ಲದೆ, ವಿವಿಧ ಚಲನಚಿತ್ರೋತ್ಸವಗಳಿಗೆ ತಮ್ಮ ಚಲನಚಿತ್ರಗಳನ್ನು ಕಳುಹಿಸಲು ಬಯಸುವ ಚಲನಚಿತ್ರ ನಿರ್ಮಾಪಕರು ಕೂಡ ಅರ್ಜಿಗಳನ್ನು ಸಲ್ಲಿಸುತ್ತಾರೆ. ಹಾಗಾಗಿ ವರ್ಷಾಂತ್ಯದಲ್ಲಿ ಸೆನ್ಸಾರ್‌ ಗೆ ಬರುವ ಸಿನಿಮಾಗಳ ಸಂಖ್ಯೆ ತೀರಾ ಹೆಚ್ಚು ” ಎಂದು ಹೇಳಿದರು.

ಬಿಕ್ಕಟ್ಟು ಇದೇ ಮೊದಲಲ್ಲ!

ಕನ್ನಡ ಚಿತ್ರಗಳಿಗೆ ಈ ಸಮಸ್ಯೆ ಹೊಸದೇನಲ್ಲ. ಕನ್ನಡ ಚಿತ್ರರಂಗವು 2008 ಮತ್ತು 2014 ರಲ್ಲಿ ಇದೇ ರೀತಿಯ ಸಮಸ್ಯೆ ಎದುರಿಸಿತ್ತು. ಆದರೆ ಆಗಿನ ಕಾರಣಗಳು ಬೇರೆ ಅಷ್ಟೇ. ಪ್ರತಿಯೊಬ್ಬ ಚಲನಚಿತ್ರ ನಿರ್ಮಾಪಕರು ವರ್ಷಾಂತ್ಯದೊಳಗೆ ತಮ್ಮ ಚಲನಚಿತ್ರ ಪ್ರಮಾಣೀಕರಣವನ್ನು ಪಡೆಯಲು ಬಯಸುತ್ತಾರೆ. "ಪ್ರಶಸ್ತಿ ಸಮಿತಿಗಳು ಮತ್ತು ಸಬ್ಸಿಡಿ ಸಮಿತಿಗಳಿಗೆ ವರ್ಷಾಂತ್ಯವು ಕಟ್-ಆಫ್ ದಿನಾಂಕವಾಗಿರುವುದರಿಂದ ಪ್ರಮಾಣಪತ್ರವನ್ನು ನೀಡಲು ಸಿಬಿಎಫ್‌ಸಿ ಯ ಪ್ರಾದೇಶಿಕ ಕಚೇರಿಯು ಕೇವಲ ಮೂರು ದಿನಗಳಲ್ಲಿ ಸುಮಾರು ಎಂಟು ಚಲನಚಿತ್ರಗಳನ್ನು ವೀಕ್ಷಿಸಿದೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳ ಆಯ್ಕೆ ಸಮಿತಿಗಳಿಗೆ ಚಲನಚಿತ್ರಗಳನ್ನು ಕಳುಹಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿರುವುದರಿಂದ ಈ ಪ್ರಮಾಣದ ಒತ್ತಡ" ಎಂದು ಮೂಲಗಳು ತಿಳಿಸಿವೆ.

"ಹೀಗಾಗಿಯೇ ವರ್ಷಾಂತ್ಯದಲ್ಲಿ ಮಂಡಳಿ ಮುಂದೆ ಸೆನ್ಸಾರ್‌ ಗೆ ಬರುವ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ" ಎನ್ನುತ್ತಾರೆ ʼಸೈಕಿಕ್ʼ ಸಿನಿಮಾ ನಿರ್ಮಾಪಕ ಬಿ.ಜಿ.ಮಂಜುನಾಥ್. ಅವರ ಚಿತ್ರ ಡಿಸೆಂಬರ್ ಎರಡನೇ ವಾರದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಸೆನ್ಸಾರ್‌ ಪ್ರಮಾಣಪತ್ರ ನೀಡಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದರಿಂದಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

Read More
Next Story