ಪ್ರಾರಂಭವಾಗಿ 20 ವರ್ಷಗಳ ನಂತರ ಇಂದು ಬಿಡುಗಡೆ ಆಗುತ್ತಿದೆ ಅಜಯ್ ದೇವಗನ್ ಚಿತ್ರ
ಅಜಯ್ ದೇವಗನ್ ಅಭಿನಯದ ʼಸಿಂಗಂ ಅಗೇನ್ʼ ಚಿತ್ರವು ನವೆಂಬರ್ ೧ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿ, 20 ದಿನಗಳಲ್ಲಿ 250 ಕೋಟಿ ರೂ. ಗಳಿಕೆ ಮಾಡಿದೆ. ಹೀಗಿರುವಾಗಲೇ, ಅವರ ಇನ್ನೊಂದು ಚಿತ್ರವು ಇಂದು ಬಿಡುಗಡೆಯಾಗುತ್ತಿದೆ. ಹೆಸರು ʼನಾಮ್ʼ.
ಅಜಯ್ ದೇವಗನ್ ಅಭಿನಯದ ʼಸಿಂಗಂ ಅಗೇನ್ʼ ಚಿತ್ರವು ನವೆಂಬರ್ 1ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿ, 20 ದಿನಗಳಲ್ಲಿ 250 ಕೋಟಿ ರೂ. ಗಳಿಕೆ ಮಾಡಿದೆ. ಹೀಗಿರುವಾಗಲೇ, ಅವರ ಇನ್ನೊಂದು ಚಿತ್ರವು ಇಂದು ಬಿಡುಗಡೆಯಾಗುತ್ತಿದೆ. ಹೆಸರು ʼನಾಮ್ʼ.
ʼನಾಮ್ʼ ಎಂದರೆ ಮಹೇಶ್ ಭಟ್ ನಿರ್ದೇಶನದ ಮತ್ತು ಸಂಜಯ್ ದತ್ ಅಭಿನಯದ ಚಿತ್ರವು ನೆನಪಿಗೆ ಬಂದೀತು. ಆದರೆ, ಇದು ಅದಲ್ಲ. ಅದೇ ಹೆಸರಿನ ಇನ್ನೊಂದು ಚಿತ್ರ. ಈ ಚಿತ್ರವನ್ನು ಅನೀಸ್ ಬಜ್ಮಿ ನಿರ್ದೇಶನ ಮಾಡಿದ್ದು, ಇದು ಅನೀಸ್ ಮತ್ತು ಅಜಯ್ ದೇವಗನ್ ಅವರು ಜೊತೆಯಾಗಿ ಕೆಲಸ ಮಾಡಿರುವ ನಾಲ್ಕನೆಯ ಚಿತ್ರವಾಗಿದೆ. ಇದಕ್ಕೂ ಮೊದಲು ಅಜಯ್ ದೇವಗನ್ ಅವನ್ನು ʼಪ್ಯಾರ್ ತೋ ಹೋನಾ ಹೀ ಥಾʼ, ʼಹಲ್ಚಲ್ʼ ಮತ್ತು ʼದೀವಾನಗಿʼ ಚಿತ್ರಗಳಲ್ಲಿ ನಿರ್ದೇಶಿಸಿದ್ದರು ಅನೀಸ್. ಇದೀಗ ʼಪಾನಿʼ ಎಂಬ ಚಿತ್ರದ ಮೂಲಕ ಇಬ್ಬರೂ ವಾಪಸ್ಸಾಗುತ್ತಿದ್ದಾರೆ.
ವಿಶೇಷವೆಂದರೆ, ಇದು 20 ವರ್ಷಗಳ ಹಿಂದಿನ ಚಿತ್ರ. 2004ರಲ್ಲಿ ಸೆಟ್ಟೇರಿದ ಚಿತ್ರವಿದು. ಆದರೆ, ಕಾರಣಾಂತರಗಳಿಂದ ತಡವಾಗಿ ಇದೀಗ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಅವರಿಗೆ ನಾಯಕಿಯಾಗಿ ಭೂಮಿಕಾ ಚಾವ್ಲಾ ಮತ್ತು ಸಮೀರಾ ರೆಡ್ಡಿ ನಟಿಸಿದ್ದರು. ಅಜಯ್ ಇನ್ನೂ ನಾಯಕನಾಗಿ ನಟಿಸುವುದು ಮುಂದುವರೆದರೆ, ಇಬ್ಬರೂ ನಾಯಕಿಯು ರಿಟೈರ್ ಆಗಿಯೇ ಹಲವು ವರ್ಷಗಳಾಗಿವೆ. ಇಂಥದ್ದೊಂದು ಚಿತ್ರವನ್ನು ಮಾಡಿದ್ದು ಚಿತ್ರತಂಡದವರಿಗೇ ನೆನಪಿಲ್ಲ. ಹಾಗಿರುವಾಗಲೇ, ಡಬ್ಬದಲ್ಲಿದ್ದ ಚಿತ್ರವನ್ನು ಈಗ ಪುನಃ ಬಿಡುಗಡೆ ಮಾಡಲಾಗುತ್ತಿದೆ.
ಬಾಲಿವುಡ್‌ನಲ್ಲಿ ಹೀಗೆ ಹಳೆಯ ಚಿತ್ರಗಳು, ಪ್ರಾರಂಭವಾಗಿ ಅದೆಷ್ಟೋ ವರ್ಷಗಳ ನಂತರ ಬಿಡುಗಡೆ ಆಗುತ್ತಿರುವುದು ಹೊಸ ವಿಷಯವೇನಲ್ಲ. ʼಮೊಘಲ್-ಇ-ಅಜಾಮ್ ಸೇರಿದಂತೆ ಹಲವು ಚಿತ್ರಗಳು ಪ್ರಾರಂಭವಾಗಿ, ಹಲವು ವರ್ಷಗಳ ನಂತರ ಬಿಡುಗಡೆ ಆಗಿದ್ದಿದೆ. ಈ ಪೈಕಿ ಜಾಯ್ ಮುಖರ್ಜಿ, ವಹೀದಾ ರೆಹಮಾನ್, ಅಶೋಕ್ ಕುಮಾರ್, ಕಿಶೋರ್ ಕುಮಾರ್ ಮುಂತಾದವರು ನಟಿಸಿದ್ದ ʼಲವ್ ಇನ್ ಬಾಂಬೆʼ ಚಿತ್ರವು 1971ರಲ್ಲಿ ಪ್ರಾರಂಭವಾಗಿತ್ತು. ಆದರೆ, ಬಿಡುಗಡೆಯಾಗಿದ್ದು ಮಾತ್ರ ೨೦೧೩ರಲ್ಲಿ. ಸುಧೀರ್ಘ 42 ವರ್ಷಗಳ ನಂತರ ಈ ಚಿತ್ರ ಬಿಡುಗಡೆಯಾಗಿತ್ತು. ಚಿತ್ರದ ನಾಯಕ ಮತ್ತು ನಿರ್ದೇಶಕ ಜಾಯ್ ಮುಖರ್ಜಿ 2012ರಲ್ಲಿ ನಿಧನರಾದ ಮೇಲೆ ಈ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಅಜಯ್ ದೇವಗನ್ ಅಭಿನಯದ ʼನಾಮ್ʼ ಚಿತ್ರಕ್ಕೆ ಇಷ್ಟೊಂದು ಇತಿಹಾಸವಿಲ್ಲದಿದ್ದರೂ, ಪ್ರಾರಂಭವಾಗಿ 20 ವರ್ಷಗಳ ನಂತರ ಬಿಡುಗಡೆಯಾಗುತ್ತಿದೆ.
ʼಸಿಂಗಂ ಅಗೇನ್ʼ ಚಿತ್ರವು ಪ್ರೇಕ್ಷಕರ ವಲಯದಲ್ಲಿ ದೊಡ್ಡ ಹಿಟ್ ಅಲ್ಲದಿದ್ದರೂ, ಒಂದು ಮಟ್ಟಿಗೆ ಹೆಸರು ಮಾಡಿತ್ತು. ಹೀಗಿರುವಾಗಲೇ, ಅಜಯ್ ದೇವಗನ್ ಅಭಿನಯದ ೨೦ ವರ್ಷಗಳ ಹಿಂದೆ ತಯಾರಾದ ಚಿತ್ರವೊಂದು ಇದೀಗ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಪ್ರೇಕ್ಷಕರು ಈ ಚಿತ್ರವನ್ನು ಹೇಗೆ ಸ್ವೀಕರಿಸಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ.