
ಕಾಂತಾರ ಅಧ್ಯಾಯ 1 ನಾಳೆಯಿಂದ ಬುಕ್ಕಿಂಗ್ ಆರಂಭ
'ಕಾಂತಾರ ಅಧ್ಯಾಯ 1' ಅಬ್ಬರ ಶುರು: ನಾಳೆಯಿಂದ ಟಿಕೆಟ್ ಬುಕಿಂಗ್ ಆರಂಭ
ಅಕ್ಟೋಬರ್ 2ರಂದು ತೆರೆಕಾಣಲಿರುವ ʻಕಾಂತಾರ ಅಧ್ಯಾಯ 1ʼ ಸಿನಿಮಾವು 7000 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದು ಭಾರತೀಯ ಸಿನೆಮಾ ಇತಿಹಾಸದಲ್ಲೇ ಅತಿದೊಡ್ಡ ಪ್ಯಾನ್-ಇಂಡಿಯಾ ರಿಲೀಸ್‌ಗಳಲ್ಲಿ ಒಂದಾಗಲಿದೆ.
ಭಾರತೀಯ ಚಿತ್ರರಂಗವೇ ಕಾತುರದಿಂದ ಕಾಯುತ್ತಿರುವ, ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ ಅಧ್ಯಾಯ 1' ಸಿನಿಮಾದ ಅಬ್ಬರ ಆರಂಭವಾಗಿದೆ. ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಪ್ರಕ್ರಿಯೆಯು ನಾಳೆ (ಸೆಪ್ಟೆಂಬರ್ 26) ಮಧ್ಯಾಹ್ನ 12:29ಕ್ಕೆ ಕರ್ನಾಟಕದಾದ್ಯಂತ ಆರಂಭವಾಗಲಿದೆ.
'ಕಾಂತಾರ' ಮೊದಲ ಭಾಗವು ತುಳುನಾಡಿನ ದೈವಾರಾಧನೆ, ಸಂಸ್ಕೃತಿ ಮತ್ತು ಪ್ರಕೃತಿಯೊಂದಿಗಿನ ಮಾನವನ ಸಂಬಂಧವನ್ನು ಅದ್ಭುತವಾಗಿ ಕಟ್ಟಿಕೊಟ್ಟು, ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇದೀಗ ಅದರ ಪ್ರೀಕ್ವೆಲ್ ಆಗಿರುವ 'ಕಾಂತಾರ ಅಧ್ಯಾಯ 1', ಕಥೆಯ ಮೂಲವನ್ನು ಹುಡುಕಿಕೊಂಡು ಹೋಗುತ್ತಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆಗಳನ್ನು ಗಗನಕ್ಕೇರಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್, ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ
ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ವಿಶೇಷ ದಿನದಂದು 'ಕಾಂತಾರ ಅಧ್ಯಾಯ 1' ತೆರೆಕಾಣಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಮತ್ತು ತುಳು ಸೇರಿದಂತೆ ಒಟ್ಟು ಏಳು ಭಾಷೆಗಳಲ್ಲಿ, ವಿಶ್ವಾದ್ಯಂತ 7000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಇದು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತಿದೊಡ್ಡ ಪ್ಯಾನ್-ಇಂಡಿಯಾ ಬಿಡುಗಡೆಗಳಲ್ಲಿ ಒಂದಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ರಿಷಬ್ ಶೆಟ್ಟಿ ಅವರು ಈ ಚಿತ್ರದಲ್ಲಿ ಕೇವಲ ನಾಯಕನಾಗಿ ಮಾತ್ರವಲ್ಲದೆ, ನಾಗಸಾಧು ಪಾತ್ರದಲ್ಲೂ ಕಾಣಿಸಿಕೊಂಡು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ವಿಜಯ್ ಕಿರಗಂದೂರ್ ಅವರ ಭವ್ಯ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ, ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೌಸ್‌ಫುಲ್ ಆಗುವ ನಿರೀಕ್ಷೆ
ನಾಳೆ ಮಧ್ಯಾಹ್ನ 12. 29ಕ್ಕೆ ಬುಕಿಂಗ್ ಆರಂಭವಾಗುತ್ತಿದ್ದಂತೆ, ಕ್ಷಣಾರ್ಧದಲ್ಲಿ ಎಲ್ಲಾ ಪ್ರದರ್ಶನಗಳ ಟಿಕೆಟ್‌ಗಳು ಸೋಲ್ಡ್ ಔಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಅಭಿಮಾನಿಗಳು ಈಗಾಗಲೇ ಟಿಕೆಟ್ ಕಾಯ್ದಿರಿಸಲು ಕಾತರದಿಂದ ಕಾಯುತ್ತಿದ್ದು, ಮೊದಲ ದಿನವೇ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುವುದು ಬಹುತೇಕ ಖಚಿತ.