ಕನ್ನಡದಲ್ಲಿ ಗೆದ್ದಾಯಿತು; ಈಗ ತೆಲುಗು, ತಮಿಳಿನತ್ತ ‘ಭೈರತಿ ರಣಗಲ್’
ಶಿವರಾಜಕುಮಾರ್ ಅವರು ತೆಲುಗಿನ ‘ಗೌತಮಿಪುತ್ರ ಶಾತಕರ್ಣಿ’ ಮತ್ತು ತಮಿಳಿನ ‘ಜೈಲರ್’ ಹಾಗೂ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರಗಳಲ್ಲೂ ನಟಿಸಿರುವುದರಿಂದ, ಅಲ್ಲೂ ಅಭಿಮಾನಿ ಬಳಗ ಹುಟ್ಟುಕೊಂಡಿದೆ.
ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಕರ್ನಾಟಕದಲ್ಲಿ ಬಿಡುಗಡೆಯಾಗುವುದು ಸಹಜ. ಈಗ ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್’ ಚಿತ್ರವು ಮೊದಲ ಬಾರಿಗೆ ತೆಲುಗು ಮತ್ತು ತಮಿಳಿಗೆ ಡಬ್ ಆಗಿ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡುಗಳಲ್ಲಿ ಇದೇ ನವೆಂಬರ್ 29ರಂದು ಬಿಡುಗಡೆಯಾಗುತ್ತಿದೆ.
‘ಭೈರತಿ ರಣಗಲ್’ ಚಿತ್ರವು ನವೆಂಬರ್ 15ರಂದು ಬಿಡುಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವು ಮೊದಲ ವಾರ 15 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗುತ್ತದೆ. ಚಿತ್ರವನ್ನು ಹೆಚ್ಚುಹೆಚ್ಚು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಚಿತ್ರತಂಡದವರು ರಾಜ್ಯದ ಬೇರೆಬೇರೆ ಊರುಗಳಿಗೆ ಹೋಗಿ ಪ್ರಚಾರ ಮಾಡಿ ಇನ್ನಷ್ಟು ಸೆಳೆದಿದ್ದಾರೆ. ಈ ಮಧ್ಯೆ, ಚಿತ್ರಕ್ಕೆ ಕರ್ನಾಟಕದಲ್ಲಿ ಸಿಕ್ಕ ಮೆಚ್ಚುಗೆಯನ್ನು ಗಮನಿಸಿ, ಚಿತ್ರವನ್ನು ತೆಲುಗು ಮತ್ತು ತಮಿಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.
ಹೌದು, ‘ಭೈರತಿ ರಣಗಲ್’ ಚಿತ್ರವು ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ತೆಲುಗು ನಟ ನಾನಿ ಮತ್ತು ತಮಿಳು ನಟ ಶಿವಕಾರ್ತಿಕೇಯನ್ ಇಬ್ಬರೂ ತೆಲುಗು ಮತ್ತು ತಮಿಳು ಚಿತ್ರಗಳ ಟ್ರೇಲರ್‍ಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ತೆಲುಗು ಮತ್ತು ತಮಿಳು ಅವತರಣಿಕೆಗಳು ಮೈರಾ ಕ್ರಿಯೇಷನ್ಸ್ ಮತ್ತು ಎ.ಪಿ ಇಂಟರ್‍ನ್ಯಾಷನಲ್ ಸಂಸ್ಥೆಗಳು ಕ್ರಮವಾಗಿ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳು ನಾಡಿನಲ್ಲಿ ಬಿಡುಗಡೆ ಮಾಡುತ್ತಿವೆ.
ಇದಲ್ಲದೆ ಚಿತ್ರವು ಈಗಾಗಲೇ ನವೆಂಬರ್ 21ರಂದು ಯು.ಎ.ಇ, ಒಮಾನ್ ಮತ್ತು ಖತಾರ್ ದೇಶಗಳಲ್ಲಿ ಬಿಡುಗಡೆಯಾಗಿವೆ. ಈ ಪೈಕಿ ಯು.ಎ.ಇಯಲ್ಲಿ ದುಬೈ, ಶಾರ್ಜಾ, ಅಬು ದಾಭಿ, ಅಜ್ಮಾನ್ ಮತ್ತು ಫ್ಯುಜೇರಾದಲ್ಲಿ VOX ಸಿನಿಮಾಸ್, ಸ್ಟಾರ್ ಸಿನಿಮಾಸ್, ನೋವೋ ಸಿನಿಮಾಸ್ ಮುಂತಾದ ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾಗಿದೆ.
ತೆಲುಗು ಮತ್ತು ತಮಿಳಿನಲ್ಲೂ ಶಿವಣ್ಣಗೆ ಅಭಿಮಾನಿ ಬಳಗ
ಶಿವರಾಜಕುಮಾರ್ ಅಭಿನಯದ ಇದುವರೆಗಿನ ಚಿತ್ರಗಳು ಕನ್ನಡಕ್ಕೆ ಸೀಮತವಾಗಿದ್ದವು. ಇತ್ತೀಚಿನ ದಿನಗಳಲ್ಲಿ ಶಿವರಾಜಕುಮಾರ್ ಅವರು ತೆಲುಗಿನ ‘ಗೌತಮಿಪುತ್ರ ಶಾತಕರ್ಣಿ’ ಮತ್ತು ತಮಿಳಿನ ‘ಜೈಲರ್’ ಹಾಗೂ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರಗಳಲ್ಲೂ ನಟಿಸಿರುವುದರಿಂದ, ಅವರಿಗೆ ಅಲ್ಲೂ ಅಭಿಮಾನಿ ಬಳಗ ಹುಟ್ಟುಕೊಂಡಿದೆ. ಅವರನ್ನು ಸೆಳೆಯುವ ನಿಟ್ಟಿನಲ್ಲಿ ಅವರ ಚಿತ್ರಗಳನ್ನು ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆ ಮಾಡಲಾಗುತ್ತಿದೆ. ಈ ಹಿಂದೆ ‘ವೇದ’ ಚಿತ್ರವನ್ನು ‘ಶಿವ ವೇದ’ ಎಂಬ ಹೆಸರಿನಲ್ಲಿ ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು. ಇದೀಗ ‘ಭೈರತಿ ರಣಗಲ್’ ಚಿತ್ರವನ್ನು ತೆಲುಗು ಮತ್ತು ತಮಿಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.
‘ಭೈರತಿ ರಣಗಲ್’ ಚಿತ್ರವು ‘ಮಫ್ತಿ’ಯ ಪ್ರೀಕ್ವೆಲ್ ಆಗಿದ್ದು ಈ ಚಿತ್ರವನ್ನು ಗೀತಾ ಪಿಕ್ಚರ್ಸ್ ಬ್ಯಾನರ್‌ನಡಿ ಗೀತಾ ಶಿವರಾಜಕುಮಾರ್ ನಿರ್ಮಿಸಿದರೆ, ನರ್ತನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ.
ಚಿತ್ರದಲ್ಲಿ ಶಿವರಾಜಕುಮಾರ್, ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್, ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.