‘ಅಮೆರಿಕಾ ಅಮೆರಿಕಾ 2 ಸಿನಿಮಾ ಸೆಪ್ಟೆಂಬರ್ 11ಕ್ಕೆ ಬಿಡುಗಡೆ; ‘ರನ್ ರನ್’ ಸಾಂಗ್‌ ರಿಲೀಸ್
x

‘ಅಮೆರಿಕಾ ಅಮೆರಿಕಾ 2’ ಚಿತ್ರದ ಮೊದಲ ಸಿಂಗಲ್ ‘ರನ್ ರನ್’ ಬಿಡುಗಡೆಯಾಗಿದೆ. ನಾಗತಿಹಳ್ಳಿ

‘ಅಮೆರಿಕಾ ಅಮೆರಿಕಾ 2 ಸಿನಿಮಾ ಸೆಪ್ಟೆಂಬರ್ 11ಕ್ಕೆ ಬಿಡುಗಡೆ; ‘ರನ್ ರನ್’ ಸಾಂಗ್‌ ರಿಲೀಸ್

‘ಅಮೆರಿಕಾ ಅಮೆರಿಕಾ 2’ ಸಿನಿಮಾದಲ್ಲಿ ಪೃಥ್ವಿ ಅಂಬಾರ್‌, ನಿರೂಪ್ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


Click the Play button to hear this message in audio format

1997ರಲ್ಲಿ ಬಿಡುಗಡೆಯಾಗಿ ಕನ್ನಡಿಗರ ಮನಗೆದ್ದ ‘ಅಮೆರಿಕಾ ಅಮೆರಿಕಾ’ ಸಿನಿಮಾದ ಬಹುನಿರೀಕ್ಷಿತ ಸೀಕ್ವೆಲ್ ‘ಅಮೆರಿಕಾ ಅಮೆರಿಕಾ 2’ ಚಿತ್ರತಂಡ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ‘ರನ್ ರನ್’ ಎಂಬ ಶೀರ್ಷಿಕೆಯ ಈ ಹಾಡಿನ ಮೂಲಕ ಸಿನಿಮಾದ ಸಂಗೀತದ ಮೊದಲ ಝಲಕ್‌ನ್ನು ಪ್ರೇಕ್ಷಕರಿಗೆ ಪರಿಚಯಿಸಲಾಗಿದೆ. ಇದೇ ವೇಳೆ ಚಿತ್ರ ಸೆಪ್ಟೆಂಬರ್ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

‘ರನ್ ರನ್’ ಹಾಡಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾಹಿತ್ಯ ಬರೆದಿದ್ದು, ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ಖ್ಯಾತ ಗಾಯಕ ಶಂಕರ್ ಮಹಾದೇವನ್ ಹಾಗೂ ಶ್ರೇಯಾ ಘೋಷಾಲ್ ಹಾಡಿಗೆ ಧ್ವನಿಯಾಗಿದ್ದಾರೆ. ಖ್ಯಾತ ಬರಹಗಾರ ಹಾಗೂ ಸಂಪಾದಕ ಜೋಗಿ ಅವರು ವಿಶೇಷ ಕಾರ್ಯಕ್ರಮದಲ್ಲಿ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಮೂರು ದಶಕಗಳ ಸಂಗೀತ ಪಯಣಕ್ಕೆ ನೆನಪುಗಳ ಮೆಲುಕು

ಹಾಡಿನ ಬಿಡುಗಡೆ ಕಾರ್ಯಕ್ರಮ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಮನೋ ಮೂರ್ತಿ ಅವರ ಸುಮಾರು ಮೂರು ದಶಕಗಳ ಒಡನಾಟದ ನೆನಪುಗಳಿಗೂ ಸಾಕ್ಷಿಯಾಯಿತು. ಈ ಜೋಡಿ ಕನ್ನಡ ಚಿತ್ರರಂಗಕ್ಕೆ ನೀಡಿರುವ ಹಲವು ಜನಪ್ರಿಯ ಹಾಡುಗಳ ಕುರಿತು ಕಾರ್ಯಕ್ರಮದಲ್ಲಿ ನೆನಪುಗಳನ್ನು ಹಂಚಿಕೊಂಡರು.

‘ಅಮೆರಿಕಾ ಅಮೆರಿಕಾ’ದಿಂದ ಆರಂಭವಾದ ಜೋಡಿಯ ಪಯಣ

‘ಅಮೆರಿಕಾ ಅಮೆರಿಕಾ’ ಸಿನಿಮಾದ ಮೂಲಕ ಮನೋ ಮೂರ್ತಿ ಚಿತ್ರ ಸಂಗೀತ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ‘ನೂರು ಜನ್ಮಕು’, ‘ಯಾವ ಮೋಹನ ಮುರಳಿ ಕರೆಯಿತು’ ಹಾಗೂ ‘ಹೇಗಿದೆ ನಮ್ಮ ದೇಶ’ ಸೇರಿದಂತೆ ಹಲವು ಜನಪ್ರಿಯ ಹಾಡುಗಳು ಮೂಡಿಬಂದಿದ್ದವು.

ಬಳಿಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಮನೋ ಮೂರ್ತಿ ಅವರು ‘ಅಮೃತಧಾರೆ’, ‘ನನ್ನ ಪ್ರೀತಿಯ ಹುಡುಗಿ’, ‘ಮಾತಾಡ್ ಮಾತಾಡು ಮಲ್ಲಿಗೆ’ ಹಾಗೂ ‘ಒಲವೇ ಜೀವನ ಲೆಕ್ಕಾಚಾರ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ‘ಅಮೆರಿಕಾ ಅಮೆರಿಕಾ 2’ ಇವರಿಬ್ಬರ ಕಾಂಬಿನೇಷನ್‌ನ ಏಳನೇ ಸಿನಿಮಾವಾಗಿದೆ.

ಪೃಥ್ವಿ ಅಂಬಾರ್‌, ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ ನಟನೆ

‘ಅಮೆರಿಕಾ ಅಮೆರಿಕಾ 2’ ಸಿನಿಮಾದಲ್ಲಿ ಪೃಥ್ವಿ ಅಂಬಾರ್‌, ನಿರೂಪ್ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಚಿತ್ರವನ್ನು ವಿತರಿಸಲಿದೆ. ಸೆಪ್ಟೆಂಬರ್ 11ರಂದು ಚಿತ್ರಮಂದಿರಗಳಿಗೆ ಬರಲಿರುವ ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಕನ್ನಡಿಗರ ಜೊತೆಗೆ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿರುವ ವಿದೇಶಿ ರಾಷ್ಟ್ರಗಳಲ್ಲೂ ಬಿಡುಗಡೆಯಾಗುವ ನಿರೀಕ್ಷೆಯಿದೆ.

Read More
Next Story