
ಬಂಡೆ ಸಾಹೇಬ್’
ಮಲ್ಲಿಕಾರ್ಜುನ ಬಂಡೆ ಕುರಿತು ತಯಾರಾಯ್ತು ‘ಬಂಡೆ ಸಾಹೇಬ್’
ನಾಯಕನಾಗಿ ಸಂತೋಷ್ ರಾಮ್‍ಗೆ ಇದು ಎರಡನೇ ಚಿತ್ರ. ಕಾವ್ಯ ಭಾರದ್ವಾಜ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ.
ಮಲ್ಲಿಕಾರ್ಜುನ ಬಂಡೆ ಕುರಿತು ತಯಾರಾಯ್ತು ‘ಬಂಡೆ ಸಾಹೇಬ್’. ಕರ್ನಾಟಕದ ಹಲವು ಜನಪ್ರಿಯ ಪೊಲೀಸ್ ಅಧಿಕಾರಿಗಳ ಕುರಿತು ಕನ್ನಡದಲ್ಲಿ ಸಿನಿಮಾಗಳು ಬಂದಿವೆ. ಮಾಜಿ ಸಂಸದ ಹಾಗೂ ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಎಚ್.ಟಿ. ಸಾಂಗ್ಲಿಯಾನ ಕುರಿತು ಮೂರು ಚಿತ್ರಗಳು, ಕೆಂಪಯ್ಯ ಕುರಿತು ‘ಕೆಂಪಯ್ಯ ಐ.ಪಿ.ಎಸ್’ ಮುಂತಾದ ಚಿತ್ರಗಳು ನಿರ್ಮಾಣವಾಗಿವೆ. ಈಗ ಆ ಸಾಲಿಗೆ ‘ಬಂಡೆ ಸಾಹೇಬ್’ ಎಂಬ ಹೊಸ ಚಿತ್ರ ಸಹ ಸೇರಿದೆ.
ಕೆಲವು ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ರೌಡಿ ಶೀಟರ್ ಮುನ್ನಾನನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಶೂಟೌಟ್‍ಗೆ ಬಲಿಯಾದ ಹುತಾತ್ಮ ಪೊಲೀಸ್ ಅಧಿಕಾರಿ (ಪಿ.ಎಸ್.ಐ) ಮಲ್ಲಿಕಾರ್ಜುನ ಬಂಡೆ ಅವರ ಕುರಿತಾದ ಚಿತ್ರವೊಂದು ನಿರ್ಮಾಣವಾಗಿದ್ದು, ನೈಜಘಟನೆ ಆಧಾರಿತ ಈ ಚಿತ್ರಕ್ಕೆ ‘ಬಂಡೆ ಸಾಹೇಬ್’ ಎಂದು ಹೆಸರಿಡಲಾಗಿದೆ.
ಕಿರುತೆರೆಯಲ್ಲಿ ‘ಕೃಷ್ಣ ರುಕ್ಮಿಣಿ’ ಸೇರಿದಂತೆ ಕೆಲವು ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಸಂತೋಷ್ ರಾಮ್, ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ‘ಪಂಟ್ರು’ ಚಿತ್ರದ ಮೂಲಕ ನಾಯಕನಾದ ಸಂತೋಷ್ ರಾಮ್‍ಗೆ ನಾಯಕನಾಗಿ ಇದು ಎರಡನೇ ಚಿತ್ರ. ಕಾವ್ಯ ಭಾರದ್ವಾಜ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ವೀರಣ್ಣ ಕೊರಳ್ಳಿ, ಬಿರಾದಾರ್, ಸಿಂಬಾ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಮಲ್ಲಿಗೆ ಸಿನಿ ಕಂಬೈನ್ಸ್ ಲಾಂಛನದಲ್ಲಿ ಗೋಪಣ್ಣ ದೊಡ್ಮನಿ, ಕಮಲ ದೊಡ್ಮನಿ ಹಾಗೂ ಮಾಲ ವಿ. ಕೊರಳ್ಳಿ ಅವರು ನಿರ್ಮಿಸಿರುವ ಈ ಚಿತ್ರವನ್ನು ಚಿನ್ಮಯ್ ರಾಮ್ ನಿರ್ದೇಶಿಸಿದ್ದಾರೆ. ‘ಕುರುಕ್ಷೇತ್ರ’, ‘ದಿ ವಿಲನ್’ ಸೇರಿದಂತೆ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಚಿನ್ಮಯ್ ರಾಮ್‌ಗೆ ‘ಬಂಡೆ ಸಾಹೇಬ್’ ಮೊದಲ ನಿರ್ದೇಶನದ ಚಿತ್ರ.
ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಗುಲ್ಬರ್ಗ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರಕ್ಕೆ ಎಂ.ಎಸ್ ತ್ಯಾಗರಾಜ್ ಸಂಗೀತ ಮತ್ತು ‘ಮುಂಜಾನೆ’ ಮಂಜು ಛಾಯಾಗ್ರಹಣವಿದೆ. ವೀರಣ್ಣ ಕೊರಳ್ಳಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.