
ಸಾಂದರ್ಭಿಕ ಚಿತ್ರ
ಸಿಇಟಿ ರ್ಯಾಂಕಿಂಗ್‌ಗೆ ಪಿಯುಸಿ ಪರೀಕ್ಷೆ 1 ಮತ್ತು 2ರ ಪೈಕಿ ಅತ್ಯಧಿಕ ಅಂಕ ಪರಿಗಣನೆ: ವದಂತಿಗಳಿಗೆ ಕೆಇಎ ತೆರೆ
ದ್ವಿತೀಯ ಪಿಯುಸಿಯ ಎರಡೂ ಪರೀಕ್ಷೆಗಳ ಮೌಲ್ಯಮಾಪನ ಸಂಪೂರ್ಣವಾಗಿ ಮುಗಿದು, ಅವುಗಳ ಅಂತಿಮ ಫಲಿತಾಂಶ ಪ್ರಕಟವಾದ ನಂತರವೇ ಸಿಇಟಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರ ಖಚಿತಪಡಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಯುಜಿಸಿಇಟಿ-2026 (UGCET-2026) ರ್ಯಾಂಕಿಂಗ್‌ಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಮನೆಮಾಡಿದ್ದ ಬಹುದೊಡ್ಡ ಗೊಂದಲವನ್ನು ಬಗೆಹರಿಸಿದೆ.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆ-1 ಮತ್ತು ಪರೀಕ್ಷೆ-2ರಲ್ಲಿ ಪಡೆದ ಅಂಕಗಳ ಪೈಕಿ ಯಾವುದರಲ್ಲಿ ಅತ್ಯಧಿಕ ಅಂಕ ಬಂದಿರುತ್ತದೆಯೋ, ಆ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಐಎಎಸ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎರಡನೇ ಪರೀಕ್ಷೆಯ ಅಂಕಗಳನ್ನು ಸಿಇಟಿಗೆ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬ ವದಂತಿಗಳನ್ನು ಪ್ರಾಧಿಕಾರ ಸಾರಾಸಗಟಾಗಿ ತಳ್ಳಿಹಾಕಿದೆ.
ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಹಲವು ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಉತ್ತಮಪಡಿಸಿಕೊಳ್ಳುವ ಉದ್ದೇಶದಿಂದ ಇದೀಗ ಎರಡನೇ ಪರೀಕ್ಷೆಯನ್ನು ಕೂಡ ತೆಗೆದುಕೊಳ್ಳುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಕಳೆದ ವರ್ಷದಂತೆಯೇ ಈ ಬಾರಿಯೂ ಅಭ್ಯರ್ಥಿಗಳು ಎರಡೂ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳನ್ನು ಹೋಲಿಸಿ, ಅದರಲ್ಲಿ ಗರಿಷ್ಠವಾಗಿರುವ ಅಂಕಗಳನ್ನೇ ಸಿಇಟಿ ರ್ಯಾಂಕಿಂಗ್‌ಗೆ ಅಂತಿಮ ಮಾನದಂಡವಾಗಿ ತೆಗೆದುಕೊಳ್ಳಲಾಗುತ್ತದೆ.
ದ್ವಿತೀಯ ಪಿಯುಸಿಯ ಎರಡೂ ಪರೀಕ್ಷೆಗಳ ಮೌಲ್ಯಮಾಪನ ಸಂಪೂರ್ಣವಾಗಿ ಮುಗಿದು, ಅವುಗಳ ಅಂತಿಮ ಫಲಿತಾಂಶ ಪ್ರಕಟವಾದ ನಂತರವೇ ಸಿಇಟಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು. ಹೀಗಾಗಿ ಅಭ್ಯರ್ಥಿಗಳು ಗೊಂದಲಕ್ಕೀಡಾಗಬಾರದು ಎಂದು ಪ್ರಾಧಿಕಾರ ಖಚಿತಪಡಿಸಿದೆ.
ಕರ್ನಾಟಕದ ಪಠ್ಯ ಕ್ರಮಕ್ಕೆ ಮಾತ್ರ ಅನ್ವಯ
ಈ ಗರಿಷ್ಠ ಅಂಕಗಳನ್ನು ಪರಿಗಣಿಸುವ ವಿಶೇಷ ನಿಯಮವು ಕೇವಲ ಕರ್ನಾಟಕ ರಾಜ್ಯ ಪಠ್ಯಕ್ರಮದ (ಸ್ಟೇಟ್ ಬೋರ್ಡ್) ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ. ಉಳಿದಂತೆ ಕೇಂದ್ರ ಪಠ್ಯಕ್ರಮಗಳಾದ ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ಇತರ ರಾಜ್ಯಗಳ ಬೋರ್ಡ್ ಪರೀಕ್ಷೆಗಳನ್ನು ಬರೆಯುವ ಹೊರಗಿನ ಅಭ್ಯರ್ಥಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಪ್ರಾಧಿಕಾರವು ತನ್ನ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಕಿವಿಗೊಡದೆ, ತಮ್ಮ ವ್ಯಾಸಂಗದ ಕಡೆಗೆ ಮಾತ್ರ ಗಮನಹರಿಸುವಂತೆ ಕೆಇಎ ಅಧಿಕಾರಿಗಳು ಸಲಹೆ ನೀಡಿದ್ದಾರೆ.

