ದಕ್ಷಿಣದ ಬಾಗಿಲು ಬಡಿದ ಬಾಲಿವುಡ್: ಗೆಲುವು ಸಿಕ್ಕರೂ ಅವಕಾಶ ಕಳೆದುಕೊಳ್ಳುತ್ತಿದ್ದಾರಾ ಹಿಂದಿ ನಿರ್ಮಾಪಕರು?
x

ಧುರಂಧರ್

ದಕ್ಷಿಣದ ಬಾಗಿಲು ಬಡಿದ ಬಾಲಿವುಡ್: ಗೆಲುವು ಸಿಕ್ಕರೂ ಅವಕಾಶ ಕಳೆದುಕೊಳ್ಳುತ್ತಿದ್ದಾರಾ ಹಿಂದಿ ನಿರ್ಮಾಪಕರು?

ಇತ್ತೀಚೆಗೆ ಬಿಡುಗಡೆಯಾದ 'ಛಾವಾ' ಮತ್ತು ರಣವೀರ್ ಸಿಂಗ್ ಅಭಿನಯದ 'ಧುರಂಧರ್' ನಂತಹ ಹಿಂದಿ ಚಲನಚಿತ್ರಗಳು ಹೈದರಾಬಾದ್ ಮತ್ತು ವಿಜಯವಾಡದಂತಹ ಪ್ರಮುಖ ತೆಲುಗು ನಗರಗಳಲ್ಲಿ ಭಾರಿ ಪ್ರದರ್ಶನ ಮತ್ತು ದಾಖಲೆಯ ಹೌಸ್‌ಫುಲ್‌ ಪ್ರದರ್ಶನ ಕಂಡಿವೆ.


Click the Play button to hear this message in audio format

ದಶಕಗಳ ಕಾಲ ಭಾರತೀಯ ಚಿತ್ರರಂಗದ ಮೇಲೆ ಏಕಸ್ವಾಮ್ಯ ಮೆರೆದಿದ್ದ ಬಾಲಿವುಡ್, ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಜಾಗತಿಕ ಏಳಿಗೆಯಿಂದಾಗಿ ತುಸು ಹಿನ್ನಡೆ ಅನುಭವಿಸಿರುವುದು ಸುಳ್ಳಲ್ಲ. ದಕ್ಷಿಣದ ಪ್ರೇಕ್ಷಕರಲ್ಲಿ ಹಿಂದಿ ಚಿತ್ರಗಳ ಮೇಲಿನ ಆಸಕ್ತಿ ಸ್ವಲ್ಪಮಟ್ಟಿಗೆ ತಗ್ಗಿತ್ತಾದರೂ, ತೆಲುಗು ರಾಜ್ಯಗಳಲ್ಲಿ ಬಾಲಿವುಡ್‌ಗೆ ಇನ್ನೂ ಭದ್ರವಾದ ಮಾರುಕಟ್ಟೆ ಇದೆ ಎಂಬುದನ್ನು ಇತ್ತೀಚಿನ ವಿದ್ಯಮಾನಗಳು ಸಾಬೀತುಪಡಿಸಿವೆ. ಆದರೆ, ಈ ಸುವರ್ಣಾವಕಾಶವನ್ನು ಬಾಲಿವುಡ್ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿಲ್ಲವೇಕೆ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.

ತೆಲುಗು ಮಣ್ಣಿನಲ್ಲಿ ಹಿಂದಿ ಹವಾ

ತೆಲುಗು ಪ್ರೇಕ್ಷಕರು ಸಿನಿಮಾ ಪ್ರೇಮಿಗಳು; ಅವರು ಭಾಷೆಯ ಹಂಗಿಲ್ಲದೆ ಉತ್ತಮ ಚಿತ್ರಗಳನ್ನು ಮತ್ತು ನಟರನ್ನು ಪ್ರೋತ್ಸಾಹಿಸುತ್ತಾರೆ. ಇತ್ತೀಚೆಗೆ ಬಿಡುಗಡೆಯಾದ ವಿಕ್ಕಿ ಕೌಶಲ್ ನಟನೆಯ 'ಛಾವಾ' ಮತ್ತು ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಚಿತ್ರಗಳೇ ಇದಕ್ಕೆ ಸಾಕ್ಷಿ. ಹೈದರಾಬಾದ್ ಮತ್ತು ವಿಜಯವಾಡದಂತಹ ಪ್ರಮುಖ ನಗರಗಳಲ್ಲಿ ಈ ಚಿತ್ರಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ವಿಶೇಷವೆಂದರೆ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಇವುಗಳ ಡಬ್ಬಿಂಗ್ ಆವೃತ್ತಿ ಇಲ್ಲದಿದ್ದರೂ, ಕೇವಲ ಹಿಂದಿ ಆವೃತ್ತಿಯಿಂದಲೇ ಬಾಕ್ಸ್‌ ಆಫೀಸ್ ಕೊಳ್ಳೆಹೊಡೆಯುತ್ತಿವೆ.

ಬಾಲಿವುಡ್ ಮಾಡುತ್ತಿರುವ ಎಡವಟ್ಟು ಏನು?

ಇಲ್ಲಿ ಬಾಲಿವುಡ್ ನಿರ್ಮಾಪಕರಿಂದ ಆಗುತ್ತಿರುವ ಒಂದೇ ಒಂದು ದೊಡ್ಡ ತಪ್ಪು ಎಂದರೆ 'ಸರಿಯಾದ ಯೋಜನೆ ಇಲ್ಲದಿರುವುದು. ಮಾರುಕಟ್ಟೆ ತಜ್ಞರ ಪ್ರಕಾರ, ಕನಿಷ್ಠಪಕ್ಷ ತೆಲುಗು ಭಾಷೆಗೆ ಡಬ್ ಮಾಡಿ ಏಕಕಾಲದಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿದ್ದರೆ, ಈ ಆದಾಯವನ್ನು ದ್ವಿಗುಣಗೊಳಿಸಬಹುದಿತ್ತು. 2025ರ ಬ್ಲಾಕ್‌ಬಸ್ಟರ್ ಎನಿಸಿಕೊಂಡ 'ಛಾವಾ' ಚಿತ್ರವನ್ನು ಮೊದಲು ಹಿಂದಿಯಲ್ಲಿ ಬಿಡುಗಡೆ ಮಾಡಿ, ಆ ನಂತರ ಬಹಳ ತಡವಾಗಿ ತೆಲುಗು ಆವೃತ್ತಿಯನ್ನು ತರಲಾಯಿತು. ಈ ವಿಳಂಬದಿಂದಾಗಿ ಮಾರುಕಟ್ಟೆಯ ಪೂರ್ಣ ಲಾಭ ಪಡೆಯಲು ಚಿತ್ರತಂಡ ವಿಫಲವಾಯಿತು. ಇದೀಗ 'ಧುರಂಧರ್' ಚಿತ್ರದ ವಿಷಯದಲ್ಲೂ ಇದೇ ಇತಿಹಾಸ ಮರುಕಳಿಸಿದೆ.

ಕಾರ್ಯತಂತ್ರ ಬದಲಾಗಬೇಕಿದೆ

ನೇರ ತೆಲುಗು ಬಿಡುಗಡೆ ಇಲ್ಲದಿದ್ದರೂ 'ಧುರಂಧರ್' ಮತ್ತು 'ಛಾವಾ' ಗಳಿಸಿದ ಯಶಸ್ಸು, ತೆಲುಗು ನಾಡಿನಲ್ಲಿ ಬಾಲಿವುಡ್‌ಗಿರುವ ಸುಪ್ತ ಮಾರುಕಟ್ಟೆಯನ್ನು ತೋರಿಸುತ್ತದೆ. "ದಕ್ಷಿಣದ ಸಿನಿಪ್ರೇಮಿಗಳ ನಾಡಿನಲ್ಲಿ ಹಿಂದಿ ಚಿತ್ರಗಳನ್ನು ಸ್ಥಳೀಯ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಿದರೆ ಕಲೆಕ್ಷನ್ ನಿರಂತರವಾಗಿ ಹೆಚ್ಚಾಗುತ್ತದೆ. ಬಾಲಿವುಡ್ ತಕ್ಷಣವೇ ತನ್ನ ಹಳೆಯ ಕಾರ್ಯತಂತ್ರವನ್ನು ಬದಲಾಯಿಸಿ, ದಕ್ಷಿಣದ ಮಾರುಕಟ್ಟೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ," ಎಂಬುದು ವ್ಯಾಪಾರ ವಿಶ್ಲೇಷಕರ ಮತ್ತು ಉದ್ಯಮ ವಲಯದ ಖಚಿತ ಸಲಹೆಯಾಗಿದೆ.

Read More
Next Story