ಬೆಂಗಳೂರು ಚಲನಚಿತ್ರೋತ್ಸವಕ್ಕೆ ಅದ್ಧೂರಿ ತೆರೆ: ಹಂಸಲೇಖಗೆ ಜೀವಮಾನದ ಸಾಧನೆ ಪುರಸ್ಕಾರ
x
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರೆ

ಬೆಂಗಳೂರು ಚಲನಚಿತ್ರೋತ್ಸವಕ್ಕೆ ಅದ್ಧೂರಿ ತೆರೆ: ಹಂಸಲೇಖಗೆ 'ಜೀವಮಾನದ ಸಾಧನೆ' ಪುರಸ್ಕಾರ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. 'ವನ್ಯಾ', 'ಸಬರ್ ಬೊಂದಾ' ಮತ್ತು 'ಲಾಸ್ಟ್ ಲ್ಯಾಂಡ್' ಸಿನಿಮಾಗಳು ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದಿವೆ.


ರಾಜಧಾನಿಯಲ್ಲಿ ಕಳೆದ ಹತ್ತು ದಿನಗಳಿಂದ ಸಿನಿಪ್ರಿಯರ ಕಣ್ಮನ ತಣಿಸಿದ್ದ '17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ'ಕ್ಕೆ (BIFFES) ಶುಕ್ರವಾರ ರಾತ್ರಿ ನಗರದ ಲುಲು ಮಾಲ್‌ನಲ್ಲಿ ವರ್ಣರಂಜಿತ ಸಮಾರೋಪ ಸಮಾರಂಭ ನೆರವೇರಿತು.

ನಾದಬ್ರಹ್ಮ ಹಂಸಲೇಖ ಅವರಿಗೆ ಗೌರವ

ಸಂಗೀತ ಲೋಕದ ದಿಗ್ಗಜ, ನಾದಬ್ರಹ್ಮ ಡಾ. ಹಂಸಲೇಖ ಅವರಿಗೆ ಈ ಬಾರಿಯ 'ಜೀವಮಾನದ ಶ್ರೇಷ್ಠ ಸಾಧನೆ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, "ಸಿನಿಮಾ ಎನ್ನುವುದು ಒಬ್ಬನ ಕೆಲಸವಲ್ಲ, ಅದೊಂದು ಸಾಮೂಹಿಕ ಕೃಷಿ. ಕಲೆ ಎನ್ನುವುದು ಆತ್ಮದ ಮೇವು, ಅದನ್ನು ಕಳೆದ ಆರು ದಶಕಗಳಿಂದ ಅನುಭವಿಸುತ್ತಿದ್ದೇನೆ. ಪ್ರಜಾಪ್ರಭುತ್ವದ ಬೀಜ ಬಿತ್ತಿದ ಬಸವ ನಾಡಿನಲ್ಲಿ ನಾವೀಗ ಪ್ರಜಾಪ್ರಭುತ್ವವನ್ನು ರಕ್ಷಿಸುವ ಸಿನಿಮಾಗಳನ್ನು ಮಾಡಬೇಕಿದೆ," ಎಂದು ಮಾರ್ಮಿಕವಾಗಿ ನುಡಿದರು.

ಇನ್ನು ಈ ವೇಳೆ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್‌ "ಕಲೆಯಲ್ಲಿ ಭಯವಿರಬಾರದು, ಅಭಿವ್ಯಕ್ತಿ ಸ್ವಾತಂತ್ರ್ಯವಿರಬೇಕು. ಯಾರ ಹಂಗೂ ಇಲ್ಲದೆ ಧೈರ್ಯದಿಂದ ಸಿನಿಮಾ ಮಾಡುವ ವಾತಾವರಣ ಕನ್ನಡದಲ್ಲಿ ನಿರ್ಮಾಣವಾಗಬೇಕು," ಎಂದು ಕರೆ ನೀಡಿದರು.

ಈ ಬಾರಿಯ ಚಲನಚಿತ್ರೋತ್ಸವದ ರಾಯಭಾರಿ ಪ್ರಕಾಶ್‌ ರಾಜ್‌ ರಾಯಭಾರಿ ಮಾತನಾಡಿ, "ಸಿನಿಮಾ ಮನುಷ್ಯ ವಿಕಾಸದ ಹೊಸ ಭಾಷೆ. ಸಮಾಜದ ನೋವುಗಳನ್ನು ದಾಖಲಿಸುವ ಮಾನವೀಯ ಗ್ರಹಿಕೆಗಳ ವೇದಿಕೆಯಾಗಿ ಈ ಚಿತ್ರೋತ್ಸವ ಯಶಸ್ವಿಯಾಗಿದೆ," ಎಂದರು.

"ಇದು ಭಾರತದ ಅತೀ ದೊಡ್ಡ ಚಿತ್ರೋತ್ಸವವಾಗಿ ಹೊರಹೊಮ್ಮಿದೆ. ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರು ಭಾಗವಹಿಸಿರುವುದು ವಿಶೇಷ. ಟೆಂಟ್‌ ಸಿನಿಮಾ ಮತ್ತು ಸಾಧಕರ ಛಾಯಾಚಿತ್ರ ಪ್ರದರ್ಶನಕ್ಕೆ ಭಾರಿ ಜನಮೆಚ್ಚುಗೆ ವ್ಯಕ್ತವಾಗಿದೆ," ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ಸಾಧು ಕೋಕಿಲ ಹರ್ಷ ವ್ಯಕ್ತಪಡಿಸಿದರು.

ಚಿತ್ರೋತ್ಸವದ ವಿಶೇಷತೆಗಳು

ಜನವರಿ 29ರಂದು ಆರಂಭವಾಗಿದ್ದ ಈ ಸಿನಿಹಬ್ಬದಲ್ಲಿ ಒಟ್ಟು 70 ದೇಶಗಳ 300ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಂಡವು. ಈ ಬಾರಿಯ ಚಿತ್ರೋತ್ಸವವು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಕವಿತೆಯ ಸಾಲಾದ "ಸ್ತ್ರೀ ಸಂವೇದನೆ, ಸಮಾನತೆಯ ದನಿ" ಎಂಬ ಅರ್ಥಪೂರ್ಣ ಧ್ಯೇಯವಾಕ್ಯದೊಂದಿಗೆ ಜರುಗಿತು.

ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ, ವಾರ್ತಾ ಇಲಾಖೆ ಆಯುಕ್ತ ಹೇಮಂತ್‌ ಎಂ. ನಿಂಬಾಳ್ಕರ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಅತ್ಯುತ್ತಮ ಚಿತ್ರಗಳು

ಈ ಬಾರಿಯ ವಿವಿಧ ಸ್ಪರ್ಧಾತ್ಮಕ ವಿಭಾಗಗಳಲ್ಲಿ ವಿಶ್ವದ ಹಲವು ಅತ್ಯುತ್ತಮ ಚಿತ್ರಗಳನ್ನು ಹಿಂದಿಕ್ಕಿ ಕನ್ನಡದ 'ವನ್ಯಾ', ಮರಾಠಿಯ 'ಸಬರ್ ಬೊಂದಾ' ಮತ್ತು ಜಪಾನ್‌ನ 'ಲಾಸ್ಟ್ ಲ್ಯಾಂಡ್' ಚಿತ್ರಗಳು ಅಗ್ರಸ್ಥಾನ ಪಡೆದುಕೊಂಡಿವೆ.

ಬಹುಮಾನದ ಮೊತ್ತ

ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾದ ಚಿತ್ರಗಳಿಗೆ 10 ಲಕ್ಷ ರೂ. ನಗದು ಬಹುಮಾನ ಹಾಗೂ ಪಾರಿತೋಷಕ ನೀಡಲಾಯಿತು. ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಚಿತ್ರಗಳಿಗೆ ಕ್ರಮವಾಗಿ 5 ಲಕ್ಷ ರೂ. ಹಾಗೂ 2 ಲಕ್ಷ ರೂ. ನೀಡಿ ಗೌರವಿಸಲಾಯಿತು. ಪ್ರಶಸ್ತಿ ವಿಜೇತರ ಸಂಪೂರ್ಣ ವಿವರ ಇಲ್ಲಿದೆ.

ಏಷ್ಯನ್ ಚಿತ್ರ ವಿಭಾಗ (15 ಚಿತ್ರಗಳ ಸ್ಪರ್ಧೆ)

• ಅತ್ಯುತ್ತಮ ಚಿತ್ರ: ದಿ ಲಾಸ್ಟ್ ಲ್ಯಾಂಡ್ (ಜಪಾನ್‌)

• ದ್ವಿತೀಯ ಅತ್ಯುತ್ತಮ ಚಿತ್ರ: ಶೇಪ್ ಆಫ್ ಮೋಮೋ (ಭಾರತ)

• ತೃತೀಯ ಅತ್ಯುತ್ತಮ ಚಿತ್ರ: ದಿ ಡೀಪೆಸ್ಟ್ ಸ್ಪೇಸ್ ಇನ್ ಯೂಎಸ್ (ಜಪಾನ್‌)

• ವಿಶೇಷ ಮೆಚ್ಚುಗೆ : ರಿಪಬ್ಲಿಕ್ ಆಫ್ ಪಿಪೊಲಿಪಿನಾಸ್ (ಫಿಲಿಪೈನ್ಸ್)

ಭಾರತೀಯ (ಚಿತ್ರಭಾರತಿ) ವಿಭಾಗ

• ಅತ್ಯುತ್ತಮ ಚಿತ್ರ: ಸಬರ್ ಬೊಂದಾ (ಮರಾಠಿ)

• ದ್ವಿತೀಯ ಅತ್ಯುತ್ತಮ ಚಿತ್ರ: ಮೋಹಂ (ಮಲಯಾಳಂ)

• ತೃತೀಯ ಅತ್ಯುತ್ತಮ ಚಿತ್ರ: ಕಾಡು (ಮಲಯಾಳಂ)

• ಫಿಪ್ರೆಸ್ಕಿ (FIPRESCI) ಪ್ರಶಸ್ತಿ: ಗೊಂದಾಳ್ (ಮರಾಠಿ)

• ವಿಶೇಷ ಮೆಚ್ಚುಗೆ: ಸರ್ಕೀಟ್ (ಮಲಯಾಳಂ)

ಕನ್ನಡ ಸ್ಪರ್ಧಾ ವಿಭಾಗ (14 ಚಿತ್ರಗಳ ಸ್ಪರ್ಧೆ)

• ಅತ್ಯುತ್ತಮ ಚಿತ್ರ: ವನ್ಯಾ

• ದ್ವಿತೀಯ ಅತ್ಯುತ್ತಮ ಚಿತ್ರ: ನಮ್ ಸಾಲಿ

• ತೃತೀಯ ಅತ್ಯುತ್ತಮ ಚಿತ್ರ: ರಾವಣ ರಾಜ್ಯದಲ್ಲಿ ನವದಂಪತಿಗಳು

• ನೆಟ್‌ಪ್ಯಾಕ್ (NETPAC) ಪ್ರಶಸ್ತಿ: ಹಕ್ಕಿಗಾಗಿ

• ವಿಶೇಷ ಮನ್ನಣೆ: ಮೃಗತೃಷ್ಣ ಮತ್ತು ಫೋರ್ ಬೈ ಫೋರ್

Read More
Next Story