ಜೂಜು, ಮೋಜು ಮಸ್ತಿ ಜತೆ ಸಣ್ಣದೊಂದು ನೀತಿ
x

ಜೂಜು, ಮೋಜು ಮಸ್ತಿ ಜತೆ ಸಣ್ಣದೊಂದು ನೀತಿ

ಚಿತ್ರದಲ್ಲಿ ನಾಯಕನ ಮನಸೆಳೆಯುವ ಇಬ್ಬರು ಚೆಲುವೆಯರಿದ್ದಾರೆ. ಒಬ್ಬಳು "ಕ್ರಿಸ್ಟಿ ಶ್ರೀಮಂತನಲ್ಲ‌" ಎಂದು ದೂರಾಗುತ್ತಾಳೆ. ಮತ್ತೊಬ್ಬಾಕೆ ಕ್ರಿಸ್ಟಿಯ ಸಂಪಾದನೆಯ ದಾರಿಯ ಬಗ್ಗೆಯೇ ಆತಂಕಗೊಳ್ಳುತ್ತಾಳೆ.


Click the Play button to hear this message in audio format

ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವ ಮಾತಿದೆ. ಹಣವೊಂದಿದ್ದರೆ ಎಲ್ಲ ಸಮಸ್ಯೆಗಳು ಕೂಡ ಸುಲಭದಲ್ಲಿ ಪರಿಹಾರ ಕಾಣುತ್ತವೆ ಎಂದು ನಂಬಿರುವವನೇ ಕ್ರಿಸ್ಟಿ. ಈತನ‌ ನಿಜವಾದ ಹೆಸರು ಕೃಷ್ಣ. ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಕೃಷ್ಣನಿಗೆ ಹಣ ಮಾಡಬೇಕು ಎನ್ನುವುದು ಬಾಲ್ಯದಿಂದ ಬಂದಿರುವ ಮೋಹ. ಶಾಲಾ ವಿದ್ಯಾರ್ಥಿಯಾಗಿದ್ದಾಗಿಲೇ ಇಸ್ಪೀಟ್ ಆಡಿ ಹಣ ಮಾಡಲೆತ್ನಿಸಿದ ಈತನಿಗೆ ಶಿಕ್ಷಕಿ ಇಟ್ಟ ಹೆಸರು ಬ್ರ್ಯಾಟ್.

ಬ್ರ್ಯಾಟ್ ಅಂದರೆ ಕನ್ನಡದಲ್ಲಿ ಕಿರಿಕ್ ಹುಡುಗ ಹೇಳಬಹುದು. ಆದರೆ ಚಿತ್ರದ ಟ್ರೈಲರ್ ನಲ್ಲೇ ಹೇಳಿರುವಂತೆ 'ಹಾಳಾಗಿ ಹೋಗಿದ್ದಾನೆ' ಎನ್ನುವ ಅರ್ಥ ಸಾರಿದ್ದಾರೆ. ಒಂದರ್ಥದಲ್ಲಿ ಇದು ನಿಜವೂ ಕೂಡ. ಚಿತ್ರದಲ್ಲಿ ನಾಯಕನೇ ಬ್ರ್ಯಾಟ್ ಆಗಿರುವ ಕಾರಣ ಆತ ಹಾಳಾಗಿ ಹೋಗಲಾರ ಎನ್ನುವುದು ಪ್ರೇಕ್ಷಕರ ನಂಬಿಕೆ. ಆದರೆ ಸಿನಿಮಾ‌‌ ಮಧ್ಯಂತರ ತಲುಪುವ ಮೊದಲೇ ಆತ ಸಂಪೂರ್ಣ ಹಾಳಾಗಿದ್ದಾನೆ ಎನ್ನುವ ಅರಿವಾಗುತ್ತದೆ.

ಕ್ರಿಸ್ಟಿಗೆ ಹಣವೆಂದರೆ ಮೋಹವೇನೋ ನಿಜ. ಆದರೆ ಜೂಜಿನಿಂದಾದರೂ ಸಂಪಾದಿಸಲೇ ಬೇಕು ಎನ್ನುವ ಹಠಕ್ಕೆ ಬಲವಾದ ಕಾರಣವೂ ಇದೆ. ನೈಜ ದಾರಿಯಲ್ಲಿ ಸಂಪಾದನೆಗೆ ಹೊರಟಾಗ ಎದುರಾಗುವ ಅವಮಾನ ಹೇಗಾದರೂ ಹಣ ಮಾಡಲೇಬೇಕು ಎನ್ನುವ ಛಲಕ್ಕೆ ದೂಡುತ್ತದೆ. ಜತೆಗೆ ಕ್ರಿಕೆಟ್ ಬೆಟ್ಟಿಂಗ್ ಅಂದರೆ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ತೊಡಗಿಸಿಕೊಂಡ ಹಾಗೆ ಎನ್ನುವ ಸಮರ್ಥನೆಯೂ ಸೇರಿರುತ್ತದೆ.

ಚಿತ್ರದಲ್ಲಿ ಕ್ರಿಸ್ಟಿ ನಾಯಕ.‌ ಆದರೆ ಒಟ್ಟು ಕಥೆಯನ್ನು ತೆಗೆದುಕೊಂಡರೆ ಕ್ರಿಸ್ಟಿಯ ಅಪ್ಪನೇ ನಾಯಕ. ನೀತಿ, ನಿಷ್ಠೆ ಗೆ ದೊರಕುವ ಗೆಲುವಿನ ಕಥೆ ಅಪ್ಪನ ಕಾಲಕ್ಕೆ ಮುಗಿದೇ ಹೋಯಿತು ಎಂದು ನಿರ್ದೇಶಕರು ಸೂಕ್ಷ್ಮವಾಗಿ ಸೂಚಿಸಿದಂತಿದೆ. ಕೃಷ್ಣ ಅಲಿಯಾಸ್ ಕೃಷ್ಟಿಯಾಗಿ ಡಾರ್ಲಿಂಗ್ ಕೃಷ್ಣ ನಟಿಸಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ತನ್ನಲ್ಲಿ ಯುವತ್ವ ತುಂಬುತ್ತಿದೆ ಎಂದು ಕೃಷ್ಣ ಸಾಬೀತು ಮಾಡಿದ್ದಾರೆ. ನಟನೆಯಲ್ಲಿಯೂ ತಮ್ಮ ಶೈಲಿಯನ್ನು ಮೆರೆಸಲು ಮರೆತಿಲ್ಲ. ಡಾನ್ಸ್ ಮತ್ತು ಫೈಟ್ ದೃಶ್ಯಗಳಲ್ಲಿಯೂ ಕೃಷ್ಣ ಅದ್ಭುತವಾಗಿ ಒಳಗೊಂಡಿದ್ದಾರೆ.

ಅರ್ಜುನ್ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಮೆಲುಕು ಹಾಕುವಂತಿವೆ.

ಚಿತ್ರದಲ್ಲಿ ನಾಯಕನ ಮನಸೆಳೆಯುವ ಇಬ್ಬರು ಚೆಲುವೆಯರಿದ್ದಾರೆ. ಒಬ್ಬಳು "ಕ್ರಿಸ್ಟಿ ಶ್ರೀಮಂತನಲ್ಲ‌" ಎಂದು ದೂರಾಗುತ್ತಾಳೆ. ಮತ್ತೊಬ್ಬಾಕೆ ಕ್ರಿಸ್ಟಿಯ ಸಂಪಾದನೆಯ ದಾರಿಯ ಬಗ್ಗೆಯೇ ಆತಂಕಗೊಳ್ಳುತ್ತಾಳೆ. ಎರಡೂ ಪಾತ್ರಗಳಿಗೂ ಸರಿಯಾದ ನಟಿಯರನ್ನೇ ಆಯ್ಕೆ ಮಾಡಲಾಗಿದೆ.‌ ಮನೀಷಾ ಕಂಡ್ಕೂರ್ ನೋಟದಲ್ಲೂ ನಟನೆಯಲ್ಲೂ ತಮನ್ನಾರನ್ನು ಹೋಲುತ್ತಾರೆ. ಕ್ರಿಸ್ಟಿಯ ತಾಯಿಯಾಗಿ ಮಾನಸ ಸುಧೀರ್ ನಟಿಸಿದ್ದಾರೆ. ಇವರಿಗೆ ಪರದೆ ಮೇಲೆ ಕಾಣಿಸಿಕೊಳ್ಳಲು ಸೀಮಿತ ಅವಕಾಶವಷ್ಟೇ ಇದೆ.‌ ಆದರೆ ಹಾಗೆ ಬಂದಾಗಲೆಲ್ಲ ತಾಯಿಯ ವಾತ್ಸಲ್ಯ ತೋರಿಸಬಲ್ಲ ನಟನೆಗೆ, ಸಂಭಾಷಣೆಗೆ ಸರಿಯಾದ ಸಾಧ್ಯತೆ ಸಿಕ್ಕಿದೆ. ಕುತಂತ್ರಿ ಬುದ್ಧಿಯ ಪೊಲೀಸ್ ಅಧಿಕಾರಿ ರವಿಶಂಕರ್ ಪಾತ್ರದಲ್ಲಿ ರಮೇಶ್ ‌ಇಂದಿರಾ ಮತ್ತು ಮುಖ್ಯ ಖಳನಟನಾಗಿ ಡ್ರ್ಯಾಗನ್ ಮಂಜು ನಟನೆ ನೆನಪಲ್ಲಿ ಉಳಿಯುತ್ತದೆ. ಕ್ರಿಕೆಟ್ ಬೆಟ್ಟಿಂಗ್ ಹೆಸರಲ್ಲಿ ಜನರಿಂದ ಹಣ ವಸೂಲಿ ಮಾಡುವ ಏಜೆಂಟ್ ಎಂದೂ ಬುಕ್ಕಿ ಬಾಬು ಪಾತ್ರವಿದೆ.‌ ರಿಯಾಲಿಟಿ ಶೋ ಮೂಲಕ ಹೆಸರು ಮಾಡಿದ ಬಿ ಎನ್ ಆಚಾರ್ಯ ಬುಕ್ಕಿ ಪಾತ್ರದಲ್ಲಿ ನಟಿಸಿದ್ದಾರೆ.

ಎಂದಿನಂತೆ ಶಶಾಂಕ್ ಸಿನಿಮಾಗಳಲ್ಲಿ ನಿರೀಕ್ಷಿಸಬಹುದಾದ ನೀತಿ ಇಲ್ಲಿಯೂ ಇದೆ. ಆದರೆ ಬೆಟ್ಟಿಂಗ್ ನ ವೈಭವೀಕರಣ ಹಾಗೂ ಮಧ್ಯಂತರದ ಬಳಿಕ ನುಸುಳುವ ಐಟಮ್ ಡಾನ್ಸ್ ಚಿತ್ರಕ್ಕೆ ಅದೆಷ್ಟು ಅಗತ್ಯ ಇತ್ತು ಎಂದು ಅನಿಸದಿರದು. ಹಣದ ಮೋಹಕ್ಕೆ ಬಿದ್ದು ತಂತ್ರದಿಂದ ಸಂಪಾದಿಸುವ ನಾಯಕನ ಕಾನ್ಸೆಪ್ಟ್ ತುಸು ಹಳೆಯದೇನೋ ನಿಜ. ಆದರೆ ಅದನ್ನು ಚಿತ್ರಕಥೆಯಲ್ಲಿ ಅಳವಡಿಸಿರುವ ರೀತಿ ಚಿತಹೆಸರಲ್ಕ ನೋಡಿಸಿಕೊಂಡು ಹೋಗುವಂತೆ ಮಾಡುತ್ತದೆ.

ಸಾಮಾನ್ಯವಾಗಿ ಸಿನಿಮಾ ಶೀರ್ಷಿಕೆಗಳಲ್ಲಿ ಆದಷ್ಟು ಜನಪ್ರಿಯ ಪದಗಳನ್ನೇ ಬಳಸುತ್ತಾರೆ. ಆದರೆ ಬ್ರ್ಯಾಟ್ ಕನ್ನಡಿಗರ ಪಾಲಿಗೆ ಅಷ್ಟೇನೂ ಜನಪ್ರಿಯವಲ್ಲ. ಬಹುಶಃ ಈ ಚಿತ್ರದ ಬಳಿಕ‌ ಜನಪ್ರಿಯಗೊಂಡರೆ ಅದರ ಕ್ರೆಡಿಟ್ ಖಂಡಿತವಾಗಿ ಶಶಾಂಕ್ ಗೆ ಸಲ್ಲುತ್ತದೆ.

Read More
Next Story