
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರನ್ನು ಅಸಭ್ಯವಾಗಿ ಚಿತ್ರೀಕರಿಸುವ 'ಜೂಮ್-ಇನ್' ಸಂಸ್ಕೃತಿ ವಿರುದ್ಧ ಸಪ್ತಮಿ ಗೌಡ ಆಕ್ರೋಶ ಹೊರಹಾಕಿದ್ದಾರೆ.
ಕ್ಯಾಮೆರಾ ಕಣ್ಣಿನ ಅಸಭ್ಯತೆಗೆ ಸಪ್ತಮಿ ಗೌಡ ಕಿಡಿ: ಬೆಂಬಲಕ್ಕೆ ನಿಂತ ಆಶಿಕಾ, ರುಕ್ಮಿಣಿ
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರನ್ನು ಅಸಭ್ಯವಾಗಿ ಚಿತ್ರೀಕರಿಸುವ 'ಜೂಮ್-ಇನ್' ಸಂಸ್ಕೃತಿ ವಿರುದ್ಧ ಸಪ್ತಮಿ ಗೌಡ ಆಕ್ರೋಶ ಹೊರಹಾಕಿದ್ದಾರೆ. ಈ ಹೋರಾಟಕ್ಕೆ ರುಕ್ಮಿಣಿ ವಸಂತ್ ಮತ್ತು ಆಶಿಕಾ ರಂಗನಾಥ್ ಸಾಥ್ ನೀಡಿದ್ದಾರೆ.
ಸಿನಿಮಾ ಪತ್ರಿಕೋದ್ಯಮ ಮತ್ತು ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ನಟಿಯರನ್ನು ಚಿತ್ರೀಕರಿಸುವ ಅಸಭ್ಯ ವಿಧಾನದ ವಿರುದ್ಧ ಸ್ಯಾಂಡಲ್‌ವುಡ್ ನಟಿಯರು ಈಗ ಒಗ್ಗಟ್ಟಿನ ಧ್ವನಿ ಎತ್ತಿದ್ದಾರೆ. ಇತ್ತೀಚೆಗೆ ಸಪ್ತಮಿ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಸುದೀರ್ಘ ಪತ್ರವೊಂದು ಈಗ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ.
ಸಪ್ತಮಿ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಹಿಳಾ ಕಲಾವಿದರನ್ನು ಚಿತ್ರೀಕರಿಸುವಾಗ ಉದ್ದೇಶಪೂರ್ವಕವಾಗಿ 'ಜೂಮ್-ಇನ್' ಮಾಡುವುದು ಮತ್ತು ಅಸಭ್ಯ ಆಂಗಲ್‌ಗಳಲ್ಲಿ ಫೋಟೋ ತೆಗೆಯುವುದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ. ನಾವು ಚಿತ್ರರಂಗಕ್ಕೆ ಬಂದಿರುವುದು ನಮ್ಮ ಕಲೆ ಮತ್ತು ಸಿನಿಮಾಗಾಗಿ, ಕೇವಲ ದೇಹ ಪ್ರದರ್ಶನಕ್ಕಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೆಲವೇ ಕೆಲವು ವ್ಯಕ್ತಿಗಳು ಮಾಡುತ್ತಿರುವ ಈ ಅಸಭ್ಯ ವರ್ತನೆಯು ನಟಿಯರ ಘನತೆಗೆ ಧಕ್ಕೆ ತರುತ್ತಿದೆ ಮತ್ತು ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಅವರು ಕಿಡಿಕಾರಿದ್ದರು.
ಸಪ್ತಮಿ ಅವರ ಈ ದಿಟ್ಟ ನಿಲುವಿಗೆ ಸ್ಯಾಂಡಲ್‌ವುಡ್‌ನ ಪ್ರಮುಖ ನಟಿಯರಾದ ರುಕ್ಮಿಣಿ ವಸಂತ್, ಆಶಿಕಾ ರಂಗನಾಥ್ ಅವರು ಬೆಂಬಲ ಸೂಚಿಸಿದ್ದಾರೆ. ಈ ನಟಿಯರು ಸಪ್ತಮಿ ಅವರ ಪೋಸ್ಟ್ ಅನ್ನು ಮರುಹಂಚಿಕೊಳ್ಳುವ ಮೂಲಕ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ಅದರಲ್ಲೂ ಆಶಿಕಾ ರಂಗನಾಥ್ ಅವರು ಪ್ರತಿಕ್ರಿಯಿಸಿ, ಗೌರವ ನೀಡುವುದನ್ನು ರೂಢಿಸಿಕೊಳ್ಳಿ, ಉಲ್ಲಂಘನೆಯನ್ನಲ್ಲ; ಇಂತಹ ಅಸಭ್ಯ ಆಂಗಲ್‌ಗಳು ಮತ್ತು ಜೂಮ್-ಇನ್‌ಗಳು ವೃತ್ತಿಪರತೆಗೆ ವಿರುದ್ಧವಾದವು ಎಂದು ಬರೆದುಕೊಂಡಿದ್ದಾರೆ.
ಮಾಧ್ಯಮ ಮಿತ್ರರು ಮತ್ತು ಪತ್ರಕರ್ತರಲ್ಲಿ ಮನವಿ ಮಾಡಿರುವ ಸಪ್ತಮಿ, ನಮಗೆ ಸದಾ ಗೌರವ ನೀಡುವ ಮತ್ತು ನಾವು ಸುರಕ್ಷಿತವಾಗಿರಲು ಸಹಕರಿಸುವ ಪತ್ರಕರ್ತರ ಬಗ್ಗೆ ಅಪಾರ ಗೌರವವಿದೆ. ಆದರೆ ಕೆಲವೇ ಕೆಲವು ಮಂದಿ ವಿಕೃತ ಮನಸ್ಸಿನಿಂದ ನಟಿಯರನ್ನು ಕೆಟ್ಟದಾಗಿ ಚಿತ್ರೀಕರಿಸುತ್ತಿದ್ದು, ಅಂಥವರ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು ಎಂದು ವಿನಂತಿಸಿದ್ದಾರೆ.

