ಶಿಕ್ಷಣ ಮಾರಾಟಕ್ಕಲ್ಲ, ಅದು ಜನರ ಹಕ್ಕು: ಎನ್ಇಪಿ ವಿರುದ್ಧ ಜನ ಸಂಸತ್
x

ಶಿಕ್ಷಣ ಮಾರಾಟಕ್ಕಲ್ಲ, ಅದು ಜನರ ಹಕ್ಕು: ಎನ್ಇಪಿ ವಿರುದ್ಧ ಜನ ಸಂಸತ್

ಕೇಂದ್ರ ಸರ್ಕಾರವು ಯಾವುದೇ ರಾಜ್ಯ ಸರ್ಕಾರಗಳೊಂದಿಗೆ ಎನ್‌ಇಪಿ ಕುರಿತು ಗಂಭೀರ ಸಮಾಲೋಚನೆ ನಡೆಸದೆ, ಸರ್ವಾಧಿಕಾರಿ ಧೋರಣೆಯ ಮೂಲಕ ಶಿಕ್ಷಣ ಕ್ಷೇತ್ರದ ಮೇಲೆ ಈ ನೀತಿಯನ್ನು ಹೇರಿದೆ ಎಂದು ಶಿಕ್ಷಣ ತಜ್ಞರು ಖಂಡಿಸಿದ್ದಾರೆ


Click the Play button to hear this message in audio format

ಒಂದೆಡೆ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ 'ರಾಷ್ಟ್ರೀಯ ಶಿಕ್ಷಣ ನೀತಿ-2020' ದೇಶವನ್ನು ಜಾಗತಿಕ ಜ್ಞಾನದ ಕೇಂದ್ರವನ್ನಾಗಿ ಮಾಡುತ್ತದೆ ಎಂಬ ಭರವಸೆ ನೀಡುತ್ತಿದ್ದರೆ, ಇನ್ನೊಂದೆಡೆ ದೇಶದ ಖ್ಯಾತ ಶಿಕ್ಷಣ ತಜ್ಞರು, ಬುದ್ಧಿಜೀವಿಗಳು ಮತ್ತು ಸಂಶೋಧಕರು ಇದೊಂದು ಶಿಕ್ಷಣದ ವಿನಾಶಕಾರಿ ನೀತಿ ಎಂದು ಟೀಕಿಸಿದ್ದಾರೆ.

ಕೇಂದ್ರದ ಎನ್‌ಇಪಿ ವಿರುದ್ಧ ದೇಶದ ಶಿಕ್ಷಣ ತಜ್ಞರು, ಬುದ್ದಿಜೀವಿಗಳು ಒಗ್ಗೂಡಿ ಸಮರ ಸಾರಿದ್ದಾರೆ. "ಶಿಕ್ಷಣ ಮಾರಾಟಕ್ಕಲ್ಲ, ಅದು ಜನರ ಹಕ್ಕು" ಎನ್ನುವ ಘೋಷಣೆಯೊಂದಿಗೆ ಬೆಂಗಳೂರಿನಲ್ಲಿ 'ಜನ ಸಂಸತ್ತು' ಸಮಾವೇಶ ನಡೆಯಿತು. ಕಾರ್ಯಕ್ರಮದಲ್ಲಿ ಎನ್ಇಪಿಗೆ ಪರ್ಯಾಯವಾಗಿ 'ಜನತಾ ಶಿಕ್ಷಣ ನೀತಿ'ಯನ್ನು ಮಂಡಿಸಿದ್ದು, ಶಿಕ್ಷಣದ ಕೇಂದ್ರೀಕರಣ ಮತ್ತು ಕೋಮುವಾದೀಕರಣದ ವಿರುದ್ಧ ಆಕ್ರೋಶ ವ್ಯಕ್ತಪಡಿಲಾಯಿತು.

ಯುಜಿಸಿ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಶಿಕ್ಷಣ ನೀತಿಯ ಕರಡು ಸಮಿತಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್, ಶಿಕ್ಷಣ ತಜ್ಞ ವಿ.ಪಿ.ಡಾ. ನಿರಂಜನಾರಾಧ್ಯ, ಪ್ರೊ. ಆದಿತ್ಯ ಮುಖರ್ಜಿ, ಪ್ರೊ. ಎ. ಹೆಚ್. ರಾಜಾಸಾಬ್, ಡಾ. ಫ್ರಾನ್ಸಿಸ್ ಅಸ್ಸಿಸಿ, ಅಲ್ವೇಡಾ, ಪ್ರೊ. ಜವಾಹರ್ ನೇಸನ್ ಸೇರಿದಂತೆ ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಎನ್‌ಇಪಿ ನೀತಿಯು ದೇಶದ ಸಂವಿಧಾನಾತ್ಮಕ ಆಶಯಗಳಾದ ವೈಜ್ಞಾನಿಕತೆ, ಜಾತ್ಯತೀತತೆ ಮತ್ತು ಸಾರ್ವತ್ರಿಕತೆಯನ್ನು ಹೇಗೆ ಬುಡಮೇಲು ಮಾಡುತ್ತಿದೆ ಎಂದು ಕಟುವಾಗಿ ಟೀಕಿಸಿದರು.

ಪ್ರೊ.ಸುಖದೇವ್‌ ಥೋರಟ್‌ ಮಾತನಾಡಿ, ದೇಶದ ಸಂವಿಧಾನ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನಾಗಿ ಶಿಕ್ಷಣ ಮೌಲ್ಯದ ಬಗ್ಗೆ ತೀರ್ಮಾನ ಕೈಗೊಳ್ಳುವ ಹಕ್ಕುವ ಹೊಂದಿವೆ. ಆದರೆ, ಕೇಂದ್ರ ಸರ್ಕಾರವು ಯಾವುದೇ ರಾಜ್ಯ ಸರ್ಕಾರಗಳೊಂದಿಗೆ ಗಂಭೀರ ಸಮಾಲೋಚನೆ ನಡೆಸದೆ, ಸರ್ವಾಧಿಕಾರಿ ಧೋರಣೆಯ ಮೂಲಕ ಈ ನೀತಿಯನ್ನು ಹೇರಿದೆ. ಕೇವಲ ಆಡಳಿತಾತ್ಮಕ ಸಮಸ್ಯೆಯಾಗಿರದೆ, ಇದು ಶಿಕ್ಷಣದ ಸಂಪೂರ್ಣ ಕೇಂದ್ರೀಕರಣದ ಪ್ರಯತ್ನವಾಗಿದೆ. ಪ್ರಾದೇಶಿಕ ವೈವಿಧ್ಯತೆ, ಭಾಷಾ ವೈವಿಧ್ಯತೆ ಮತ್ತು ಸ್ಥಳೀಯ ಸಾಂಸ್ಕೃತಿಕ ಅಗತ್ಯಗಳನ್ನು ನಿರ್ಲಕ್ಷಿಸಿ ದೆಹಲಿಯಿಂದ ಎಲ್ಲವನ್ನೂ ನಿಯಂತ್ರಿಸುವ ಈ ಕ್ರಮವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತದೆ ಎಂದು ಕಿಡಿಕಾರಿದರು.

ರಾಜ್ಯಗಳ ಸ್ವಾಯತ್ತತೆಯನ್ನು ಕಿತ್ತುಕೊಂಡು ಶಿಕ್ಷಣವನ್ನು ಸಂಪೂರ್ಣವಾಗಿ ದೆಹಲಿಯ ಹಿಡಿತಕ್ಕೆ ತೆಗೆದುಕೊಳ್ಳುವ ಸಂಚು ಇದರಲ್ಲಿದೆ. ಭಾರತೀಯ ಜ್ಞಾನ ಪದ್ಧತಿ ಎಂಬ ಆಕರ್ಷಕ ಹೆಸರಿನಲ್ಲಿ ತರ್ಕಹೀನ ಮತ್ತು ಪುರಾಣಗಳನ್ನು ಇತಿಹಾಸದಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇದು ವಿದ್ಯಾರ್ಥಿಗಳ ವಿಮರ್ಶಾತ್ಮಕ ಚಿಂತನಾ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. 1990ರ ದಶಕದ ಜಾಗತೀಕರಣದ ನಂತರ ಶಿಕ್ಷಣವು ಲಾಭದಾಯಕ ಉದ್ಯಮವಾಗಿ ಮಾರ್ಪಟ್ಟಿದೆ. ಶೇ. 67ರಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಖಾಸಗಿ ಅಥವಾ ಸ್ವಯಂ-ಹಣಕಾಸು ಸಂಸ್ಥೆಗಳಾಗಿವೆ. ಇದರ ನೇರ ಪರಿಣಾಮ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೇಲೆ ಉಂಟಾಗುತ್ತಿದೆ. ದುಬಾರಿ ಶುಲ್ಕವನ್ನು ಭರಿಸಲಾಗದೆ ಶೇ. 22ರಷ್ಟು ವಿದ್ಯಾರ್ಥಿಗಳು ಅರ್ಧಕ್ಕೆ ಶಿಕ್ಷಣವನ್ನು ಬಿಡುತ್ತಿದ್ದಾರೆ. ಇದು 'ಸಾರ್ವತ್ರಿಕ ಶಿಕ್ಷಣ' ಎಂಬ ಸಂವಿಧಾನದ ಆಶಯವನ್ನು ಕೇವಲ ಮರೀಚಿಕೆಯನ್ನಾಗಿಸಿದೆ. ಶಿಕ್ಷಣವು 'ಹಕ್ಕು' ಆಗುವ ಬದಲು ಕೇವಲ ಹಣವಿದ್ದವರಿಗೆ ಮಾತ್ರ ಸಿಗುವ 'ಸರಕು' ಆಗಿ ಪರಿಣಮಿಸುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎನ್‌ಇಪಿಯಲ್ಲಿ ಮಕ್ಕಳಿಗೆ ಅಗತ್ಯ ಇರುವ ಶಿಕ್ಷಣದ ಮೌಲ್ಯಗಳು ಇಲ್ಲದಂತಾಗಿದೆ. ಅತಿಯಾದ ಕೇಂದ್ರದ ನೀತಿಗಳ ಜತೆಗೆ ಅತಿಯಾದ ಕೋಮುವಾದವನ್ನು ಎನ್‌ಇಪಿಯಲ್ಲಿ ಅಳವಡಿಕೆ ಮಾಡಲಾಗಿದೆ. ಇದು ಯುವಪೀಳಿಗೆಗೆ ಅಪಾಯಕಾರಿ ಆಯುಧವಾಗಿದೆ. ಈಗಾಗಲೇ ಶಿಕ್ಷಣ ತಜ್ಞರ ಸಮಿತಿಯು ವರದಿಯೊಂದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಆದರೆ ಈವರೆವಿಗೂ ಸರ್ಕಾರವು ಸಾರ್ವಜನಿಕ ಚರ್ಚೆಗೆ ಬಿಟ್ಟಿಲ್ಲ. ಸಾರ್ವಜನಿಕವಾಗಿ ಚರ್ಚೆಗಳು ನಡೆದರೆ ಮಾತ್ರ ಸಾಧಕ-ಬಾಧಕಗಳ ಬಗ್ಗೆ ಗೊತ್ತಾಗಲಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಮೌಲ್ಯಯುತ ಶಿಕ್ಷಣ ನೀತಿ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಐಐಟಿ ಮುಂಬೈನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ರಾಮ್ ಪುನಿಯಾನಿ, ಪ್ರಸ್ತುತ ಶೈಕ್ಷಣಿಕ ಬಿಕ್ಕಟ್ಟು ಎದುರಿಸುತ್ತಿದೆ. ಕೇಂದ್ರ ಸರ್ಕಾರವು 11 ವರ್ಷಗಳಿಂದ ಅಧಿಕಾರದಲ್ಲಿದ್ದರೂ, ಅದು ಸಾಮಾಜಿಕ ಸಮಾನತೆಯನ್ನು ಆಳಿಸಿ ಹಾಕಲು ಪ್ರಯತ್ನಿಸುತ್ತಿದೆ. ಅಲ್ಲದೇ, ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕಲು ಹವಣಿಸುತ್ತಿರುವ ಶತಮಾನದಷ್ಟು ಹಳೆಯದಾದ ರಾಜಕೀಯ ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ. ಗುಣಮಟ್ಟದ ಶಿಕ್ಷಣವನ್ನು ಉಳ್ಳವರಿಗಾಗಿ ಮೀಸಲಿಡುತ್ತಾ, ಸಾರ್ವಜನಿಕ ಶಾಲೆಗಳನ್ನು ಮುಚ್ಚುತ್ತಿದೆ ಮತ್ತು ಸಾವಿರಾರು ಶಿಕ್ಷಕರ ಹುದ್ದೆಗಳನ್ನು ಖಾಲಿ ಉಳಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವೈಜ್ಞಾನಿಕ ಮನೋಭಾವ ಮತ್ತು ತರ್ಕಬದ್ಧ ಚಿಂತನೆಯ ಮೇಲಿನ ವ್ಯವಸ್ಥಿತ ದಾಳಿ ನಡೆಸಲಾಗುತ್ತಿದೆ. ವಿಕಾಸವಾದದ ಸಿದ್ಧಾಂತವನ್ನು ತೆಗೆದುಹಾಕುವ ಮೂಲಕ ವೈಜ್ಞಾನಿಕ ಅಡಿಪಾಯಗಳನ್ನು ಕುಗ್ಗಿಸಿ, ಅದರ ಬದಲಿಗೆ ಅವೈಜ್ಞಾನಿಕ "ಗುರುಕುಲ ಮಾದರಿ'ಯನ್ನು ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಆಳ್ವಿಕರ ದಾಳಿಯಿಂದಾಗಿ ದೇಶವು ಅಂಧಕಾರದ ಯುಗಕ್ಕೆ ಚಾರದಂತೆ ತಡೆಯಲು ಹೋರಾಡುವುದು ಅತ್ಯಗತ್ಯ ಎಂದು ಎಚ್ಚರಿಸಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರೊ. ತರುಣ್ ಕಾಂತಿ ನಸ್ಕರ್ ಮಾತನಾಡಿ, ಎನ್ಇಪಿ ಅಧಿಕಾರಶಾಹಿ ಅಸ್ತ್ರವಾಗಿದೆ. ಇದು ಶಿಕ್ಷಣವನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಮತ್ತು ಕೋಮುವಾದಿ ಶಕ್ತಿಗಳಿಗೆ ಒಪ್ಪಿಸುವ ಸಂಚು ಆಗಿದೆ. ದೇಶದ ಹಲವಾರು ಶಿಕ್ಷಣ ತಜ್ಞರ ಸಹಕಾರದೊಂದಿಗೆ ಕರಡು ನೀತಿಯನ್ನು ಸಿದ್ಧಪಡಿಸಿ ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಲಾಗಿದೆ. ಕರಡಿನ ಲಕ್ಷಾಂತರ ಪ್ರತಿಗಳನ್ನು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಮುದ್ರಿಸಿ ಜನರಿಗೆ ವಿತರಿಸಲಾಗಿದೆ. ವೈಜ್ಞಾನಿಕ ಮನೋಭಾವವನ್ನು ಹತ್ತಿಕ್ಕಿ ದೇಶವನ್ನು ಕತ್ತಲೆ ಯುಗದತ್ತ ಕೊಂಡೊಯ್ಯಲಾಗುತ್ತಿದೆ ಎಂದು ಆರೋಪಿಸಿದರು.

ಮಾಜಿ ಸಂಸದ ಜವಾಹರ್ ಸರ್ಕಾರ್ ಮಾತನಾಡಿ, ಪ್ರಸ್ತುತ ನಡೆಯುತ್ತಿರುವ ಈ ಚಳವಳಿಯು ಅತ್ಯಂತ ಬಲಿಷ್ಠ ಮತ್ತು ವ್ಯವಸ್ಥಿತ ಶಕ್ತಿಯ ವಿರುದ್ಧ ಹೋರಾಡುತ್ತಿದೆ. ಎನ್‌ಇಪಿ ಶಿಕ್ಷಣದಲ್ಲಿ ಕೇಂದ್ರೀಕರಣ, ಕಾರ್ಪೊರೇಟೀಕರಣ, ಕೋಮುವಾದ ಮತ್ತು ಖಾಸಗೀಕರಣ ಎಂಬ ನಾಲ್ಕು ಪ್ರಮುಖ ಉದ್ದೇಶಗಳನ್ನು ಜಾರಿಗೆ ತರಲು ವಿನ್ಯಾಸಗೊಳಿಸಲಾದ ಒಂದು ಅಧಿಕಾರಶಾಹಿ ಸಾಧನ. ಕೇವಲ ಮನವಿ ಪತ್ರಕ್ಕೆ ಸ್ಪಂದಿಸುವ ಸರ್ಕಾರ ಇದಲ್ಲ. ಹೀಗಾಗಿ ಸಂಸತ್ತು, ನ್ಯಾಯಾಂಗ ಇನ್ನಿತರ ಎಲ್ಲ ವೇದಿಕೆಗಳ ಮೂಲಕ ಎನ್‌ಇಪಿ ಅನ್ನು ಪ್ರಶ್ನಿಸಬೇಕು. ವೈಜ್ಞಾನಿಕ ಮನೋಭಾವ ಬೆಳೆಸುವುದು ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲೊಂದಾಗಿದೆ. ಆದರೆ, ತರ್ಕಕ್ಕಿಂತ ಹೆಚ್ಚಾಗಿ ನಂಬಿಕೆಗಳಿಗೆ ಮತ್ತು ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಪೂರಕವಾದ ಪಠ್ಯಕ್ರಮ ರೂಪಿಸುವುದು ಯುವಪೀಳಿಗೆಯ ವಿಮರ್ಶಾತ್ಮಕ ಆಲೋಚನಾ ಶಕ್ತಿಯನ್ನು ನಾಶಪಡಿಸುತ್ತದೆ. ಇದು ಅಂತಿಮವಾಗಿ ಶಿಕ್ಷಣದ ಕೋಮುವಾದೀಕರಣಕ್ಕೆ ದಾರಿಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಒಟ್ಟಾರೆ ಟೀಕೆಗಳಿಗಷ್ಟೇ ಸೀಮಿತವಾಗದ ಜನ ಸಂಸತ್ತು, ಎನ್ಇಪಿಗೆ ಪರ್ಯಾಯವಾಗಿ ಜನಪರ ಶಿಕ್ಷಣ ನೀತಿಯನ್ನು ಮಂಡಿಸಿದೆ. ಇದು ಕೇವಲ ಒಂದು ಕರಡು ಅಲ್ಲ, ಬದಲಾಗಿ ದೇಶದ ಲಕ್ಷಾಂತರ ಜನರ ಅಭಿಪ್ರಾಯಗಳನ್ನು ಒಳಗೊಂಡ ಒಂದು ಪ್ರಜಾಸತ್ತಾತ್ಮಕ ದಾಖಲೆಯಾಗಿದೆ. ಮೇ 2025ರಲ್ಲಿ ಬಿಡುಗಡೆಯಾದ ಈ ಕರಡನ್ನು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಹಂಚುವ ಮೂಲಕ ಸಮಿತಿಯು ನಿಜವಾದ 'ಶಿಕ್ಷಣದ ಪ್ರಜಾಪ್ರಭುತ್ವ ನೀತಿಯಾಗಿದೆ. ಶಿಕ್ಷಣವು ಸಂಪೂರ್ಣವಾಗಿ ಉಚಿತ ಮತ್ತು ಸರ್ಕಾರದ ಜವಾಬ್ದಾರಿಯಾಗಬೇಕು. ವಿಜ್ಞಾನ ಮತ್ತು ತರ್ಕದ ಅಡಿಯಲ್ಲಿ ಪಠ್ಯಕ್ರಮ ರೂಪಿಸಬೇಕು. ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಯಿತು.

Read More
Next Story