
Actor Neena Gupta| 66 ವರ್ಷದ ಖ್ಯಾತ ನಟಿ ಮತ್ತೆ ಗರ್ಭಿಣಿ? ವೈರಲಾಗುತ್ತಿರುವ ವಿಡಿಯೊದ ಅಸಲಿಯತ್ತೇನು?
66ರ ವಯಸ್ಸಿನಲ್ಲಿ ಬಾಲಿವುಡ್ ನಟಿ ನೀನಾ ಗುಪ್ತಾ ಗರ್ಭಿಣಿಯೇ? ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ವಿವಾಹದ ಆರತಕ್ಷತೆಯಲ್ಲಿ ವೈರಲ್ ಆದ ಫೋಟೋಗಳ ಹಿಂದಿನ ಅಸಲಿ ಸತ್ಯವೇನು?
ಬಾಲಿವುಡ್‌ನ ಹಿರಿಯ ನಟಿ ನೀನಾ ಗುಪ್ತಾ ಅವರು 66ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ವದಂತಿಗಳಿಗೆ ಈಗ ಸ್ವತಃ ನೀನಾ ಗುಪ್ತಾ ಅವರೇ ತಮ್ಮದೇ ಆದ ಶೈಲಿಯಲ್ಲಿ ಹಾಸ್ಯದ ಮೂಲಕ ತಿರುಗೇಟು ನೀಡಿದ್ದಾರೆ.
ವದಂತಿ ಶುರುವಾಗಿದ್ದು ಎಲ್ಲಿ?
ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹದ ಆರತಕ್ಷತೆ ಕಾರ್ಯಕ್ರಮದಲ್ಲಿ ನೀನಾ ಗುಪ್ತಾ ಭಾಗವಹಿಸಿದ್ದರು. ಈ ಸಮಾರಂಭದ ವಿಡಿಯೋ ಮತ್ತು ಫೋಟೋಗಳು ವೈರಲ್ ಆದ ಬೆನ್ನಲ್ಲೇ, "ನೀನಾ ಗುಪ್ತಾ ಗರ್ಭಿಣಿಯಾಗಿದ್ದಾರೆಯೇ?" ಎಂದು ನೆಟ್ಟಿಗರು ಪ್ರಶ್ನಿಸಲು ಆರಂಭಿಸಿದ್ದರು. ವೇದಿಕಾ ಎನ್ನುವ ಬಳಕೆದಾರರೊಬ್ಬರು, "ಇದು ನಿಜವೇ? 66ನೇ ವಯಸ್ಸಿನಲ್ಲಿ ಗರ್ಭಿಣಿಯೇ? ಅವರ ಹೊಟ್ಟೆ ನೋಡಿದರೆ ಸಹಜವಾಗಿ ಕಾಣುತ್ತಿಲ್ಲ" ಎಂದು ಪೋಸ್ಟ್ ಮಾಡಿದ್ದು ಇದು ಈ ವದಂತಿಯ ಬೆಂಕಿಗೆ ತುಪ್ಪ ಸುರಿದಂತಾಗಿತ್ತು.
Is Neena Gupta pregnant? pic.twitter.com/AlCeWzpvlG
— Sapna Madan (@sapnamadan) March 5, 2026
ನಟಿ ನೀನಾ ಗುಪ್ತಾ ನೀಡಿದ ಸ್ಪಷ್ಟನೆ ಏನು?
ಈ ಕುರಿತು 'ಬಾಲಿವುಡ್ ಹಂಗಾಮಾ'ಗೆ ನೀಡಿದ ಸಂದರ್ಶನದಲ್ಲಿ ನಗುತ್ತಲೇ ಉತ್ತರಿಸಿರುವ ನೀನಾ ಗುಪ್ತಾ, "ನನಗೆ ಈಗ ಬೇಕಾಗಿರುವುದು ಇದೊಂದೇ, ನಿಜ ಜೀವನದ 'ಬದಾಯಿ ಹೋ'!" ಎಂದು ತಮ್ಮದೇ ಸೂಪರ್ ಹಿಟ್ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಬದಾಯಿ ಹೋ ಸಿನಿಮಾದಲ್ಲಿ ಅವರು ವಯಸ್ಸಾದ ಮೇಲೆ ಗರ್ಭಧಾರಣೆಯ ಮಾಡುವ ಮಹಿಳೆಯ ಪಾತ್ರ ನಿರ್ವಹಿಸಿದ್ದರು.
"ಇಲ್ಲಿ ಯಾವುದೇ 'ಬದಾಯಿ ಹೋ' ನಡೆಯುತ್ತಿಲ್ಲ. ನಾನು ಗರ್ಭಿಣಿಯಾಗಿಲ್ಲ. ಅಂದು ನಾನು ಉಟ್ಟಿದ್ದ ಸೀರೆಯ ಮೆಟೀರಿಯಲ್ ತುಂಬಾ ದಪ್ಪಗಿತ್ತು. ಆ ಕಾರಣದಿಂದ ನಾನು ಸ್ವಲ್ಪ ದಪ್ಪಗೆ (Bulky) ಕಾಣಿಸುತ್ತಿದ್ದೆ ಅಷ್ಟೇ. ಆದರೆ, ಈ ವಯಸ್ಸಿನಲ್ಲೂ ನನ್ನ ಗರ್ಭಧಾರಣೆಯ ಬಗ್ಗೆ ಜನರು ಇಷ್ಟೊಂದು ಚರ್ಚೆ ಮಾಡುತ್ತಿರುವುದನ್ನು ನೋಡಿದರೆ ಖುಷಿಯಾಗುತ್ತದೆ. ನಾವು ಬೆಳೆಯುತ್ತಿದ್ದೇವೆ ಎನ್ನುವುದಕ್ಕೆ ಇದು ಸಾಕ್ಷಿ" ಎಂದು ತಮಾಷೆ ಮಾಡಿದ್ದಾರೆ.
ವೈಯಕ್ತಿಕ ಜೀವನ ಮತ್ತು ನೀನಾ ಗುಪ್ತಾ
ನೀನಾ ಗುಪ್ತಾ ಅವರು ಮೊದಲಿನಿಂದಲೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾ ಬಂದವರು. 80ರ ದಶಕದಲ್ಲಿ ಖ್ಯಾತ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರೊಂದಿಗೆ ಸಂಬಂಧ ಹೊಂದಿದ್ದ ನೀನಾ, ಮಗಳು ಮಸಾಬಾ ಗುಪ್ತಾ ಅವರನ್ನು ಒಬ್ಬಂಟಿ ತಾಯಿಯಾಗಿ ಬೆಳೆಸಿ ಸಮಾಜಕ್ಕೆ ಮಾದರಿಯಾಗಿದ್ದರು. ನಂತರ 2008ರಲ್ಲಿ ವಿವೇಕ್ ಮೆಹ್ರಾ ಅವರನ್ನು ವಿವಾಹವಾದರು. ಈಗ ಹಬ್ಬಿರುವ ಗರ್ಭಧಾರಣೆಯ ವದಂತಿಯು ಕೇವಲ ತಪ್ಪು ಕಲ್ಪನೆಯಾಗಿದ್ದು, ನಟಿ ಅದನ್ನು ತಮಾಶೆಯಿಂದಲೇ ತಳ್ಳಿಹಾಕಿದ್ದಾರೆ.

