
ಪ್ರಭಾಕರನ್
ಕಾಲಿವುಡ್ ಡ್ರಗ್ಸ್ ಜಾಲ: ನಟರಾದ ಶ್ರೀಕಾಂತ್, ಕೃಷ್ಣ ಬಳಿಕ ನಟ ಪ್ರಭಾಕರನ್ ಬಂಧನ
ಚೆನ್ನೈನ ಮಾದಕದ್ರವ್ಯ ನಿಯಂತ್ರಣ ವಿಭಾಗವು ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಮತ್ತೊಬ್ಬ ತಮಿಳು ನಟನನ್ನು ಬಂಧಿಸಿದೆ. ನಟ, ನಿರ್ಮಾಪಕ ಪ್ರಭಾಕರನ್ ಅವರನ್ನು ಮಧುರವೋಯಲ್‌ನಲ್ಲಿ ಮೆಥಾಂಫೆಟಮೈನ್ ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.
ತಮಿಳು ಚಿತ್ರರಂಗದಲ್ಲಿ ಬೇರೂರಿರುವ ಮಾದಕವಸ್ತು ಜಾಲದ ವಿರುದ್ಧ ತನಿಖೆ ಚುರುಕುಗೊಳಿಸಿರುವ ಚೆನ್ನೈನ ಮಾದಕದ್ರವ್ಯ ನಿಯಂತ್ರಣ ವಿಭಾಗ (NCB), ಖ್ಯಾತ ನಟರಾದ ಶ್ರೀಕಾಂತ್ ಮತ್ತು ಕೃಷ್ಣ ಅವರ ಬಂಧನದ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟ-ನಿರ್ಮಾಪಕ ಪ್ರಭಾಕರನ್ ಅವರನ್ನು ಬಂಧಿಸಿದೆ. ಮೆಥಾಂಫೆಟಮೈನ್ ಎಂಬ ನಿಷೇಧಿತ ಮಾದಕವಸ್ತು ಹೊಂದಿದ್ದ ಆರೋಪದ ಮೇಲೆ ಮಧುರವೋಯಲ್‌ನಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಪ್ರಭಾಕರನ್ ಅವರೊಂದಿಗೆ ಪವನ್ ಕುಮಾರ್, ಆಶಿಕ್ ಬಾಷಾ ಮತ್ತು ಆರುಮುಗಂ ಎಂಬ ಇತರ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 18ರಂದು ಪೋರೂರ್ ಟೋಲ್ ಗೇಟ್ ಬಳಿ ಬಂಧಿತರಾಗಿದ್ದ ಸರನ್ ರಾಜ್, ರೆಕ್ಷಿತ್ ರೆಗ್ಜಿನ್‌ಮೋನ್ ಮತ್ತು ಜಮುನಾ ಕುಮಾರ್ ಎಂಬ ಮೂವರು ಡ್ರಗ್ ಪೆಡ್ಲರ್‌ಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಪ್ಪೊಪ್ಪಿಕೊಂಡ ನಟ
'ಕಾದಲ್' ಖ್ಯಾತಿಯ ಸುಕುಮಾರ್ ನಿರ್ದೇಶನದ 'ತಿರುಟ್ಟು ವಿಸಿಡಿ' (2015) ಚಿತ್ರದಲ್ಲಿ ನಟಿಸಿದ್ದ ಪ್ರಭಾಕರನ್, ಸ್ವಂತ ಚಿತ್ರವನ್ನೂ ನಿರ್ಮಿಸುತ್ತಿದ್ದರು. ಅವರ ಪತ್ನಿ ಕೂಡ ಚಿತ್ರ ನಿರ್ಮಾಪಕಿಯಾಗಿದ್ದಾರೆ. ವಿಚಾರಣೆ ವೇಳೆ ಪ್ರಭಾಕರನ್, "ಪತ್ನಿಯಿಂದ ಬೇರ್ಪಟ್ಟಿದ್ದಾಗ ಮಾನಸಿಕ ಒತ್ತಡದಿಂದ ಮಾದಕ ವಸ್ತುಗಳ ದಾಸನಾದೆ. ನಂತರ ಅವರು ಮನೆಗೆ ಬಂದರೂ ಚಟ ಮುಂದುವರಿಸಿದ್ದೆ" ಎಂದು ತಪ್ಪೊಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಪ್ರಕರಣದ ವ್ಯಾಪ್ತಿ ದೊಡ್ಡದಿರುವ ಶಂಕೆಯ ಮೇಲೆ ಪೊಲೀಸರು ನಟನ ವಡಪಳನಿ ನಿವಾಸದಲ್ಲಿಯೂ ಶೋಧಕಾರ್ಯ ನಡೆಸಿದ್ದಾರೆ.
ಡ್ರಗ್ಸ್ ಜಾಲದ ಕಾರ್ಯವೈಖರಿ
ಪೊಲೀಸರ ಪ್ರಕಾರ, ಈ ಜಾಲದಲ್ಲಿ ಭವನ್ ಕುಮಾರ್ ಎಂಬಾತ ಪ್ರಮುಖ ಪೂರೈಕೆದಾರನಾಗಿದ್ದು, ಆತ ಪ್ರತಿ ಮೂರು ದಿನಗಳಿಗೊಮ್ಮೆ 5 ಗ್ರಾಂ ಮೆಥ್ ಪ್ಯಾಕೆಟ್‌ಗಳನ್ನು 13,000 ರೂಪಾಯಿಗೆ ರೆಕ್ಷಿತ್ ಎಂಬಾತನಿಗೆ ಮಾರಾಟ ಮಾಡುತ್ತಿದ್ದ. ರೆಕ್ಷಿತ್ ಅದನ್ನು ಪ್ರತಿ ಗ್ರಾಂಗೆ 3,500 ರೂಪಾಯಿಗಳಂತೆ ಬೀದಿಗಳಲ್ಲಿ ಮರುಮಾರಾಟ ಮಾಡುತ್ತಿದ್ದ. ಮತ್ತೋರ್ವ ಆರೋಪಿ ಸರನ್ ರಾಜ್, ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಎಂಬಾತನಿಂದ ಗಾಂಜಾ ಖರೀದಿಸಿ, ಸಣ್ಣ ಪ್ಯಾಕೆಟ್‌ಗಳಲ್ಲಿ ₹1,000ಕ್ಕೆ ಮಾರಾಟ ಮಾಡುತ್ತಿದ್ದ.
ಈ ಜಾಲದಲ್ಲಿ ಭಾಗಿಯಾಗಿರುವ ಮಣಿ, ಕುಮಾರ್ ಮತ್ತು ರಾಜ್‌ಕುಮಾರ್ ಎಂಬ ಪ್ರಮುಖ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಕೊಕೇನ್ ಪೂರೈಕೆ ಆರೋಪದ ಮೇಲೆ ನಟರಾದ ಶ್ರೀಕಾಂತ್ ಮತ್ತು ಕೃಷ್ಣ ಅವರನ್ನು ಬಂಧಿಸಲಾಗಿತ್ತು. ಈ ಸರಣಿ ಬಂಧನಗಳು ಕಾಲಿವುಡ್‌ನಲ್ಲಿ ವ್ಯಾಪಕವಾಗಿ ಹಬ್ಬಿರುವ ಡ್ರಗ್ಸ್ ಜಾಲದ ಆಳವನ್ನು ಬಹಿರಂಗಪಡಿಸುತ್ತಿವೆ.