
ರಾಜ್ಯಾದ್ಯಂತ ನಾಳೆಯಿಂದ SSLC ಪರೀಕ್ಷೆ: ಅಂತಿಮ ಹಂತದ ತಯಾರಿಯಲ್ಲಿ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು
karnataka sslc exams 2026| ಪರೀಕ್ಷಾ ಅಕ್ರಮ ತಡೆಯಲು ಕ್ಯೂಆರ್ ಕೋಡ್, ವೆಬ್‌ಕಾಸ್ಟಿಂಗ್, 200 ಮೀಟರ್ ನಿಷೇಧಿತ ಪ್ರದೇಶದಂತಹ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ರಾಜ್ಯಾದ್ಯಂತ ನಾಳೆಯಿಂದ (ಮಾ.18) ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಒಟ್ಟು 9,02,889 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಏಪ್ರಿಲ್ 2 ರವರೆಗೆ ನಡೆಯಲಿರುವ ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.15 ರವರೆಗೆ ನಡೆಯಲಿವೆ. ಈ ಪರೀಕ್ಷೆಯ ಫಲಿತಾಂಶವು ಏಪ್ರಿಲ್ 24 ರಂದು ಪ್ರಕಟಿಸುವ ಸಾಧ್ಯತೆಗಳಿವೆ. ಇದಾದ ಬಳಿಕ, ಪರೀಕ್ಷೆ 2 (ಪೂರಕ ಪರೀಕ್ಷೆ) ಮೇ.18 ರಿಂದ ಮೇ.25 ರವರೆಗೆ ನಡೆಯಲಿದ್ದು , ಅದರ ಫಲಿತಾಂಶವು ಜೂನ್.1 ರಂದು ಪ್ರಕಟಿಸುವ ನಿರೀಕ್ಷೆಯಿದೆ.
ಈ ಬಾರಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಒಟ್ಟು 9,02,889 ವಿದ್ಯಾರ್ಥಿಗಳಲ್ಲಿ, 8,12,855 ಹೊಸ ವಿದ್ಯಾರ್ಥಿಗಳು, 62,845 ಪುನರಾವರ್ತಿತ ಅಭ್ಯರ್ಥಿಗಳು ಹಾಗೂ 27,189 ಖಾಸಗಿ ಅಭ್ಯರ್ಥಿಗಳು ಸೇರಿದ್ದಾರೆ. ರಾಜ್ಯದಾದ್ಯಂತ ಒಟ್ಟು 15,941 ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು , ಇದಕ್ಕಾಗಿ 2,871 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಈ ಬಾರಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಇಲಾಖೆಯು ಸಜ್ಜಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರದಲ್ಲೂ ವೆಬ್‌ಕಾಸ್ಟಿಂಗ್ ಕಡ್ಡಾಯಗೊಳಿಸಲಾಗಿದ್ದು, ಇಲಾಖೆಯು ಕಚೇರಿಯಿಂದಲೇ ನೇರ ನಿಗಾ ಇಡಬಹುದಾಗಿದೆ. ಪ್ರತಿ ಪ್ರಶ್ನೆ ಪತ್ರಿಕೆಯ ಮೇಲೆ ವಿಶಿಷ್ಟವಾದ ಕ್ಯೂಆರ್ ಕೋಡ್ (QR Code) ಇರುತ್ತದೆ. ಒಂದು ವೇಳೆ ಯಾರಾದರೂ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದರೆ, ಅದು ಯಾವ ಕೇಂದ್ರದಿಂದ ಸೋರಿಕೆಯಾಗಿದೆ ಎಂದು ತಕ್ಷಣ ಪತ್ತೆ ಹಚ್ಚಬಹುದಾಗಿದೆ. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇದಕ್ಕಾಗಿ ಜಾಮರ್‌ಗಳನ್ನು ಅಳವಡಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ತರುವ ಮತ್ತು ವಿತರಿಸುವ ಸಮಯದಲ್ಲಿ ಪೊಲೀಸ್ ಭದ್ರತೆಯನ್ನು ಕಡ್ಡಾಯಗೊಳಿಸಲಾಗಿದೆ.
ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ ಮತ್ತು ಸಮೀಪದ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ. ಪರೀಕ್ಷಾರ್ಥಿಗಳು ತಮ್ಮ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಮತ್ತು ಮರಳಲು ಬಿಎಂಟಿಸಿ (BMTC) ಹಾಗೂ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಪ್ರಯಾಣದ ವೇಳೆ ಪ್ರವೇಶ ಪತ್ರ (Hall Ticket) ತೋರಿಸುವುದು ಕಡ್ಡಾಯವಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು (Flying Squads) ನೇಮಿಸಲಾಗಿದೆ. ವಿದ್ಯಾರ್ಥಿಗಳು ಕೇವಲ ಸಾಮಾನ್ಯ ಅನಲಾಗ್ ವಾಚ್‌ಗಳನ್ನು ಮಾತ್ರ ಧರಿಸಬಹುದಾಗಿದ್ದು, ಸ್ಮಾರ್ಟ್ ವಾಚ್ ಮತ್ತು ಮೊಬೈಲ್ ಫೋನ್‌ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಸೈಬರ್ ನಿಗಾ
ವಾಟ್ಸಾಪ್, ಟೆಲಿಗ್ರಾಮ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರಶ್ನೆಪತ್ರಿಕೆಗಳನ್ನು ಹಬ್ಬಿಸಿ ವಂಚಿಸುವವರ ಖಾತೆಗಳನ್ನು ನಿರ್ಬಂಧಿಸಲಾಗುವುದು ಮತ್ತು ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಪರೀಕ್ಷಾ ವೇಳಾಪಟ್ಟಿ
ಮಾರ್ಚ್ 18 ಪ್ರಥಮ ಭಾಷೆ, 23 ರಂದು ವಿಜ್ಞಾನ, 25 ರಂದು ದ್ವಿತೀಯ ಭಾಷೆ, 28 ರಂದು ಗಣಿತ, 30 ರಂದು ತೃತೀಯ ಭಾಷೆ ಹಾಗೂ ಏಪ್ರಿಲ್ 2 ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಪ್ರವೇಶ ಪತ್ರವನ್ನು ಕೊಂಡೊಯ್ಯಲು ಮರೆಯಬೇಡಿ. ಪರೀಕ್ಷೆ ಆರಂಭವಾಗುವ ಕನಿಷ್ಠ 30 ರಿಂದ 45 ನಿಮಿಷಗಳ ಮೊದಲೇ ಪರೀಕ್ಷಾ ಕೇಂದ್ರದಲ್ಲಿರುವುದು ಉತ್ತಮ.

