
ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸಿದ ಹಿರಿಯ ನಟ ಅನುಪಮ್ ಖೇರ್
ಮಾತೇ ಇಲ್ಲ; ಕಾಂತಾರ ನೋಡಿ ಮೂಕನಾದ ಅನುಪಮ್ ಖೇರ್
ಆ ವಿಡಿಯೋದಲ್ಲಿ ಅನುಪಮ್ ಖೇರ್ ತಮ್ಮ ತಾಯಿ ಮತ್ತು ಸಹೋದರರನ್ನು ಪರಿಚಯಿಸುತ್ತಾ, ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ ಹೇಗಿದೆ ಎನ್ನುವುದನ್ನೂ ಹೇಳಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ: ಚಾಪ್ಟರ್ 1' ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವುದಲ್ಲದೆ, ಚಿತ್ರರಂಗದ ಗಣ್ಯರಿಂದಲೂ ಅಪಾರ ಪ್ರಶಂಸೆಗೆ ಪಾತ್ರವಾಗುತ್ತಿದೆ. ಇದೀಗ, ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಅವರು ಚಿತ್ರವನ್ನು ನೋಡಿ ಮಂತ್ರಮುಗ್ಧರಾಗಿದ್ದು, "ಈ ಸಿನಿಮಾ ನೋಡಿದ ಮೇಲೆ ಮಾತೇ ಬರುತ್ತಿಲ್ಲ. ನಿಜಕ್ಕೂ ಮಾತೇ ಬರುತ್ತಿಲ್ಲ!" ಎಂದು ಬಣ್ಣಿಸಿದ್ದಾರೆ.
ತಮ್ಮ ತಾಯಿ ಮತ್ತು ಸಹೋದರರೊಂದಿಗೆ ಚಿತ್ರವನ್ನು ವೀಕ್ಷಿಸಿದ ನಂತರ, ಅನುಪಮ್ ಖೇರ್ ಅವರು ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, "ರಿಷಬ್ ಶೆಟ್ಟಿಯವರೇ, ನೀವು ಅಂತಹ ಅದ್ಭುತ ಚಿತ್ರವನ್ನು ಮಾಡಿದ್ದೀರಿ. ಕೇವಲ ಧನ್ಯವಾದ ಹೇಳಿದರೆ ಸಾಲದು," ಎಂದು ಭಾವಪೂರ್ಣವಾಗಿ ನುಡಿದಿದ್ದಾರೆ. ತಮ್ಮ ಇಡೀ ಕುಟುಂಬಕ್ಕೆ ಸಿನಿಮಾ ಇಷ್ಟವಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಅನುಪಮ್ ಖೇರ್ ಅವರ ಈ ಮೆಚ್ಚುಗೆಯ ವಿಡಿಯೋಗೆ ಪ್ರತಿಕ್ರಿಯಿಸಿರುವ ಹೊಂಬಾಳೆ ಫಿಲ್ಮ್ಸ್, "ನಿಮ್ಮಂತಹ ಹಿರಿಯ ನಟರು ನಮ್ಮ ಚಿತ್ರವನ್ನು ಕುಟುಂಬ ಸಮೇತ ನೋಡಿರುವುದು ನಮಗೆ ಸಂದ ಗೌರವ," ಎಂದು ಧನ್ಯವಾದ ಅರ್ಪಿಸಿದೆ.
ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ
'ಕಾಂತಾರ: ಚಾಪ್ಟರ್ 1' ಚಿತ್ರವು ಪ್ರೇಕ್ಷಕರ ಹೃದಯ ಗೆಲ್ಲುವುದರ ಜೊತೆಗೆ, ಬಾಕ್ಸ್ ಆಫೀಸ್‌ನಲ್ಲಿಯೂ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ, ಚಿತ್ರವು ವಿಶ್ವಾದ್ಯಂತ 325 ಕೋಟಿ ರೂಪಾಯಿಗೂ ಅಧಿಕ ಒಟ್ಟು ಕಲೆಕ್ಷನ್ ಮಾಡಿದೆ. ಭಾನುವಾರ ಒಂದೇ ದಿನ 61 ಕೋಟಿ ರೂಪಾಯಿ ಗಳಿಸುವ ಮೂಲಕ, ಚಿತ್ರವು ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಈ ಮೂಲಕ, 'KGF: ಚಾಪ್ಟರ್ 1' ಚಿತ್ರದ ಒಟ್ಟು ಗಳಿಕೆಯನ್ನು ಮೀರಿ, ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.
ಸಾವಿರ ವರ್ಷಗಳ ಹಿಂದಿನ ಕಥೆ
'ಕಾಂತಾರ: ಚಾಪ್ಟರ್ 1' ಚಿತ್ರವು 2022ರಲ್ಲಿ ಬಿಡುಗಡೆಯಾಗಿ, ಕೇವಲ 15 ಕೋಟಿ ಬಜೆಟ್‌ನಲ್ಲಿ ₹400 ಕೋಟಿಗೂ ಅಧಿಕ ಗಳಿಕೆ ಕಂಡು ಜಗತ್ತನ್ನೇ ಬೆರಗುಗೊಳಿಸಿದ್ದ 'ಕಾಂತಾರ' ಚಿತ್ರದ ಪ್ರೀಕ್ವೆಲ್ ಆಗಿದೆ. ಈ ಚಿತ್ರವು ಕದಂಬರ ಆಳ್ವಿಕೆಯ ಕಾಲಘಟ್ಟವನ್ನು ಹಿನ್ನೆಲೆಯಾಗಿಟ್ಟುಕೊಂಡು, ಕರಾವಳಿ ಕರ್ನಾಟಕದ ಕಾಡಿನ ಮಧ್ಯೆ ಇರುವ 'ಈಶ್ವರನ ಹೂದೋಟ' ಎಂಬ ನಿಗೂಢ ಸ್ಥಳದ ಕಥೆಯನ್ನು ಹೇಳುತ್ತದೆ. ರಿಷಬ್ ಶೆಟ್ಟಿ ಅವರೇ ಕಥೆ ಬರೆದು, ನಿರ್ದೇಶಿಸಿ, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.