
ಗಣರಾಜ್ಯೋತ್ಸವದ ದಿನ 'ಬಾರ್ಡರ್ 2' ಬಿಡುಗಡೆಗೊಳ್ಳಲಿದೆ.
ಗಣರಾಜ್ಯೋತ್ಸವದ ಸಂಭ್ರಮಕ್ಕೆ 'ಬಾರ್ಡರ್ 2': ಬೆಳ್ಳಿ ತೆರೆಯಲ್ಲಿ; ಬಿಡುಗಡೆ ದಿನಾಂಕ ಯಾವಾಗ?
ಮೊದಲ ಭಾಗದ 'ಸಂದೇಶೆ ಆತೆ ಹೈ' ಹಾಡನ್ನು ಈ ಚಿತ್ರದಲ್ಲಿ ಮರುಸೃಷ್ಟಿಸಲಾಗಿದೆ. ಇದು ಪ್ರೇಕ್ಷಕರಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.
ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್ ದೋಸಾಂಜ್ ಮತ್ತು ಅಹಾನ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ 'ಬಾರ್ಡರ್ 2' ಸಿನಿಮಾ ಜನವರಿ 23 ರಂದು ತೆರೆಗೆ ಬರಲಿದೆ. ಬಿಡುಗಡೆಗೆ ಇನ್ನು ಕೇವಲ ಎಂಟು ದಿನಗಳು ಮಾತ್ರ ಬಾಕಿ ಉಳಿದಿದ್ದು, 'ಧುರಂಧರ್' ಚಿತ್ರದ ಐತಿಹಾಸಿಕ ಯಶಸ್ಸಿನ ನಂತರ ಈಗ ಎಲ್ಲರ ಕಣ್ಣು ಈ ಸಿನಿಮಾದ ಮೇಲಿದೆ. ಮೊದಲ ಭಾಗದ ನೆನಪುಗಳು ಮತ್ತು ಅಭಿಮಾನಿಗಳ ಕ್ರೇಜ್ ನೋಡಿದರೆ, ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡಿದ್ದಕ್ಕಿಂತ ದೊಡ್ಡ ಮಟ್ಟದ ಗಳಿಕೆ ಮಾಡುವ ನಿರೀಕ್ಷೆಯಿದೆ.
ಈ ಸಿನಿಮಾ 1997ರಲ್ಲಿ ತೆರೆಕಂಡ ಸೂಪರ್ ಹಿಟ್ 'ಬಾರ್ಡರ್' ಚಿತ್ರದ ಮುಂದುವರಿದ ಭಾಗವಾಗಿದೆ. ಮೊದಲ ಭಾಗವು ಅಂದು ಬ್ಲಾಕ್‌ಬಸ್ಟರ್ ಆಗಿದ್ದಲ್ಲದೆ, ವರ್ಷಗಳು ಕಳೆದಂತೆ 'ಕಲ್ಟ್ ಕ್ಲಾಸಿಕ್' ಸ್ಥಾನ ಪಡೆದಿದೆ. ಚಿತ್ರದ ಸಂಭಾಷಣೆಗಳು, ಹಾಡುಗಳು ಮತ್ತು ಭಾವುಕ ಸನ್ನಿವೇಶಗಳು ಇಂದಿಗೂ ಜನರ ಮನಸ್ಸಿನಲ್ಲಿ ಹಸಿರಾಗಿವೆ. ಈಗ ಅದೇ ಜನಪ್ರಿಯತೆಯನ್ನು ಬಳಸಿಕೊಂಡು ಬರುತ್ತಿರುವ 'ಬಾರ್ಡರ್ 2' ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. 'ಗದರ್ 2' ಸಿನಿಮಾದಂತೆ ಈ ಚಿತ್ರವೂ ಸಹ ಹಳೆಯ ನೆನಪುಗಳ ಆಧಾರದ ಮೇಲೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಿತ್ರದ 'ಘರ್ ಕಬ್ ಆವೋಗೆ' ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಟ್ರೈಲರ್ ಬಿಡುಗಡೆಯಾದ ಮೇಲೆ ಈ ಹೈಪ್ ಮತ್ತಷ್ಟು ಹೆಚ್ಚಾಗಲಿದೆ.
'ಬಾರ್ಡರ್ 2' ಸಿನಿಮಾದ ಟ್ರೇಲರ್
ಬಾಕ್ಸ್ ಆಫೀಸ್ ಲೆಕ್ಕಾಚಾರದ ಪ್ರಕಾರ, 'ಬಾರ್ಡರ್ 2' ಮೊದಲ ದಿನವೇ ಭಾರತದಲ್ಲಿ 25 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡುವ ಸಾಧ್ಯತೆಯಿದೆ. ಇದು ದಿಲ್ಜಿತ್ ದೋಸಾಂಜ್ ಅವರ ಸಿನಿಮಾ ವೃತ್ತಿಜೀವನದ ಅತಿದೊಡ್ಡ ಓಪನಿಂಗ್ ಆಗಲಿದೆ. 2019ರಲ್ಲಿ ಬಿಡುಗಡೆಯಾಗಿದ್ದ 'ಗುಡ್ ನ್ಯೂಸ್' ಸಿನಿಮಾ ಮೊದಲ ದಿನ 17.56 ಕೋಟಿ ರೂಪಾಯಿ ಗಳಿಸಿ ಇದುವರೆಗೆ ದಿಲ್ಜಿತ್ ಅವರ ಅತ್ಯುತ್ತಮ ಆರಂಭಿಕ ಚಿತ್ರವಾಗಿತ್ತು. ಆದರೆ ಆರು ವರ್ಷಗಳ ನಂತರ 'ಬಾರ್ಡರ್ 2' ಆ ದಾಖಲೆಯನ್ನು ಸುಲಭವಾಗಿ ಮುರಿಯಲಿದೆ ಎಂದು ಅಂದಾಜಿಸಲಾಗಿದೆ.
ಅನುರಾಗ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಮೋನಾ ಸಿಂಗ್, ಸೋನಂ ಬಾಜ್ವಾ, ಅನ್ಯಾ ಸಿಂಗ್ ಮತ್ತು ಮೇಧಾ ರಾಣಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭೂಷಣ್ ಕುಮಾರ್, ಕೃಷ್ಣ ಕುಮಾರ್, ಜೆ.ಪಿ. ದತ್ತಾ ಮತ್ತು ನಿಧಿ ದತ್ತಾ ಅವರು ಟಿ-ಸೀರೀಸ್ ಮತ್ತು ಜೆ.ಪಿ. ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾವನ್ನು ನಿರ್ಮಿಸಿದ್ದಾರೆ.

