
ಕಾನ್ಸ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಸಿಕ್ಕಿದರೂ, ಕರ್ನಾಟಕದಲ್ಲಿ ವ್ಯಾಪಾರ ಇಲ್ಲ; ಇದು ‘ಗ್ರೀನ್’ ಕಥೆ
ಇತ್ತೀಚಿನ ದಿನಗಳಲ್ಲಿ ಹಲವು ಕನ್ನಡ ಚಿತ್ರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವುದರ ಜೊತೆಗೆ ಪ್ರಶಸ್ತಿಗಳನ್ನು ಸಹ ಪಡೆದಿವೆ. ಇದೀಗ ಆ ಸಾಲಿಗೆ ಗೋಪಾಲಕೃಷ್ಣ ದೇಶಪಾಂಡೆ ಅಭಿನಯದ ‘ಗ್ರೀನ್’ ಸೇರ್ಪಡೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಹಲವು ಕನ್ನಡ ಚಿತ್ರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವುದರ ಜೊತೆಗೆ ಪ್ರಶಸ್ತಿಗಳನ್ನು ಸಹ ಪಡೆದಿವೆ. ಇದೀಗ ಆ ಸಾಲಿಗೆ ಗೋಪಾಲಕೃಷ್ಣ ದೇಶಪಾಂಡೆ ಅಭಿನಯದ ‘ಗ್ರೀನ್’ ಸೇರ್ಪಡೆಯಾಗಿದೆ.
‘ಗ್ರೀನ್’ ಚಿತ್ರವು ಇದುವರೆಗೂ 25 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದ್ದು, ಈ ಪೈಕಿ ಕಾನ್ಸ್ ವರ್ಲ್ಡ್ ಫಿಲಂ ಫೆಸ್ಟಿವಲ್‍ನಲ್ಲಿ ಅತ್ಯುತ್ತಮ ಭಾರತೀಯ ಚಿತ್ರ ಮತ್ತು ಭವಿಷ್ಯದ ನಿರ್ದೇಶಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಈ ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಕ್ಕೆ ನಿರ್ದೇಶಕ ಮತ್ತು ನಿರ್ಮಾಪಕರಲ್ಲೊಬ್ಬರಾದ ರಾಜ್ ವಿಜಯ್ ಮುಂದಾಗಿದ್ದಾರೆ.
ಇದು ಸೈಕಾಲಜಿಕಲ್ ಮೈಂಡ್ ಬೆಂಡಿಂಗ್ ಥ್ರಿಲ್ಲರ್ ಚಿತ್ರ ಎನ್ನುವ ನಿರ್ದೇಶಕ ರಾಜ್ ವಿಜಯ್, ‘ತನ್ನ ಇಡೀ ಜೀವನವನ್ನೇ ನಿಯಂತ್ರಿಸುತ್ತಿರುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಹೋರಾಟದ ಕಥೆಯೇ ‘ಗ್ರೀನ್’. ಇದೊಂದು ಕಾಡಿನಲ್ಲಿ ನಡೆಯುವ ಕಥೆ. ಚಿತ್ರದಲ್ಲಿ ಓಪನ್ ಕ್ಲೈಮ್ಯಾಕ್ಸ್ ಇದ್ದು, ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ಚಿತ್ರವನ್ನು ಅರ್ಥೈಸಬಹುದು. ಇದು ಕನ್ನಡದ ಹೆಮ್ಮೆಯ ಚಿತ್ರವಾಗಲಿದೆ ಎಂಬ ನಂಬಿಕೆ ಇದೆ. ವಿದೇಶಿ ಜ್ಯೂರಿಯವರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಭಾಷೆಯನ್ನು ಹೊರತುಪಡಿಸಿದರೆ, ಚಿತ್ರವು ಹಾಲಿವುಡ್ ಚಿತ್ರಗಳಿಗೆ ಹೋಲಿಸಬಹುದು. ಈ ಚಿತ್ರದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ,’ ಎಂದರು.

ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಒಳ್ಳೆಯ ಹೆಸರು ಮಾಡಿದರೂ, ಇಲ್ಲಿ ಬಿಡುಗಡೆ ಮಾಡುವುದಕ್ಕೆ ಬಹಳ ಕಷ್ಟ ಎಂಬ ಅಭಿಪ್ರಾಯ ರಾಜ್ ವಿಜಯ್ ಅವರದ್ದು. ‘ಈ ತರಹದ ಚಿತ್ರ ಮಾಡೋಕೆ ನಿರ್ಮಾಪಕರನ್ನು ಒಪ್ಪಿಸೋದು ಬಹಳ ಕಷ್ಟ. ಹಾಗಾಗಿ, ನಾನೇ ನಿರ್ಮಾಣಕ್ಕೂ ಮುಂದಾದೆ. ಬೇರೆಯವರಿಗೆ ಹೇಳಿದ್ದರೆ ಇನ್ನೂ 10 ವರ್ಷ ಸೈಕಲ್ ಹೊಡೆಯಬೇಕಿತ್ತು. ಇದು ನನ್ನ ಮಟ್ಟಿಗೆ ಮಾಡು ಇಲ್ಲವೇ ಮಡಿ ಚಿತ್ರ. ಚಿತ್ರಕ್ಕಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ. ಎಂಟೊಂಬತ್ತು ಬ್ಯಾಂಕ್ ಸಾಲ ಪಡೆದಿದ್ದೇನೆ. ಒಂದು ಹಂತದಲ್ಲಿ ಸಾಲ, ಬಡ್ಡಿ ಜಾಸ್ತಿ ಆಯಿತು. ದುಡ್ಡು ಮರಳಿ ಪಡೆಯುವುದಕ್ಕೆ ಸಾಧ್ಯವಾ? ಎಂಬ ಭಯ ಶುರುವಯಿತು. ಚಿತ್ರ ಬಿಡುಗಡೆ ಮಾಡುವುದಕ್ಕೆ ಸಾಧ್ಯವೋ, ಇಲ್ಲವೋ ಎಂಬ ಭಯದಿಂದ ಯೂಟ್ಯೂಬ್‍ನಲ್ಲೇ ಚುತ್ರ ಬಿಡುಗಡೆ ಮಾಡುವುದಕ್ಕೆ ಯೋಚನೆ ಮಾಡಿದ್ದೂ ಇದೆ. ಇದರಿಂದ ಸಾಕಷ್ಟು ಕುಗ್ಗಿ ಹೋಗಿದ್ದೆ. ಈಗಲೂ ಯಾವದೇ ಬ್ಯುಸಿನೆಸ್ ಆಗಿಲ್ಲ. ಮೊದಲು ಬಿಡುಗಡೆ ಮಾಡಿ ಆ ನಂತರ ನೋಡೋಣ ಎನ್ನುತ್ತಾರೆ. ಹಾಗಾಗಿ, ಮೊದಲ ಚಿತ್ರ ಬಿಡುಗಡೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ.

ಕನ್ನಡದ ಮಟ್ಟಿಗೆ ತೀರ ಅಪರೂಪದ ಕಥೆ ಇದು ಎನ್ನುವ ಗೋಪಾಲಕೃಷ್ಣ ದೇಶಪಾಂಡೆ, ‘ನನಗೆ ನಿರ್ದೇಶಕರು ಸುಮಾರು ಎರಡೂವರೆ ಗಂಟೆ ಕಾಲ ಕಥೆ ಹೇಳಿದರು. ನಾನು ಇದುವರೆಗೂ ಮಾಡಿರದ ಒಂದು ಪಾತ್ರವನ್ನು ನಿರ್ವಹಿಸಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಮಾಯಣ್ಣ ಎಂದು. ಚಿತ್ರೀಕರಣದಲ್ಲಿ ಭಾಗವಹಿಸಿ ಎರಡು ಶಾಟ್ ಮುಗಿದ ಮೇಲೆ ನಿರ್ದೇಶಕರಿಗೆ ಸಂಪೂರ್ಣವಾಗಿ ಒಪ್ಪಿಸಿಕೊಂಡು ಬಿಟ್ಟೆ. ಏಕೆಂದರೆ, ಅವರ ಅನುಭವವನ್ನು ನಾನು ಅರ್ಥ ಮಾಡಿಸುವುದು ಕಷ್ಟ. ಇದು ತಲೆಯಲ್ಲಿ ನಡೆಯುವ ಕಥೆ. ಹಾಗಾಗಿ, ನೀವು ಹೇಗೆ ಹೇಳುತ್ತೀರೋ ಹಾಗೆ ಮಾಡುತ್ತೇನೆ ಎಂದೆ. ಅವರು ಹೇಳಿದ್ದಷ್ಟನ್ನು ಮಾಡಿದ್ದೇನೆ’ ಎನ್ನುತ್ತಾರೆ.

‘ಗ್ರೀನ್’ ಚಿತ್ರದಲ್ಲಿ ಬಾಲಾಜಿ ಮನೋಹರ್, ಗೋಪಾಲಕೃಷ್ಣ ದೇಶಪಾಂಡೆ, ಆರ್.ಜೆ.ವಿಕ್ಕಿ, ಶಿವ ಮಂಜು, ವಿಶ್ವನಾಥ್, ಡಿಂಪಿ ಫಾದ್ಯ ಮುಂತಾದವರು ನಟಿಸಿದ್ದಾರೆ. ಮಧುಸೂದನ್ ಛಾಯಾಗ್ರಹಣ ಮತ್ತು ಶಕ್ತಿ ಸ್ಯಾಕ್ ಸಂಗೀತ ಈ ಚಿತ್ರಕ್ಕಿದೆ.