50 ದಿನ ದಾಟಿದ ಸಂತಸ, ಓಟಿಟಿಯ ಯಶಸ್ಸಿನ ಅಲೆಯೇರಿರುವ ʻಬ್ಲಿಂಕ್ʼ ಚಿತ್ರದೊಳಗೊಂದು ಇಣುಕು ನೋಟ
ಕನ್ನಡ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ತೆಲಂಗಾಣದ ತೆಲುಗು ಚಿತ್ರರಂಗದಂತೆ, ಕರ್ನಾಟಕದ ಚಿತ್ರಮಂದಿರಗಳೂ ಕೂಡ ಕೆಲವು ಕಾಲ ಬಾಗಿಲು ಹಾಕಲು ಯೋಚಿಸುತ್ತಿರುವ ಈ ಸಂದರ್ಭದಲ್ಲಿ, ಒಂದು ಸಿಹಿ ಸುದ್ದಿ ಕನ್ನಡ ಚಿತ್ರರಂಗದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ ಎನ್ನಬಹುದು. ಆ ಸಿಹಿ ಸುದ್ದಿಯೆಂದರೆ, ಕನ್ನಡದ ʻಬ್ಲಿಂಕ್ʼ ಚಿತ್ರ ಚಿತ್ರಮಂದಿರದಲ್ಲಿ ಐವತ್ತು ದಿನಗಳನ್ನು ಪೂರೈಸಿರುವುದೇ ಅಲ್ಲದೆ, ಅಮೇಜಾನ್ ಓಟಿಟಿ ವೇದಿಕೆಯಲ್ಲಿಯೂ ಬಿಡುಗಡೆಯಾಗಿ, ಉತ್ತೇಜಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆದಿದೆ. “ಕನ್ನಡ ಸಿನಿಮಾ ಚಿತ್ರಮಂದಿರಗಳಲ್ಲಿ ಓಟಿಟಿ ವೇದಿಕೆಗಳಲ್ಲಿ ನೋಡುವುದಿಲ್ಲ” ಎಂಬ ನಂಬಿಕೆಯನ್ನುʻಬ್ಲಿಂಕ್ʼ ಚಿತ್ರ ಸುಳ್ಳು ಮಾಡಿದೆ.
ಚಿತ್ರದ ನಾಯಕ ನಟ ದೀಕ್ಷಿತ್ ಶೆಟ್ಟಿಯಂತೂ ಈ ಚಿತ್ರದ ಯಶಸ್ಸಿನಿಂದ ತಮ್ಮದೇ ಆದ ಲೋಕದಲ್ಲಿ ಸಂಚರಿಸುತ್ತಿದ್ದಾರೆ. “ಎಷ್ಟೋ ವರ್ಷಗಳ ನಂತರ ಹೊಸಬರ ಪ್ರಯತ್ನದ ಫಲವಾಗಿ ಚಿತ್ರವೊಂದು ಚಿತ್ರಮಂದಿರದಲ್ಲಿ ಗಟ್ಟಿಯಾಗಿ ನಿಂತಿದೆ. ಇದನ್ನು ನಂಬಲು ನಮಗೇ ಸಾಧ್ಯವಾಗುತ್ತಿಲ್ಲ. ಆದರೆ ಚಿತ್ರಮಂದಿರದಲ್ಲಿ ಚಿತ್ರ ನಿಲ್ಲಿಸಲು ನಾವು ಸಾಕಷ್ಟು ಕಷ್ಟಪಟ್ಟಿದ್ದೇವೆ” ಎಂದು ದೀಕ್ಷಿತ್ ಶೆಟ್ಟಿ ಮುಗುಳ್ನಗುತ್ತಾರೆ.
“ಸಿನಿಮಾ ಕೋಟಿಗಟ್ಟಲೆ ಗಳಿಸಬೇಕು, ಗಳಿಸುತ್ತದೆ ಎಂಬುದು ನಮ್ಮ ಉದ್ದೇಶವಂತೂ ಆಗಿರಲಿಲ್ಲ. ಚಿತ್ರ ಗೆಲ್ಲಬೇಕು, ನಿರ್ಮಾಪಕ ಸಂತುಷ್ಟನಾಗಬೇಕು” ಎನ್ನುವುದು ನಮ್ಮ ಆಸೆಯಾಗಿತ್ತು. ಆ ಆಸೆ ನೆರವೇರಿದೆ. ಹಾಕಿದ ಬಂಡವಾಳ ಹಿಂದೆ ಬರುವುದು ಖಚಿತವಾಗಿದೆ. ʻಬ್ಲಿಂಕ್ʼ ಚಿತ್ರವನ್ನು ತಮಿಳಿಗೆ ಡಬ್ ಮಾಡುವ ಆಲೋಚನೆಯೂ ಇದೆ” ಎನ್ನಬಹುದು ಎನ್ನುವ ಅವರ ಮಾತುಗಳು ಉಳಿದ ನಿರ್ಮಾಪಕರಿಗೆ ಆಪ್ಯಾಯಮಾನವಾಗಿ ಕೇಳಿಸಿದೆ.
ಚಿತ್ರಮಂದಿರದಲ್ಲಿ ಐವತ್ತು ದಿನ ದಾಟಿದ ಸಂತಸ
ಶಿವರಾತ್ರಿ ಹಬ್ಬದಂದು ತೆರೆಗೆ ಬಂದ ʻಬ್ಲಿಂಕ್ʼ ಚಿತ್ರಕ್ಕೆ ಆರಂಭದಲ್ಲಿ ಹೇಳಿಕೊಳ್ಳುವಂಥ ಪ್ರತಿಕ್ರಿಯೆ ದೊರೆಯಲಿಲ್ಲ. ನಂತರ 8 ಶೋಗಳಿಂದ 82 ಶೋ ʻ ಬ್ಲಿಂಕ್ ʼ ಪಾಲಾಯಿತು. ಥಿಯೇಟರ್‌ನಲ್ಲಿ ಭರಪೂರ ಮೆಚ್ಚುಗೆ ಪಡೆದಿದ್ದ ʻಬ್ಲಿಂಕ್ʼ ಸಿನಿಮಾ ಓಟಿಟಿಯಲ್ಲಿಯೂ ಈಗ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚಿಗೆ ಗಳಿಸುತ್ತಿದೆ. ನಿರ್ಮಾಪಕರ ಪ್ರಕಾರ ಅಮೇಜಾನ್ ಪ್ರೈಮ್ ಓಟಿಟಿಯಲ್ಲಿ ಪ್ರದರ್ಶನಗೊಳ್ಳು ಆರಂಭಿಸಿದ 3 ದಿನದಲ್ಲಿಯೇ 7 ಮಿಲಿಯನ್ಸ್ ನಿಮಿಷ ಸ್ಟ್ರೀಮಿಂಗ್ ಕಾಣುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. 4 ನೇ ದಿನ 10 ಮಿಲಿಯನ್ ನಿಮಿಷ ತಲುಪಿದೆ. ಹೊಸಬರ ಚಿತ್ರಕ್ಕೆ ಇಷ್ಟು ಒಳ್ಳೆ ಪ್ರತಿಕ್ರಿಯೆ ದಕ್ಕಿರುವುದು ಸಂತಸ ತಂದಿದೆ ಎಂದು ದೀಕ್ಷಿತ್ ಶೆಟ್ಟಿ ಹೇಳಿದ್ದಾರೆ.
'ಬ್ಲಿಂಕ್' ಚಿತ್ರಕ್ಕೆ ಶ್ರೀನಿಧಿ ಬೆಂಗಳೂರು ನಿರ್ದೇಶಿಸಿದ್ದಾರೆ. ರವಿಚಂದ್ರ ಎ.ಜೆ. ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. 'ದಿಯಾ' ಖ್ಯಾತಿಯ ದೀಕ್ಷಿತ್ ಶೆಟ್ಟಿ ಚಿತ್ರದ ಜೀವಾಳವಾಗಿದ್ದಾರೆ. ನಟಿ ಚೈತ್ರಾ ಆಚಾರ್, ಗೋಪಾಲ್ ದೇಶಪಾಂಡೆ ಸೇರಿದಂತೆ ಹಲವಾರು ಕಲಾವಿದರು, ಈ ಚಿತ್ರದ ಯಶಸ್ಸಿಗೆ ಕಾರಣರಾಗಿದ್ದಾರೆ.
ಶೀರ್ಷಿಕೆಯ ಪ್ರಭಾವ
ʻಬ್ಲಿಂಕ್ʼ ಚಿತ್ರ ತನ್ನ ಶೀರ್ಷಿಕೆಯಿಂದಲೇ ಸೃಜನಶೀಲ ಮನಸ್ಸಿನ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದಿರಬಹುದು ಎಂಬುದು ಒಂದು ನಂಬಿಕೆ. ಕಣ್ಣು ಮಿಟುಕಿಸುವಷ್ಟರಲ್ಲಿಯೇ ಬದಲಾಗುವ ಜಗತ್ತಿನ ವಿದ್ಯಮಾನಗಳನ್ನು ವೈಚಿತ್ರ್ಯಗಳನ್ನು, ಕಾಲದ ಗತಿಯನ್ನು ಹಿಡಿದಿಡುವ ಮತ್ತು ಅದರಷ್ಟಕ್ಕೆ ಅದರ ಹಿಂಚಲನೆ-ಮುನ್ಚಲನೆಯನ್ನು ನಿಯಂತ್ರಿಸುವ ಪ್ರಯೋಗವನ್ನು ಈ ಚಿತ್ರ ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಗಟ್ಟಿಯಾಗಿ ಹೇಳಲಾಗದಿದ್ದರೂ, ಪ್ರಯೋಗದ ಮಟ್ಟಿಗೆ ಇದೊಂದು ಪ್ರಯತ್ನ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆ ವಿನಾಯತಿಯನ್ನು ಈ ಚಿತ್ರಕ್ಕೆ ಈ ಕನ್ನಡ ಚಿತ್ರರಂಗದ ಸಂದರ್ಭದಲ್ಲಿ ನೀಡುವುದು ಅನಿವಾರ್ಯ ಕೂಡ.
ವಿಮರ್ಶೆಗೆ ಹೊಸ ಮಾನದಂಡದ ಅಗತ್ಯ
ಕನ್ನಡದ ಸಾಂಸ್ಕೃತಿಕ ಸಂದರ್ಭದಲ್ಲಿ ಖ್ಯಾತ ಸಾಂಸ್ಕೃತಿಕ ಚಿಂತಕ, ಲೇಖಕ ವಿಮರ್ಶಕ (ಇಂದು ನಮ್ಮೊಡನಿಲ್ಲದ) ಡಾ. ಡಿ. ಆರ್. ನಾಗರಾಜ್ ಅವರು ಹೇಳುವ ಮಾತುಗಳು, ಇಂಥ ಚಿತ್ರಗಳು ತೆರೆಗೆ ಬಂದಾಗ ಸಹಜವಾಗಿ ನೆನಪಾಗುತ್ತದೆ. ಅವರು “ಕಲೆಯ ಜಗತ್ತಿನಲ್ಲಿ ಹುಟ್ಟಿಕೊಳ್ಳುವ ಹೊಸ ಜೀವ ಪ್ರಭೇದ (genre) ವಿಮರ್ಶಿಸಲು ಹೊಸ ಮಾನದಂಡಗಳೇ ಬೇಕಾಗುತ್ತದೆ” ಎಂದು ಹೇಳಿರುವುದು ʻಬ್ಲಿಂಕ್ʼ ನಂಥ ಚಿತ್ರಕ್ಕೂ ಅನ್ವಯಿಸುತ್ತದೆ. ಭಾರತೀಯ ಚಿತ್ರರಂಗಕ್ಕೆ ಅದರಲ್ಲೂ ಕನ್ನಡ ಚಿತ್ರರಂಗಕ್ಕೆ ಈ ಬಗೆಯ ಪ್ರಯೋಗಗಳು ಹೊಸದೆಂದರೂ ಸಲ್ಲುತ್ತದೆ. ಆದ್ದರಿಂದಲೇ ಈ ಚಿತ್ರವನ್ನು ವಿಮರ್ಶಿಸುವುದು ಕಷ್ಟವಾಗಿ ಕಂಡಿದೆ. ಸಾಂಪ್ರದಾಯಿಕ ಚಿತ್ರಗಳಿಗಿರುವ ಅಚ್ಚುಕಟ್ಟಾದ ಬಂಧ ʻಬ್ಲಿಂಕ್ʼ ಚಿತ್ರಕ್ಕಿಲ್ಲ. ಹಾಗೆ ನೋಡಿದರೆ ಘಟನೆಯಿಂದ ಘಟನೆಗೆ ರೋಮಾಂಚಕಾರಿಯಾಗಿ ಬೆಳೆಯುತ್ತಾ, ಗಾಢವಾದ ಆಲೋಚನೆಗಳಿಗೆ ಪ್ರೇರೇಪಿಸುತ್ತಾ, ಹೋಗುವ ಕಥನ ಕಲೆಯೂ ಇಲ್ಲಿಲ್ಲ. ವಾಸ್ತವವಾದಿ ಚಿತ್ರಗಳ ತರ್ಕಬದ್ಧತೆ ಇದರಲ್ಲಿ ಇಲ್ಲ. ಅಬ್ಸರ್ಡ್ ಚಿತ್ರಗಳಿಗಿರುವ ಹಾಗೆ ಅನುಭವಗಳನ್ನು ಮುಂದಿಡುವಲ್ಲಿ ಇರುವ ಅಸಂಗತತೆಯೂ ಇದರಲ್ಲಿ ಇಲ್ಲ.
ಕಾಲವನ್ನು ತಡೆಯೋರು ಯಾರೂ ಇಲ್ಲ…
ಬ್ಲಿಂಕ್ ಚಿತ್ರ ಕಾಲದ ಗತಿಯ ನಿಯಂತ್ರಣವನ್ನು ಅದರ ಸಂಕೀರ್ಣತೆಯನ್ನು “ಕಾಲವನ್ನು ತಡೆಯೋರು ಯಾರೂ ಇಲ್ಲ….” ಎಂಬ ಗೀತೆಯಂತೆ ಮನಬಂದಂತೆ ಚಲಿಸಿ, ತನ್ನಿಷ್ಟದಂತೆ ಹೆಣೆದುಕೊಂಡು ತನ್ನದೇ ವಿನ್ಯಾಸವನ್ನು ರೂಪಿಸಿಕೊಳ್ಳುತ್ತದೆ. ಪ್ರೇಕ್ಷಕರನ್ನು 1996, 2001, 2021, 2035 ರ ನಡುವಿನ ಕಾಲ ಘಟ್ಟದ ಪ್ರಯಾಣಕ್ಕೆ ಒಡ್ಡುತ್ತದೆ.
ʻಬ್ಲಿಂಕ್ʼ ತನ್ನ ಹೆಸರೇ ಸೂಚಿಸುವಂತೆ ಕಣ್ಣು ಮಿಟುಕಿಸುವಷ್ಟರಲ್ಲಿ, ಜಗತ್ತು ಬದಲಾಗಬಹುದು, ಮನುಷ್ಯನ ಹಣೆಬರಹವನ್ನು ಪುನಃ ಬರೆಯಬಹುದು ಮತ್ತು ಜೀವನವನ್ನು ಶಾಶ್ವತವಾಗಿ ಬದಲಾಯಿಸಬಹುದು ಎಂಬ ಈ ಕಲ್ಪನೆಯೇ ಪ್ರೇಕ್ಷಕನ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಕಣ್ಣು ಮಿಟುಕಿಸುವ ಕ್ರಿಯೆಯು ಅದೃಷ್ಟದ ಅನಿರೀಕ್ಷಿತ ತಿರುವುಗಳಿಗೆ ಬದಲಾಗುತ್ತದೆ.
ರಂಗಭೂಮಿಯ ಛಾಯೆ
ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಚಿತ್ರದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಕಟ್ಟಿಕೊಟ್ಟಿರುವ ʻಬ್ಲಿಂಕ್ʼ ರಂಗಭೂಮಿಯ ವಾಸನೆಯನ್ನು ತನ್ನೊಂದಿಗೆ ಹೊತ್ತು ತಂದಿದೆ. ಚಿತ್ರದ ನಿರ್ದೇಶಕ ಶ್ರೀನಿಧಿ ಬೆಂಗಳೂರು, ಬಹುರೀತಿಯಲ್ಲಿ ಗ್ರೀಕ್ ನಾಟಕವಾದ ʻಈಡಿಪಸ್ʼ ನಿಂದ ಪ್ರಭಾವಿತರಾದಂತೆ ಕಾಣುತ್ತದೆ. ಕನ್ನಡ ಸಾಂಸ್ಕೃತಿಕ ಲೋಕದ ದಿಕ್ಕುದೆಸೆಗಳನ್ನು ಬದಲಿಸಿದ ಕವಿ, ಕಥೆಗಾರ, ವಿಮರ್ಶಕ, ಪತ್ರಕರ್ತ, ನಾಟಕಕಾರ, ಪಿ. ಲಂಕೇಶ್ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದರೂ, ಅದು ಕನ್ನಡದ್ದೇ ಎನ್ನುವಷ್ಟು ಮಣ್ಣಿನ ವಾಸನೆಯನ್ನು ಹೊಂದಿದೆ. ಈ ನಾಟಕ ʻಬ್ಲಿಂಕ್ʼ ನ ಒಂದು ಭಾಗವಾಗಿ ಕೂಡ ಚಿತ್ರದುದ್ದಕ್ಕೂ ಕಾಣಿಸಿಕೊಂಡು, ಚಿತ್ರ ಕುರಿತು ಹೊಸ ಹೊಳಹುಗಳನ್ನು ಹೊಳೆಸಲು ಕಾರಣವಾಗುತ್ತದೆ. ಲಂಕೇಶ್ ಆಕಾಶವಾಣಿಗೆ ನೀಡಿದ ಸಂದರ್ಶನದಲ್ಲಿ ಬರವಣಿಗೆಯ ಸೌಂದರ್ಯ ಮತ್ತು ಸವಾಲುಗಳ ಬಗ್ಗೆ ಮಾತನಾಡುವ ಧ್ವನಿಯೊಂದಿಗೆ ಬ್ಲಿಂಕ್ ಆರಂಭವಾಗುತ್ತದೆ. ಇದರಲ್ಲಿ ಒಂದು ಹೊಸ ತನವೂ ಇದೆ. ಬಹುಕಾಲದಿಂದ ಗುಣಮಟ್ಟದ ಚಲನಚಿತ್ರ ನಿರ್ಣಾಯಕ ಅಂಶಗಳಲ್ಲಿ ಒಂದಾದ ಕಥಾ ಬರವಣಿಗೆಗೆ ಗೌರವ ನೀಡುವ ಮೂಲಕ ಯಾವುದೇ ಕನ್ನಡ ಚಿತ್ರ ಅರಂಭವಾಗಿರಲಿಲ್ಲ. ʻಬ್ಲಿಂಕ್ʼ ಆ ದಿಕ್ಕಿನಲ್ಲಿ ಹೊಸ ಪ್ರಯತ್ನವೊಂದನ್ನು ಮಾಡಿದೆ.
ಸಮಯ ಪ್ರಯಾಣದ ಸಶಕ್ತ ನಿರೂಪಣೆ
ಒಬ್ಬ ಸೃಜನಶೀಲ, ಮಧ್ಯಮವರ್ಗದ, ಕನಸುಕಂಗಳ ಹುಡುಗನೊಬ್ಬನ ಬದುಕಿನಲ್ಲಿ ಎದುರಾಗುವ ಘಟನೆಗಳು, ಆ ಘಟನೆಗಳ ವಿವಿಧ ಆಯಾಮಗಳನ್ನು ತುಂಬ ಕಷ್ಟದಿಂದ ಹೆಣೆದು ಚಿತ್ರಕಥೆಯಾಗಿಸಿ, ತಮ್ಮೆಲ್ಲ ಸೂಕ್ಷ್ಮತೆಗಳೊಂದಿಗೆ ಕಟ್ಟಿಕೊಡಲು ಶ್ರೀನಿಧಿ ಪ್ರಯತ್ನಿಸಿದ್ದಾರೆ. ಒಂದಂತೂ ಸತ್ಯ. ಇದು ಸಾಮಾನ್ಯ ವಾಣಿಜ್ಯೋದ್ದೇಶದ ಚಿತ್ರವಲ್ಲ. ಇದರಲ್ಲಿ ಸಮಯ ಪ್ರಯಾಣದ ನಿರೂಪಣೆಯು ಸಂಗೀತ, ಕವನ ಮತ್ತು ರಂಗಭೂಮಿಯೊಂದಿಗೆ ಮನಬಂದಂತೆ ಆಡುತ್ತದೆ. ಚಿತ್ರದ ಕಾಲಾವಧಿಯಲ್ಲಿ ವೇಗವನ್ನು ಪಡೆದುಕೊಳ್ಳಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಆದರೆ ನಂತರ ನೂರಾಮುವತ್ತಾರು ನಿಮಿಷಗಳ ಕಾಲ ಚಿತ್ರವು ಭೂತ-ವರ್ತಮಾನಗಳ ನಡುವೆ ನಿರಂತರವಾಗಿ ಚಲಿಸುತ್ತಾ ಪ್ರೇಕ್ಷಕರನ್ನು ಅತಿ ಎಚ್ಚರದಿಂದ ಚಿತ್ರ ನೋಡುವಂತೆ ಪ್ರೇರೇಪಿಸುತ್ತದೆ. ಕೆಲವೊಮ್ಮೆ ಪ್ರೇಕ್ಷಕರನ್ನು ಗೊಂದಲಕ್ಕೆ ಈಡು ಮಾಡುತ್ತದೆ.
ವಿಶಿಷ್ಟ ರೀತಿಯ ಸಂಗೀತದ ಬಳಕೆ
ಆದರೆ, ತನ್ನ ವಿಶಿಷ್ಟ ರೀತಿಯ ಸಂಗೀತದ ಬಳಕೆ ಮತ್ತು ಕಥೆಯನ್ನು ಕಥಿಸುವ ರೀತಿಯಿಂದಾಗಿ ಕನ್ನಡ ಸಿನಿಮಾ ಲೋಕದಲ್ಲಿ ಹೊಸ ಅಲೆಗಳನ್ನು ಎಬ್ಬಿಸಿದೆ ಎನ್ನುತ್ತಾರೆ, ಸಂಗೀತವನ್ನು ತೀವ್ರವಾಗಿ ಅಭ್ಯಾಸಿಸುತ್ತಿರುವ ಲೇಖಕ ಎಂ. ಕೆ. ಶಂಕರ್. ತಮ್ಮ ಈ ಅನಿಸಿಕೆಗೆ ಆಂದ್ರೆಯಿ ತಾರ್ಕೊಸ್ಕಿ ಅವರ Sculpting in Time ಉದ್ಧರಿಸುತ್ತಾ ಶಂಕರ್, ʻಬ್ಲಿಂಕ್ʼ ಚಿತ್ರವನ್ನು ನೋಡುವ ರೀತಿಗೆ ತಾರ್ಕೋಸ್ಕಿ ಒಂದು ಸಂದರ್ಭವನ್ನು ಒದಗಿಸುತ್ತಾನೆ ಎನ್ನುತ್ತಾರೆ. ಈ ಚಿತ್ರ ಕಾಲದ ಪ್ರಯಾಣ ಕುರಿತು ಹಲವು ಪ್ರಶ್ನೆಗಳನ್ನು ಎತ್ತುತ್ತದೆ ಎನ್ನುತ್ತಾರೆ. ಶಂಕರ್ ಅವರ ಪ್ರಕಾರ ಎಂ. ಎಸ್. ಪ್ರಸನ್ನಕುಮಾರ್ ಅವರ ಹಿನ್ನೆಲೆ ಸಂಗೀತ ʻಬ್ಲಿಂಕ್ʼ ನ ದೃಶ್ಯಚಲನೆಗೆ ಒಂದು ರೀತಿಯಲ್ಲಿ ನಾದ-ಲಯ ಒದಗಿಸುತ್ತದೆ. ಈ ಚಿತ್ರದ ವಿಶೇಷವೆಂದರೆ, ರಂಗಭೂಮಿ, ಸಿನಿಮಾ, ಸಾಹಿತ್ಯ, ಸಂಗೀತ ಹಾಗೂ ರಾಜಕಾರಣ ಎಲ್ಲವನ್ನೂ ಒಳಗೊಂಡು ಕಥನವೊಂದನ್ನು ಕಟ್ಟಿಕೊಡುವ ರೀತಿ. ಕರ್ನಾಟಕ್, ಹಿಂದೂಸ್ತಾನಿ, ಪಾಶ್ಚಿಮಾತ್ಯ ಸಂಗೀತಗಳಾದ ರಾಪ್, ಬ್ಲೂಗ್ರಾಸ್ ಸಂಗೀತಗಳ ಯಶಸ್ವಿ ಪ್ರಯೋಗ ಇಲ್ಲಿ ನಡೆದಿದೆ. ʻಬ್ಲಿಂಕ್ʼ ನ ಸಂಗೀತ ಒದರ್ಥದಲ್ಲಿ ಬಹು ಸಂಗೀತ ವಾದ್ಯಗಳ ಸಂಗಮ. ಇದರಲ್ಲಿ ತಮ್ಮಟೆ, ಡ್ರಮ್, ತಬಲಾ, ಢೋಲ್, ಮೃದಂಗ, ಪಿಯಾನೋ, ಪಿಟೀಲು, ಎಲ್ಲದರ ಹದವರಿತ ಅರ್ಥಪೂರ್ಣ ಬೆರಕೆ ಇದೆ.
ವಿರೋಧಾಭಾಸ
ಇಲ್ಲಿ ಕೆಲವು ತಾಂತ್ರಿಕ-ತಾತ್ವಿಕ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ. ಕಾಲದ ಗತಿಯನ್ನು ಕುರಿತು ಯೋಚಿಸಿದಾಗ ನೆನಪಾಗುವುದು. Grandfather paradox (ತಾತನ ವಿರೋಧಾಭಾಸ) ಎಂಬ (Time Travel) ವಿವರಿಸಲಾಗದ ಸಂದರ್ಭದ ಕಲ್ಪನೆ. ಕಾಲದ ಗತಿಯ ಪರಿಸ್ಥಿತಿಯ ಸ್ವ ವಿರೋಧಾಭಾಸ (A self contradictory situation that arises in some time travel) ಈ ಥಿಯರಿಯ ಪ್ರಕಾರ, ಒಬ್ಬ ತನ್ನ ಕಾಲದಲ್ಲಿ ಹಿಂದಕ್ಕೆ ಚಲಿಸಿ ತನ್ನ ತಾತನನ್ನು ಕೊಲೆಮಾಡಲು ಸಾಧ್ಯವಿಲ್ಲ ಎನ್ನುವುದು. ಇದೇ ತರ್ಕ ಏಕೆ ಶ್ರೀನಿಧಿ ಅವರನ್ನು Time Travel ಬಗ್ಗೆ ಚಿತ್ರ ಮಾಡುವಾಗ ಏಕೆ ಹೊಳೆದಿಲ್ಲ. ಹಾಗಾಗಿ ಇಡೀ ಕಥನದ ಅಡಿಪಾಯದಲ್ಲಿಯೇ ದೋಶವಿದೆ ಎಂದೆನ್ನಿಸುವುದಿಲ್ಲವೇ? ಎಂಬ ಪ್ರಶ್ನೆ ಕಾಡುತ್ತದೆ. ಕಥೆಯೇ ಕಾಲ್ಪನಿಕ, ಅದರಲ್ಲಿ ಸೃಜನಾತ್ಮಕ ಸ್ವಾತಂತ್ರ್ಯವಿರುತ್ತದೆ ಎಂಬ ತರ್ಕಕ್ಕೆ ಇಳಿದರೆ ಮಾತ್ರ ಪಾಮರ ವಿಮರ್ಶಕರು ಶಕ್ತಿಹೀನರಾಗುತ್ತಾರೆ.