
ಹೊಸ ಭಕ್ತಿಗೀತೆ ರಿಲೀಸ್- ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಶಿವಣ್ಣನ ಸ್ಪೆಶಲ್ ಗಿಫ್ಟ್!
ತಮ್ಮ ತಂದೆ, ವರನಟ ಡಾ. ರಾಜ್‌ಕುಮಾರ್ ಅವರ ಆರಾಧ್ಯ ದೈವವಾಗಿದ್ದ ಶ್ರೀ ಅಯ್ಯಪ್ಪ ಸ್ವಾಮಿಯ ಕುರಿತಾದ ಹೊಸ ಭಕ್ತಿಗೀತೆಯೊಂದನ್ನು ಶಿವಣ್ಣ ಬಿಡುಗಡೆ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರು ಅಯ್ಯಪ್ಪ ಸ್ವಾಮಿಯ ಭಕ್ತರಿಗಾಗಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ತಮ್ಮ ತಂದೆ, ವರನಟ ಡಾ. ರಾಜ್‌ಕುಮಾರ್ ಅವರ ಆರಾಧ್ಯ ದೈವವಾಗಿದ್ದ ಶ್ರೀ ಅಯ್ಯಪ್ಪ ಸ್ವಾಮಿಯ ಕುರಿತಾದ ಹೊಸ ಭಕ್ತಿಗೀತೆಯೊಂದನ್ನು ಶಿವಣ್ಣ ಬಿಡುಗಡೆ ಮಾಡಿದ್ದಾರೆ.
"ತತ್ವಮಸಿಯೇ ಅಯ್ಯಪ್ಪ ತತ್ವಮಸಿಯೇ" ಎಂಬ ಶೀರ್ಷಿಕೆಯ ಈ ಭಕ್ತಿಗೀತೆ ಇದೀಗ ಭಕ್ತರ ಮನಗೆಲ್ಲುತ್ತಿದೆ. ವಿಶೇಷವೆಂದರೆ, ಉಪನಿಷತ್ತಿನ ಸಾರವಾದ 'ತತ್ವಮಸಿ' (ನೀನೇ ಅದು) ಎಂಬ ಮಹಾವಾಕ್ಯದ ಆಳವಾದ ಅರ್ಥವನ್ನು ಈ ಹಾಡು ಒಳಗೊಂಡಿದೆ. ಭಕ್ತ ಮತ್ತು ಭಗವಂತನ ನಡುವೆ ಭೇದ ಇಲ್ಲ ಎಂಬುದನ್ನು ಸಾರುವ ಈ ಗೀತೆಗೆ ಸ್ವತಃ ಶಿವರಾಜ್‌ಕುಮಾರ್ ಅವರೇ ಸಾಹಿತ್ಯ ಬರೆದಿರುವುದು ವಿಶೇಷ. ಹಿತೇಶ್ ಮತ್ತು ಸಂತೋಷ್ ಅವರು ಸಂಗೀತ ಸಂಯೋಜನೆ ನೀಡಿದ್ದಾರೆ.
ಯೂಟ್ಯೂಬ್‌ನಲ್ಲಿ ಸಂಚಲನ:
ಜನಪ್ರಿಯ ಆಡಿಯೋ ಸಂಸ್ಥೆ 'ಆನಂದ್ ಆಡಿಯೋ' ಯೂಟ್ಯೂಬ್ ಚಾನೆಲ್‌ನಲ್ಲಿ ಡಿಸೆಂಬರ್ 10ರಂದು ಈ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೇವಲ 24 ಗಂಟೆಗಳ ಅವಧಿಯಲ್ಲಿಯೇ 12 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆಯುವ ಮೂಲಕ ಹಾಡು ವೈರಲ್ ಆಗುತ್ತಿದೆ.
ಶಿವಣ್ಣ ಅವರು ಈ ಹಾಡಿನ ಮೂಲಕ ತಮ್ಮ ಬಾಲ್ಯದ ದಿನಗಳನ್ನು ಮತ್ತು ತಂದೆ ಡಾ. ರಾಜ್‌ಕುಮಾರ್ ಅವರು ಅಯ್ಯಪ್ಪ ಸ್ವಾಮಿಯ ಭಜನೆಗಳನ್ನು ಹಾಡುತ್ತಿದ್ದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಅಣ್ಣಾವ್ರ ಧ್ವನಿಯ ಗಾಂಭೀರ್ಯವನ್ನೇ ಹೋಲುವ ಶಿವಣ್ಣನ ಕಂಠಸಿರಿಗೆ ಅಭಿಮಾನಿಗಳು ಫಿದಾ ಆಗಿದ್ದು, "ಅಣ್ಣಾವ್ರ ಧ್ವನಿಯಲ್ಲೇ ಅಯ್ಯಪ್ಪನ ಭಕ್ತಿರಸ ಹರಿಯುತ್ತಿದೆ" ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಶಬರಿಮಲೆ ಯಾತ್ರೆಯ ಋತುಮಾನ ನಡೆಯುತ್ತಿರುವುದರಿಂದ, ಅಯ್ಯಪ್ಪ ಮಾಲಾಧಾರಿಗಳಿಗೆ ಈ ಹಾಡು ಮತ್ತಷ್ಟು ಸ್ಫೂರ್ತಿ ತುಂಬಿದೆ.

