ಎಸ್ಸೆಸ್ಸೆಲ್ಸಿಯಲ್ಲಿ ತೃತೀಯ ಭಾಷೆ ಅಂಕ ಕೈಬಿಡುವ ಸರ್ಕಾರದ ನಿರ್ಧಾರ; ಹಿಂದಿ ಶಿಕ್ಷಕರಲ್ಲಿ ತೀವ್ರ ಆತಂಕ
x

ಎಸ್ಸೆಸ್ಸೆಲ್ಸಿಯಲ್ಲಿ ತೃತೀಯ ಭಾಷೆ ಅಂಕ ಕೈಬಿಡುವ ಸರ್ಕಾರದ ನಿರ್ಧಾರ; ಹಿಂದಿ ಶಿಕ್ಷಕರಲ್ಲಿ ತೀವ್ರ ಆತಂಕ

ಸರ್ಕಾರವು ಈ ನಿರ್ಧಾರವನ್ನು ತರಾತುರಿಯಲ್ಲಿ ಕೈಗೊಂಡಿದೆ ಎಂಬುದು ಶಿಕ್ಷಕರ ಮತ್ತೊಂದು ಆರೋಪವಾಗಿದ್ದ, ಯಾರ ಜತೆಯೂ ಸಮಾಲೋಚನೆ ನಡೆಸಿಲ್ಲ ಎಂದು ಆರೋಪಿಸಿದೆ


Click the Play button to hear this message in audio format

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ತೃತೀಯ ಭಾಷೆಯ ಅಂಕ ಪರಿಗಣಿಸದಿರುವ ಬಗ್ಗೆ ಸರ್ಕಾರದ ನಿರ್ಧಾರದಿಂದ ಶಿಕ್ಷಕರಲ್ಲಿ ಗೊಂದಲ ಶುರುವಾಗಿದೆ. ರಾಜ್ಯ ಸರ್ಕಾರದ ಈ ಮಹತ್ವದ ತೀರ್ಮಾನದ ಸುತ್ತ ಶೈಕ್ಷಣಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಮುಖ್ಯವಾಗಿ, ಈ ನಿರ್ಧಾರದಿಂದ ಹಿಂದಿ ಭಾಷೆಯನ್ನು ಬೋಧಿಸುವ ಶಿಕ್ಷಕರಿಗೆ ತೀವ್ರ ಆತಂಕ ಎದುರಾಗಿದೆ. ತಮ್ಮ ಭವಿಷ್ಯದ ಬಗೆಗಿನ ಗೊಂದಲ ಮತ್ತು ಬೋಧನೆಯ ಗಂಭೀರತೆ ಕಡಿಮೆಯಾಗುವ ಭೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.


'ದ ಫೆಡರಲ್​ ಕರ್ನಾಟಕಕ್ಕೆ ವಿಡಿಯೊ ಸಂದರ್ಶನ ನೀಡಿದ ಕರ್ನಾಟಕ ಸರ್ಕಾರಿ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ರಾಮಮೂರ್ತಿ ಅವರು ಈ ಕುರಿತು 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡಿದ್ದು, ಸರ್ಕಾರದ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯನ್ನು ಅಂಕಕ್ಕಾಗಿ ಪರಿಗಣಿಸದೆ ಇರುವ ತೀರ್ಮಾನವು ಹಿಂದಿ ಶಿಕ್ಷಕರಿಗೆ ಬರೆ ಎಳೆದಂತಾಗಿದೆ. ರಾಜ್ಯದಲ್ಲಿ ಸುಮಾರು 3,000 ಹಿಂದಿ ಶಿಕ್ಷಕರಿದ್ದು, ಅವರ ಮುಂದಿನ ಭವಿಷ್ಯವೇನು ಎಂಬ ಆತಂಕ ಶುರುವಾಗಿದೆ," ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಬೋಧನೆಯಲ್ಲಿ ಗಂಭೀರತೆ ಇರುವುದಿಲ್ಲ

ಮೌಲ್ಯಮಾಪನವಿಲ್ಲದ ವಿಷಯದ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ತೋರುವುದು ಕಷ್ಟ ಎಂಬ ಅಭಿಪ್ರಾಯ ಶಿಕ್ಷಕರ ವಲಯದಲ್ಲಿದೆ. "ಹಿಂದಿ ಕಲಿಸಬಹುದು, ಆದರೆ ಅದಕ್ಕೆ ಮೌಲ್ಯಮಾಪನ ಅಥವಾ ಅಂಕ ಇಲ್ಲ ಎಂದರೆ, ವಿದ್ಯಾರ್ಥಿಗಳು ಮತ್ತು ಪೋಷಕರು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದರಿಂದ ಹಿಂದಿ ಪಾಠ ಮಾಡುವುದಕ್ಕೆ ಯಾವುದೇ ಬೆಲೆ ಅಥವಾ ಗಂಭೀರತೆ ಇರುವುದಿಲ್ಲ," ಎಂದು ರಾಮಮೂರ್ತಿ ವಿವರಿಸಿದ್ದಾರೆ.

ಸರ್ಕಾರವು ಈ ನಿರ್ಧಾರವನ್ನು ತರಾತುರಿಯಲ್ಲಿ ಕೈಗೊಂಡಿದೆ ಎಂಬುದು ಶಿಕ್ಷಕರ ಮತ್ತೊಂದು ಆರೋಪ. "ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳುವ ಮುನ್ನ ಶಿಕ್ಷಕರ ಸಂಘಟನೆಗಳ ಜೊತೆ ಕನಿಷ್ಠ ಚರ್ಚೆಯನ್ನೂ ಮಾಡಿಲ್ಲ. ಇಷ್ಟು ತರಾತುರಿಯಲ್ಲಿ ಇಂತಹ ನಿರ್ಧಾರ ಏಕೆ ಕೈಗೊಳ್ಳಬೇಕಿತ್ತು ಎಂಬುದು ನಮಗೆ ಅರ್ಥವಾಗುತ್ತಿಲ್ಲ," ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮರಾಠಿ, ಉರ್ದು ಶಾಲೆಗಳ ಕನ್ನಡಕ್ಕೂ ಸಂಕಷ್ಟ?

ತೃತೀಯ ಭಾಷೆಯ ಅಂಕ ಕೈಬಿಡುವ ನಿರ್ಧಾರ ಕೇವಲ ಹಿಂದಿಗೆ ಮಾತ್ರ ಸೀಮಿತವಾಗಿಲ್ಲ; ಇದು ಇತರ ಭಾಷೆಗಳ ಮೇಲೂ ಪರಿಣಾಮ ಬೀರಲಿದೆ. "ಮರಾಠಿ ಮತ್ತು ಉರ್ದು ಮಾಧ್ಯಮದ ಶಾಲೆಗಳಲ್ಲಿ ಕೆಲವೆಡೆ ತೃತೀಯ ಭಾಷೆಯಾಗಿ ಕನ್ನಡವನ್ನು ಬೋಧಿಸಲಾಗುತ್ತದೆ. ಈಗಿನ ನಿರ್ಧಾರದಿಂದ ಆ ಶಿಕ್ಷಕರ ಪರಿಸ್ಥಿತಿ ಏನಾಗಲಿದೆ ಎಂಬ ದೊಡ್ಡ ಪ್ರಶ್ನೆ ಕೂಡ ಮೂಡುತ್ತದೆ," ಎಂದು ಅವರು ಗಮನಸೆಳೆದಿದ್ದಾರೆ.

ಸರ್ಕಾರದ ಈ ನಿರ್ಧಾರದ ವಿರುದ್ಧ ಮುಂದಿನ ನಡೆಯ ಬಗ್ಗೆ ನಿರ್ಧರಿಸಲು ಹಿಂದಿ ಶಿಕ್ಷಕರ ಸಂಘ ಶೀಘ್ರದಲ್ಲೇ ಸಭೆ ಸೇರಲಿದೆ ಎಂದು ರಾಮಮೂರ್ತಿ ತಿಳಿಸಿದ್ದಾರೆ. ಇದೇ ವೇಳೆ, ಪರಿಣಾಮ ಎದುರಿಸಲಿರುವ ಇತರ ತೃತೀಯ ಭಾಷೆಗಳ ಶಿಕ್ಷಕರ ಸಂಘಟನೆಗಳ ಜತೆಯೂ ಚರ್ಚಿಸಿ, ಒಗ್ಗಟ್ಟಿನಿಂದ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read More
Next Story