ಏರುತ್ತಿದೆ ಕನ್ನಡ ಚಿತ್ರಗಳ ಬಿಡುಗಡೆ ಸಂಖ್ಯೆ; ಎರಡು ತಿಂಗಳಲ್ಲಿ 50 ಚಿತ್ರಗಳ ಬಿಡುಗಡೆ
x
ಭುವನಂ ಗಗನಂ

ಏರುತ್ತಿದೆ ಕನ್ನಡ ಚಿತ್ರಗಳ ಬಿಡುಗಡೆ ಸಂಖ್ಯೆ; ಎರಡು ತಿಂಗಳಲ್ಲಿ 50 ಚಿತ್ರಗಳ ಬಿಡುಗಡೆ

ಮಾರ್ಚ್‌ ತಿಂಗಳಲ್ಲಿ ಐಪಿಎಲ್‍ ಶುರುವಾಗುವುದರಿಂದ, ಆಗ ಚಿತ್ರಗಳ ಬಿಡುಗಡೆಯ ಸಂಖ್ಯೆ ಕ್ರಮೇಣ ಇಳಿಮುಖವಾಗುವ ಸಾಧ್ಯತೆ ಇದೆ.


ಒಂದು ಕಡೆ ಕರ್ನಾಟಕದಲ್ಲಿ ಬಿಸಿಲ ಝಳ ದಿನದಿಂದ ದಿನಕ್ಕೆ ಏರುತ್ತಿದ್ದರೆ, ಇನ್ನೊಂದು ಕಡೆ ಕನ್ನಡ ಚಿತ್ರಗಳ ಬಿಡುಗಡೆ ಸಂಖ್ಯೆಯೂ ಅಷ್ಟೇ ವೇಗದಲ್ಲಿ ಏರುತ್ತಿದೆ. ಇದೇ ವೇಗದಲ್ಲಿ ಚಿತ್ರಗಳು ಬಿಡುಗಡೆಯಾಗುತ್ತಿದ್ದರೆ, ಫೆಬ್ರವರಿ ತಿಂಗಳು ಮುಗಿಯುವ ಹೊತ್ತಿಗೆ 50 ಚಿತ್ರಗಳು ಬಿಡುಗಡೆಯಾದರೆ ಆಶ್ಚರ್ಯವಿಲ್ಲ.

ಜನವರಿ ತಿಂಗಳಲ್ಲಿ 40 ಕೋಟಿ ನಷ್ಟ!

ಕಳೆದ ವರ್ಷ ಕನ್ನಡ ಚಿತ್ರರಂಗಕ್ಕೆ ಅಷ್ಟೇನೂ ಒಳ್ಳೆಯ ವರ್ಷವಾಗಿರಲಿಲ್ಲ. ಖ್ಯಾತಿ ಮತ್ತು ಯಶಸ್ಸಿಗಿಂತ, ಅಪಖ್ಯಾತಿ ಮತ್ತು ನಷ್ಟವೇ ಹೆಚ್ಚಾಗಿತ್ತು. 2025ರಲ್ಲಿ ಪರಿಸ್ಥಿತಿ ಸ್ವಲ್ಪ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ, ಈ ವರ್ಷವೂ ಅಷ್ಟೇನೂ ಉತ್ತಮವಾಗಿಲ್ಲ ಎಂದು ಕ್ರಮೇಣ ಗ್ರಹಿಕೆಗೆ ಬರುತ್ತಿದೆ. ಜನವರಿ ತಿಂಗಳಲ್ಲಿ 22 ಚಿತ್ರಗಳು ಬಿಡುಗಡೆಯಾಗಿದ್ದು, ಯಾವೊಂದು ಚಿತ್ರವು ಯಶಸ್ವಿಯಾಗಲಿಲ್ಲ. ಯಶಸ್ವಿಯಾಗುವುದು ನಂತರದ ಮಾತು. ಶೇ. 90ರಷ್ಟು ಚಿತ್ರಗಳು ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವುದಕ್ಕೂ ಸಾಧ್ಯವಾಗಲಿಲ್ಲ. ಒಟ್ಟಾರೆ, ಜನವರಿ ತಿಂಗಳಲ್ಲಿ ಚಿತ್ರರಂಗಕ್ಕೆ 40 ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ.

ಫೆಬ್ರವರಿ ಮೊದಲೆರಡು ವಾರಗಳಲ್ಲಿ 14 ಚಿತ್ರಗಳ ಬಿಡುಗಡೆ

ಫೆಬ್ರವರಿಯೂ ಅದಕ್ಕಿಂತ ವಿಭಿನ್ನವಾಗೇನೂ ಇಲ್ಲ. ಫೆಬ್ರವರಿಯ ಮೊದಲೆರಡು ವಾರಗಳಲ್ಲಿ ಒಟ್ಟು 14 ಚಿತ್ರಗಳು ಬಿಡುಗಡೆಯಾಗಿವೆ. ಅದರಲ್ಲೂ ಮೊದಲ ವಾರವೇ ಎಂಟು ಚಿತ್ರಗಳು ಬಿಡುಗಡೆಯಾಗಿವೆ. ಫೆಬ್ರವರಿ 07ರಂದು ‘ಗಜರಾಮ’, ‘ಭಗೀರತ’, ‘ಮಿಸ್ಟರ್ ರಾಣಿ’, ‘ತಲ್ವಾರ್’, ‘ಅಧಿಪತ್ರ’, ‘ಅನ್‍ಲಾಕ್ ರಾಘವ’, ‘ಅನಾಮಧೇಯ ಅಶೋಕ್‍ ಕುಮಾರ್’ ಮತ್ತು ‘ಶರಣರ ಶಕ್ತಿ’ ಚಿತ್ರಗಳು ಬಿಡುಗಡೆಯಾದವು. ಈ ಪೈಕಿ ‘ಅನಾಮಧೇಯ ಅಶೋಕ್‍ ಕುಮಾರ್’ ಚಿತ್ರವು ತನ್ನ ವಿಭಿನ್ನ ಕಥಾಹಂದರದಿಂದ ಸ್ವಲ್ಪ ಗಮನಸೆಳೆದರೆ, ಮಿಕ್ಕಂತೆ ಯಾವ ಚಿತ್ರವೂ ದೊಡ್ಡ ಸದ್ದು ಮಾಡಲಿಲ್ಲ. ಇನ್ನು, ಎಂಟೂ ಚಿತ್ರಗಳು ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವಲ್ಲಿ ಸೋತಿವೆ.

ಫೆಬ್ರವರಿ ಎರಡನೇ ವಾರ ಪ್ರೇಮಿಗಳ ದಿನದ ಅಂಗವಾಗಿ ‘ಸಿದ್ಲಿಂಗು 2’, ‘ಭುವನಂ ಗಗನಂ’, ‘ರಾಜು ಜೇಮ್ಸ್ ಬಾಂಡ್‍’, ‘ಜಸ್ಟೀಸ್‍’ ಮತ್ತು ‘ನಿಮಿತ್ತ ಮಾತ್ರ’ ಚಿತ್ರಗಳು ಬಿಡುಗಡೆಯಾಗಿವೆ. ಇದರಲ್ಲಿ ‘ಸಿದ್ಲಿಂಗು 2’ ಮತ್ತು ‘ಭುವನಂ ಗಗನಂ’ ಚಿತ್ರಗಳ ಬಗ್ಗೆ ತಕ್ಕ ಮಟ್ಟಿಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ. ಆದರೆ, ದೊಡ್ಡ ಕಲೆಕ್ಷನ್‍ ಏನೂ ಇಲ್ಲ. ಇನ್ನು, ‘ಜಸ್ಟೀಸ್‍’ ಮತ್ತು ‘ನಿಮಿತ್ತ ಮಾತ್ರ’ ಚಿತ್ರಗಳು ಬಿಡುಗಡೆಯಾಗಿದ್ದೇ ಗೊತ್ತಾಗಲಿಲ್ಲ.

ಈ ಶುಕ್ರವಾರ 10 ಚಿತ್ರಗಳ ಬಿಡುಗಡೆ

ಈ ಶುಕ್ರವಾರ (ಫೆ 21) ದಾಖಲೆಯ 10 ಚಿತ್ರಗಳು ಬಿಡುಗಡೆಯಾಗುತ್ತಿವೆ. ಒಂದೇ ವಾರ ಇಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹೊಸದೇಲ್ಲ. ಈ ಹಿಂದೆಯೂ ಬಿಡುಗಡೆಯಾಗಿವೆ. ಆದರೆ, ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ 10 ಚಿತ್ರಗಳು ಒಂದೇ ವಾರ ಬಿಡುಗಡೆಯಾಗುತ್ತಿದೆ. ‘ವಿಷ್ಣುಪ್ರಿಯ’, ‘ಕ್ಯಾಪಿಟಲ್‍ ಸಿಟಿ’, ‘ಶ್ಯಾನುಭೋಗರ ಮಗಳು’, ‘ಎಲ್ಲೋ ಜೋಗಪ್ಪ ನಿನ್ನರಮನೆ’, ‘ಎದ್ದೇಳು ಮಂಜುನಾಥ 2’, ‘ವಿದ್ಯಾ ಗಣೇಶ’, ‘ನನಗೂ ಲವ್ವಾಗಿದೆ’, ‘ಒಲವಿನ ಪಯಣ’, ‘ಗಗನ ಕುಸುಮ’, ‘ಭಾವ ತೀರ ಯಾನ’ ಮತ್ತು ‘ನಿಮಗೊಂದು ಸಿಹಿ ಸುದ್ದಿ ಚಿತ್ರಗಳು ಬಿಡುಗಡೆಯಾಗುವುದಾಗಿ ಈಗಾಗಲೇ ಘೋಷಣೆಯಾಗಿವೆ. ಈ ಪೈಕಿ ಎಷ್ಟು ಮೈನಸ್‍ ಆಗುತ್ತದೆ ಎಂಬುದು ಶುಕ್ರವಾರವೇ ಗೊತ್ತಾಗಬೇಕು. ಈ ಪೈಕಿ ಒಂದೆರಡು ನಿರೀಕ್ಷಿತ ಚಿತ್ರಗಳಿವೆಯಾದರೂ, ಅಂತಿಮವಾಗಿ ಯಾವ ಚಿತ್ರ ನಿಲ್ಲುತ್ತದೆ ನೋಡಬೇಕು.

ಫೆಬ್ರವರಿ ಕೊನೆಯ ವಾರಕ್ಕೆ ಆರು ಚಿತ್ರಗಳು

ಇನ್ನು, ಫೆಬ್ರವರಿ ಕೊನೆಯ ಶುಕ್ರವಾರ (ಫೆ.28) ಈಗಾಗಲೇ ಆರು ಚಿತ್ರಗಳು ಬಿಡುಗಡೆಯಾಗುವುದಾಗಿ ಘೋಷಣೆಯಾಗಿವೆ. ‘1990s’, ‘ರಾಕ್ಷಸ’, ‘ಅಪಾಯವಿದೆ ಎಚ್ಚರಿಕೆ’, ‘ಶಭಾಷ್‍ ಬಡ್ಡಿಮಗನೆ’, ‘ನಾಗವಲ್ಲಿ ಬಂಗಲೆ’ ಮತ್ತು ‘ಮಾಂಕ್‍ ದಿ ಯಂಗ್‍’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಆರು ಚಿತ್ರಗಳ ಜೊತೆಗೆ ಕೊನೆಯ ಕ್ಷಣದಲ್ಲಿ ಇನ್ನಷ್ಟು ಚಿತ್ರಗಳು ಬಿಡುಗಡೆಯಾಗುತ್ತವೋ, ಈಗಲೇ ಹೇಳುವುದು ಕಷ್ಟ.

ಮೊದಲೆರಡು ತಿಂಗಳಲ್ಲಿ 50ಕ್ಕೂ ಹೆಚ್ಚು ಚಿತ್ರಗಳ ಬಿಡುಗಡೆ

ಈಗಾಗಲೇ ಫೆಬ್ರವರಿಯ ಮೊದಲೆರಡು ವಾರಗಳಲ್ಲಿ 14 ಚಿತ್ರಗಳು ಬಿಡುಗಡೆಯಾಗಿದ್ದು, ಮುಂದಿನ ಇನ್ನೆರಡು ವಾರಗಳಲ್ಲಿ 16 ಚಿತ್ರಗಳು ಬಿಡುಗಡೆಯಾಗಲಿಕ್ಕಿವೆ. ಒಟ್ಟಾರೆ ಈ ತಿಂಗಳು 30ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಲಿವೆ. ಜನವರಿಯಲ್ಲಿ ಒಟ್ಟು 22 ಚಿತ್ರಗಳು ಬಿಡುಗಡೆಯಾಗಿದ್ದು, ಒಟ್ಟಾರೆ ಮೊದಲೆರಡು ತಿಂಗಳಲ್ಲಿ 52 ಚಿತ್ರಗಳ ಬಿಡುಗಡೆಯನ್ನು ಕಂಡಂತಾಗುತ್ತದೆ. ಚಿತ್ರಗಳ ಬಿಡುಗಡೆ ಸಂಖ್ಯೆಯೇನೋ ಹೆಚ್ಚುತ್ತಲೇ ಇದೆ. ಆದರೆ, ನೋಡುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ.

ಮಾರ್ಚ್‌ ತಿಂಗಳಲ್ಲಿ ಐಪಿಎಲ್‍ ಶುರುವಾಗುವುದರಿಂದ, ಆಗ ಚಿತ್ರಗಳ ಬಿಡುಗಡೆಯ ಸಂಖ್ಯೆ ಕ್ರಮೇಣ ಇಳಿಮುಖವಾಗುವ ಸಾಧ್ಯತೆ ಇದೆ.

Read More
Next Story