Kannada Cinema Review : ಕೊಲೆಯಲ್ಲ, ಕೊಲೆಯ ಹಿಂದಿನ ಮನಸ್ಥಿತಿಯ ಸುತ್ತ
x

Kannada Cinema Review : ಕೊಲೆಯಲ್ಲ, ಕೊಲೆಯ ಹಿಂದಿನ ಮನಸ್ಥಿತಿಯ ಸುತ್ತ

ಚಿತ್ರದಲ್ಲಿ ಎರಡು ಕಾಲಘಟ್ಟಗಳಿವೆ. ಹಲವು ಪದರಗಳಿವೆ. ಒಂದು ದೊಡ್ಡ ಪರಿವರ್ತನೆ ಇದೆ. ಒಂದು ಪ್ರೇಮಕಥೆ ಇದೆ. ಮಲೆನಾಡಿನ ಜನಜೀವನವಿದೆ. ಪಾಯಸ, ಚಿಕ್ಕನ್ ಸಾರು, ಕೋಳಿ, ಆನೆ, ವಿಷಾಧ, ಭಯ ಎಲ್ಲವೂ ಇದೆ. ಇಷ್ಟೊಂದು ಚುಕ್ಕೆಗಳೇನೋ ಇವೆ. ಅವೆಲ್ಲವನ್ನೂ ಸೇರಿಸುವುದಕ್ಕೆ ಜನಾರ್ಧನ್‍ ಕಷ್ಟಪಟ್ಟಿದ್ದಾರೆ.


ಚಿತ್ರ ವಿಮರ್ಶೆ: ಕೊಲೆಯಲ್ಲ, ಕೊಲೆಯ ಹಿಂದಿನ ಮನಸ್ಥಿತಿಯ ಸುತ್ತ

ಚಿತ್ರ: ಅಜ್ಞಾತವಾಸಿ

ತಾರಾಗಣ: ರಂಗಾಯಣ ರಘು, ರವಿಶಂಕರ್‍ ಗೌಡ, ಪಾವನಾ ಗೌಡ, ಸಿದ್ದು ಮೂಲಿಮನಿ, ಶರತ್‍ ಲೋಹಿತಾಶ್ವ ಮುಂತಾದವರು

ನಿರ್ದೇಶನ: ಜನಾರ್ಧನ್‍ ಚಿಕ್ಕಣ್ಣ

ನಿರ್ಮಾಣ: ಹೇಮಂತ್ ರಾವ್‍

‘ಅಜ್ಞಾತವಾಸಿ’ ಘೋಷಣೆಯಾದಾಗಿನಿಂದ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟುಹಾಕಿದ ಚಿತ್ರ. ಪ್ರಮುಖವಾಗಿ, ನಿರ್ದೇಶಕ ಹೇಮಂತ್ ರಾವ್‍ ಈ ಚಿತ್ರವನ್ನು ನಿರ್ಮಿಸಿದರೆ, ‘ಗುಳ್ಟೂ’ ಖ್ಯಾತಿಯ ಜನಾರ್ಧನ್‍ ಚಿಕ್ಕಣ್ಣ ನಿರ್ದೇಶನ ಮಾಡಿದ್ದಾರೆ. ಮೇಲಾಗಿ ರಂಗಾಯಣ ರಘು ಶೀರ್ಷಿಕೆಯ ಪಾತ್ರ ಮಾಡಿದ್ದಾರೆ. ಇದೆಲ್ಲದರಿಂದ ಚಿತ್ರದ ಬಗ್ಗೆ ಕನ್ನಡ ಪ್ರೇಕ್ಷಕರಲ್ಲಿ ಕುತೂಹಲ ಮತ್ತು ನಿರೀಕ್ಷೆ ಸ್ವಲ್ಪ ಜಾಸ್ತಿಯೇ ಇತ್ತು.

ಮಲೆನಾಡ ಸಣ್ಣ ಗ್ರಾಮದಲ್ಲಾಗುವ ಕೆಲವು ಘಟನೆಗಳ ಸುತ್ತ ‘ಅಜ್ಞಾತವಾಸಿ’ ಸುತ್ತುತ್ತದೆ. ಅಲ್ಲಿನ ಪೊಲೀಸ್‍ ಸ್ಟೇಶನ್‍ ಶುರುವಾಗಿ ಎರಡು ದಶಕಗಳಾದರೂ, ಒಂದು ಸರಿಯಾದ ಕೇಸ್‍ ಆಗಿರುವುದಿಲ್ಲ. ಅಲ್ಲಿನ ಪೊಲೀಸರು ತಮ್ಮ ಕೆಲಸವನ್ನೇ ಮರೆತು ಹೋಗಿರುತ್ತಾರೆ. ಹೀಗಿರುವಾಗಲೇ, ಆ ಊರಿನ ಜಮೀನ್ದಾರ ಶಂಕರಪ್ಪ (ಶರತ್‍ ಲೋಹಿತಾಶ್ವ) ನಿಧನರಾಗುತ್ತಾರೆ. ಎಲ್ಲರೂ ಅದೊಂದು ಸಹಜ ಸಾವು ಎಂದು ನಂಬಿರುವಾಗಲೇ, ಪೊಲೀಸ್‍ ಅಧಿಕಾರಿ (ರಂಗಾಯಣ ರಘು) ಅದು ಕೊಲೆ ಎಂದು ಘೋಷಿಸುತ್ತಾರೆ. ಅದು ಕೊಲೆ ಅಂತ ಅವರಿಗೆ ಅನಿಸಿದ್ದು ಯಾಕೆ? ಆ ಕೊಲೆಯನ್ನು ಮಾಡಿದವರು ಯಾರು? ಈ ಅಜ್ಞಾತವಾಸಿ ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ‘ಅಜ್ಞಾತವಾಸಿ’ ನೋಡಬಹುದು.

ಕಥೆ ಕೇಳುತ್ತಿದ್ದಂತೆಯೇ ಆಸಕ್ತಿ ಮತ್ತು ಕುತೂಹಲ ಮೂಡಿಸುತ್ತದೆ. ಅದಕ್ಕೊಂದು ಒಳ್ಳೆಯ ಚಿತ್ರಕಥೆಯೂ ಸಿಕ್ಕಿದ್ದರೆ, ಕನ್ನಡದಲ್ಲಿ ಬಿಡುಗಡೆಯಾದ ಅಪರೂಪದ ಮಿಸ್ಟ್ರಿ ಚಿತ್ರಗಳ ಸಾಲಿಗೆ ‘ಅಜ್ಞಾತವಾಸಿ’ ಸಹ ಸೇರಿರುತ್ತಿತ್ತು. ಚಿತ್ರದಲ್ಲಿ ಎರಡು ಕಾಲಘಟ್ಟಗಳಿವೆ. ಹಲವು ಪದರಗಳಿವೆ. ಒಂದು ದೊಡ್ಡ ಪರಿವರ್ತನೆ ಇದೆ. ಒಂದು ಪ್ರೇಮಕಥೆ ಇದೆ. ಮಲೆನಾಡಿನ ಜನಜೀವನವಿದೆ. ಪಾಯಸ, ಚಿಕ್ಕನ್ ಸಾರು, ಕೋಳಿ, ಆನೆ, ವಿಷಾಧ, ಭಯ ಎಲ್ಲವೂ ಇದೆ. ಇಷ್ಟೊಂದು ಚುಕ್ಕೆಗಳೇನೋ ಇವೆ. ಅವೆಲ್ಲವನ್ನೂ ಸೇರಿಸುವುದಕ್ಕೆ ಜನಾರ್ಧನ್‍ ಕಷ್ಟಪಟ್ಟಿದ್ದಾರೆ.

ಇಲ್ಲಿ ಮರ್ಡರ್‍ ಮಿಸ್ಟ್ರಿ ಎಂದರೆ, ಮಾಮೂಲಿ ಸರಣಿ ಕೊಲೆಗಳ ಚಿತ್ರವಲ್ಲ. ಸುಮ್ಮನೆ ಕೊಲೆಗಳ ಮೇಲೆ ಕೊಲೆಗಳು ಆಗುವುದಿಲ್ಲ. ಮಾಮೂಲಿ ರೋಚಕ ಶೈಲಿಯ ಮರ್ಡರ್‍ ಮಿಸ್ಟ್ರಿಯನ್ನು ಬಿಟ್ಟು, ಬೇರೆ ತರಹವೇ ನಿರೂಪಿಸುತ್ತಾ ಹೋಗಿದ್ದರೆ ಜನಾರ್ಧನ್‍ ಚಿಕ್ಕಣ್ಣ. ಇಲ್ಲಿ ಯಾರು ಕೊಲೆ ಮಾಡಿದ್ದು ಎಂಬುದಕ್ಕಿಂತ, ಕೊಲೆ ಮಾಡುವಲ್ಲಿನ ಹಿಂದಿನ ಮನಸ್ಥಿತಿ ಮತ್ತು ಆ ನಂತರದ ಪರಿಸ್ಥತಿಯ ಬಗ್ಗೆ ಗಮನ ಹರಿಸಲಾಗಿದೆ. ಆ ಮಟ್ಟಿಗೆ ಇದೊಂದು ವಿಭಿನ್ನ ಪ್ರಯೋಗ.

ಇಲ್ಲಿ ಎಲ್ಲವೂ ನಿಧಾನವೇ. ಚಿತ್ರ ಶುರುವಾಗುವುದು, ಮುಂದುವರೆಯುವುದು, ವಿಷಯಕ್ಕೆ ಬರುವುದು ಎಲ್ಲವೂ ನಿಧಾನವೇ. ಸಾಲದ್ದಕ್ಕೆ ಕೆಲವು ದೃಶ್ಯಗಳು ಪುನರಾವರ್ತನೆಯಾಗುತ್ತವೆ. ಮೊದಲಾರ್ಧ ಪರಿಸರ ಮತ್ತು ಪಾತ್ರಧಾರಿಗಳನ್ನು ವಿವರಿಸುವಲ್ಲಿ ಮುಗಿಯುತ್ತದೆ. ದ್ವಿತೀಯಾರ್ಧದಲ್ಲಿ ಚಿತ್ರ ಸ್ವಲ್ಪ ವೇಗ ಪಡೆದುಕೊಳ್ಳುತ್ತದೆ. ಕೆಲವು ಉತ್ತರವಿಲ್ಲದ ಪ್ರಶ್ನೆಗಳು, ಕೆಲವು ಸಮಂಜಸವೆನಿಸದ ಉತ್ತರಗಳು … ಇವೆಲ್ಲದರಿಂದ ಈ ಚಿತ್ರಕ್ಕೆ ಇನ್ನೂ ಏನೋ ಬೇಕಿತ್ತು ಎಂದನಿಸುತ್ತದೆ.

‘ಶಾಖಾಹಾರಿ’ ಚಿತ್ರದ ನಂತರ ರಂಗಾಯಣ ರಘು ಬಹಳ ಗಂಭೀರವಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಶರತ್‍ ಲೋಹಿತಾಶ್ವ, ರವಿಶಂಕರ್‍ ಗೌಡ, ಸಿದ್ದು ಮೂಲಿಮನಿ, ಪಾವನಾ ಗೌಡ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ಚರಣ್‍ ರಾಜ್‍ ಹಿನ್ನೆಲೆ ಸಂಗೀತ ಗಮನಸೆಳೆಯುತ್ತದೆ.

ಮಲಯಾಳಂನಂತೆ ಕನ್ನಡದಲ್ಲಿ ವಿಭಿನ್ನ ಪ್ರಯೋಗಗಳು ಆಗುವುದಿಲ್ಲ ಎಂಬ ಮಾತು ಆಗಾಗ ಕೇಳಿಬರತ್ತಿರುತ್ತದೆ. ಅದು ಅಪ್ಪಟ ಸುಳ್ಳು. ಕನ್ನಡದಲ್ಲೂ ಹಲವು ವಿಭಿನ್ನ ಪ್ರಯೋಗಗಳಾಗುತ್ತಿರುತ್ತವೆ. ಆದರೆ, ಕೆಲವು ಸುದ್ದಿಯಾಗುವುದಿಲ್ಲ. ಸುದ್ದಿಯಾದರೂ ಪಕ್ವವಾಗಿರುವುದಿಲ್ಲ. ಈ ವಾರ ಬಿಡುಗಡೆಯಾದ ‘ಅಜ್ಞಾತವಾಸಿ’ ಸಹ ಎರಡನೇ ಸಾಲಿಗೆ ಸೇರುವಂತಹ ಚಿತ್ರ.

Read More
Next Story