ಕಾಂತಾರ ಚಾಪ್ಟರ್ 1: ದಂತಕಥೆಯ ಹಿಂದಿನ ಕಥೆಗೆ ಕ್ಷಣಗಣನೆ ಆರಂಭ, ಹೊಸ ಗ್ಲಿಂಪ್ಸ್‌ನಿಂದ ಹೆಚ್ಚಿದ ಕುತೂಹಲ
x

 'ಕಾಂತಾರ ಚಾಪ್ಟರ್ 1'

'ಕಾಂತಾರ ಚಾಪ್ಟರ್ 1': ದಂತಕಥೆಯ ಹಿಂದಿನ ಕಥೆಗೆ ಕ್ಷಣಗಣನೆ ಆರಂಭ, ಹೊಸ ಗ್ಲಿಂಪ್ಸ್‌ನಿಂದ ಹೆಚ್ಚಿದ ಕುತೂಹಲ

ಸಿನಿಮಾ ಬಿಡುಗಡೆಗೆ ಇನ್ನು 27 ದಿನಗಳು ಬಾಕಿ ಉಳಿದಿದ್ದು,ಇದೀಗ ಈ ಸಿನಿಮಾದ ಗ್ಲಿಂಪ್ಸ್​ ಒಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.


ಕನ್ನಡ ಚಿತ್ರರಂಗದ ಹಿರಿಮೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ 'ಕಾಂತಾರ' ಸಿನಿಮಾದ ಪ್ರೀಕ್ವೆಲ್‌ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರತಂಡ ಸಿಹಿ ಸುದ್ದಿ ನೀಡಿದೆ. ರಿಷಭ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಕಾಂತಾರ ಚಾಪ್ಟರ್ 1' ಚಿತ್ರವು, ಗಾಂಧಿ ಜಯಂತಿಯ ವಿಶೇಷ ದಿನವಾದ ಅಕ್ಟೋಬರ್ 2 ರಂದು ವಿಶ್ವಾದ್ಯಂತ ತೆರೆಕಾಣಲಿದೆ.

ಚಿತ್ರ ಬಿಡುಗಡೆಗೆ ಇನ್ನು ಕೇವಲ 27 ದಿನಗಳು ಬಾಕಿ ಇರುವಂತೆಯೇ, ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹೊಸ ಗ್ಲಿಂಪ್ಸ್ ವೊಂದನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. "ಭೂತಕಾಲದ ಪವಿತ್ರ ಧ್ವನಿಗಳು ಅಕ್ಟೋಬರ್ 2 ರಿಂದ ಜಗತ್ತಿನಾದ್ಯಂತ ಪ್ರತಿಧ್ವನಿಸಲಿದೆ. ಶೀಘ್ರದಲ್ಲೇ ರೋಮಾಂಚಕಾರಿ ಅಪ್ಡೇಟ್ಸ್ ಬರಲಿವೆ," ಎಂದು ಹೊಂಬಾಳೆ ಫಿಲ್ಮ್ಸ್ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದೆ. ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, 'ಕಾಂತಾರ' ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ.

ದಂತಕಥೆಯ ಹಿಂದಿನ ಪಾತ್ರಗಳು

'ಕಾಂತಾರ ಚಾಪ್ಟರ್ 1' ಕೇವಲ ರಿಷಭ್ ಶೆಟ್ಟಿ ಅವರ ಸಿನಿಮಾ ಮಾತ್ರವಲ್ಲ, ಇದೊಂದು ಅದ್ಭುತ ಕಲಾವಿದರ ಸಮಾಗಮ. ಇತ್ತೀಚೆಗೆ ಚಿತ್ರತಂಡವು ಪಾತ್ರವರ್ಗವನ್ನು ಪರಿಚಯಿಸಿದ್ದು, ಬಾಲಿವುಡ್‌ನ ಖ್ಯಾತ ನಟ ಗುಲ್ಶನ್ ದೇವಯ್ಯ ಅವರು 'ಕುಲಶೇಖರ' ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ' ಖ್ಯಾತಿಯ, ಕನ್ನಡಿಗರ ಮನಗೆದ್ದ ರುಕ್ಮಿಣಿ ವಸಂತ್ ಅವರು 'ಕನಕವತಿ'ಯಾಗಿ ರಿಷಭ್ ಶೆಟ್ಟಿಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ.

ಬಹುಭಾಷೆಯಲ್ಲಿ ಅಬ್ಬರ

'ಕಾಂತಾರ'ದಂತೆಯೇ, 'ಕಾಂತಾರ ಚಾಪ್ಟರ್ 1' ಕೂಡ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಸೇರಿದಂತೆ ಏಳು ಭಾಷೆಗಳಲ್ಲಿ ಚಿತ್ರವು ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವು ಚಿತ್ರದ ತಾಂತ್ರಿಕ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ. 'ಕಾಂತಾರ' ಸೃಷ್ಟಿಸಿದ್ದ ದಾಖಲೆಗಳನ್ನು ಈ ಚಿತ್ರವು ಮುರಿಯಲಿದೆಯೇ ಎಂದು ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಎದುರು ನೋಡುತ್ತಿದೆ.

Read More
Next Story