‘ಶಿವಣ್ಣ–ಉಪೇಂದ್ರ–ರಾಜ್ ಬಿ ಶೆಟ್ಟಿ ಒಂದೇ ಫ್ರೇಮಿನಲ್ಲಿ: ‘45’ನ  ಜನ್ಯ ಪ್ರಯೋಗ
x

‘ಶಿವಣ್ಣ–ಉಪೇಂದ್ರ–ರಾಜ್ ಬಿ ಶೆಟ್ಟಿ ಒಂದೇ ಫ್ರೇಮಿನಲ್ಲಿ: ‘45’ನ ಜನ್ಯ ಪ್ರಯೋಗ

ತಾಯಿ ಸೆಂಟಿಮೆಂಟ್, ಪ್ರೀತಿ, ಸೇಡು ಮತ್ತು ತಾತ್ವಿಕ ಪ್ರಶ್ನೆಗಳ ಸಂಗಮವಿದೆ. ಗ್ರಾಫಿಕ್ಸ್, ಹಿನ್ನೆಲೆ ಸಂಗೀತ ಮತ್ತು ಅಭಿನಯದ ಮೇಲೆ ನಿಂತಿರುವ ಹಾಗೂ ಮಾಸ್ ಹಾಗೂ ತಾತ್ವಿಕ ಪ್ರೇಕ್ಷಕರನ್ನು ತಲುಪುವ ಪ್ರಯತ್ನವಿದೆ.


Click the Play button to hear this message in audio format

ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಲ್ಟಿಸ್ಟಾರರ್‍ ಚಿತ್ರಗಳ ಸಂಖ್ಯೆ ಬಹಳ ಕಡಿಮೆ ಆಗುತ್ತಿದೆ. ಹೀಗಿರುವಾಗ, ಸಂಗೀತ ನಿರ್ದೇಶಕ ಅರ್ಜುನ್‍ ಜನ್ಯ ತಮ್ಮ ಮೊದಲ ನಿರ್ದೇಶನದ ಪ್ರಯತ್ನದಲ್ಲಿ ಕನ್ನಡದ ಮೂವರು ಜನಪ್ರಿಯ ನಟರನ್ನು ಒಂದುಗೂಡಿಸುವುದಕ್ಕೆ ಪ್ರಯತ್ನ ಮಾಡಿದ್ದಾರೆ. ಅದರ ಜೊತೆಗೆ ಪುರಾಣ, ಕರ್ಮ ಸಿದ್ಧಾಂತ ಮುಂತಾದ ಗಹನವಾದ ವಿಷಯವನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.

ವಿನಯ್ (ರಾಜ್ ಬಿ ಶೆಟ್ಟಿ) ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಒಮ್ಮೆ ಆಫೀಸಿಗೆ ಹೋಗುವ ಭರದಲ್ಲಿ ರೋಸಿ ಎಂಬ ನಾಯಿಗೆ ಬೈಕ್‍ನಲ್ಲಿ ಗುದ್ದಿ, ಅದು ತಕ್ಷಣ ಸಾವೀಗಾಡುತ್ತದೆ. ಆ ರೋಸಿ, ರಾಯಪ್ಪನ (ಉಪೇಂದ್ರ) ಜೀವ. ಅದು ನಾಯಿಯಲ್ಲ, ತಾಯಿ ಎಂದು ನಂಬಿರುವ ರಾಯಪ್ಪ, ವಿನಯ್‍ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾಬೆ. 45 ದಿನಗಳಲ್ಲಿ ಆತನನ್ನು ಸಾಯಿಸುವುದಾಗಿ ಸವಾಲೊಡ್ಡುತ್ತನೆ. ರಾಯಪ್ಪನ ಭಯದಲ್ಲಿ ತತ್ತರಿಸಿರುವ ವಿನಯ್‍ಗೆ ಧೈರ್ಯ ತುಂಬುವುದಕ್ಕೆ ಶಿವಪ್ಪ (ಶಿವರಾಜಕುಮಾರ್‍) ಬರುತ್ತಾನೆ. 45 ದಿನಗಳಲ್ಲಿ ಅಂತ್ಯದಲ್ಲಿ ವಿನಯ್‍ನನ್ನು ರಾಯಪ್ಪ ಸಾಯಿಸುತ್ತಾನಾ? ರಾಯಪ್ಪನಿಂದ ಶಿವಪ್ಪ ರಕ್ಷಿಸುತ್ತಾನಾ? ಎಂಬುದು ಚಿತ್ರದ ಕಥೆ.

ಮೊದಲೇ ಹೇಳಿದಂತೆ ‘45’ ಒಂದು ಫಿಲಾಸಫಿಕಲ್‍ ಚಿತ್ರ. ಗರುಡ ಪುರಾಣದ ಪ್ರಕಾರ ಸತ್ತ ವ್ಯಕ್ತಿಯ ಆತ್ಮವು ಅಂತಿಮ ಗಮ್ಯವನ್ನು ತಲುಪಲು 45 ದಿನಗಳು ಬೇಕಾಗುತ್ತವೆ ಎಂಬ ನಂಬಿಕೆ ಇದೆ. ಆ 45 ದಿನಗಳಲ್ಲಿ ಆತ್ಮ ಏನೆಲ್ಲಾ ಅನುಭವಿಸುತ್ತದೆ ಎಂಬುದನ್ನು ರೂಪಕವನ್ನಾಗಿ ಬಳಸಿ ಚಿತ್ರ ನಿರೂಪಿಸಿದ್ದಾರೆ ಅರ್ಜುನ್‍ ಜನ್ಯ. ಇದೊಂದು ವಿಭಿನ್ನ ಪ್ರಯತ್ನ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಚಿತ್ರವನ್ನು ಅವರು ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಸಾಧ್ಯತೆ ಇತ್ತು.

ಇಲ್ಲಿ ಅರ್ಜುನ್ ‍ಜನ್ಯ ಕಥೆ ಹೇಳುತ್ತಲೇ, ಗರುಡ ಪುರಾಣವನ್ನೂ ಡಾಕ್ಯುಮೆಂಟರಿ ನೆಪದಲ್ಲಿ ತೋರಿಸುತ್ತಾ ಸಾಗುತ್ತಾರೆ. ಒಂದು ಮಹತ್ವದ ದೃಶ್ಯದ ಹಿಂದೆಯೇ, ಗರುಡ ಪುರಾಣದ ಸಾರವೂ ಬರುತ್ತದೆ. ಇದರಿಂದ ಚಿತ್ರದ ಓಟಕ್ಕೆ ಬ್ರೇಕ್‍ ಬೀಳುತ್ತದೆ. ಹಾಗಂತ ಅವರು ಸುಮ್ಮನೆ ತುರುಕಿದ್ದಲ್ಲ. ಆ ದೃಶ್ಯ ಚಿತ್ರಕ್ಕೆ ಮತ್ತು ಕಥೆಯ ಓಟಕ್ಕೆ ಹೇಗೆ ಮತ್ತು ಯಾಕೆ ಪೂರಕ ಎಂಬುದು ಗೊತ್ತಾಗಬೇಕಿದ್ದರೆ, ಚಿತ್ರದ ಕೊನೆಯವರೆಗೂ ಕಾಯಬೇಕು. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಅರ್ಜುನ್‍, ಚಿತ್ರದಲ್ಲಿ ಎತ್ತಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಬಹುಶಃ ಅಷ್ಟಕ್ಕೇ ಮುಗಿದಿದ್ದರೆ ಚೆನ್ನಾಗಿರುತ್ತಿತ್ತೇನೋ? ಆದರೆ, ಅಲ್ಲೊಂದು ಟ್ವಿಸ್ಟ್ ಕೊಡುತ್ತಾರೆ. ಇನ್ನೇನೋ ಸಂದೇಶ ಕೊಡುತ್ತಾರೆ. ಇಲ್ಲಿ ಅರ್ಜುನ್‍ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಬಹುಶಃ ಅದನ್ನು ಕಡಿಮೆ ಮಾಡಿದ್ದರೆ, ಚಿತ್ರ ಇನ್ನೂ ಸರಾಗವಾಗಿ ನೋಡಿಸಿಕೊಂಡು ಹೋಗುತ್ತಿತ್ತು.

ಚಿತ್ರ: 45

ನಿರ್ಮಾಣ: ರಮೇಶ್‍ ರೆಡ್ಡಿ

ನಿರ್ದೇಶನ: ಅರ್ಜುನ್‍ ಜನ್ಯ

ಸಂಗೀತ: ಅರ್ಜುನ್‍ ಜನ್ಯ

ಛಾಯಾಗ್ರಹಣ: ಸತ್ಯ ಹೆಗಡೆ

ಸಂಕಲನ: ಕೆ.ಎಂ. ಪ್ರಕಾಶ್‍

ತಾರಾಗಣ: ಶಿವರಾಜಕುಮಾರ್, ಉಪೇಂದ್ರ, ರಾಜ್‍ ಬಿ, ಶೆಟ್ಟಿ, ಕೌಸ್ತುಭ ಮಣಿ, ಮಾನಸಿ ಸುಧೀರ್, ಮೊಟ್ಟೆ ರಾಜೇಂದ್ರನ್‍, ಪ್ರಮೋದ್‍ ಶೆಟ್ಟಿ ಮುಂತಾದವರು



ಹಾಗಂತ ಅರ್ಜುನ್‍ ಚಿತ್ರದ ಪೂರಾ ಬರೀ ಬದುಕು-ಸಾವಿನ ಕುರಿತು ಪಾಠ ಮಾಡಿಲ್ಲ. ಇಲ್ಲಿ ತಾಯಿ ಸೆಂಟಿಮೆಂಟಿದೆ. ಒಂದು ಪ್ರೇಮಕಥೆ ಇದೆ. ಅದರ ಜೊತೆಗೆ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಅದನ್ನು ಇನ್ನಷ್ಟು ಚುರುಕಾಗಿಸುವ ಅವಶ್ಯಕತೆ ಖಂಡಿತಾ ಇತ್ತು. ಚಿತ್ರದ ಮೊದಲಾರ್ಧ ಕುತೂಹಲದಿಂದ ನೋಡಿಸಿಕೊಂಡು ಹೋಗುತ್ತದೆ.

ದ್ವಿತೀಯಾರ್ಧ ಚಿತ್ರ ಸ್ವಲ್ಪ ನಿಧಾನವಾಗುತ್ತದೆ. ಕೊನೆಯ 30 ನಿಮಿಷಗಳು ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಚಿತ್ರದಲ್ಲಿ ಗ್ರಾಫಿಕ್ಸ್ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಶ್ರೀಮಂತಿಕೆಯನ್ನು ಗ್ರಾಫಿಕ್ಸ್ ಹೆಚ್ಚಿಸಿದೆ. ಕೆಲವು ಕಡೆ ಗೇಮ್‍ ನೋಡಿದ ಅನುಭವವಾದರೂ, ಒಟ್ಟಾರೆ ಚಿತ್ರವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ.


ಇದರ ಜೊತೆಗೆ ಶಿವರಾಜಕುಮಾರ್ ಅವರ ವಿಭಿನ್ನ ಅವತಾರಗಳು, ಚೇಸಿಂಗ್‍ ದೃಶ್ಯಗಳು, ಮತ್ತು ಶಿವಪ್ಪ ಹಾಗೂ ರಾಯಪ್ಪನ ಮುಖಾಮುಖಿಯ ದೃಶ್ಯಗಳು ಸಹ ಚಿತ್ರದ ಹೈಲೈಟ್‍ ಆಗಿ ಮೂಡಿಬಂದಿವೆ. ಒಟ್ಟಾರೆ, ‘45’ ಚಿತ್ರವು ಪುರಾಣ, ಮಾಸ್ ಅಂಶಗಳು ಮತ್ತು ಜೀವನದ ಉದ್ದೇಶಗಳ ಕುರಿತಾಗಿ ಹೇಳುವ ಒಂದು ಪ್ರಯತ್ನ.

ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಮೂವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಮೂವರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಶಿವರಾಜಕುಮಾರ್ ಪಾತ್ರದಲ್ಲಿ ಹಲವು ಪದರಗಳಿದ್ದು, ಮಾಸ್ ಹೀರೋ ಎನರ್ಜಿ ಮತ್ತು ತಾತ್ವಿಕ ಆಳವನ್ನು ಒಟ್ಟಿಗೆ ಪ್ರತಿನಿಧಿಸವ ಅವರ ಅಭಿನಯ ವಿಭಿನ್ನವಾಗಿ ಎದ್ದು ನಿಲ್ಲುತ್ತದೆ.

ನೆಗೆಟಿವ್‍ ಎಂದನಿಸುವ ಪಾತ್ರದಲ್ಲಿ ಉಪೇಂದ್ರ ಮಿಂಚಿದ್ದಾರೆ. ಸ್ವಲ್ಪ ನಾಟಕೀಯವೆನಿಸಿದರೂ, ಅವರ ಮ್ಯಾನರಿಸಂ, ಮಾತಿನ ಶೈಲಿ ಅಭಿಮಾನಿಗಳಿಗೆ ಖುಷಿ ಕೊಡುತ್ತದೆ. ರಾಜ್ ಬಿ ಶೆಟ್ಟಿ ತಮ್ಮ ಚಿತ್ರಗಳಲ್ಲಿ ಸದಾ ಮಾಡುವಂತೆ, ಸಾಮಾನ್ಯ ಮನುಷ್ಯನ ಪಾತ್ರವನ್ನು ಅತ್ಯಂತ ನೈಜವಾಗಿ ನಿರ್ವಹಿಸಿದ್ದಾರೆ. ಈ ಮೂರು ನಟರ ಅಭಿನಯದ ಮೇಲೆ ಚಿತ್ರ ನಿಂತಿದೆ.

ಅರ್ಜುನ್‍ ಜನ್ಯ ಸಂಗೀತ ನಿರ್ದೇಶಕರಾಗಿದ್ದರೂ, ಇಲ್ಲಿ ಸುಮ್ಮನೆ ಹಾಡುಗಳನ್ನು ಸೇರಿಸಿಲ್ಲ. ಹಾಡಿನ ಬದಲು ಹಿನ್ನೆಲೆ ಸಂಗೀತದಿಂದ ಗಮನಸೆಳೆಯುತ್ತಾರೆ. ಕೆ.ಎಂ. ಪ್ರಕಾಶ್ ಅವರ ಸಂಕಲನ ಇನ್ನಷ್ಟು ಚುರುಕಾಗಿರಬಹುದಿತ್ತು. ಸತ್ಯ ಹೆಗಡೆ ಅವರ ಛಾಯಾಗ್ರಹಣ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲೊಂದು.

Read More
Next Story