UGCET | Fee payment deadline extended till March 7
x

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರಡಿಸಿರುವ ಪ್ರಕಟಣೆ

UGCET | ಶುಲ್ಕ ಪಾವತಿಗೆ ಮಾರ್ಚ್ 7ರವರೆಗೆ ಕಾಲಾವಕಾಶ ವಿಸ್ತರಣೆ

ಇದುವರೆಗೆ ಒಟ್ಟು 3.47 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 3.36 ಲಕ್ಷ ಮಂದಿ ಈಗಾಗಲೇ ಶುಲ್ಕ ಪಾವತಿಸಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.


Click the Play button to hear this message in audio format

ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ (UGCET) ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕಾಲಾವಕಾಶ ವಿಸ್ತರಿಸಿದೆ.

ಈ ಕುರಿತು ಬುಧವಾರ(ಮಾ.4) ಮಾಹಿತಿ ನೀಡಿರುವ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ, "ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳು ಮಾರ್ಚ್ 7ರೊಳಗೆ ನಿಗದಿತ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಒಟ್ಟು 3.47 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 3.36 ಲಕ್ಷ ಮಂದಿ ಈಗಾಗಲೇ ಶುಲ್ಕ ಪಾವತಿಸಿದ್ದಾರೆ. ಬಾಕಿ ಉಳಿದಿರುವ ಸುಮಾರು 9 ಸಾವಿರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ," ಎಂದು ತಿಳಿಸಿದ್ದಾರೆ.

ಕೀ ಉತ್ತರ ಬಿಡುಗಡೆ

ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೂ ವೇಗ ನೀಡಲಾಗಿದ್ದು, ಫೆಬ್ರವರಿ 21 ಮತ್ತು 22ರಂದು ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ತಾತ್ಕಾಲಿಕ ಪಟ್ಟಿ ಹಾಗೂ ಅಂತಿಮ ಕೀ ಉತ್ತರಗಳನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪ್ರಕಟಿತ ಅಂಕಪಟ್ಟಿಯಲ್ಲಿ ಏನಾದರೂ ವ್ಯತ್ಯಾಸಗಳಿದ್ದಲ್ಲಿ ಅಥವಾ ಆಕ್ಷೇಪಣೆಗಳಿದ್ದಲ್ಲಿ ಅಭ್ಯರ್ಥಿಗಳು ಮಾರ್ಚ್ 6ರ ಬೆಳಿಗ್ಗೆ 11 ಗಂಟೆಯೊಳಗೆ ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ.

ನಿಗದಿತ ಸಮಯದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಿದೆ.

ಪಿಜಿ ಸಿಇಟಿ: ಅವಧಿ ವಿಸ್ತರಣೆ

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ 3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಶುಲ್ಕ ಪಾವತಿಸಿ ಕಾಲೇಜಿಗೆ ವರದಿ ಮಾಡಿಕೊಳ್ಳಲು ಮಾ.5ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಕೆಲವು ಅಭ್ಯರ್ಥಿಗಳು ಶುಲ್ಕ ಪಾವತಿಗೆ ಸಮಯ ಕೇಳಿದ್ದರಿಂದ ಈ ತೀರ್ಮಾನ ಮಾಡಿದ್ದು, ಸಂಜೆ‌ 4ರೊಳಗೆ ಶುಲ್ಕ ಪಾವತಿಸಿ 5.30ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಈ ಅವಧಿ ನಂತರವೂ ಯಾರು ಶುಲ್ಕ ಪಾವತಿಸಿ, ಕಾಲೇಜಿಗೆ ಹೋಗಿ ಪ್ರವೇಶ ಪಡೆಯುವುದಿಲ್ಲವೊ ಅಂತಹವರ ಸೀಟುಗಳನ್ನು 4ನೇ ಸುತ್ತಿನ ಹಂಚಿಕೆಗೆ ಪರಿಗಣಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Read More
Next Story