ಸಿನಿಮಾ ಪೈರಸಿ| ಸಿನಿಮಾಟೋಗ್ರಾಫ್ ಕಾಯ್ದೆಗೆ ಕೇಂದ್ರದಿಂದ ತಿದ್ದುಪಡಿ; ನಟ ಜಗ್ಗೇಶ್‌ ಸಂತಸ
x

ಚಿತ್ರರಂಗದ ಸಾವಿರಾರು ಕಾರ್ಮಿಕರು ಮತ್ತು ನಿರ್ಮಾಪಕರು ಪೈರಸಿಯಿಂದ ಎದುರಿಸುತ್ತಿರುವ ನಷ್ಟದ ಬಗ್ಗೆ ಜಗ್ಗೇಶ್ ಅವರು ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ್ದರು.

ಸಿನಿಮಾ ಪೈರಸಿ| ಸಿನಿಮಾಟೋಗ್ರಾಫ್ ಕಾಯ್ದೆಗೆ ಕೇಂದ್ರದಿಂದ ತಿದ್ದುಪಡಿ; ನಟ ಜಗ್ಗೇಶ್‌ ಸಂತಸ

ಭಾರತೀಯ ಚಿತ್ರರಂಗವನ್ನು ಕಾಡುತ್ತಿರುವ ಪೈರಸಿ ಪಿಡುಗನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ಸಿನಿಮ್ಯಾಟೋಗ್ರಾಫ್ ಕಾಯ್ದೆಗೆ ಮಹತ್ವದ ತಿದ್ದುಪಡಿ ತಂದಿದೆ.


Click the Play button to hear this message in audio format

ಭಾರತೀಯ ಚಿತ್ರರಂಗವನ್ನು ದಶಕಗಳಿಂದ ಕಾಡುತ್ತಿರುವ ಪೈರಸಿ ದಂಧೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ರಾಜ್ಯಸಭೆಯಲ್ಲಿ ಸಿನಿಮಾ ಪೈರಸಿ ಬಗ್ಗೆ ಗಂಭೀರವಾಗಿ ಗಮನ ಸೆಳೆದಿದ್ದ ಸಂಸದ ಹಾಗೂ ಹಿರಿಯ ನಟ ಜಗ್ಗೇಶ್ ಅವರ ಸತತ ಪ್ರಯತ್ನಕ್ಕೆ ಈಗ ದೊಡ್ಡ ಯಶಸ್ಸು ಸಿಕ್ಕಂತಾಗಿದೆ. ಚಿತ್ರರಂಗದ ಹಿತದೃಷ್ಟಿಯಿಂದ ಹೊಸ ಕಾನೂನನ್ನು ಜಾರಿಗೆ ತರುವ ಮೂಲಕ ಸಿನಿಮಾ ಕಳ್ಳರನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ದೃಢ ಸಂಕಲ್ಪ ಮಾಡಿದೆ.

ಪೈರಸಿಯಿಂದಾಗಿ ಚಿತ್ರರಂಗಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಈ ಸಮಸ್ಯೆಯನ್ನು ರಾಜ್ಯಸಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದ ಜಗ್ಗೇಶ್ ಅವರು, ಚಿತ್ರರಂಗ ನಂಬಿ ಬದುಕುವ ಸಾವಿರಾರು ಕಾರ್ಮಿಕರ ಮತ್ತು ನಿರ್ಮಾಪಕರ ಸಂಕಷ್ಟವನ್ನು ಸರ್ಕಾರದ ಮುಂದಿಟ್ಟಿದ್ದರು. ಸಿನಿಮಾ ಅನ್ನ ಉಣ್ಣುವ ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಪರವಾಗಿ ಅವರು ಮಾಡಿದ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಸಿನಿಮ್ಯಾಟೋಗ್ರಾಫ್ ಕಾಯ್ದೆಗೆ ಮಹತ್ವದ ತಿದ್ದುಪಡಿಗಳನ್ನು ತಂದಿದೆ.

ಹೊಸ ಕಾನೂನಿನ ಪ್ರಕಾರ, ಚಿತ್ರಮಂದಿರಗಳಲ್ಲಿ ಅಕ್ರಮವಾಗಿ ಸಿನಿಮಾ ಚಿತ್ರೀಕರಣ ಮಾಡುವುದು ಮತ್ತು ಅದನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುವುದು ಗಂಭೀರ ಅಪರಾಧವೆಂದು ಪರಿಗಣಿಸಲಾಗಿದೆ. ಇಂತಹ ಕೃತ್ಯದಲ್ಲಿ ತೊಡಗುವವರಿಗೆ ಕನಿಷ್ಠ 3 ತಿಂಗಳಿಂದ 3 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಚಿತ್ರದ ಒಟ್ಟು ನಿರ್ಮಾಣ ವೆಚ್ಚದ ಶೇಕಡಾ 5 ರಷ್ಟು ದಂಡ ವಿಧಿಸುವ ಕಠಿಣ ನಿಬಂಧನೆಗಳನ್ನು ರೂಪಿಸಲಾಗಿದೆ.

ಈ ಬೆಳವಣಿಗೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಜಗ್ಗೇಶ್ ಅವರು,"ಸಿನಿಮಾ ಅನ್ನ ತಿಂದು ಬೆಳೆದ ನನ್ನ ಈ ಸಣ್ಣ ಪ್ರಯತ್ನಕ್ಕೆ ಫಲ ಸಿಕ್ಕಿದೆ, ಇದು ಇಡೀ ಚಿತ್ರರಂಗದ ಗೆಲುವು" ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದಾಗಿ ಇನ್ನು ಮುಂದೆ ಸಿನಿಮಾ ಕಳ್ಳರಿಗೆ ನಡುಕ ಶುರುವಾಗಲಿದ್ದು, ಕನ್ನಡ ಚಿತ್ರರಂಗ ಸೇರಿದಂತೆ ಭಾರತದ ಎಲ್ಲಾ ಭಾಷಾ ಚಿತ್ರೋದ್ಯಮಗಳಿಗೆ ದೊಡ್ಡ ಮಟ್ಟದ ರಕ್ಷಣೆ ಸಿಕ್ಕಂತಾಗಿದೆ.

Read More
Next Story