ಬೆಂಗಳೂರು ಅಂತಾರಾಷ್ಟ್ರೀಯ ʻಸಿನಿಮಾ ಸಂತೆʼಯೊಳಗೊಂದು ಸುತ್ತು
x

ಬೆಂಗಳೂರು ಅಂತಾರಾಷ್ಟ್ರೀಯ ʻಸಿನಿಮಾ ಸಂತೆʼಯೊಳಗೊಂದು ಸುತ್ತು

BIFFES: ಬೆಂಗಳೂರು ʻಸಿನಿಮಾ ಸಂತೆʼಯಲ್ಲಿ ನಿಂತ ಸಂವಿಧಾನದ ಕಬೀರ


ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Biffes) ಎಂದರೆ ಸಹೃದಯ ಸಿನಿ ಪ್ರೇಕ್ಷಕರಿಗೆ ಒಂದು ರೀತಿಯ ಸಿನಿಮಾ ಸಂತೆಯಂತೆ. ಇದನ್ನು ಸಂತೆ ಎನ್ನಲು ಒಂದು ಕಾರಣವೂ ಇದೆ. ಊರಿನ ಸಂತೆಯಲ್ಲಿ ಸಿಕ್ಕದಿರುವುದೇ ಇಲ್ಲ. ಮಕ್ಕಳೂದುವ ಪೀಪಿಯಿಂದ ಹಿರಿಯರು ಬಳಸುವ ಎಲ್ಲ ಸಾಮಾಗ್ರಿಗಳವರೆಗೆ ದಕ್ಕುವಂತೆ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಲ್ಲಿ ಅವರಿಚ್ಛಿಸುವ ವರ್ಗದ ಚಿತ್ರಗಳು ಇಲ್ಲಿ ದಕ್ಕುತ್ತದೆ.

ಇನ್ನೊಂದರ್ಥದಲ್ಲಿ ಇದೊಂದು ರೀತಿಯ ಸಿನಿ ಹಬ್ಬ. ಮುಖ್ಯವಾಹಿನಿಯ ಚಿತ್ರಗಳನ್ನು ನೋಡಿ ಅಭ್ಯಾಸವಾದ ಪ್ರೇಕ್ಷಕರಿಗೆ ಇಂಥ ಸೂಕ್ಷ್ಮ ಲೋಕದ ಚಿತ್ರಗಳಿರುತ್ತವೆಯೇ ಎಂದು ಬೆರಗು ಮೂಡಿಸುವ ತಾಣ. ದೇಶದ ಮೂಲೆಮೂಲೆಗಳಿಂದ ಸಿನಿಮಾ ಪ್ರೀತಿಸುವ ಮಂದಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಬೆಂಗಳೂರಿನ ಮುಖ್ಯ ರಸ್ತೆಗಳಲ್ಲಿ ಚಿತ್ರ ಪ್ರೇಮಿಗಳನ್ನು ಚಿತ್ರಗಳು ಪ್ರದರ್ಶನಗೊಳ್ಳುವ ಒರಾಯನ್‌ ಮಲ್ ನ ಕಡೆಗೆ ಸೆಳೆಯುವ ಫಲಕಗಳು ಢಾಳಾಗಿ ನಿಂತಿವೆ.

ಚಿತ್ರೋತ್ಸವವನ್ನು ರಾಜಕೀಯ ಕಾರಣಕ್ಕಾಗಿ ಮತ್ತು ಸರ್ಕಾರವೇ ನಡೆಸುತ್ತಿರುವ ಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರೂ ಅವರೊಂದಿಗೆ ನಿಂತವರು ಹೆಸರಾಂತ ರಂಗಕರ್ಮಿ, ಸಿನಿಮಾ ತಜ್ಞ ಡಾ. ಜಬ್ಬಾರ್‌ ಪಟೇಲ್‌. ಅವರು ಈ ಚಿತ್ರೋತ್ಸವದಲ್ಲಿ ಸಂವಿಧಾನ ಮತ್ತು ಭಾರತೀಯ ಸಿನಿಮಾ ಎಂಬ ವಿಷಯದ ಕುರಿತು ಕಾರ್ಯಾಗಾರ ನಡೆಸುತ್ತಿರುವುದು 15ನೇ Biffes ನ ಅತಿಮುಖ್ಯ ಸಂಗತಿ ಎಂಬುದು ಬಹು ಜನರ ಅನಿಸಿಕೆ.

ಏಕೆಂದರೆ ಇಂದು ಸಂವಿಧಾನ ಅಪಾಯದ ಅಂಚಿನಲ್ಲಿದೆ. ಸಂವಿಧಾನದ ಅಗತ್ಯವೇ ಇಲ್ಲ ಎನ್ನುವ ಮಟ್ಟಿಗೆ ಬಲಪಂಥೀಯ ಶಕ್ತಿಗಳು ಮಾತನಾಡುತ್ತಿವೆ. ರಾಷ್ಟ್ರಿಯ ಕಾನೂನು ಆಯೋಗ ಸದ್ಯದಲ್ಲೇ ಸಲ್ಲಿಸಲಿರುವ ʼಒಂದು ರಾಷ್ಟ್ರ, ಒಂದು ಚುನಾವಣೆʼ ವರದಿಯಿಂದಾಗಿ ಈಗಿರುವ ಸಂವಿಧಾನಕ್ಕೆ ಮತ್ತೊಂದು ಹೊಸ ಅಧ್ಯಾಯ ಸೇರ್ಪಡೆಯಾಗುವ ಸಾಧ್ಯತೆ ಇದೆ. ಯಾರಿಂದ ಸಂವಿಧಾನ ರಕ್ಷಣೆಯಾಗಬೇಕಿತ್ತೋ ಅಂಥವರಿಂದಲೇ ಸಂವಿಧಾನದ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ. ಸಂವಿಧಾನದ ಮೂಲಭೂತ ಆಶಯಗಳಾದ ಸಮಾನತೆ ಮತ್ತು ನ್ಯಾಯಕ್ಕೆ ಇಂದು ಆಪತ್ತು ಎದುರಾಗಿದೆ. “ ಈ ಆಪತ್ತಿನಿಂದ ನಮ್ಮ ಬದುಕು ದುಸ್ತರವಾಗಲಿದೆ” ಎಂದು ಇತ್ತೀಚೆಗೆ ನಡೆದ ಎರಡು ದಿನಗಳ ʼಸಂವಿಧಾನ ಮತ್ತು ರಾಷ್ಟ್ರೀಯ ಏಕತೆʼ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. “ಸಂವಿಧಾನವಿರುವುದು ಕೇವಲ ದಲಿತೊದ್ಧಾರಕ್ಕೆ, ಇದು ಸಾಮಾಜಿಕ-ಆರ್ಥಿಕ ಮಾನದಂಡಗಳ ಮೇಲೆ ರಚನೆಯಾದದ್ದಲ್ಲ ಎಂಬ ಅಪಪ್ರಚಾರ ವಿಸ್ತೃತವಾಗಿ ನಡೆಯುತ್ತಿದೆ. ಈ ರೀತಿ ಅಪಪ್ರಚಾರ ಮಾಡುತ್ತಿರುವವರು ಸಂವಿಧಾನದ ಮೂಲ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳ ವಿರುದ್ಧವಾಗಿರುವವರು ಎಂಬುದು ಎಲ್ಲರಿಗೂ ಮನದಟ್ಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ.

ಸಂವಿಧಾನದ ಮೂಲ ಆಶಯಗಳನ್ನು ಕುರಿತು ಸಿನಿಮಾ ಏನನ್ನು ಹೇಳುತ್ತದೆ ಎಂಬುದನ್ನು ಚಿತ್ರೋತ್ಸವ ಅರ್ಥ ಮಾಡಿಸಬೇಕೆಂಬುದು ಸಿದ್ದರಾಮಯ್ಯನವರ ಆಶಯ ಕೂಡ ಹಾಗಾಗಿಯೇ ಇಲ್ಲಿ ಜಬ್ಬಾರ್‌ ಪಟೇಲ್‌ ಅವರ ಸಕ್ರೀಯ ಹಾಜರಿ. ಇಪ್ಪತ್ನಾಲ್ಕು ವರ್ಷಗಳ ಹಿಂದೆ, ಅಂದರೆ 2000 ಇಸುವಿಯಲ್ಲಿ ಜಬ್ಬಾರ್‌ ಪಟೇಲ್‌ ಡಾ. ಬಿ, ಆರ್‌. ಅಂಬೇಡ್ಕರ್‌ ಎಂಬ ಚಿತ್ರವನ್ನು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ನಿರ್ದೇಶಿಸಿದ್ದರು. ಬಹುಭಾಷಾ ನಟ ಮಮ್ಮೂಟ್ಟಿ ಈ ಚಿತ್ರದಲ್ಲಿ ಅಂಬೇಡ್ಕರ್‌ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸಂವಿಧಾನದ ಮೂಲ ಆಶಯಗಳನ್ನು ಕುರಿತು ವಿಸ್ತೃತವಾಗಿ ಚರ್ಚಿಸಲಾಗಿತ್ತು. ಈ ಚಿತ್ರಕ್ಕೆ ಅನೇಕ ರಾಷ್ಟ್ರ ಪ್ರಶಸ್ತಿಗಳು ಲಭ್ಯವಾಗಿತ್ತು. ಹಾಗಾಗಿ ಈ ಸಂದರ್ಭದಲ್ಲಿ ಈ ಚಿತ್ರೋತ್ಸವವನ್ನು ಉದ್ಘಾಟಿಸಲು ಜಬ್ಬಾರ್‌ ಪಟೇಲ್ ಅವರೇ ಸೂಕ್ತ ವ್ಯಕ್ತಿಯೆಂಬುದು ಬಹುಜನರ ಆಭಿಪ್ರಾಯವಾಗಿತ್ತು. ಹಾಗಾಗಿ ಕಾರ್ಯಾಗಾರದಲ್ಲಿ ಜಬ್ಬಾರ್‌ ಪಟೇಲ್‌ ಏನು ಹೇಳಲಿದ್ದಾರೆ. ಯಾವ ಯಾವ ಸಂಗತಿಗಳನ್ನು ಪ್ರತಿಪಾದಿಸಲಿದ್ದಾರೆ ಎಂಬುದನ್ನು ಕೇಳಲು ಸಂವಿಧಾನ ತಜ್ಞರೂ ಸೇರಿದಂತೆ ಸಾವಿರಾರು ಸಹೃದಯ ಸಂವಿಧಾನವನ್ನು ಗೌರವಿಸುವ ಮಂದಿ ಕಾತುರರಾಗಿದ್ದಾರೆ.

ಸಂವಿಧಾನದ ಆಶಯ ಕುರಿತ ಚಿತ್ರಗಳೂ ಸೇರಿದಂತೆ ಸುಮಾರು 200ಕ್ಕೂ ಹೆಚ್ಚುಚಿತ್ರಗಳು ಒರಾಯನ್‌ ಮಾಲ್‌ ನ 11 ತೆರೆಗಳಮೇಲೆ ಈ ವೀಕ್ಷಕರು ವೀಕ್ಷಿಸಬಹುದು. ಅಲ್ಲದೆ, ಮರಾಜಪೇಟೆಯ ಚಲನಚಿತ್ರ ಕಲಾವಿದರಸಂಘ ಹಾಗೂಬನಶಂಕರಿ ಎರಡನೇ ಹಂತದ ಸುಚಿತ್ರಫಿಲಮ್‌ ಸೊಸೈಟಿಯ ಕಟ್ಟಡದಲ್ಲಿನ ತೆರೆಗಳ ಮೇಲೆ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ. ಇವಲ್ಲದೆ ಬಹುಮುಖ್ಯವೆನ್ನಿಸಿರುವ ಪುನರಾವಲೋಕನ ವಿಭಾಗದಲ್ಲಿ ಇರಾನಿನ ಖ್ಯಾತನಿರ್ದೇಶಕ ಅಬ್ಬಾಸ್‌ ಕಿರಸ್ತೋಮಿ, ಭಾರತದ ಖ್ಯಾತನಿರ್ದೇಶಕರಲ್ಲಿ ಒಬ್ಬರಾದ ಮೃಣಾಲ್‌ ಸೇನ್‌ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಶತಮಾನೋತ್ಸವ ವಿಭಾಗದಲ್ಲಿ ದೇಶದ ಖ್ಯಾತಸಂಗೀತ ಸಂಯೋಜಕ ವಿಜಯಭಾಸ್ಕರ್‌ ಅವರು ಸಂಗೀತ ನೀಡಿರುವ ಚಿತ್ರಗಳು ತೆರೆಕಾಣಲಿವೆ. ಇವಲ್ಲದೆ ದೇಶಕೇಂದ್ರಿತ ವಿಭಾಗದಲ್ಲಿ ಜರ್ಮನಿಯ ಅತ್ಯುತ್ತಮ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಮಹಿಳಾಶಕ್ತಿ ವಿಭಾಗದಲ್ಲಿ ದೇಶವಿದೇಶದ ಪ್ರತಿಷ್ಠಿತ ಮಹಿಳಾ ನಿರ್ದೇಶಕಿಯರು ನಿರ್ದೇಶಿಸಿದ ಚಿತ್ರಗಳು ಪ್ರದರ್ಶನಗೊಳ್ಳಲಿದೆ.

ಬಿಫೆಸ್‌ನ 15ನೇ ಆವೃತ್ತಿಯು ಒಂದು ಕಾರಣಕ್ಕೆ ಮುಖ್ಯವಾಗುತ್ತದೆ. ಈ ವರ್ಷ ಕನ್ನಡ ಚಿತ್ರರಂಗಕ್ಕೆ 90 ವರ್ಷ ತುಂಬಲಿದೆ. ಈ ಸಂದರ್ಭವನ್ನು ಬಿಫೆಸ್‌ ಪ್ರೇಕ್ಷಕರ ನೆನಪಿನಲ್ಲಿ ಉಳಿಯುವಂತೆ ಮಾಡಲು ಸನ್ನದ್ಧವಾಗಿದೆ. ಕನ್ನಡ ಚಲನಚಿತ್ರಗಳು ವಿಶ್ವದಾದ್ಯಂತ ತನ್ನ ಛಾಪುಮೂಡಿಸುತ್ತಿದ್ದು, ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ನಡೆದುಬಂದ ದಾರಿ, ಹಾಗೂ, ಕನ್ನಡದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಚಾರಿತ್ರಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಪಾದಿಸುವ ವಿಶೇಷ ಚಲನಚಿತ್ರಗಳ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಕರ್ನಾಟಕ, ಕರ್ನಾಟಕವಾಗಿ 50 ವರ್ಷವಾಗಿದ್ದು, ಈ ಸಂದರ್ಭದ ನೆನಪಿನಲ್ಲಿ ಕರ್ನಾಟಕ ಸುವರ್ಣ ಸಂಭ್ರಮʼ ಎಂಬ ಕಾರ್ಯಕ್ರಮದ ಮೂಲಕ ಕರ್ನಾಟಕದ ಹಿರಿಮೆಯನ್ನು ಪ್ರಚುರಪಡಿಸುವ ಚಿತ್ರಗಳನ್ನುಪ್ರದರ್ಶಿಸಲಿದೆ.

ಮಾರ್ಚ್ ತಿಂಗಳ ಮೂರನೇ ತಾರಿಖಿನ ದಿನ, ಕನ್ನಡ ಚಿತ್ರರಂಗಕ್ಕೆ ಅಮೂಲ್ಯವಾದದ್ದು. ಮಾರ್ಚ್‌ 3, 1934 ರಂದು ಕನ್ನಡದ ಮೊದಲ ಟಾಕಿ ಚಿತ್ರ (ಮಾತನಾಡುವಚಿತ್ರ) ಬಿಡುಗಡೆಯಾಗಿ 90 ವರ್ಷವಾಗುತ್ತದೆ. ಅಂದಿನ ದಿನವನ್ನು ಕನ್ನಡದ ಸಿನಿಮಾದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹಿರಿಮೆಯನ್ನುಕುರಿತು ವಿಚಾರಸಂಕಿರಣನಡೆಸಲಾಗುತ್ತಿದೆ.

ಇವಲ್ಲದೆ, ಜಗತ್ತಿನಾದ್ಯಂತ ಇಂದು ಚರ್ಚೆಯ ವಸ್ತುವಾಗಿರುವ ಕೃತಕ ಬುದ್ದಿಮತ್ತೆ ಚಿತ್ರರಂಗವನ್ನು ಹೇಗೆ ಕಾಡುತ್ತಿದೆ ಎಂಬ ಬಗ್ಗೆ ವಿಸ್ತೃತವಾದ ಸಂವಾದ ನಡೆಯಲಿದೆ. ಇದೇ ಕಾರಣಕ್ಕೆ ಹಾಲಿವುಡ್ ನ ಚಿತ್ರಕಥಾ ಲೇಖಕರು, ತಂತ್ರಜ್ಞರು ನಡೆಸಿದ ತಿಂಗಳುಗಟ್ಟಲೇ ಹೋರಾಟದ ಫಲವಾಗಿ ಚಿತ್ರರಂಗದಲ್ಲಿಈ ಕೃತಕ ಬುದ್ಧಿಮತ್ತೆಯನ್ನು ಯಾವ ಮಿತಿಯಲ್ಲಿ ಬಳಸಬಹುದು ಎಂಬುದನ್ನು ಅರಿಯುವ ಮನಸ್ಸುಗಳಿಗೆ Biffes ಸೂಕ್ತ ವೇದಿಕೆ ಒದಗಿಸಲಿದೆ.

ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಚಿತ್ರಗಳು ಸ್ಥಳೀಯವಾಗಿ ನಿರ್ಮಾಣವಾದರೂ, ಅದರ ಪ್ರಭಾವ ಇಡೀ ಭೂಗೋಳದ ಮೇಲಾಗುವ ಕಾರಣದಿಂದ, ಕನ್ನಡದ ಚಿತ್ರ ನಿರ್ಮಾಪಕರು ಜಾಗತಿಕ ಮೌಲ್ಯದ ಚಿತ್ರಗಳನ್ನು ಹೇಗೆ ನಿರ್ಮಿಸಬಹುದೆಂಬುದಕ್ಕೆ ಈ ಚಿತ್ರೋತ್ಸವ ವೇದಿಕೆ ಒದಗಿಸಲಿದೆ. ಹಾಗಾಗಿ ಮಾಸ್ಟರ್ಸ್‌ ಕ್ಲಾಸ್‌ ವಿಭಾಗದಲ್ಲಿ ವಿದೇಶಿ ಚಿತ್ರ ನಿರ್ಮಾಣ ಸಂಸ್ಥೆಗಳ ಜತೆಗೂಡಿ ಭಾರತದ ಚಿತ್ರ ನಿರ್ಮಾತೃಗಳು ಹೇಗೆ ಚಿತ್ರ ನಿರ್ಮಿಸಬಹುದೆಂಬ ಬಗ್ಗೆ ಕೂಡ ವಿಸ್ತೃತವಾದ ಸಂವಾದ ನಡೆಯಲಿದೆ ಎಂಬುದು ಬಿಫೆಸ್‌ ಕಲಾತ್ಮಕ ನಿರ್ದೇಶಕ ಎನ್‌ ವಿದ್ಯಾಶಂಕರ್‌ ಅವರ ಹೇಳಿಕೆ. ಅದಕ್ಕಾಗಿ ದೇಶ ವಿದೇಶಗಳ ಹಲವಾರು ಖ್ಯಾತ ನಿರ್ದೇಶಕರು ಚಿತ್ರ ನಿರ್ಮಾಕರು ಬೆಂಗಳೂರಿಗೆ ಬಂದಿಳಿಯಲಿದ್ದಾರೆ.

ಈ ಎಲ್ಲ ಅನುಭವಗಳನ್ನು ಪಡೆದುಕೊಳ್ಳುವ ಆಸಕ್ತಿ ಇದ್ದವರು, ಈ ಚಲನಚಿತ್ರ ಸಂತೆಯಲ್ಲಿ ಭಾಗವಹಿಸಬಹುದು. ಕರ್ನಾಟಕ ಚಲನಚಿತ್ರ ಮಂದಿಗಂತೂ ಇದೊಂದು ಅಪೂರ್ವ ಅವಕಾಶ ಎನ್ನುವುದು ಬಿಫೆಸ್‌ ಸಂಘಟಕರ ಭಾವನೆ.

Read More
Next Story