
ಬಾಲಿವುಡ್ ಚಿತ್ರರಂಗದಲ್ಲಿನ ಬದಲಾದ ಪರಿಸ್ಥಿತಿ ಹಾಗೂ ತಮಗೆ ಸಿಗುತ್ತಿರುವ ಅವಕಾಶಗಳ ಕುರಿತು ಇತ್ತೀಚೆಗೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಕೋಮು ವಿವಾದ ಹೇಳಿಕೆ ಬಗ್ಗೆ ಕಪಿಲ್ ಶರ್ಮಾ ಶೋನಲ್ಲಿ ಮೌನ ಮುರಿದ ರೆಹಮಾನ್
ಇತ್ತೀಚೆಗೆ ಬಿಬಿಸಿ ಏಷ್ಯನ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ರೆಹಮಾನ್ ಅವರು, ಕಳೆದ 8 ವರ್ಷಗಳಲ್ಲಿ ಬಾಲಿವುಡ್‌ನಲ್ಲಿ ಅಧಿಕಾರ ಬದಲಾವಣೆಯಾಗಿದೆ. ಈಗ ಸೃಜನಶೀಲರಲ್ಲದವರ ಕೈಯಲ್ಲಿ ಅಧಿಕಾರವಿದೆ. ಇದು ಬಹುಶಃ ಕೋಮುವಾದಿ ವಿಚಾರವೂ ಇರಬಹುದು.
ಹಿಂದಿ ಚಿತ್ರರಂಗದಲ್ಲಿ ತಮಗೆ ಅವಕಾಶಗಳು ಕಡಿಮೆಯಾಗುತ್ತಿದೆ ಎಂದು ಇತ್ತೀಚೆಗೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ನೀಡಿದ್ದ ಹೇಳಿಕೆಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಕಳೆದ ಎಂಟು ವರ್ಷಗಳಿಂದ ಬಾಲಿವುಡ್‌ನಲ್ಲಿ ಅವಕಾಶಗಳು ಸಿಗುತ್ತಿಲ್ಲ. ಇದಕ್ಕೆ ಉದ್ಯಮದಲ್ಲಿನ 'ಅಧಿಕಾರ ಬದಲಾವಣೆ' ಮತ್ತು 'ಕೋಮುವಾದಿ ಮನಸ್ಥಿತಿ' ಕಾರಣವಿರಬಹುದು ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿತ್ತು.
ಆದರೆ ಇತ್ತೀಚೆಗೆ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನಲ್ಲಿ 'ಗಾಂಧಿ ಟಾಕ್ಸ್' ಚಿತ್ರತಂಡದೊಂದಿಗೆ ಭಾಗವಹಿಸಿದ್ದ ರೆಹಮಾನ್, ಈ ವಿವಾದದ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಮಾಹಿತಿಗಳು ಹಾದಿಯಲ್ಲಿ ಹೇಗೆ ಬದಲಾಗುತ್ತವೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಪ್ರಪಂಚದ ದೊಡ್ಡ ಸಮಸ್ಯೆಯೇ ಇದು—ಒಂದು ಸಂದೇಶ ತಲುಪುವಷ್ಟರಲ್ಲಿ ಅದು ರೂಪಾಂತರಗೊಂಡು ವಿರೂಪಗೊಳ್ಳುತ್ತದೆ ಎಂದು ಅವರು ಮಾರ್ಮಿಕವಾಗಿ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ 'ಬಿಬಿಸಿ ಏಷ್ಯನ್ ನೆಟ್‌ವರ್ಕ್'ಗೆ ನೀಡಿದ ಸಂದರ್ಶನದಲ್ಲಿ ರೆಹಮಾನ್ ಅವರು ಬಾಲಿವುಡ್‌ನಲ್ಲಿ ನಡೆಯುತ್ತಿರುವ 'ಪವರ್ ಶಿಫ್ಟ್' ಬಗ್ಗೆ ಮಾತನಾಡಿದ್ದರು. ಹಿಂದಿ ಚಿತ್ರರಂಗದಲ್ಲಿ ಈಗ ಸೃಜನಶೀಲರಲ್ಲದವರ ಕೈಯಲ್ಲಿ ಅಧಿಕಾರವಿದೆ. ನನಗೆ ಬರಬೇಕಾದ ಕೆಲಸಗಳನ್ನು ತಡೆಯಲಾಗುತ್ತಿದೆ. ಇದು ಒಂದು ರೀತಿಯ 'ಕೋಮು' ವಿಚಾರವೂ ಆಗಿರಬಹುದು. ಆದರೆ ಇದು ನನ್ನ ಮುಖದ ಮೇಲೆ ನೇರವಾಗಿ ನಡೆಯುತ್ತಿಲ್ಲ, ಬದಲಾಗಿ ಪಿಸುಮಾತುಗಳಂತೆ ನನಗೆ ಕೇಳಿಬರುತ್ತಿದೆ. ಒಂದು ಚಿತ್ರಕ್ಕೆ ನನ್ನನ್ನು ಅಂತಿಮಗೊಳಿಸಿದ ನಂತರವೂ, ಸಂಗೀತ ಸಂಸ್ಥೆಗಳು ಬೇರೆ ಐವರು ಸಂಗೀತ ನಿರ್ದೇಶಕರನ್ನು ನೇಮಿಸಿಕೊಂಡ ಉದಾಹರಣೆಗಳಿವೆ," ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು. ಈ 'ಕೋಮು' ಎಂಬ ಪದದ ಬಳಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿತ್ತು.
ಬಳಿಕ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮೆ ಕೇಳಿದ್ದ ಅವರು, ತಮ್ಮ ಉದ್ದೇಶ ಯಾರಿಗೂ ನೋವುಂಟು ಮಾಡುವುದಲ್ಲ ಎಂದು ಸ್ಪಷ್ಟಪಡಿಸಿದರು. ಭಾರತ ನನ್ನ ಸ್ಫೂರ್ತಿ ಮತ್ತು ನನ್ನ ಮನೆ. ನನ್ನ ಸಂಗೀತದ ಮೂಲಕ ಸಂಸ್ಕೃತಿಯನ್ನು ಆಚರಿಸುವುದು ಮತ್ತು ಗೌರವಿಸುವುದು ನನ್ನ ಗುರಿ. ಕೆಲವೊಮ್ಮೆ ಉದ್ದೇಶಗಳು ತಪ್ಪಾಗಿ ಅರ್ಥೈಸಲ್ಪಡಬಹುದು, ಆದರೆ ನಾನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದರು.
ಬಾಲಿವುಡ್‌ನಲ್ಲಿ ಕೆಲಸ ಕಡಿಮೆಯಾಗಿದೆ ಎಂದಿದ್ದರೂ, ರೆಹಮಾನ್ ಸದ್ಯ 'ಪೊನ್ನಿಯಿನ್ ಸೆಲ್ವನ್', 'ಮಾಯನ್', 'ರಾಯನ್' ನಂತಹ ಹಿಟ್ ಚಿತ್ರಗಳ ಜೊತೆಗೆ ಹಿಂದಿಯಲ್ಲಿ 'ಮಿಮಿ', 'ಅತರಂಗಿ ರೇ' ಮತ್ತು ಮುಂಬರುವ 'ರಾಮಾಯಣ' ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

