
ಕೊರಗಜ್ಜಸಿನಿಮಾದ ಗುಳಿಗಾ...ಗುಳಿಗಾ... ಹಾಡು ಇತ್ತೀಚೆಗೆ ಬಿಡುಗಡೆಗೊಂಡಿದೆ.
ಸಾಮಾಜಿಕ ಮಾಧ್ಯಮದ ವಿವಾದಗಳ ನಡುವೆ ಕೊರಗಜ್ಜ ಸಿನಿಮಾದ 'ಗುಳಿಗಾ...ಗುಳಿಗಾ' ಹಾಡಿಗೆ ದೈವದ ಒಪ್ಪಿಗೆ
ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ವಿಕೃತ ಮನಸ್ಸಿನಿಂದ ಚಿತ್ರತಂಡಕ್ಕೆ ಶಾಪ ಹಾಕುವಂತಹ ಅಥವಾ ಕೆಟ್ಟ ಕಮೆಂಟ್‌ಗಳನ್ನು ಹಾಕುತ್ತಿದ್ದರೂ, ದೈವದ ಒಪ್ಪಿಗೆ ಸಿಕ್ಕಿರುವ ಈ ಸಕಾರಾತ್ಮಕ ವಿಚಾರದಿಂದ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿದೆ.
ಬಹುನಿರೀಕ್ಷಿತ 'ಕೊರಗಜ್ಜ' ಚಲನಚಿತ್ರದ 'ಗುಳಿಗಾ...ಗುಳಿಗಾ...' ಹಾಡು ಬಿಡುಗಡೆಯಾದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ಹಾಡಿನ ಸಂಗೀತ ಮತ್ತು ಸಾಹಿತ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಮತ್ತೊಂದು ಕಡೆ ಉಗ್ರ ರೂಪದ ಗುಳಿಗ ದೈವದ ಕುರಿತಾದ ಹಾಡು ದೈವದ ಕೋಪಕ್ಕೆ ಕಾರಣವಾಗಿದೆಯೇ ಎಂಬ ವಿರೋಧಾತ್ಮಕ ಅಭಿಪ್ರಾಯಗಳೂ ಕೇಳಿಬಂದಿದ್ದವು. ಈ ವಿವಾದಗಳ ನಡುವೆ, ದೈವಕ್ಕೆ ಅಪಚಾರವಾಗಿರಬಹುದೇ ಎಂಬ ಸಂಶಯದಿಂದ ಚಿತ್ರತಂಡವು ಜ್ಯೋತಿಷ್ಯದ ಮೊರೆ ಹೋಗಿತ್ತು.
ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಅವರು ಮಂಗಳೂರು ಮೂಲದ ಪ್ರಸಿದ್ಧ ಜ್ಯೋತಿಷ್ಯ ವಿದ್ವಾನ್ ವರುಣ್ ಭಟ್ ಅವರಲ್ಲಿ ಈ ಕುರಿತು ವಿಚಾರಿಸಿದಾಗ 'ಗುಳಿಗಾ...ಗುಳಿಗಾ...' ಹಾಡಿನಿಂದ ಗುಳಿಗ ದೈವಕ್ಕೆ ಯಾವುದೇ ಕ್ರೋಧ ಉಂಟಾಗಿಲ್ಲ, ಬದಲಾಗಿ ಸಂಪೂರ್ಣ ತೃಪ್ತಿ ಮತ್ತು ಸಂತೋಷವಿದೆ ಎಂದು ಅವರು ತಿಳಿಸಿದ್ದಾರೆ. ಇದರಿಂದಾಗಿ 'ಕೊರಗಜ್ಜ' ಚಿತ್ರತಂಡವು ನಿಟ್ಟುಸಿರು ಬಿಟ್ಟು ಹರ್ಷಗೊಂಡಿದೆ. ಅದರಲ್ಲೂ ನಿರ್ಮಾಪಕರಾದ ತ್ರಿವಿಕ್ರಮ ಸಪಲ್ಯ ಹಾಗೂ ವಿದ್ಯಾಧರ್ ಶೆಟ್ಟಿ ಅವರು ದೈವದ ಅನುಗ್ರಹದ ಕುರಿತು ಖಚಿತತೆ ದೊರೆತಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ವಿಕೃತ ಮನಸ್ಸಿನಿಂದ ಚಿತ್ರತಂಡಕ್ಕೆ ಶಾಪ ಹಾಕುವಂತಹ ಅಥವಾ ಕೆಟ್ಟ ಕಮೆಂಟ್‌ಗಳನ್ನು ಹಾಕುತ್ತಿದ್ದರೂ, ದೈವದ ಒಪ್ಪಿಗೆ ಸಿಕ್ಕಿರುವ ಈ ಸಕಾರಾತ್ಮಕ ವಿಚಾರದಿಂದ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿದೆ. 'ಕೊರಗಜ್ಜ' ಚಿತ್ರವು ಜನವರಿಯಲ್ಲಿ ಬಿಡುಗಡೆಗೊಳ್ಳುವ ತಯಾರಿಯಲ್ಲಿದ್ದು, ಚಿತ್ರದ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ನಿರ್ಮಾಪಕರು ಈ ಮೂಲಕ ಮನವಿ ಮಾಡಿದ್ದಾರೆ.
ಕರಾವಳಿಯ ದೈವಾರಾಧನೆಯ ಕಥಾನಕವನ್ನೇ ಮೈಗೂಡಿಸಿಕೊಂಡಿರುವ ಬಹುನಿರೀಕ್ಷಿತ 'ಕೊರಗಜ್ಜ' ಸಿನಿಮಾ ಈಗಾಗಲೇ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಂಚಲನ ಮೂಡಿಸಿದೆ. ಈ ಕುತೂಹಲಕ್ಕೆ ಮತ್ತಷ್ಟು ಕಿಚ್ಚು ಹೊತ್ತಿಸಲು, ಚಿತ್ರದ ಹೈಲೈಟ್ ಎಂದೇ ಹೇಳಲಾಗುತ್ತಿರುವ ರಕ್ತದಾಹಿ ದೈವ 'ಗುಳಿಗ'ನ ಕುರಿತಾದ ವಿಶೇಷ ಹಾಡು ಜೀ ಮ್ಯೂಸಿಕ್ ಮೂಲಕ ಬಿಡುಗಡೆಗೊಂಡಿತ್ತು.
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿಸುಂದರ್ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಈ ಹಾಡಿಗೆ, ನಿರ್ದೇಶಕ ಸುಧೀರ್ ಅತ್ತಾವರ್ ಅವರೇ ಸಾಹಿತ್ಯ ಬರೆದು ಧ್ವನಿಯಾಗಿದ್ದಾರೆ. ವಿಶೇಷವೆಂದರೆ, ಬಾಲಿವುಡ್ ನ ಹಿರಿಯ ಗಾಯಕ ಜಾವೇದ್ ಆಲಿ ಈ ಹಾಡನ್ನು ಹಾಡಿದ್ದಾರೆ. ಈ ಹಾಡಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧ ಚರ್ಚೆಗಳು ನಡೆಯುತ್ತಿವೆ.
ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿಯ , ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಕೊರಗಜ್ಜ ಸಿನಿಮಾ ಜನವರಿ ಬಿಡುಗಡೆಗೊಳ್ಳುವ ನಿರೀಕ್ಷೆಯಲ್ಲಿದೆ.

