ಭ ಭ ಬ... ಜನಪ್ರಿಯತೆಗಾಗಿ ಮತ್ತೊಂದು ಹುಚ್ಚಾಟ..!
x

'ರಾಡಾರ್' ಎಂಬ ವ್ಯಕ್ತಿ (ದಿಲೀಪ್) ರಾಜ್ಯದ ಮುಖ್ಯಮಂತ್ರಿಯನ್ನು ಅಪಹರಿಸುವ ಕಥೆ ಇದರಲ್ಲಿದೆ. 

'ಭ ಭ ಬ'... ಜನಪ್ರಿಯತೆಗಾಗಿ ಮತ್ತೊಂದು ಹುಚ್ಚಾಟ..!

ದಿಲೀಪ್ ಚಿತ್ರಗಳು ಕನ್ನಡದಲ್ಲೂ ರಿಮೇಕ್ ಆಗಿವೆ. 'ಸಾಫ್ಟ್ ವೇರ್ ಗಂಡ', 'ಮನ್ಮಥ' ಹೆಸರಲ್ಲಿ ಬಂದ ಚಿತ್ರಗಳಲ್ಲಿ ಜಗ್ಗೇಶ್ ನಾಯಕನಾಗಿದ್ದರೆ, 'ಜೈ ಲಲಿತಾ' ಚಿತ್ರದಲ್ಲಿ ಶರಣ್ ನಾಯಕನಾಗಿದ್ದರು.


Click the Play button to hear this message in audio format

'ಭ ಭ ಬ' ಇದು ಸಿನಿಮಾದ ಹೆಸರು. 'ಭಯ, ಭಕ್ತಿ, ಬಹುಮಾನ' ಎನ್ನುವುದು ಚಿತ್ರ ತಂಡ‌ನೀಡಿರುವ ಪೂರ್ಣ ರೂಪ. ಆದರೆ 'ಬಬಬ' ಎನ್ನುವುದಕ್ಕೆ ಮಲಯಾಳಂ ಚಿತ್ರರಂಗದಲ್ಲಿ ಒಂದು ವಿಶೇಷ ಹಿನ್ನೆಲೆಯಿದೆ! 'ಸ್ಪಟಿಕಮ್' ಎನ್ನುವ ಚಿತ್ರದಲ್ಲಿ ತಿಲಕನ್ ಎನ್ನುವ ಹಿರಿಯ ನಟ, ತನ್ನ ಪುತ್ರನಾಗಿ ನಟಿಸಿದ ಬಾಲನಟನನ್ನು ಹಂಗಿಸುವ ರೀತಿ ಅದು. ಅದರಲ್ಲಿ ತಿಲಕನ್ ಗಣಿತ ಶಿಕ್ಷಕನಾಗಿ ಅದ್ಭುತವಾಗಿ ನಟಿಸಿದ್ದಾರೆ.

ತನ್ನ ಪುತ್ರನೇ ಶಿಷ್ಯನಾಗಿ ಬಂದು ಉತ್ತರ ಹೇಳಲಾಗದೇ ಬ..ಬ..ಎಂದು ತತ್ತರಿಸಿದಾಗ ಅವರು ಹಂಗಿಸುವ ರೀತಿ ಅದು. "ಬಬ್ಬಬ್ಬ ಅಲ್ಲ ಸರಿಯಾಗಿ ಮಾತಾಡು.." ಅಂತಾರೆ. ಈ ಜನಪ್ರಿಯ ಸಂಭಾಷಣೆಯ ಸ್ಫೂರ್ತಿಯಿಂದಲೇ ಈ‌ ಚಿತ್ರಕ್ಕೆ 'ಭಭಬ' ಎಂದು ನಾಮಕರಣ ಮಾಡಲಾಗಿದೆ. (ಅಂದಹಾಗೆ ಸ್ಪಟಿಕಂ ಸಿನಿಮಾ‌ 'ತೀರ್ಥ' ಹೆಸರಲ್ಲಿ ಸುದೀಪ್ ನಟನೆಯಲ್ಲಿ ಕನ್ನಡಕ್ಕೂ ರಿಮೇಕ್ ಆಗಿತ್ತು. ಮೂಲ ಚಿತ್ರದಲ್ಲಿ ಮೋಹನ್ ಲಾಲ್ ನಾಯಕರಾಗಿದ್ದರು.) ಪ್ರಸ್ತುತ 'ಭಬಬ'ದಲ್ಲಿ ಮೋಹನ್ ಲಾಲ್ ಅತಿಥಿ ಪಾತ್ರದಲ್ಲಿದ್ದರೆ ದಿಲೀಪ್‌ ನಾಯಕನಾಗಿದ್ದಾರೆ.

ದಿಲೀಪ್ ಬಗೆಗಿನ ಸಣ್ಣ ಹಿನ್ನೆಲೆ

ದಿಲೀಪ್ ನಟನೆಯ ಒಂದಷ್ಟು ಚಿತ್ರಗಳು ಕನ್ನಡದಲ್ಲೂ ರಿಮೇಕ್ ಆಗಿವೆ. 'ಸಾಫ್ಟ್ ವೇರ್ ಗಂಡ', 'ಮನ್ಮಥ' ಹೆಸರಲ್ಲಿ ಬಂದ ಚಿತ್ರಗಳಲ್ಲಿ ಜಗ್ಗೇಶ್ ನಾಯಕನಾಗಿದ್ದರೆ, 'ಜೈ ಲಲಿತಾ' ಚಿತ್ರದಲ್ಲಿ ಶರಣ್ ನಾಯಕ ನಟನಾಗಿದ್ದರು. ಅಲ್ಲಿಗೆ ದಿಲೀಪ್ ಹಾಸ್ಯದ ಇಮೇಜ್ ಹೊಂದಿರುವ ನಟ ಎನ್ನುವುದು ಎಲ್ಲರಿಗೂ ಅರ್ಥವಾಗಿರಬಹುದು. ಆದರೆ ಈ ಕಾಮಿಡಿ ಇಮೇಜ್ ಇಟ್ಕೊಂಡೇ ದಿಲೀಪ್ ಮಲಯಾಳಂನ ಸ್ಟಾರ್ ಹೀರೋ ಆಗಿದ್ದಾರೆ. ಶಿವರಾಜ್ ಕುಮಾರ್ ಅವರ 'ವಜ್ರಕಾಯ' ಚಿತ್ರದ ಶೀರ್ಷಿಕೆ ಗೀತೆಯಲ್ಲಿ ಖುದ್ದು ಕಾಣಿಸುವ ಮೂಲಕ ದಿಲೀಪ್ ಕನ್ನಡಕ್ಕೂ ಕಾಲಿಟ್ಟಿದ್ದರು. ಕನ್ನಡದಲ್ಲೂ ಜನಪ್ರಿಯವಾಗಿರುವ ಮಲಯಾಳಂನ ನಟಿಯೊಬ್ಬರನ್ನು ಅಪಹರಿಸಿದ ಪ್ರಕರಣದಲ್ಲಿ ಆರೋಪಿಯಾಗಿಯೂ ಗುರುತಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಸೆಷನ್ಸ್ ಕೋರ್ಟ್ ನಿಂದ ದೋಷಮುಕ್ತರಾಗಿ ಹೊರಬಂದ ಬಳಿಕ ತೆರೆಕಾಣುತ್ತಿರುವ ಅವರ ಪ್ರಥಮ ಚಿತ್ರ ಇದು. ಈ ಎಲ್ಲ ಕಾರಣಕ್ಕಾಗಿ

ಕನ್ನಡಿಗರಲ್ಲೂ 'ಭಭಬ' ಕುತೂಹಲ ಕೆರಳಿಸಿತ್ತು

ಸಿನಿಮಾ ಬೇರೆ. ನಿಜ‌ ಜೀವನ ಬೇರೆ. ಹೀಗಾಗಿ ಎರಡನ್ನೂ ಬೇರೆ ಬೇರೆಯಾಗಿ ನೋಡಬೇಕು ಎನ್ನುವ ಮನವಿ ಕೇಳುತ್ತಲೇ ಇರುತ್ತೇವೆ. ಆದರೆ ನಟರು ಸ್ಟಾರ್ ಆಗಲು ಅವರು ಸಿನಿಮಾಗಳಲ್ಲಿ ತೋರಿಸುವ ಇಮೇಜ್ ಸತ್ಯ ಎಂದು ಅಭಿಮಾನಿಗಳು ನಂಬುವುದೇ ಕಾರಣ.! ಹೀಗಾಗಿಯೇ ನಮ್ಮ ದೇಶದಲ್ಲಿ ಸಿನಿಮಾಗಳನ್ನು ಕೂಡ ಆಯಾ ಸ್ಟಾರ್ ಇಮೇಜ್ ಹಿನ್ನೆಲೆಯಲ್ಲೇ ತಯಾರು ಮಾಡಲಾಗುತ್ತದೆ. ಅದರಲ್ಲೂ ದಿಲೀಪ್ ತನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಈ ಹಿಂದೆಯೂ ಸಿನಿಮಾದಲ್ಲಿ ಉತ್ತರಿಸುವ ಪ್ರಯತ್ನ‌ ಮಾಡಿದ್ದಾರೆ. ಅದಕ್ಕೆ 'ರಿಂಗ್ ಮಾಸ್ಟರ್' ಎನ್ನುವ ಚಿತ್ರ ದೊಡ್ಡ ಉದಾಹರಣೆ. ಹೀಗಾಗಿ ಈ ಚಿತ್ರದಲ್ಲಿ ಕೂಡ ಅಂಥದ್ದೇನಾದರೂ ಇದೆಯಾ? ಕೂಲಂಕಷವಾಗಿ ನೋಡೋಣ.

ಚಿತ್ರದ ಆರಂಭದಲ್ಲೇ 'ನೊ ಲಾಜಿಕ್ ಓನ್ಲಿ ಮ್ಯಾಡ್ನೆಸ್' ಎಂದು ಬರೆದು ತೋರಿಸಲಾಗಿದೆ. ಅಲ್ಲಿಗೆ ನಾವು ಲಾಜಿಕ್ ಇರದ ಹುಚ್ಚಾಟಕ್ಕೆ ಸಿದ್ಧರಾಗಲೇಬೇಕು. ಅದು ಬಿಟ್ಟು ಈ ಚಿತ್ರದಲ್ಲಿ ಏನಾದರೂ ವಾಸ್ತವಿಕವಾಗಿರುವುದನ್ನು ಹುಡುಕಿ‌ ಕುಳಿತರೆ ನಾವೇ ಹುಚ್ಚರಾಗುತ್ತೇವೆ.

ಮಕ್ಕಳ ನಿರೂಪಣೆಯೊಂದಿಗೆ ಸಿನಿಮಾದ ಕಥೆ ಶುರುವಾಗುತ್ತದೆ. ಚುನಾವವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ ವ್ಯಕ್ತಿ ತನ್ನ ಅಭಿಮಾನಿಗಳ ಮುಂದೆ ಮೊದಲ ಭಾಷಣಕ್ಕೆ ವೇದಿಕೆ ಏರುತ್ತಾರೆ. ಆದರೆ ಅಲ್ಲಿಗೆ ಅಭಿಮಾನಿಯ ಸೋಗಲ್ಲಿ ಬರುವ ರಾಡಾರ್ ಎನ್ನುವ ವ್ಯಕ್ತಿ ಮುಖ್ಯಮಂತ್ರಿಯನ್ನೇ ಅಪಹರಿಸುತ್ತಾನೆ. ಆತನ ಬೇಡಿಕೆಗಳೇನು? ಈ ಅಪಹರಣದಿಂದ ಬಿಡುಗಡೆಗೊಳಿಸಲು ಸರ್ಕಾರ ಕೈಗೊಳ್ಳುವ ಕ್ರಮಗಳೇನು?ಇವೆಲ್ಲವನ್ನೂ ಲಾಜಿಕ್ ರಹಿತವಾಗಿ, ತಮಾಷೆ ರೂಪದಲ್ಲಿ ತೋರಿಸಲು ಪ್ರಯತ್ನಿಸಲಾಗಿದೆ.


ಖ್ಯಾತ ಕಲಾವಿದರ ಸಮಾಗಮ

ಈ ಚಿತ್ರದಲ್ಲಿ ಖ್ಯಾತ ಕಲಾವಿದರ ದಂಡೇ ಇದೆ. ಅಪಹರಣಕಾರ ರಾಡಾರ್ ಆಗಿ ದಿಲೀಪ್ ನಟಿಸಿದ್ದಾರೆ. ಮುಖ್ಯಮಂತ್ರಿಯಾಗಿ ನಟಿಸಿದ ಸಂತೋಷ್ ಬೈಜು, ಮುಖ್ಯಮಂತ್ರಿಯ ಪುತ್ರನಾಗಿ ವಿನೀತ್ ಶ್ರೀನಿವಾಸನ್ ಸೇರಿದಂತೆ ಇತರ ಪಾತ್ರಗಳಲ್ಲಿ ಅಶೋಕನ್, ಧ್ಯಾನ್ ಶ್ರೀನಿವಾಸನ್, ಸೆಂದಿಲ್ ಕೃಷ್ಣ ಮೊದಲಾದವರಿದ್ದಾರೆ. ಇವರೆಲ್ಲರೂ ಒಂದೊಮ್ಮೆ ನಾಯಕ ನಟರಾಗಿ ಹೆಸರು ಮಾಡಿದವರು ಕೂಡ ಹೌದು.‌ ಇವರಲ್ಲದೆ ದೇವನ್, ರಿಯಾಝ್ ಖಾನ್, ಮಣಿಯಂಪಿಳ್ಳ ರಾಜು ಸೇರಿದಂತೆ ಸಾಕಷ್ಟು ಜನಪ್ರಿಯ ಕಲಾವಿದರನ್ನು ಪಾತ್ರಗಳಲ್ಲಿ ಬಳಸಿಕೊಳ್ಳಲಾಗಿದೆ. ಆದರೆ ಯಾವ ಪಾತ್ರಗಳು ಆಕರ್ಷಕ ಅನಿಸಿಲ್ಲ ಎನ್ನುವುದು ವಿಪರ್ಯಾಸ. ಪೂರ್ತಿ ಸಿನಿಮಾ‌ ಒಂದು ಅಪಹರಣದ ಸುತ್ತ ನಡೆಯುವುದರಿಂದಾಗಿ ಇಲ್ಲಿ ನಾಯಕಿ ಇಲ್ಲ. ಹಾಗಾಗಿ ಪ್ರೇಮಗೀತೆಗಳೂ ಇಲ್ಲ.

ಆದರೆ ಅತಿಥಿ ಪಾತ್ರದಲ್ಲಿ ಬಂದ ಮೋಹನ್ ಲಾಲ್ ದಿಲೀಪ್ ಜತೆಯಾಗಿ ಕುಣಿದಿರುವ ಹಾಡಿಗೆ ಮ್ಯೂಸಿಕ್ ಪ್ರಿಯರು ಮಣಿದಿದ್ದಾರೆ. "ಜಿಮ್ಮಿಕ್ಕಿ‌ ಕಮ್ಮಲ್.." ಖ್ಯಾತಿಯ ಶಾನ್ ರಹಮಾನ್ ಸಂಗೀತ ನೀಡಿದ್ದಾರೆ.‌

ಅತಿಥಿ ನಟನಾಗಿ ಬಂದು ಆಕರ್ಷಣೆಯಾದ ಮೋಹನ್ ಲಾಲ್!

ಮೋಹನ್ ಲಾಲ್ ಅತಿಥಿ ಪಾತ್ರ ಎನ್ನುವುದು ಈ ಚಿತ್ರಕ್ಕೆ ಪ್ರೇಕ್ಷಕರನ್ನು ಸೃಷ್ಟಿಸುವಲ್ಲಿ ಪ್ರಧಾನ ಪಾತ್ರವಹಿಸಿದೆ. ಮೊದಲ ದಿನವೇ ಚಿತ್ರಮಂದಿರಕ್ಕೆ ನುಗ್ಗಿದ ಪ್ರೇಕ್ಷಕರಲ್ಲಿ ದಿಲೀಪ್ ಫ್ಯಾನ್ಸ್ ಗಿಂತಲೂ ಅಧಿಕ ಲಾಲ್ ಫ್ಯಾನ್ಸ್ ಇದ್ದರು ಎನ್ನುವುದು ಅಷ್ಟೇ ಸತ್ಯ. ಚಿತ್ರ ಬಿಡುಗಡೆಗೂ‌ ಮೊದಲೇ ಮೋಹನ್ ಲಾಲ್ ಮತ್ತು ದಿಲೀಪ್ ಹಾಡು ವೈರಲ್ ಆಗಿದ್ದು ಕೂಡ ಇದಕ್ಕೆ ಕಾರಣವಾಗಿತ್ತು. ಹಾಡು ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತೆಯೇ ಇದೆ. ಆದರೆ 'ಗಿಲ್ಲಿ ಬಾಲ' ಎನ್ನುವ ಮೋಹನ್ ಲಾಲ್ ಪಾತ್ರ ಮಾತ್ರ ಲಾಜಿಕ್ ನಿಂದ ಹೊರಗಿರುವ ಪಟ್ಟಿಯಲ್ಲೇ ಸೇರಿದೆ. ಮೋಹನ್ ಲಾಲ್ ಗೆ ಈ‌ ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳು‌ ಕೂಡ ಇವೆ.

ಆರೋಪಿ ದಿಲೀಪ್ ಜತೆ ಮೋಹನ್ ಲಾಲ್ ನಟಿಸಬಾರದು!

ಹೌದು, ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗಳಾಗಿತ್ತು. ಆದರೆ ಎಲ್ಲವನ್ನೂ ಮೀರಿ ಮೋಹನ್ ಲಾಲ್ ಮತ್ತು ದಿಲೀಪ್ ಜತೆ ಸೇರಿಕೊಂಡಾಗಿತ್ತು. ಮೋಹನ್ ಲಾಲ್ ಚಿತ್ರರಂಗದಲ್ಲಿ ಅಜಾತಶತ್ರು.

ಈ ಹಿಂದೆ ದಿಲೀಪ್ ನಿಂದ ವಿಚ್ಛೇದನ ಪಡೆದ ಮಂಜುವಾರ್ಯರ್ ಅವರನ್ನು ಕೂಡ ಸಿನಿಮಾಗಳಲ್ಲಿ ಸಕ್ರಿಯಗೊಳಿಸಲು ಮೋಹನ್ ಲಾಲ್ ತಮ್ಮ ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದರು. ಇಂಥ ಮೋಹನ್ ಲಾಲ್ ಕೂಡ ಈ‌ಗ ದಿಲೀಪ್ ಚಿತ್ರದ ಭಾಗವಾಗಿದ್ದಾರೆ. ಹೀಗಾಗಿ ನಟಿ ಅಪಹರಣದ ಘಟನೆಗೆ ಯಾವ ಸಮರ್ಥನೆ ಕೂಡ ಈ ಚಿತ್ರದಲ್ಲಿ ಇರಲಾರದು ಎಂದು ಊಹಿಸಲಾಗಿತ್ತು. ಆದರೆ ಒಂದೆರಡು ಸಂಭಾಷಣೆಗಳ ಮೂಲಕ‌ ದಿಲೀಪ್ ಅವೆಲ್ಲವನ್ನು ಸುಳ್ಳು ಮಾಡಿದ್ದಾರೆ.

ಅಪಹರಣದ ಘಟನೆಗೆ ಸಂಭಾಷಣೆಯಲ್ಲೇ ವ್ಯಂಗ್ಯ !

ಚಿತ್ರ ಮುಖ್ಯಮಂತ್ರಿ ಅಪಹರಣದ ಕಥೆ ತಾನೇ? ಆದರೆ ಅನಗತ್ಯವಾಗಿ ಹೆಣ್ಣೊಬ್ಬಳ ಅಪಹರಣದ ಬಗ್ಗೆ ಮಾತುಗಳು ಬರುತ್ತವೆ. ಆ ಹೆಣ್ಣನ್ನು ಹಾಲುಕರೆಯಲು ಅಪಹರಿಸಿದ್ದಾಗಿ ಹೇಳುವ ಸಂಭಾಷಣೆ ಇದೆ. ಅದು ಹೆಣ್ಣಲ್ಲ ಹೆಣ್ಣು ಹಸುವಾಗಿತ್ತು ಎನ್ನುವ ಸಮರ್ಥನೆಯೂ ಇದೆ. ಇಂಥದೊಂದು ಸನ್ನಿವೇಶ ಕಥೆಗೆ ಅಗತ್ಯವಿಲ್ಲವಾದರೂ ಅಸಭ್ಯವಾಗಿ ತುರುಕಿರುವುದು ಅಕ್ಷಮ್ಯ. ನಟಿಯನ್ನು ಅಪಹರಿಸಿದ ಪ್ರಕರಣದಲ್ಲಿ ದಿಲೀಪ್ ಬಗ್ಗೆ ಆರೋಪ ಕೇಳಿ ಬಂದಾಗ 'ಅಮ್ಮ' ಸಂಘಟನೆ (ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ಸ್) ಮೀಟಿಂಗ್ ನಡೆಸಿತ್ತು. ಆ ಸಂದರ್ಭದಲ್ಲಿ ನಟ ಪೃಥ್ವಿರಾಜ್‌ ಮಾಧ್ಯಮಗಳ‌ ಜತೆಗೆ ಮಾತನಾಡಿ ತಮ್ಮ ಅನಿಸಿಕೆ ಹಂಚಿದ್ದರು. ದಿಲೀಪ್ ಅವರನ್ನು ಸಂಘಟನೆಯಿಂದ ಹೊರಗಿಡಬೇಕು ಎನ್ನುವುದು ಪೃಥ್ವಿರಾಜ್ ಆಗ್ರಹವಾಗಿತ್ತು. ಅಂದು ವೈರಲಾದ ಅದೇ ಸಂಭಾಷಣೆಯ ದಾಟಿಯನ್ನು ಈ ಚಿತ್ರದಲ್ಲಿ ಕೂಡ ಬಳಸಲಾಗಿದೆ. ಒಟ್ಟಿನಲ್ಲಿ ತನ್ನ ವಿರುದ್ಧ ನಿಂತವರ ಬಗ್ಗೆ ಟ್ರೋಲ್ ಮಾಡುವ ಪ್ರಯತ್ನಕ್ಕೆ ದಿಲೀಪ್ ಈ ಚಿತ್ರವನ್ನು ಕೂಡ ಬಳಸಿದ್ದಾರೆ ಎನ್ನುವುದು ಸತ್ಯ.

ನಿರ್ದೇಶಕ ಧನಂಜಯ್ ಶಂಕರ್ ಗೆ ಇದು‌‌ ಮೊದಲ ಸಿನಿಮಾ. ಹೊಸಬರಾದ ನಿರ್ದೇಶಕ ಮತ್ತು ಸಂಭಾಷಣೆಕಾರರಿಗಿಂತ ಚಿತ್ರದ ಸ್ಟಾರ್ ನಾಯಕನ‌ ಕಾರುಬಾರೇ ಈ ಚಿತ್ರದಲ್ಲಿ ನಡೆದಿರುವುದು ಸತ್ಯ. ಹೇಗಾದರೂ ಮಾಡಿ ಮತ್ತೆ 'ಜನಪ್ರಿಯ ನಾಯಕ' ಎನ್ನುವ ತನ್ನ ಪಟ್ಟವನ್ನು ಮರಳಿ ಪಡೆಯಬೇಕು ಎನ್ನುವ ಹಠಕ್ಕೆ ಬಿದ್ದ ಹಾಗಿದೆ ದಿಲೀಪ್.‌ ಹೀಗಾಗಿ ಜನಪ್ರಿಯರನ್ನೆಲ್ಲ‌ ಗುಡ್ಡೆ ಹಾಕಿ ಚಿತ್ರ ಮಾಡಿದ್ದಾರೆ.

ತಮಿಳು ನೃತ್ಯ ನಿರ್ದೇಶಕ ಸ್ಯಾಂಡಿ ಕೊರಿಯೋಗ್ರಾಫಿ‌ ಜತೆಗೆ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ತಮಿಳು ನಟ, ನಿರ್ದೇಶಕ ಎಸ್.ಜೆ ಸೂರ್ಯ ಕೂಡ ಕೊನೆಯ ದೃಶ್ಯದಲ್ಲಿ ಅತಿಥಿಯಾಗಿ ಬಂದು ಎರಡನೇ ಭಾಗ ಬರಬಹುದೆನ್ನುವ ಸೂಚನೆ ನೀಡುತ್ತಾರೆ. ದಿಲೀಪ್ ಈ‌ ಜನಪ್ರಿಯರ ಜತೆ ತನ್ನದೇ ಜನಪ್ರಿಯತೆಯನ್ನೂ ಬಳಸಿಕೊಂಡಿದ್ದಾರೆ. ತಮಾಷೆ ಹೆಸರಲ್ಲಿ ವ್ಯಂಗ್ಯ, ಅಣಕ ತುಂಬಿದ ಪ್ರಭಾವ ಬೀರಲಾಗದ ಕಥೆಯಲ್ಲಿ ನಟಿಸಿದ್ದಾರೆ. ಪ್ರೇಕ್ಷಕರು ಯಾವ ರೀತಿ ಬೆಂಬಲಿಸುತ್ತಾರೆ ಎನ್ನುವುದು ಮುಂದಿನ‌ ದಿನಗಳಲ್ಲಿ ಅರಿವಾಗಲಿದೆ.

Read More
Next Story