
ಮತ್ತೊಂದು ಚಿತ್ರಕ್ಕೆ ಚಿಕ್ಕಣ್ಣ ನಾಯಕ: ಆಕ್ಷನ್ ಕಟ್ ಹೇಳಲಿದ್ದಾರೆ ʼಕೆರೆಬೇಟೆʼ ನಿರ್ದೇಶಕ
ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟ ಚಿಕ್ಕಣ್ಣ ಇದೀಗ ಮತ್ತೊಂದು ಚಿತ್ರದಲ್ಲಿಯೂ ನಾಯಕನಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟ ಚಿಕ್ಕಣ್ಣ ಇದೀಗ ಮತ್ತೊಂದು ಚಿತ್ರದಲ್ಲಿಯೂ ನಾಯಕನಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
ಅದ್ಧೂರಿ, ಅಂಬಾರಿ, ಕಿಸ್ ಮತ್ತು ಮಿ. ಐರಾವತದಂತಹ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಎಪಿ ಅರ್ಜುನ್, ಚಿಕ್ಕಣ್ಣ ನಟನೆಯ ಹೊಸ ಚಿತ್ರವನ್ನು ನಿರ್ಮಿಸಲಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ‘ಕೆರೆಬೇಟೆ’ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ರಾಜ್ ಗುರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಗೌರಿ ಶಂಕರ್ ಅಭಿನಯದ ರಾಜ್ ಗುರು ನಿರ್ದೇಶನದ ʼಕೆರೆಬೇಟೆʼ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದೆ.
ಎಪಿ ಅರ್ಜುನ್ ಅವರು ಸದ್ಯ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದ ಬಿಡುಗಡೆ ನಂತರವೇ ಚಿಕ್ಕಣ್ಣ ಅವರ ಹೊಸ ಚಿತ್ರ ಸೆಟ್ಟೇರಲಿದೆ ಎಂದು ತಿಳಿದು ಬಂದಿದೆ. ಮಾರ್ಟಿನ್ ಅಕ್ಟೋಬರ್ 11 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅರ್ಜುನ್ ಸದ್ಯ ವಿರಾಟ್ ಮತ್ತು ಪ್ರಿಯಾಂಕಾ ಕುಮಾರ್ ಅಭಿನಯದ 'ಅದ್ಧೂರಿ ಲವರ್' ಚಿತ್ರವನ್ನು ಸಹ ನಿರ್ಮಿಸುತ್ತಿದ್ದಾರೆ. ಅಲ್ಲದೆ, ಮತ್ತೊಂದು ಯೋಜನೆಯನ್ನು ಹೊಂದಿದ್ದಾರೆ ಎನ್ನಲಾಗಿದೆ.
ಈ ಚಿತ್ರದ ಕುರಿತು ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಬೇಕಿದೆ. ವರದಿಗಳ ಪ್ರಕಾರ, ಈ ಸಿನಿಮಾ ಭಾವನೆಗಳನ್ನು ಒಳಗೊಂಡಿರುವ ಕಮರ್ಷಿಯಲ್ ಎಂಟರ್‌ಟೈನರ್ ಎನ್ನಲಾಗಿದೆ. 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಚಿಕ್ಕಣ್ಣ, ಕಾಮಿಡಿ ನಟನಾಗಿ ಹೆಸರಾಗಿದ್ದಾರೆ. ಬಳಿಕ ʼಉಪಾಧ್ಯಕ್ಷʼ ಸಿನಿಮಾದಲ್ಲಿ ನಾಯಕನಾಗಿ ಯಶಸ್ಸು ಕಂಡರು. ಈ ಫ್ಯಾಮಿಲಿ ಎಂಟರ್‌ಟೈನರ್ ಅನ್ನು ಅನಿಲ್ ಕುಮಾರ್ ನಿರ್ದೇಶಿಸಿದ್ದರು. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಈ ಚಿತ್ರದಲ್ಲಿ ಕಿರುತೆರೆ ನಟಿ ಮಲೈಕಾ ವಸುಪಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಮಧ್ಯೆ, ಚಿಕ್ಕಣ್ಣ ಇನ್ನೂ ಒಂದೆರಡು ನಿರ್ದೇಶಕರೊಂದಿಗೆ ಮಾತುಕತೆ ನಡೆಸುತ್ತಿದ್ದು, ಈ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.ʼ