
ಅಮಿತಾಬ್ ಬಚ್ಚನ್
83ನೇ ವಸಂತಕ್ಕೆ ಕಾಲಿಟ್ಟ ಅಮಿತಾಬ್ ಬಚ್ಚನ್; 'ಆ್ಯಂಗ್ರಿಮ್ಯಾನ್'ನಿಂದ 'ಬಿಗ್ ಬಿ'ವರೆಗಿನ ಪಯಣವೇ ರೋಚಕ
80ರ ದಶಕದ 'ಆ್ಯಂಗ್ರಿಮ್ಯಾನ್'ನಿಂದ ಹಿಡಿದು ಇಂದಿನ ಶತಮಾನದ ಸೂಪರ್‌ಸ್ಟಾರ್‌ವರೆಗಿನ ಅಮಿತಾಬ್ ಬಚ್ಚನ್ ಅವರ ಪಯಣವು ಅಚಲ ನಿರ್ಧಾರ, ಹೋರಾಟ ಮತ್ತು ಯಶಸ್ಸಿನ ರೋಚಕ ಕಥೆಯಾಗಿದೆ.
ಬಾಲಿವುಡ್‌ನ 'ಶಾಹೆನ್ ಶಾ', 'ಬಿಗ್ ಬಿ' ಎಂದೇ ಖ್ಯಾತರಾಗಿರುವ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಇಂದು (ಅ.11) ಹುಟ್ಟು ಹಬ್ಬದ ಸಂಭ್ರಮ. 83ನೇ ವಸಂತಕ್ಕೆ ಕಾಲಿಟ್ಟಿರುವ ಅವರಿಗೆ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳು, ಆಪ್ತರು ಶುಭ ಹಾರೈಸುತ್ತಿದ್ದಾರೆ.
80ರ ದಶಕದ 'ಆ್ಯಂಗ್ರಿಮ್ಯಾನ್'ನಿಂದ ಹಿಡಿದು ಈ ಶತಮಾನದ ಸೂಪರ್‌ಸ್ಟಾರ್‌ವರೆಗಿನ ಅವರ ಸಿನಿ ಪಯಣವು ಹೋರಾಟ, ಅಚಲ ನಿರ್ಧಾರ ಮತ್ತು ಯಶಸ್ಸಿನ ರೋಚಕ ಕಥೆಯಾಗಿದೆ.
ವಾಯುಪಡೆ ಅಧಿಕಾರಿಯಾಗುವ ಕನಸು
ಸಿನಿಮಾ ಕ್ಷೇತ್ರಕ್ಕೆ ಬರುವ ಮೊದಲು ಅಮಿತಾಬ್ ಬಚ್ಚನ್ ಅವರು ಸರಳ ವ್ಯವಹಾರ ಕಾರ್ಯನಿರ್ವಾಹಕರಾಗಿ ದುಡಿಯುತ್ತಿದ್ದರು. ಆರಂಭದಲ್ಲಿ ಎಂಜಿನಿಯರ್ ಅಥವಾ ವಾಯುಪಡೆ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದರು. ಆದರೆ, ವಿಧಿ ಅವರಿಗೆ ಬೇರೆಯದೇ ಮಾರ್ಗ ತೋರಿಸಿತ್ತು. ಪ್ರಯಾಗ್‌ರಾಜ್‌ನಿಂದ ನೈನಿತಾಲ್, ದೆಹಲಿ, ಕೋಲ್ಕತ್ತಾ ಮೂಲಕ ಸಾಗಿ ಅಂತಿಮವಾಗಿ ಕನಸಿನ ನಗರಿ ಮುಂಬೈ ತಲುಪಿದರು. ಅವರು ತಮ್ಮ ಕಾಲದ ಅತ್ಯಂತ ವಿದ್ಯಾವಂತ ನಟರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಕಟ್ಟುನಿಟ್ಟಿನ ಶಿಕ್ಷಣ
ಅಮಿತಾಬ್ ಬಚ್ಚನ್ ಅವರು 1942 ಅಕ್ಟೋಬರ್ 11ರಂದು ಪ್ರಖ್ಯಾತ ಕವಿ ಹರಿವಂಶ್ ರಾಯ್ ಬಚ್ಚನ್ ಮತ್ತು ತೇಜಿ ಬಚ್ಚನ್ ದಂಪತಿಗೆ ಜನಿಸಿದರು. ಪೋಷಕರ ಕಟ್ಟುನಿಟ್ಟಿನ ಶಿಸ್ತು ಮತ್ತು ಶಿಕ್ಷಣದ ಮಹತ್ವವನ್ನು ಅವರು ಆಳವಾಗಿ ಮೈಗೂಡಿಸಿಕೊಂಡರು. ತಾಯಿ ತೇಜಿ ಬಚ್ಚನ್ ಅವರು ಅಮಿತಾಬ್ ಅವರ ಶಿಕ್ಷಣದ ಬಗ್ಗೆ ಹೆಚ್ಚು ಕಟ್ಟುನಿಟ್ಟಾಗಿದ್ದರು.
ತಂದೆ ತಾಯಿಯೊಂದಿಗೆ ಅಮಿತಾಬ್ ಬಚ್ಚನ್
ಆರಂಭಿಕ ಶಿಕ್ಷಣದ ವಿವಾದ
ಅಮಿತಾಬ್ ಅವರ ಆರಂಭಿಕ ಶಿಕ್ಷಣಕ್ಕಾಗಿ ಅಲಹಾಬಾದ್‌ನ ಸೇಂಟ್ ಮೇರಿ ಕಾನ್ವೆಂಟ್ ಶಾಲೆಯನ್ನು ಆಯ್ಕೆ ಮಾಡುವಾಗ ಪೋಷಕರ ನಡುವೆ (ಸರ್ಕಾರಿ ಶಾಲೆಯಲ್ಲಿ ಓದಿದ ಹರಿವಂಶ್ ರಾಯ್ ಬಚ್ಚನ್ ಮತ್ತು ಕಾನ್ವೆಂಟ್ ಶಾಲೆಯಲ್ಲಿ ಓದಿದ ತೇಜಿ ಬಚ್ಚನ್) ಚರ್ಚೆ ನಡೆದಿತ್ತು. ಅಂತಿಮವಾಗಿ ತಾಯಿಯ ನಿರ್ಧಾರದಂತೆ ಸೇಂಟ್ ಮೇರಿ ಕಾನ್ವೆಂಟ್ ಶಾಲೆಗೆ ಸೇರಿಸಲಾಯಿತು. ಆಗ ಶಾಲಾ ಶುಲ್ಕ ತಿಂಗಳಿಗೆ 15 ರೂ.ಇತ್ತು, ಅದು ಆ ಕಾಲಕ್ಕೆ ಅಧಿಕ ಶುಲ್ಕವಾಗಿತ್ತು.
ತಂದೆ ತಾಯಿಯೊಂದಿಗೆ ಪುಟ್ಟ ಮಗು ಅಮಿತಾಬ್ ಬಚ್ಚನ್
ಕಾಲೇಜು ದಿನಗಳಲ್ಲಿ ಅರಳಿದ ನಾಟಕದ ಆಸಕ್ತಿ
ಅಲಹಾಬಾದ್‌ನಲ್ಲಿ ಪ್ರಾಥಮಿಕ ಶಿಕ್ಷಣದ ನಂತರ, ಅಮಿತಾಬ್ ಅವರು ನೈನಿತಾಲ್‌ನ ಶೆರ್‌ವುಡ್ ಕಾಲೇಜಿಗೆ ಸೇರಿದರು. ಅಲ್ಲಿಯೇ ಅವರಲ್ಲಿ ನಾಟಕದ ಆಸಕ್ತಿ ಮೊಳಕೆಯೊಡೆಯಿತು. ಇದರ ಪ್ರೇರಣೆ ತಾಯಿ ತೇಜಿ ಬಚ್ಚನ್ ಅವರಿಂದ ಬಂದಿದ್ದು, ಏಕೆಂದರೆ ಅವರಿಗೂ ಹಿಂದಿ ಸಿನಿಮಾಗಳಲ್ಲಿ ಆಸಕ್ತಿ ಇತ್ತು. ಬಚ್ಚನ್ ಅವರು ತಮ್ಮ ಮೊದಲ ವರ್ಷದಲ್ಲಿ ವಾರ್ಷಿಕ ನಾಟಕದಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿ ಗೆದ್ದರು. ನಂತರ ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನಿಂದ ಅವರು ವಿಜ್ಞಾನ ಪದವಿ (B.Sc.) ಪಡೆದರು.
ಮೊದಲ ಸಂಬಳ 400ರೂ.
ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಉದ್ಯೋಗ ಹುಡುಕುತ್ತಾ ಅಮಿತಾಬ್ ಅವರು ಕೋಲ್ಕತ್ತಾಗೆ ತೆರಳಿದರು. ಅಲ್ಲಿ ಕೋಲ್ಕತ್ತಾ ಮೂಲದ ಶಿಪ್ಪಿಂಗ್ ಸಂಸ್ಥೆಯಾದ ಬರ್ಡ್ ಮತ್ತು ಕಂಪನಿಯಲ್ಲಿ ಅವರು ವ್ಯವಹಾರ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು.
ಅವರ ಮೊದಲ ಮಾಸಿಕ ಸಂಬಳ ಕೇವಲ 400 ರೂಪಾಯಿಗಳು. ಈ ಅವಧಿಯಲ್ಲಿ ಅವರು 7-8 ಜನರೊಂದಿಗೆ ಸಣ್ಣ ಕೋಣೆಯಲ್ಲಿ ವಾಸಿಸುತ್ತಿದ್ದರು. ಹಾಸಿಗೆಗಳ ಕೊರತೆಯಿಂದ ನೆಲದ ಮೇಲೆ ಮಲಗಬೇಕಾಗುತ್ತಿತ್ತು ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ಆ್ಯಂಗ್ರಿಮ್ಯಾನ್
ಬಾಲಿವುಡ್ ಪ್ರವೇಶ
ನಟನಾಗುವ ಬಯಕೆಯಿಂದ ಅವರು ತಮ್ಮ ಕೆಲಸವನ್ನು ತೊರೆದು ಮುಂಬೈಗೆ ಮರಳಿದರು. ಆಲ್ ಇಂಡಿಯಾ ರೇಡಿಯೊದಲ್ಲಿ ಸುದ್ದಿ ಅನೌನ್ಸರ್ ಹುದ್ದೆಗೆ ಅವರ ಧ್ವನಿ ಅನರ್ಹಗೊಂಡಿತು. 1969 ರಲ್ಲಿ, ಅವರು "ಭೂವನ್ ಶೋಮ್" ಚಿತ್ರಕ್ಕೆ ಧ್ವನಿ ನೀಡಿದರು. ಅದೇ ವರ್ಷ, ಅವರು "ಸಾತ್ ಹಿಂದೂಸ್ತಾನಿ" ಚಿತ್ರದೊಂದಿಗೆ ತಮ್ಮ ನಟನಾ ಪಯಣವನ್ನು ಪ್ರಾರಂಭಿಸಿದರು. 1971 ರಲ್ಲಿ ಬಿಡುಗಡೆಯಾದ 'ಆನಂದ್' ಚಿತ್ರದಲ್ಲಿನ ಪಾತ್ರಕ್ಕೆ ಅವರಿಗೆ ಮೊದಲ ಫಿಲ್ಮ್‌ಫೇರ್ ಪ್ರಶಸ್ತಿ ದೊರಕಿತು.
ಬಚ್ಚನ್ ಅವರ ವೃತ್ತಿಜೀವನದಲ್ಲಿ ದೊಡ್ಡ ತಿರುವು ನೀಡಿದ್ದು 1973 ರ 'ಜಂಜೀರ್' ಚಿತ್ರ. ಈ ಚಿತ್ರವು ಅವರಿಗೆ 'ಆಂಗ್ರಿ ಯಂಗ್ ಮ್ಯಾನ್' ಎಂಬ ಹೊಸ ಬಿರುದು ತಂದುಕೊಟ್ಟಿತು. ನಂತರ ಬಂದ 'ದೀವಾರ್' ಮತ್ತು ಐತಿಹಾಸಿಕ 'ಶೋಲೆ' (1975) ಚಿತ್ರಗಳ ಮೂಲಕ ಭಾರತದ ಮೊದಲ ಆಕ್ಷನ್ ಹೀರೋ ಆಗಿ ಹೊರಹೊಮ್ಮಿದರು. ಈ ದಶಕದಲ್ಲಿ ಅವರ 'ಡಾನ್', 'ಅಮರ್ ಅಕ್ಬರ್ ಆಂಟೋನಿ' ಯಂತಹ ಹಿಟ್ ಚಿತ್ರಗಳು ಅವರ ಸ್ಥಾನ ಭದ್ರಗೊಳಿಸಿದವು.
1980 ರ ದಶಕದಲ್ಲಿ ಬಚ್ಚನ್ ಅವರು 'ಕಾಳಿಯಾ', 'ಶಕ್ತಿ', 'ನಮಕ್ ಹಲಾಲ್' ಯಂತಹ ಯಶಸ್ವಿ ಚಿತ್ರಗಳನ್ನು ನೀಡಿದರು. ಆದರೆ, 'ಕೂಲಿ' (1983) ಚಿತ್ರದ ಚಿತ್ರೀಕರಣದ ವೇಳೆ ಸಂಭವಿಸಿದ ಗಂಭೀರ ಅಪಘಾತವು ಅವರ ಪಯಣದಲ್ಲಿ ದೊಡ್ಡ ಸವಾಲನ್ನು ತಂದೊಡ್ಡಿತು.
ರಾಜಕೀಯದಲ್ಲಿ ಅಲ್ಪಾವಧಿಯ ಪ್ರಯಾಣದ ನಂತರ, ಅವರು ಮತ್ತೆ ಚಿತ್ರರಂಗಕ್ಕೆ ಮರಳಿದರು. ನಂತರದ ದಿನಗಳಲ್ಲಿ ಅವರ ನಿರ್ಮಾಣ ಸಂಸ್ಥೆಯಾದ ಅಮಿತಾಬ್ ಬಚ್ಚನ್ ಕಾರ್ಪೋರೇಷನ್ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾದರು.
ಅಮಿತಾಬ್ ನಿವಾಸ ಜಲ್ಸಾದ ಹೊರಗೆ ಜಮಾಯಿಸಿದ ಅಭಿಮಾನಿಗಳು
ಕಿರುತೆರೆಯ ಮೂಲಕ ಎರಡನೇ ಇನ್ನಿಂಗ್ಸ್
2000 ರಲ್ಲಿ ಆರಂಭವಾದ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್‌ಪತಿ' (KBC) ಯಶಸ್ವಿ ನಿರೂಪಣೆಯ ಮೂಲಕ ಅವರು ಮತ್ತೆ ಜನಮನಕ್ಕೆ ಬಂದರು. ಇದು ಅವರ ವೃತ್ತಿಜೀವನಕ್ಕೆ ಎರಡನೇ ಬೃಹತ್ ತಿರುವು ನೀಡಿತು. ಈ ಅವಧಿಯಲ್ಲಿ ಅವರು 'ಮೊಹಬ್ಬತೇಂ', 'ಬ್ಲಾಕ್', 'ಬಾಗ್ಬಾನ್', 'ಪಿಕು', 'ಪಿಂಕ್' ಮುಂತಾದ ಚಿತ್ರಗಳಲ್ಲಿ ಸವಾಲಿನ ಮತ್ತು ಪ್ರಬುದ್ಧ ಪಾತ್ರಗಳಲ್ಲಿ ನಟಿಸಿ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದರು.
80ರ ಇಳಿವಯಸ್ಸಿನಲ್ಲೂ ಅವರು 'ಬ್ರಹ್ಮಾಸ್ತ್ರ', 'ಕಲ್ಕಿ 2898 ಎಡಿ' ಯಂತಹ ದೊಡ್ಡ ಬಜೆಟ್ ಚಿತ್ರಗಳಲ್ಲಿ ಕೆಲಸ ಮಾಡುತ್ತಾ ಸಕ್ರಿಯರಾಗಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಅತ್ಯುತ್ತಮ ಕೆಲಸಕ್ಕಾಗಿ ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಹದಿನಾರು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಮಿತಾಬ್ ಬಚ್ಚನ್ ಅವರಿಗೆ 1984 ರಲ್ಲಿ ಪದ್ಮಶ್ರೀ, 2001 ರಲ್ಲಿ ಪದ್ಮಭೂಷಣ, 2015 ರಲ್ಲಿ ಪದ್ಮವಿಭೂಷಣ ಮತ್ತು 2018 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.