
ಕನ್ನಡ ಚಿತ್ರರಂಗಕ್ಕೆ ಡಾ. ರಾಜ್ ಅವರ ಮತ್ತೊಬ್ಬ ಮೊಮ್ಮಗನ ಎಂಟ್ರಿ
ಡಾ. ರಾಜಕುಮಾರ್ ಅವರ ಮೊಮ್ಮಕ್ಕಳಾದ ನಿವೇದಿತಾ ಶಿವರಾಜಕುಮಾರ್, ವಿನಯ್ ರಾಜಕುಮಾರ್, ಯುವ ರಾಜಕುಮಾರ್, ಧನ್ಯಾ ರಾಮ್‍ಕುಮಾರ್ ಮತ್ತು ಧೀರೇನ್ ರಾಮಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಈಗ ಕನ್ನಡ ಚಿತ್ರರಂಗಕ್ಕೆ ಡಾ. ರಾಜ್ ಅವರ ಇನ್ನೊಬ್ಬ ಮೊಮ್ಮಗ ಷಣ್ಮುಖ ಗೋವಿಂದರಾಜ್ ನಟನಾಗಿ ಗುರುತಿಸಿಕೊಳ್ಳುದಕ್ಕೆ ಸಜ್ಜಾಗಿದ್ದಾರೆ.
ಷಣ್ಮುಖ, ಡಾ. ರಾಜಕುಮಾರ್ ಅವರ ಮಗಳು-ಅಳಿಯ ಲಕ್ಷ್ಮೀ ಮತ್ತು ಗೋವಿಂದರಾಜ್ ಅವರ ಮಗ. ಶುಕ್ರವಾರ (ಏಪ್ರಿಲ್ 04)ರಂದು ಬಿಡುಗಡೆಯಾದ ‘ನಿಂಬಿಯಾ ಬನಾದ ಮ್ಯಾಗ’ ಚಿತ್ರದ ಮೂಲಕ ಷಣ್ಮುಖ, ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪರಿಚಿತರಾಗುತ್ತಿದ್ದಾರೆ.
ಈ ಚಿತ್ರದ ಭಾಗವಾಗಿದ್ದರ ಕುರಿತು ಮಾತನಾಡುವ ಷಣ್ಮುಖ, ‘Miracles happen in life ಎನ್ನುವಂತೆ ನನ್ನ ಜೀವನದ ದೊಡ್ಡ ಪವಾಡ ಈ ಚಿತ್ರ. 2022ರಲ್ಲಿ ಶುರುವಾದ ಚಿತ್ರ ಇದು. ಜುಲೈ ತಿಂಗಳಲ್ಲಿ ನಾನು ನಿರ್ದೇಶಕರನ್ನು ಭೇಟಿ ಮಾಡಿದೆ. ಅವರ ಇನ್ನೊಂದು ಚಿತ್ರದ ಕಾರ್ಯಕ್ರಮಕ್ಕೆ ಆಹ್ವಾನಿಸುವುದಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಒಂದು ಕಥೆ ಇದೆ, ನಿಮಗೆ ಹೇಳಬೇಕು ಎಂದರು. ಅದನ್ನು ಕೇಳಿ ನಂಬೋಕೆ ಆಗಲಿಲ್ಲ. ಅವರು ನನ್ನ ಹತ್ತಿರ ಮಾತಾಡುತ್ತಿದ್ದಾರಾ? ನನ್ನ ಹಿಂದೆ ಯಾರಾದರೂ ಇದ್ದಾರಾ? ಎಂದು ನೋಡಿದೆ. ಅದಾಗಿ ಎರಡ್ಮೂರು ತಿಂಗಳಿಗೆ ಮತ್ತೊಮ್ಮೆ ಭೇಟಿಯಾಗಿ, ಚಿತ್ರದ ಒಂದೆಳೆ ಹೇಳಿದರು. ನನಗೆ ತುಂಬಾ ಇಷ್ಟ ಆಯಿತು. ಈ ಪಾತ್ರ ನನ್ನಿಂದ ಸಾಧ್ಯವಾ ಎಂದು ಭಯವಾಯಿತು. ನೀವೇ ಮಾಡಬೇಕು, ಒಂದು ಪಕ್ಷ ನೀವು ಮಾಡುವುದಿಲ್ಲ ಎಂದರೆ ಬೇರೆ ಯಾರ ಜೊತೆಯೂ ಮಾಡುವುದಿಲ್ಲ’ ಎನ್ನುತ್ತಾರೆ.
ಇದು ತಾಯಿ-ಮಗನ ಬಾಂಧವ್ಯದ ಕಥೆ ಎನ್ನುವ ಷಣ್ಮುಖ, ‘ಕಾರಣಾಂತರಗಳಿಂದ ತಾಯಿ ತನ್ನ ಮಗುವನ್ನು ದೂರ ಇಡುತ್ತಾಳೆ. ಬೇರೆ ಕಡೆ ಬೆಳೆಸುತ್ತಾರೆ. ಅವನು ಎಲ್ಲಿ ಬೆಳೆಯುತ್ತಿರುತ್ತಾನೆ ಎಂದು ಅವಳಿಗೆ ಗೊತ್ತಿರುವುದಿಲ್ಲ. 25 ವರ್ಷಗಳ ನಂತರ ತಾಯಿಯನ್ನು ಹುಡುಕಿಕೊಂಡು ಮಗ ಬರುತ್ತಾನೆ. ಬಂದಾಗ ಏನಾಗುತ್ತದೆ, ಅವನು ಯಾಕೆ ಬರುತ್ತಾನೆ ಎನ್ನುವುದು ಚಿತ್ರದ ಕಥೆ’ ಎನ್ನುತ್ತಾರೆ.
ಈ ಚಿತ್ರದ ಪ್ರತಿ ಹಂತದಲ್ಲೂ ಭಾಗಿಯಾಗಿದ್ದರ ಕುರಿತು ಮಾತನಾಡುವ ಷಣ್ಮುಖ, ‘ಪ್ರತಿ ಹಂತದಲ್ಲೂ ನನ್ನನ್ನು ತೊಡಗಿಸಿಕೊಂಡರು. ಕಥೆ ಬರೆಯುವಾಗ, ಕಲಾವಿದರ ಆಯ್ಕೆ, ಲೊಕೇಶನ್ ಹುಡುಕಾಟ … ಎಲ್ಲಾ ವಿಷಯಗಳನ್ನೂ ಹಂಚಿಕೊಂಡರು. ಇದು ನನಗೆ ತುಂಬಾ ಆತ್ಮವಿಶ್ವಾಸ ಬಂತು. ಏನೇ ಸಲಹೆ ಕೊಟ್ಟರೂ, ಅದನ್ನು ತೆಗೆದುಕೊಳ್ಳುತ್ತಿದ್ದರು. ಈ ಚಿತ್ರದ ಸಂಪೂರ್ಣ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ಆಯಿತು. ಈ ತಂಡದ ಬಗ್ಗೆ ಹೆಮ್ಮೆ ಇದೆ. ಅವಕಾಶ ಕೊಟ್ಟ ತಂಡಕ್ಕೆ ಚಿರಋಣಿ ಎನ್ನುತ್ತಾರೆ.
‘ನಿಂಬಿಯಾ ಬನಾದ ಮ್ಯಾಗೆ’ ಚಿತ್ರವನ್ನು ವಿ. ಮಾದೇಶ್ ನಿರ್ಮಿಸಿದ್ದು, ಅಶೋಕ್ ಕಡಬ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಷಣ್ಮುಖ ಜೊತೆಗೆ ತನುಶ್ರೀ, ಸುನಾದ್ ರಾಜ್, ಸಂಗೀತ, ಮೂಗು ಸುರೇಶ್, ಪದ್ಮಾವಾಸಂತಿ ಮುಂತಾದವರು ನಟಿಸಿದ್ದು, ಆರೋನ್ ಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ.