The Federal Interview| ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಎನ್‌ಇಪಿ ಬೆದರಿಕೆ: ಪ್ರೊ. ಸುಖದೇವ್ ಥೋರಟ್
x

The Federal Interview| ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಎನ್‌ಇಪಿ ಬೆದರಿಕೆ: ಪ್ರೊ. ಸುಖದೇವ್ ಥೋರಟ್

ಎನ್‌ಇಪಿ ಅಡಿಯಲ್ಲಿ ಭಾರತೀಯ ಜ್ಞಾನ ಪದ್ಧತಿಯು ಕೇವಲ ಊಹೆಗಳು, ನಂಬಿಕೆಗಳು, ಸ್ಮೃತಿಗಳು ಮತ್ತು ಮೌಖಿಕ ಸಂಪ್ರದಾಯಗಳ ಮೇಲೆ ಆಧಾರಿತವಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.


Click the Play button to hear this message in audio format

ದೇಶದ ಪ್ರಜಾಪ್ರಭುತ್ವದ ಅಡಿಪಾಯವೇ ಶಿಕ್ಷಣವಾಗಿದೆ. ಆದರೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ಇಪಿ) ಈ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬೆದರಿಕೆಯೊಡ್ಡುತ್ತಿದೆ ಎಂದು ಯುಜಿಸಿ ಮಾಜಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಎನ್‌ಇಪಿಯನ್ನು ತಿರಸ್ಕರಿಸಿದ ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಕರ್ನಾಟಕದ ರಾಜ್ಯ ಶಿಕ್ಷಣ ನೀತಿ ಕರಡು ಸಮಿತಿ ರಚಿಸಿದ್ದು, ಥೋರಟ್‌ ಅದರ ಅಧ್ಯಕ್ಷರೂ ಆಗಿದ್ದಾರೆ.

ದ ಫೆಡರಲ್‌ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಎನ್‌ಇಪಿ ಕೇವಲ ಶೈಕ್ಷಣಿಕ ಬದಲಾವಣೆಯಲ್ಲ, ಬದಲಾಗಿ ಅದು ಶಿಕ್ಷಣದ ಕೇಂದ್ರೀಕರಣ ಮತ್ತು ಕೋಮುವಾದೀಕರಣದ ಅಸ್ತ್ರವಾಗಿದೆ. ಕೇಂದ್ರ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.

ಕೇಂದ್ರದ ಶಿಕ್ಷಣ ನೀತಿಗೆ ಪ್ರತಿಯಾಗಿ ವೈಜ್ಞಾನಿಕ ಮತ್ತು ಪ್ರಜಾಸತ್ತಾತ್ಮಕ ಆಶಯಗಳನ್ನು ಒಳಗೊಂಡ ‘ಜನತಾ ಶಿಕ್ಷಣ ನೀತಿʼ ಬೇಕಾಗಿದೆ. ಶಿಕ್ಷಣವು ಲಾಭದಾಯಕ ಸರಕಾಗಬಾರದು, ಅದು ಸಾರ್ವಜನಿಕ ಹಿತಾಸಕ್ತಿಯ ಸೇವೆಯಾಗಬೇಕು. ಶಿಕ್ಷಣ ಕ್ಷೇತ್ರದಲ್ಲಿ ಹೊಸ ನೀತಿ ಜಾರಿಗೊಳಿಸುವ ಮುನ್ನ ಕೇಂದ್ರವು ಎಲ್ಲಾ ರಾಜ್ಯಗಳ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು. ಆದರೆ, ಕೇಂದ್ರದ ನಡೆಯು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ರಾಜ್ಯಗಳ ಅಭಿಪ್ರಾಯಗಳನ್ನು ಪಡೆದು ಯಾವುದೇ ಹೊಸ ನೀತಿಗಳನ್ನು ಜಾರಿಗೊಳಿಸಬೇಕಾಗಿದೆ ಎಂದು ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಇರಬೇಕು. ರಾಷ್ಟ್ರೀಯ ನೀತಿಯ ಹೆಸರಿನಲ್ಲಿ ರಾಜ್ಯಗಳ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮೌಲ್ಯಗಳನ್ನು ಕಡೆಗಣಿಸಲಾಗುತ್ತಿದೆ ಇಂದಿನ ಶಿಕ್ಷಣಕ್ಕೆ ವೈಜ್ಞಾನಿಕ ಮನೋಭಾವದ ಅವಶ್ಯಕತೆಯಿದೆ. ಆದರೆ ಎನ್‌ಇಪಿ ಮೂಲಕ ಶಿಕ್ಷಣವನ್ನು ಕೋಮುವಾದೀಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇದು ವೈಜ್ಞಾನಿಕ ಚಿಂತನೆಗಳನ್ನು ಹತ್ತಿಕ್ಕಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶಪಡಿಸುತ್ತದೆ. ಜಾತ್ಯಾತೀತ ಮತ್ತು ವೈಜ್ಞಾನಿಕ ತಳಹದಿಯ ಮೇಲೆ ಮತ್ತು ಸಂವಿಧಾನದ ಆಶಯಗಳಾದ ಸಮಾನತೆ ಮತ್ತು ಭ್ರಾತೃತ್ವವನ್ನು ಉಳಿಸಿಕೊಳ್ಳುವ ನೀತಿ ಅಗತ್ಯವಾಗಿದೆ ಎಂದರು.

ಇದೇ ವೇಳೆ ಸರ್ಕಾರಿ ಶಾಲೆಗಳ ದುಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಮುಚ್ಚುವ ವ್ಯವಸ್ಥಿತ ಪ್ರಯತ್ನ ಮಾಡುತ್ತಿವೆ ಎಂದು ಥೋರಟ್‌ ಆರೋಪಿಸಿದರು.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಪ್ರತಿಯೊಬ್ಬ ಮಗುವಿಗೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಸಿಗುವುದು ಅವರ ಹಕ್ಕು. ಕಾರ್ಮಿಕ ಮಕ್ಕಳ ಹೆಚ್ಚಾಗಿ ಸರ್ಕಾರಿ ಶಾಲೆಗಳಿಗೆ ಹೋಗುವುದರಿಂದ ಅವುಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಂಡು ಬಲಪಡಿಸಬೇಕಾಗಿದೆ. ಮಾಹಿತಿ ಹಕ್ಕು ಕಾಯ್ದೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣವು ಕೇವಲ ಶ್ರೀಮಂತರ ಪಾಲಾಗದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು. ಪ್ರಜಾಪ್ರಭುತ್ವ ಶಿಕ್ಷಣಕ್ಕೆ ಎದುರಾಗಿರುವ ಬೆದರಿಕೆಯನ್ನು ಎದುರಿಸಲು ಜನಸಾಮಾನ್ಯರು ಮತ್ತು ಶಿಕ್ಷಣ ತಜ್ಞರು ಒಂದಾಗಬೇಕು ಎಂದು ಕರೆ ನೀಡಿದರು.

ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಭಾರತೀಯ ಜ್ಞಾನ ಪದ್ಧತಿಯನ್ನು ಅಭಿವೃದ್ಧಿಪಡಿಸಲಾಗಿದೆ. ಪಠ್ಯಕ್ರಮದಲ್ಲಿ ದೇಶದ ಜ್ಞಾನವನ್ನು ಸೇರಿಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಎನ್‌ಇಪಿ ಅಡಿಯಲ್ಲಿ ತರಲಾಗುತ್ತಿರುವ ಈ ಜ್ಞಾನ ಪದ್ಧತಿಯು ಕೇವಲ ಊಹೆಗಳು, ನಂಬಿಕೆಗಳು, ಸ್ಮೃತಿಗಳು ಮತ್ತು ಮೌಖಿಕ ಸಂಪ್ರದಾಯಗಳ ಮೇಲೆ ಆಧಾರಿತವಾಗಿದ್ದು, ಸಂಪೂರ್ಣ ಅವೈಜ್ಞಾನಿಕವಾಗಿದೆ. ವಿಜ್ಞಾನ ಅಥವಾ ಗಣಿತವನ್ನು ಬೋಧಿಸುವಾಗ ದೇಶದ ಸಾಧನೆಗಳ ಜೊತೆಗೆ ಪಾಶ್ಚಿಮಾತ್ಯ ಮಾಹಿತಿಯನ್ನು ಸೇರಿಸುತ್ತೇವೆ. ಆದರೆ ಕೇಂದ್ರದ ಈ ನೀತಿಯು ಶಿಕ್ಷಣವನ್ನು ಕೇವಲ ಒಂದು ನಿರ್ದಿಷ್ಟ 'ಭಾರತೀಯತೆ'ಗೆ ಹಾಕಲು ಪ್ರಯತ್ನಿಸುತ್ತಿದ್ದು, ಇದು ಪಠ್ಯಕ್ರಮದ ಗುಣಮಟ್ಟಕ್ಕೆ ದೊಡ್ಡ ಅಪಾಯವಾಗಿದೆ ಎಂದು ಎಚ್ಚರಿಸಿದರು.

ಯುಜಿಸಿ ವೆಬ್‌ಸೈಟ್‌ನಲ್ಲಿರುವ ನೈತಿಕ ಶಿಕ್ಷಣ ಎಂಬ ಪಠ್ಯಕ್ರಮವನ್ನು ಗಮನಿಸಿದರೆ, ಅಲ್ಲಿ ಹೆಸರಿಗಷ್ಟೇ ಇತರ ಧರ್ಮ ಮತ್ತು ಸಂವಿಧಾನದ ಉಲ್ಲೇಖವಿದೆ. ಆದರೆ ಪಠ್ಯದ ಸಂಪೂರ್ಣ ಭಾಗ ವೇದಗಳು, ಸ್ಮೃತಿಗಳು, ಶಂಕರಾಚಾರ್ಯ ಮತ್ತು ಉಪನಿಷತ್ತುಗಳ ಮೇಲೆ ಕೇಂದ್ರೀಕೃತವಾಗಿದೆ. ಸಂವಿಧಾನದ 28ನೇ ವಿಧಿಯ ಪ್ರಕಾರ, ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ನಿರ್ದಿಷ್ಟ ಧರ್ಮದ ತತ್ವಗಳನ್ನು ಬೋಧಿಸುವಂತಿಲ್ಲ," ಎಂದರು.

ಆದರೆ, ಎನ್‌ಇಪಿ ಮೂಲಕ ಶಿಕ್ಷಣದಲ್ಲಿ 'ಬ್ರಾಹ್ಮಣ್ಯದ ಮೌಲ್ಯ'ಗಳನ್ನು ತುರುಕಲಾಗುತ್ತಿದೆ. "ಹಿಂದೂ ಧರ್ಮ ಎಂಬುದು ಒಂದು ಮುಖವಾಡವಾಗಿದ್ದು, ನಿರ್ದಿಷ್ಟ ಸಂಘಟನೆಯು ಇದನ್ನು ಸೃಷ್ಟಿಸಿದೆ. ದೇಶದಲ್ಲಿರುವ 17 ಸಂಸ್ಕೃತ ವಿಶ್ವವಿದ್ಯಾಲಯಗಳು ಮತ್ತು 1100 ಸಂಸ್ಕೃತ ಕಾಲೇಜುಗಳು ಭಾಷೆಯನ್ನು ಕಲಿಸುವ ಬದಲು ಬ್ರಾಹ್ಮಣ್ಯದ ಧರ್ಮವನ್ನು ಬೋಧಿಸುವ ಮೂಲಕ ಸಂವಿಧಾನದ ಆಶಯಗಳನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಿದರು.

Read More
Next Story