
ನಟ ಧನುಷ್‌ಗೆ ಕಾನೂನು ಸಂಕಷ್ಟ: 20 ಕೋಟಿ ರೂ. ಪರಿಹಾರ ಕೇಳಿದ ಖ್ಯಾತ ನಿರ್ಮಾಣ ಸಂಸ್ಥೆ!
ತಮಿಳು ನಟ ಧನುಷ್ ವಿರುದ್ಧ ತೆನಾಂಡಲ್ ಫಿಲ್ಮ್ಸ್ 20 ಕೋಟಿ ರೂಪಾಯಿ ಪರಿಹಾರ ಕೋರಿ ಕಾನೂನು ನೋಟಿಸ್ ಕಳುಹಿಸಿದೆ. 2016ರ 'ನಾನ್ ರುದ್ರನ್' ಸಿನಿಮಾ ವಿಳಂಬವೇ ಈ ವಿವಾದಕ್ಕೆ ಕಾರಣ ಎನ್ನಲಾಗಿದೆ.
ತಮಿಳು ಸ್ಟಾರ್ ನಟ ಧನುಷ್ ಇದೀಗ ದೊಡ್ಡ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಳೆಯ ಸಿನಿಮಾ ಯೋಜನೆಯೊಂದರ ವಿಳಂಬಕ್ಕೆ ಸಂಬಂಧಿಸಿದಂತೆ ಖ್ಯಾತ ನಿರ್ಮಾಣ ಸಂಸ್ಥೆ 'ತೆನಾಂಡಲ್ ಫಿಲ್ಮ್ಸ್' ನಟ ಧನುಷ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದು, 20 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದೆ.
ಏನಿದು ವಿವಾದ?
ವರದಿಗಳ ಪ್ರಕಾರ, 2016ರಲ್ಲಿ ಧನುಷ್ ತೆನಾಂಡಲ್ ಫಿಲ್ಮ್ಸ್ ಜೊತೆ 'ನಾನ್ ರುದ್ರನ್' ಸಿನಿಮಾವನ್ನು ಒಪ್ಪಿಕೊಂಡಿದ್ದರು. ಈ ಚಿತ್ರಕ್ಕೆ ಧನುಷ್ ನಟನೆಯ ಜೊತೆಗೆ ನಿರ್ದೇಶನವನ್ನೂ ಮಾಡಬೇಕಿತ್ತು. ಆದರೆ, ಸಿನಿಮಾ ಒಪ್ಪಿಕೊಂಡ ನಂತರ ಧನುಷ್ ಚಿತ್ರೀಕರಣದಲ್ಲಿ ಭಾಗವಹಿಸಲಿಲ್ಲ ಮತ್ತು ಚಿತ್ರಕಥೆಯನ್ನೂ ಪೂರ್ಣಗೊಳಿಸಿ ನೀಡಲಿಲ್ಲ ಎಂದು ನಿರ್ಮಾಣ ಸಂಸ್ಥೆ ಆರೋಪಿಸಿದೆ.
20 ಕೋಟಿ ರೂಪಾಯಿ ದಂಡದ ಎಚ್ಚರಿಕೆ
ಧನುಷ್ ಈ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿ, ಇತರ ಸಿನಿಮಾಗಳಿಗೆ ಕಾಲ್‌ಶೀಟ್ ನೀಡಿದ್ದಾರೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ನಿರ್ಮಾಣ ಸಂಸ್ಥೆಗೆ ಭಾರಿ ಹಣಕಾಸಿನ ನಷ್ಟ ಉಂಟಾಗಿದೆ. ಆರಂಭಿಕ ಹಂತದ ಹೂಡಿಕೆಯನ್ನು ವಸೂಲಿ ಮಾಡಲು 20 ಕೋಟಿ ರೂ. ಪರಿಹಾರ ನೀಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ. ಈವರೆಗೆ ಧನುಷ್ ಈ ಆರೋಪಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹೊಸ ಸಿನಿಮಾ ಘೋಷಣೆ: 'D55' ಸಜ್ಜು
ಒಂದೆಡೆ ಕಾನೂನು ಸಂಘರ್ಷ ನಡೆಯುತ್ತಿದ್ದರೂ, ಧನುಷ್ ತಮ್ಮ ಮುಂದಿನ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ತಾತ್ಕಾಲಿಕವಾಗಿ 'D55' ಎಂದು ಹೆಸರಿಸಲಾದ ಈ ಚಿತ್ರವನ್ನು 'ಅಮರನ್' ಖ್ಯಾತಿಯ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸಲಿದ್ದಾರೆ. ಧನುಷ್ ಅವರ ಸ್ವಂತ ಬ್ಯಾನರ್ 'ವಂಡರ್‌ಬಾರ್ ಫಿಲ್ಮ್ಸ್' ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
ನಟರ ಸಂಘದ ಮಧ್ಯಸ್ಥಿಕೆ ಸಾಧ್ಯತೆ
ಈ ಹಿಂದೆ ತಮಿಳು ಚಿತ್ರರಂಗದಲ್ಲಿ ಇಂತಹ ವಿವಾದಗಳು ಉಂಟಾದಾಗ 'ನಟರ ಸಂಘ' ಅಥವಾ 'ತಮಿಳು ಚಲನಚಿತ್ರ ನಿರ್ಮಾಪಕರ ಸಂಘ' (TFPC) ಮಧ್ಯಸ್ಥಿಕೆ ವಹಿಸಿ ಬಗೆಹರಿಸಿವೆ. ಈ ಪ್ರಕರಣದಲ್ಲೂ ನಿರ್ಮಾಣ ಸಂಸ್ಥೆಯು ಸಂಘದ ಮೆಟ್ಟಿಲೇರುವ ಸಾಧ್ಯತೆಯಿದೆ.
ಧನುಷ್ ವಿರುದ್ಧ ಈ ಹಿಂದಿನ ದೂರುಗಳು
ಧನುಷ್ ಅವರು ಈ ಹಿಂದೆ 'ಶ್ರೀ ತೇನಾಂಡಲ್ ಫಿಲ್ಮ್ಸ್' ಮಾತ್ರವಲ್ಲದೆ, ಇತರ ಕೆಲವು ನಿರ್ಮಾಣ ಸಂಸ್ಥೆಗಳೊಂದಿಗೂ ಸಹ ಸಹಿ ಮಾಡಿ ಕಾಲ್‌ಶೀಟ್ ನೀಡದ ಬಗ್ಗೆ ದೂರುಗಳಿದ್ದವು. ಇದರಿಂದಾಗಿ ತಮಿಳು ನಿರ್ಮಾಪಕರ ಸಂಘವು ಧನುಷ್ ಅವರೊಂದಿಗೆ ಕೆಲಸ ಮಾಡುವ ಮುನ್ನ ಸಂಘದ ಅನುಮತಿ ಪಡೆಯಬೇಕೆಂದು ಈ ಹಿಂದೆ ನಿರ್ಬಂಧ ಹೇರುವ ಕುರಿತು ಚರ್ಚಿಸಿತ್ತು.
2016 ರಿಂದ ಈವರೆಗೆ ಈ ಯೋಜನೆ ನೆನೆಗುದಿಗೆ ಬಿದ್ದಿರುವುದರಿಂದ ಬಡ್ಡಿ ಮತ್ತು ಆರಂಭಿಕ ಸೆಟ್ ಕೆಲಸಗಳ ವೆಚ್ಚ ಸೇರಿದರೆ ಆ ಮೊತ್ತ 20 ಕೋಟಿ ದಾಟುತ್ತದೆ ಎಂಬುದು ನಿರ್ಮಾಪಕರ ವಾದ.

