Actor Darshan | ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ನಟ ದರ್ಶನ್‌: ವಿಡಿಯೋದಲ್ಲಿ ಏನಿದೆ?
x
ನಟ ದರ್ಶನ್‌

Actor Darshan | ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ನಟ ದರ್ಶನ್‌: ವಿಡಿಯೋದಲ್ಲಿ ಏನಿದೆ?

ನಮ್ಮ ಹೀರೋ ಧನ್ವೀರ್, ಸ್ನೇಹಿತರಾದ ಬುಲ್ ಬುಲ್ ರಚಿತಾ ರಾಮ್ ಮತ್ತು ರಕ್ಷಿತಾ ಎಂದು ಸ್ಮರಿಸಿಕೊಂಡಿದ್ದಾರೆ.


ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರು ತಿಂಗಳು ಸೆರೆವಾಸ ಅನುಭವಿಸಿ ಷರತ್ತುಬದ್ಧ ಜಾಮೀನು ಮೇಲೆ ಹೊರಬಂದ ಬಳಿಕ ನಟ ದರ್ಶನ್ ಮೊದಲ ಬಾರಿ ತಮ್ಮ ಅಭಿಮಾನಿಗಳಿಗೆ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದು, ಈ ಬಾರಿ ಹುಟ್ಟುಹಬ್ಬದ ದಿನ ನಾನು ಸಿಗುವುದಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಬ್ಯಾಡ್‌ನ್ಯೂಸ್‌ ಕೊಟ್ಟಿದ್ದಾರೆ.

ಫೆಬ್ರವರಿ 16 ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಆಚರಿಸುತ್ತಿದ್ದು, ಪ್ರತಿವರ್ಷದಂತೆ ಅವರ ಅಭಿಮಾನಿಗಳು ದರ್ಶನ್‌ ಮನೆಮುಂದೆ ಜಮಾಯಿಸುತ್ತಾರೆ. ಆದರೆ ಈ ವರ್ಷ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ನನಗೆ ವಿಪರೀತ ಕಾಲು ಮತ್ತು ಬೆನ್ನು ನೋವಿದೆ, ಗಂಟೆಗಟ್ಟಲೆ ನಿಂತುಕೊಂಡು ಇರಲು ಸಾಧ್ಯವಾಗುವುದಿಲ್ಲ. ಔಷಧ ತೆಗೆದುಕೊಳ್ಳುತ್ತಿದ್ದೇನೆ, ಅದರ ಪವರ್ ಇರುವವರೆಗೆ 10-15 ದಿನ ನೋವು ಕಡಿಮೆ ಇರುತ್ತದೆ, ಮತ್ತೆ ನೋವು ಆರಂಭವಾಗುತ್ತದೆ. ನನ್ನ ಅನಾರೋಗ್ಯ ಕಾರಣದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಷ್ಟೆ, ಯಾರೂ ಬೇಸರ ಮಾಡಿಕೊಳ್ಳಬಾರದು, ಇನ್ನು ಕೆಲವೇ ದಿನಗಳಲ್ಲಿ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ ಎಂದು ವಿಡಿಯೋ ಮೂಲಕ ಸಂದೇಶ ಕಳುಹಿಸಿದ್ದಾರೆ.


ಸಿನಿಮಾ ಮಾಡುತ್ತೇನೆ

ನಾನು ಎಂದಿಗೂ ನನ್ನ ಪ್ರೀತಿಯ ಅಭಿಮಾನಿ ಸೆಲೆಬ್ರಿಟಿಗಳಿಗೆ ಮೋಸ ಮಾಡುವುದಿಲ್ಲ. ನನ್ನನ್ನು ನಂಬಿ ಹಣ ಹೂಡಿರುವ ನಿರ್ಮಾಪಕರಿಗೆ ಸಹ ತೊಂದರೆ ಕೊಡುವುದಿಲ್ಲ. ಒಪ್ಪಿಕೊಂಡಿರುವ ಸಿನಿಮಾಗಳನ್ನು ಮಾಡಿ ಮುಗಿಸುತ್ತೇನೆ, ಯಾವುದೇ ಊಹಾಪೋಹಗಳನ್ನು ನಂಬಬೇಡಿ, ಸೂರಪ್ಪ ಬಾಬು ಅವರು ನನ್ನ ಬಳಿಗೆ ಸಿನಿಮಾ ಮಾಡಬೇಕೆಂದು ಬಂದಿದ್ದಾಗ ಅವರಿಗೆ ಸಹ ತುಂಬಾ ಕಮಿಟ್ ಮೆಂಟ್ ಗಳಿದ್ದವು. ಹಾಗಾಗಿ ಅವರ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡೆ. ಈ ನಡುವೆ ತುಂಬಾ ವಿಷಯಗಳು ನಡೆದು ವಿಳಂಬವಾಯಿತು. ಸೂರಪ್ಪ ಬಾಬು ಅವರಿಗೆ ಮತ್ತಷ್ಟು ತೊಂದರೆ ಆಗಬಾರದು ಎಂದು ಅವರು ಕೊಟ್ಟ ಮುಂಗಡ ಹಣವನ್ನು ವಾಪಾಸ್ ಕೊಟ್ಟಿದ್ದು ನಿಜ. ಮುಂದೊಂದು ದಿನ ಉತ್ತಮ ಸಬ್ಜೆಕ್ಟ್ ಸಿಕ್ಕಿದರೆ ಸೂರಪ್ಪ ಬಾಬು ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ನಿರ್ದೇಶಕ ಜೋಗಿ ಪ್ರೇಮ್ ಅವರ ಜೊತೆ ಕೂಡ ಸಿನಿಮಾ ಮಾಡುವುದು ಖಂಡಿತ. ಅವರು ನನ್ನ ಗುರುಗಳು, ನನ್ನ ಪ್ರೀತಿಯ ಸ್ನೇಹಿತೆ ರಕ್ಷಿತಾ ಆಸೆ ಕೂಡ ನಾನು ಸಿನಿಮಾ ಮಾಡಬೇಕು ಎಂದು. ಕೆವಿಎನ್ ಪ್ರೊಡಕ್ಷನ್ ನಲ್ಲಿ ಈಗಾಗಲೇ ಸಿನಿಮಾ ತಯಾರಾಗುತ್ತಿದೆ. ಅದರ ಮಧ್ಯೆ ಇನ್ನೊಂದು ಸಿನಿಮಾ ಸದ್ಯಕ್ಕೆ ಬೇಡ ಎಂದು ಮುಂದೆ ಹಾಕಿದ್ದೇವೆ. ಮುಂದೆ ಖಂಡಿತಾ ಮಾಡುತ್ತೇನೆ ಎಂದಿದ್ದಾರೆ.

ನನ್ನ ಕೊನೆಯ ಉಸಿರು ಇರುವವರೆಗೂ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದಿಲ್ಲ, ಕನ್ನಡದ ಜನತೆ ನನಗೆ ಪ್ರೀತಿ, ಆಶೀರ್ವಾದ ನೀಡಿದ್ದಾರೆ, ಇಲ್ಲಿ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ. ಇಲ್ಲಿಯೇ ಇದ್ದು ಕನ್ನಡದ ಜನರು ಕೊಟ್ಟಿರುವ ಪ್ರೀತಿ ಉಳಿಸಿ ಕಾಪಾಡಿಕೊಂಡು ಹೋಗುತ್ತೇನೆ ಎಂದು ದರ್ಶನ್‌ ಹೇಳಿದ್ದಾರೆ.

ಅಭಿಮಾನಿಗಳ ಪ್ರೀತಿ, ಬೆಂಬಲಕ್ಕೆ ನಾನು ಯಾವಾಗಲೂ ಚಿರಋಣಿ, ನನ್ನ ಕಷ್ಟದ ಸಮಯದಲ್ಲಿ ಏನೇ ಆದರೂ ಸಾಥ್ ಕೊಟ್ಟ ಮೂವರಿಗೆ ನಾನು ಈ ಸಂದರ್ಭದಲ್ಲಿ ವಿಶೇಷವಾಗಿ ಧನ್ಯವಾದ ಹೇಳುತ್ತೇನೆ. ಅದು ನಮ್ಮ ಹೀರೋ ಧನ್ವೀರ್, ಸ್ನೇಹಿತರಾದ ಬುಲ್ ಬುಲ್ ರಚಿತಾ ರಾಮ್ ಮತ್ತು ರಕ್ಷಿತಾ ಎಂದು ಸ್ಮರಿಸಿಕೊಂಡಿದ್ದಾರೆ.

Read More
Next Story