ಕೊಲ್ಕತ್ತಾ ಮತ್ತು ದೆಹಲಿ ನಂತರ ಅಮೇರಿಕಾದಲ್ಲಿ ‘ತಿಮ್ಮನ ಮೊಟ್ಟೆಗಳುʼ
x
ತಿಮ್ಮನ ಮೊಟ್ಟೆಗಳು

ಕೊಲ್ಕತ್ತಾ ಮತ್ತು ದೆಹಲಿ ನಂತರ ಅಮೇರಿಕಾದಲ್ಲಿ ‘ತಿಮ್ಮನ ಮೊಟ್ಟೆಗಳುʼ

ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ರಕ್ಷಿತ್‍ ತೀರ್ಥಹಳ್ಳಿ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ ಚಿತ್ರವು, ಇದಕ್ಕೂ ಮೊದಲು ಕೊಲ್ಕತ್ತಾ ಅಂತರಾಷ್ಟ್ರಿಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.


ರಕ್ಷಿತ್ ತೀರ್ಥಹಳ್ಳಿ ಬರೆದ ‘ಕಾಡಿನ ನೆಂಟರು’ ಕಥಾ ಸಂಕಲನದ ಆಯ್ದ ಒಂದು ಕಥೆ ‘ತಿಮ್ಮನ ಮೊಟ್ಟೆಗಳು’ ಸಿನಿಮಾ ಆಗಿದೆ. ಇದಕ್ಕೂ ಮೊದಲು ಇದೇ ‘ಕಾಡಿನ ನೆಂಟರು‘ ಸಂಕಲನದ ‘ಎಂಥಾ ಕಥೆ ಮಾರಾಯ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿ ಅದನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಿದ್ದರು ರಕ್ಷಿತ್‍. ಈಗ ‘ತಿಮ್ಮನ ಮೊಟ್ಟೆಗಳು’ ಚಿತ್ರವನ್ನು ಅವರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದು, ಅದಕ್ಕೂ ಮೊದಲು ಅಮೇರಿಕಾದಲ್ಲಿ ಚಿತ್ರದ ಪ್ರೀಮಿಯರ್ ಪ್ರದರ್ಶನವಾಗಿದೆ.

ಕನ್ನಡ ಚಿತ್ರಗಳು ಕರ್ನಾಟಕಕ್ಕೂ ಮೊದಲು ಬೇರೆ ದೇಶಗಳಲ್ಲಿ ಅನಿವಾಸಿ ಕನ್ನಡಿಗರ ಎದುರು ಬಿಡುಗಡೆಯಾಗುತ್ತಿರುವುದು ಹೊಸದೇನಲ್ಲ. ಕಳೆದ ವರ್ಷವಷ್ಟೇ, ‘ಕೆಂಡ’ ಚಿತ್ರವು ನ್ಯೂಯಾರ್ಕ್‍ನಲ್ಲಿ ಪ್ರೀಮಿಯರ್ ಆದರೆ, ಚಂದನ್‍ ಶೆಟ್ಟಿ ಅಭಿನಯದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರವು ದುಬೈನಲ್ಲಿ ಮೊದಲು ಬಿಡುಗಡೆಯಾಗಿ, ನಂತರ ರಾಜ್ಯದಲ್ಲಿ ಪ್ರದರ್ಶನ ಕಂಡಿದ್ದು ವಿಶೇಷ.


ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ರಕ್ಷಿತ್‍ ತೀರ್ಥಹಳ್ಳಿ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ ಚಿತ್ರವು, ಇದಕ್ಕೂ ಮೊದಲು ಕೊಲ್ಕತ್ತಾ ಅಂತರಾಷ್ಟ್ರಿಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ದೆಹಲಿಯಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಜ್ಯೂರಿಯ ವಿಶೇಷ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಇದೀಗ ಚಿತ್ರವು ಅಮೇರಿಕಾದಲ್ಲಿ ಪ್ರೀಮಿಯರ್‍ ಆಗಿದೆ. ಈ ವರ್ಷ ವಿದೇಶಿ ನೆಲದಲ್ಲಿ ಪ್ರೀಮಿಯರ್‍ ಆದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


‘ತಿಮ್ಮನ ಮೊಟ್ಟೆಗಳು’ ಚಿತ್ರ ಅಮೇರಿಕಾದ ಡಲ್ಲಾಸ್ ನಗರದ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರೀಮಿಯರ್ ಪ್ರದರ್ಶನ ಕಂಡಿದ್ದು, ಡಾಲಸ್‍ನಲ್ಲಿರುವ ಅನಿವಾಸಿ ಕನ್ನಡಿಗರು ಲುಂಗಿ ತೊಟ್ಟು, ಹೆಗಲ ಮೇಲೊಂದು ಟವಲ್ ಇಟ್ಟು, ತಲೆಯ ಮೇಲೊಂದು ಮಂಡಾಳೆಯನ್ನ ಹಾಕಿಕೊಂಡು ಮಲೆನಾಡಿನ ಸಾಮಾನ್ಯ ವ್ಯಕ್ತಿಯಂತೆ ಚಿತ್ರ ವೀಕ್ಷಿಸಲು ಬಂದದ್ದು ವಿಶೇಷವಾಗಿತ್ತು.

ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರಿನ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಅವರ ನಿರ್ಮಾಣದಲ್ಲಿ ರಕ್ಷಿತ್ ತೀರ್ಥಹಳ್ಳಿಯವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ‘ತಿಮ್ಮನ ಮೊಟ್ಟೆಗಳು’ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಕೇಶವ್ ಗುತ್ತಳಿಕೆ, ಆಶಿಕಾ ಸೋಮಶೇಖರ್, ಪ್ರಗತಿ ಪ್ರಭು, ಶೃಂಗೇರಿ ರಾಮಣ್ಣ, ರಾಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ ಪ್ರವೀಣ್ ಎಸ್ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಸಂಕಲನ ಹಾಗೂ ಹೇಮಂತ್ ಜೋಯಿಸ್ ಸಂಗೀತ ಸಂಯೋಜನೆ ಇದೆ.

Read More
Next Story