
Sandalwood | ಬಂಡವಾಳಕ್ಕಾಗಿ ಪರದಾಟ; ಪುಸ್ತಕ ಮಾರಿ ಸಿನೆಮಾ ಮಾಡಲು ಹೊರಟ ಯುವಕರು
ಬಂಡವಾಳಕ್ಕಾಗಿ ನಿರ್ಮಾಪಕರ ಮನೆ ಬಾಗಿಲಿಗೆ ಅಲೆದು ಸುಸ್ತಾಗಿ ತಾವೇ ಬಂಡವಾಳದ ಮೂಲ ಕಂಡುಕೊಂಡಿರುವ ಯುವಕರ ತಂಡ, ರಾಜ್ಯ ಸುತ್ತಿ ಹಳೆ ತಲೆಮಾರಿನ ಅಜ್ಜ ಅಜ್ಜಿಯರು ಹೇಳಿದ ಕಥೆಗಳ ಪುಸ್ತಕ ಮಾಡಿ ಮಾರಾಟದ ಹಾದಿ ಹಿಡಿದಿದ್ದಾರೆ.
ಸಿನಿಮಾ ಹುಚ್ಚು ಯರ್ಯಾರನ್ನು ಏನೇನು ಮಾಡಲು ಹಚ್ಚುತ್ತದೆಯೋ ಗೊತ್ತಿಲ್ಲ. ಹೇಗಾದರೂ ಮಾಡಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆಂದು ಗಾಂಧಿನಗರದಲ್ಲಿ ಅಲೆದಾಡಿ, ಊಟವಿಲ್ಲದೇ, ಇರಲು ಜಾಗವಿಲ್ಲದೇ ಅವರಿವರ ಮನೆ ಬಾಗಿಲು ಕಾಯ್ದು ಅವಕಾಶಕ್ಕಾಗಿ ಅವರ ಸೇವೆ ಮಾಡಿ ಸಿನೆಮಾ ನಟನೊ, ನಿರ್ದೇಶಕನೋ, ತಂತ್ರಜ್ಞನೊ ಆಗಲು ನಿತ್ಯವೂ ಹೆಣಗಾಡುವವರಿಗೇನು ಕಡಿಮೆ ಇಲ್ಲ. ಈ ಮಾಯಾಲೋಕದ ಆಕರ್ಷಣೆಯೇ ಹಾಗೆ, ಅದೊಂದು ನಶೆಯಂತೆ ಏರಿದರೆ ಇಳಿಯುವುದೇ ಇಲ್ಲ.
ಸ್ಯಾಂಡಲ್ ವುಡ್ ನಲ್ಲಿ ಏನಾದರೂ ಸಾಧಿಸಬೇಕೆಂದು ಇಲ್ಲೊಂದು ಯುವಕರ ತಂಡ ಚಿತ್ರ ಮಾಡಲು ತೀರ್ಮಾನಿಸಿ ಬಂಡವಾಳಕ್ಕಾಗಿ ನಿರ್ಮಾಪಕರ ಮನೆ ಬಾಗಿಲಿಗೆ ಅಲೆದು ಸುಸ್ತಾಗಿ ತಾವೇ ಬಂಡವಾಳದ ಮೂಲ ಕಂಡುಕೊಂಡಿದ್ದು, ಚಿತ್ರನಿರ್ಮಿಸಲು ತಾವೇ ರಾಜ್ಯ ಸುತ್ತಿ ಹಳೆ ತಲೆಮಾರಿನ ಅಜ್ಜ ಅಜ್ಜಿಯರು ಹೇಳಿದ ಕಥೆಗಳ ಪುಸ್ತಕ ಮಾಡಿ ಮಾರಾಟದ ಹಾದಿ ಹಿಡಿದಿದ್ದಾರೆ. ಅದರಿಂದ ಬಂದ ಹಣದಲ್ಲಿ ಚಿತ್ರ ನಿರ್ಮಿಸಲು ತೀರ್ಮಾನಿಸಿದ್ದಾರೆ.
ರಂಗಭೂಮಿಯಲ್ಲಿ ಹವ್ಯಾಸಿ ಕಲಾವಿದರಾಗಿರುವ ಸುಮಾರು 40 ಯುವಕರ ತಂಡ ಸಿನೆಮಾ ಮಾಡಬೇಕೆಂಬ ಹುಚ್ಚಿನಿಂದ ʼನಿಧಿʼ ಎಂಬ ಪುಸ್ತಕವನ್ನು ಮಾಡಿ ಅದನ್ನು ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ, ಧಾರವಾಡದಲ್ಲಿ ನಡೆದ ಪುಸ್ತಕ ಮೇಳ ಸೇರಿದಂತೆ ರಾಜ್ಯದ ವಿವಿಧೆಡೆ ನಡೆಯುವ ಪುಸ್ತಕ ಸಂತೆಗಳಲ್ಲಿ ಸ್ಟಾಲ್ ಹಾಕಿಕೊಂಡು ನಿಧಿ ಸಂಗ್ರಹ ಮಾಡುತ್ತಿದ್ದಾರೆ.
ಪ್ರಸ್ತುತ ವಿಧಾನ ಸೌಧದ ಆವರಣದಲ್ಲಿ ನಡೆಯುತ್ತಿರುವ ಪುಸ್ತಕ ಮೇಳದಲ್ಲಿ ವಿಕಾಸಸೌಧ - ವಿಧಾನ ಸೌಧದ ಮಧ್ಯದ ಮಾರ್ಗದಲ್ಲಿ ನಿಧಿ ತಂಡದ ಯುವಕರು ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಹಾದು ಹೋಗುವವರಿಗೆಲ್ಲ ತಮ್ಮ ಪುಸ್ತಕ ಮಾರಾಟದ ಉದ್ದೇಶವನ್ನು ಮನವರಿಕೆ ಮಾಡಿ ಪುಸ್ತಕ ಕೊಂಡು ಯುವ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಮನವರಿಕೆ ಮಾಡುವ ಸಾಹಸ ಮಾಡುತ್ತಿದ್ದಾರೆ.
ಪುಸ್ತಕ ಓದುವ ಹವ್ಯಾಸವೇ ಕಡಿಮೆ ಆಗುತ್ತಿರುವ ಈಗಿನ ಕಾಲದಲ್ಲಿ ಪುಸ್ತಕ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಸಂಗ್ರಹಿಸಲು ಮುಂದಾಗಿರುವ ಈ ಉತ್ಸಾಹಿ ಯುವಕರ ತಂಡ ಈಗಾಗಲೇ ʼಇಲ್ಲೀಗಲ್ʼ ಎಂಬ ಚಿತ್ರವನ್ನು ನಿರ್ಮಿಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಈಗಾಗಲೇ ಸುಮಾರು 18 ಸಾವಿರ ನಿಧಿ ಕಥಾಸಂಕಲನದ ಪುಸ್ತಕವನ್ನೂ ಮಾರಾಟ ಮಾಡಿದ್ದಾರೆ.
ಇನ್ನೂ ಎರಡು ಮೂರು ತಿಂಗಳು ರಾಜ್ಯದ ವಿವಿಧ ಮೂಲೆಗಳಲ್ಲಿ ನಡೆಯುವ ಪುಸ್ತಕೋತ್ಸವ, ಸಮೇಳನಗಳಲ್ಲಿ ಪುಸ್ತಕ ಮಾರಾಟ ಮಾಡಿ ಹಣ ಸಂಗ್ರಹಿಸಿ ಚಿತ್ರ ನಿರ್ಮಿಸುವ ತಮ್ಮ ಹುಚ್ಚು ಕನಸನ್ನು ಸಾಕಾರಗೊಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ.
ನಾವು ರಂಗಭೂಮಿ ಕಲಾವಿದರು ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುತ್ತ ನಾವೇ ಒಂದು ಸಿನಿಮಾ ಮಾಡಬೇಕೆಂದು ಆಲೋಚನೆ ಮಾಡಿ ಕಥೆ ರೆಡಿ ಮಾಡಿಕೊಂಡು ನಿರ್ಮಾಪಕರಿಗಾಗಿ ಅಲೆದಾಡಿದೆವು, ನಮ್ಮ ಪ್ರಯತ್ನಕ್ಕೆ ಯಾರೂ ಸ್ಪಂದಿಸಲಿಲ್ಲ. ಹೀಗಾಗಿ ನಾವು ಪುಸ್ತಕ ಮಾಡಿ ಮಾರಾಟ ಮಾಡುವ ಮೂಲಕ ಈ ಪ್ರಯತ್ನಕ್ಕೆ ಕೈಹಾಕಿದ್ದೇವೆ ಎಂದು ಇಲ್ಲೀಗಲ್ ಚಿತ್ರದ ನಿರ್ದೇಶಕ ಕೌಶಿಕ್ ರತ್ನ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ಇಲ್ಲೀಗಲ್ ಚಿತ್ರ
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಬೇಸ್ಡ್ ಚಿತ್ರಗಳೇ ಹೆಚ್ಚಾಗಿ ಬರುತ್ತಿದ್ದು ಕಥೆಗೆ ಹೆಚ್ಚು ಮಹತ್ವ ಇಲ್ಲದ ಕಾರಣ ಕನ್ನಡ ಚಿತ್ರಗಳು ಚಿತ್ರಮಂದಿರದಲ್ಲಿ ಸೋಲು ಕಾಣುತ್ತಿದ್ದು, ಉತ್ತಮ ಕಂಟೆಂಟ್ ಇರುವ ಚಿತ್ರ ನಿರ್ಮಿಸಿದರೆ, ಪ್ರೇಕ್ಷಕರು ತಾವಾಗಿಯೇ ಚಿತ್ರಮಂದಿರಗಳಿಗೆ ಬರುತ್ತಾರೆ ಎನ್ನುವ ಅದಮ್ಯ ವಿಶ್ವಾಸ ಈ ಚಿತ್ರತಂಡಕ್ಕಿದೆ.
ಆ ಹಿನ್ನೆಲೆಯಲ್ಲಿ ಈಗಾಗಲೇ ಇಲ್ಲೀಗಲ್ ಎಂಬ ಶಿರ್ಷಿಕೆಯ ಚಿತ್ರದ ಪ್ರಿ- ಪ್ರೋಡಕ್ಸನ್ ಕೆಲಸ ಆರಂಭಿಸಿದ್ದು, ಇನ್ನು ಮೂರು ತಿಂಗಳಲ್ಲಿ ನಿಧಿ ಪುಸ್ತಕ ಮಾರಾಟದಿಂದ ಬರುವ ಹಣವನ್ನು ಸೇರಿಸಿ ಸಿನೆಮಾ ಶೂಟಿಂಗ್ ಆರಂಭಿಸಲು ರತ್ನಾ ಚಿತ್ರ ತಂಡ ತೀರ್ಮಾಸಿದೆ.
ಗೆಲ್ಲುವ ವಿಶ್ವಾಸ
ಕನ್ನಡದಲ್ಲಿ ಪ್ರತಿ ವರ್ಷ ನಿರ್ಮಾಣವಾಗುವ 250-300 ಚಿತ್ರಗಳಲ್ಲಿ ಥಿಯೇಟರ್ ಗೆ ಬಂದು ಪ್ರೇಕ್ಷಕರಿಗೆ ತಲುಪುವುದು ಬೆರಳೆಣಿಕೆಯ ಹತ್ತಿಪ್ಪತ್ತು ಚಿತ್ರಗಳು ಮಾತ್ರ, ಇಂತಹ ಪರಿಸ್ಥಿತಿಯಲ್ಲಿ ತಮ್ಮ ಶ್ರಮಕ್ಕೆ ಪ್ರೇಕ್ಷಕರು ಬೆಲೆ ಕೊಡುತ್ತಾರೆ ಎನ್ನುವ ವಿಶ್ವಾಸ ಹೊಂದಿರುವ ಇವರು, ತಾವು ಮಾರುವ ಪುಸ್ತಕ ಕೊಂಡುಕೊಳ್ಳುವ ಎಲ್ಲರಿಂದಲೂ ಮೊಬೈಲ್ ನಂಬರ್ ಪಡೆದು ತಮ್ಮ ಚಿತ್ರ ನಿರ್ಮಾಣವಾಗಿ ಚಿತ್ರಮಂದಿರಕ್ಕೆ ಬಂದಾಗ ಅವರನ್ನು ಸಂಪರ್ಕಿಸಿ ತಮ್ಮ ಚಿತ್ರ ನೋಡುವಂತೆ ಮನವೊಲಿಸುವ ಹೊಸ ಸಾಹಸ ಮಾಡುವ ಆಲೋಚನೆಯಲ್ಲಿದ್ದಾರೆ.
"ಜನರಿಗೆ ಚಿತ್ರದ ಜೊತೆಗೆ ಸಾಹಿತ್ಯಾಸಕ್ತಿಯನ್ನೂ ಬೆಳೆಸುವ ಸಣ್ಣ ಪ್ರಯತ್ನ ನಮ್ಮದು, ನಮ್ಮ ಈ ಹೊಸ ಪ್ರಯತ್ನಕ್ಕೆ ಕನ್ನಡಿಗರು ಬೆನ್ನುವ ತಟ್ಟುತ್ತಾರೆ ಎನ್ನುವ ವಿಶ್ವಾಸ ಇದೆ," ಎಂದು ಕೌಶಕ್ ರತ್ನ ವಿವರಿಸಿದ್ದಾರೆ.
ಆ ಮೂಲಕ ತಮ್ಮ ಪುಸ್ತಕ ಖರೀದಿದಾರರನ್ನೇ ತಮ್ಮ ಚಿತ್ರದ ಪ್ರೇಕ್ಷಕರನ್ನಾಗಿ ಮಾಡಿಕೊಂಡು ನಂತರ ಅವರನ್ನೇ ತಮ್ಮ ಚಿತ್ರದ ಅಂಬಾಸಿಡರ್ ಗಳಾಗಿ ಪರಿವರ್ತಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಚಿತ್ರ ರಂಗದ ಅಸಕ್ತಿ ಹೊಂದಿರುವ ಈ ಉತ್ಸಾಹಿ ಯುವಕರ ಪ್ರಯತ್ನಕ್ಕೆ ಕನ್ನಡ ಚಿತ್ರರಂಗ ಹಾಗೂ ಪ್ರೇಕ್ಷಕರು ಯಾವ ರೀತಿ ಸ್ಪಂದಿಸುತ್ತಾರೆ ಎಂಬ ನಂಬಿಕೆ ಕೈಗೂಡಲಿದೆ ಎಂಬ ಭರವಸೆ ಅವರಿಗಿದೆ.