
ಗುಲ್ಶನ್ ದೇವಯ್ಯ
'ಕಾಂತಾರ ಚಾಪ್ಟರ್ 1' ನಲ್ಲಿ ಕುಲಶೇಖರನಾದ ಬಾಲಿವುಡ್ ನಟ ಗುಲ್ಶನ್ ದೇವಯ್ಯ
ರಾಜನ ರೀತಿ ಪೋಷಾಕು ಧರಿಸಿ ಸಿಂಹಾಸನದ ಮೇಲೆ ಕುಳಿತಿರುವ ಗುಲ್ಶನ್ ದೇವಯ್ಯ ಅವರ ಚಿತ್ರವನ್ನು ಹೊಂಬಾಳೆ ಫಿಲಮ್ಸ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.
ಬಹು ನಿರೀಕ್ಷಿತ ಸಿನಿಮಾ 'ಕಾಂತಾರ ಚಾಪ್ಟರ್ 1' ನಲ್ಲಿ ಬಾಲಿವುಡ್‌ನಲ್ಲಿ ಜನಪ್ರಿಯತೆ ಪಡೆದಿರುವ ಕನ್ನಡ ಮೂಲದ ನಟ ಗುಲ್ಶನ್ ದೇವಯ್ಯ ಅವರು ಕುಲಶೇಖರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜನ ರೀತಿ ಪೋಷಾಕು ಧರಿಸಿ ಸಿಂಹಾಸನದ ಮೇಲೆ ಕುಳಿತಿರುವ ಗುಲ್ಶನ್ ದೇವಯ್ಯ ಅವರ ಚಿತ್ರವನ್ನು ಹೊಂಬಾಳೆ ಫಿಲಮ್ಸ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.
ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' (2022) ದ ಹಿಂದಿನ ಅಧ್ಯಾಯವಾಗಿದ್ದು, ಹೊಂಬಾಳೆ ಫಿಲ್ಮ್ಸ್‌ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಈ ಚಿತ್ರವು ಸಂಸ್ಕೃತಿ, ಜಾನಪದ ಮತ್ತು ಅದ್ಭುತ ಕಥಾಹಂದರವನ್ನು ಹೊಂದಿದೆ.
ಯಾರಿದು ಗುಲ್ಶನ್ ದೇವಯ್ಯ
ಬೆಂಗಳೂರಿನಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಗುಲ್ಶನ್ ದೇವಯ್ಯ, ಪ್ರಸಾದ್ ಬಿದಪ್ಪ ಅವರ ಗರಡಿಯಲ್ಲಿ ಪಳಗಿದವರು. 2004 ರಲ್ಲಿ ಬಿಡುಗಡೆ ಆದ ಸಲ್ಮಾನ್ ಖಾನ್ರ ‘ದಿಲ್ ನೆ ಜಿಸೆ ಅಪ್ನಾ ಕಹಾ’ ಸಿನಿಮಾದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡು ಮರೆಯಾಗಿದ್ದ ಗುಲ್ಶನ್ ದೇವಯ್ಯ 2010 ರಲ್ಲಿ ಬಂದ ಕಲ್ಕಿ ಕೊಚ್ಲಿನ್ ನಟಿಸಿ ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದ ‘ದಿ ಗರ್ಲ್ ಇನ್ ಯೆಲ್ಲೊ ಬೂಟ್ಸ್’ ಸಿನಿಮಾ ಮೂಲಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.
ಅಲ್ಲಿಂದ ಹಲವಾರು ಸಿನಿಮಾಗಳಲ್ಲಿ ವಿಶೇಷವಾಗಿ ಕಮರ್ಶಿಯಲ್ ಅಲ್ಲದ ಬ್ರಿಜ್ ಮಾದರಿಯ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಗುಲ್ಶನ್ ದೇವಯ್ಯ ನಟಿಸಿದ್ದಾರೆ. ‘ಧಮ್ ಮಾರೊ ಧಮ್’, ‘ರಾಮ್-ಲೀಲಾ’, ‘ಹಂಟರ್’, ‘ಡೆತ್ ಇನ್ ಗಂಜ್’, ‘ಲವ್ ಅಫೇರ್’, ‘ಮರ್ದ್ ಕೊ ದರ್ದ್ ನಹಿ ಹೋತಾ’ ಇನ್ನೂ ಹಲವಾರು ಸಿನಿಮಾಗಳಲ್ಲಿ ಗುಲ್ಶನ್ ದೇವಯ್ಯ ನಟಿಸಿದ್ದಾರೆ. ಸಿನಿಮಾಗಳ ಜೊತೆಗೆ ಹಲವು ವೆಬ್ ಸರಣಿಗಳಲ್ಲಿಯೂ ಸಹ ಗುಲ್ಷನ್ ನಟಿಸಿದ್ದಾರೆ. 2023 ರಲ್ಲಿ ಬಿಡುಗಡೆ ಆದ ‘ಗನ್ಸ್ ಆಂಡ್ ಗುಲಾಬ್ಸ್’ ವೆಬ್ ಸರಣಿಯಲ್ಲಿನ ಗುಲ್ಶನ್ ದೇವಯ್ಯ ನಟನೆಗೆ ಬಹಳ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ 'ಕಾಂತಾರ: ಚಾಪ್ಟರ್ 1' ಸಿನಿಮಾದ ಮೂಲಕ ಗುಲ್ಶನ್ ದೇವಯ್ಯ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.
'ಕಾಂತಾರ: ಚಾಪ್ಟರ್ 1' ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ 'ಕನಕವತಿ' ಪಾತ್ರವನ್ನ ರುಕ್ಮಿಣಿ ವಸಂತ್ ನಿರ್ವಹಿಸಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ 'ಕನಕವತಿ' ಫಸ್ಟ್ ಲುಕ್ ಬಿಡುಗಡೆಯಾಗಿತ್ತು. 'ಕಾಂತಾರ ಚಾಪ್ಟರ್ 1'ಸಿನಿಮಾ 2025ರ ಅಕ್ಟೋಬರ್ ತಿಂಗಳಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.