
ಸರ್ಕಾರಿ ಶಾಲೆ (ಸಾಂದರ್ಭಿಕ ಚಿತ್ರ)
ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಎಸ್‌ಡಿಎಂಸಿ ವೇದಿಕೆ ಪಣ; 25 ಸಾವಿರ ಶಾಲೆಗಳ ವಿಲೀನಕ್ಕೆ ತೀವ್ರ ವಿರೋಧ
ಪದವಿ ಪೂರ್ವ ಶಿಕ್ಷಣದವರೆಗೆ ಸರ್ಕಾರಿ ಶಾಲೆ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಎಲ್ಲಾ ವೃತ್ತಿಪರ ಕೋರ್ಸ್‌ಗಳಲ್ಲಿ ಕನಿಷ್ಠ ಶೇ. 25 ರಷ್ಟು ಸೀಟುಗಳನ್ನು ಮೀಸಲಿಡಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಕರ್ನಾಟಕದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸರ್ಕಾರಿ ಶಾಲೆಗಳ ಅಸ್ತಿತ್ವವನ್ನು ಉಳಿಸಲು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (SDMC) ಸಮನ್ವಯ ವೇದಿಕೆಯು ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಹಲವು ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಸೋಮವಾರ(ಏ.6) ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರೊ. ಬಾಬು ಮ್ಯಾಥ್ಯೂ, "ಪಂಚಾಯತ್ ಮಟ್ಟದಲ್ಲಿ ಸಮನ್ವಯ ವೇದಿಕೆಗಳು ಗಟ್ಟಿಯಾದಾಗ ಮಾತ್ರ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಲು ಸಾಧ್ಯ. ಕಾರ್ಮಿಕ ಸಂಘಟನೆಗಳ ಮಾದರಿಯಲ್ಲಿ ಎಸ್‌ಡಿಎಂಸಿಗಳು ಒಗ್ಗೂಡಿ ಹೋರಾಡಬೇಕಿದೆ," ಎಂದು ಕರೆ ನೀಡಿದರು.
ವೇದಿಕೆಯ ಪ್ರಮುಖ 15 ನಿರ್ಣಯಗಳೇನು ?
* ರಾಜ್ಯ ಸರ್ಕಾರವು ಪಂಚಾಯಿತಿಗೊಂದು ಕರ್ನಾಟಕ ಸಾರ್ವಜನಿಕ ಶಾಲೆಯನ್ನು ಪ್ರಾರಂಭಿಸುವ ನೆಪದಲ್ಲಿ 25, 683 ಶಾಲೆಗಳನ್ನು ಮುಚ್ಚುವ ಹುನ್ನಾರವನ್ನು ಸಮಿತಿ ಬಲವಾಗಿ ಖಂಡಿಸಿತು . ಕೂಡಲೇ ಸರ್ಕಾರಿ ಶಾಲೆ ಮುಚ್ಚುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು .
* ರಾಜ್ಯ ಶಿಕ್ಷಣ ನೀತಿ ಆಯೋಗ ರೂಪಿಸಿರುವ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು.
* ಉತ್ತಮ ಎಸ್‌ಡಿಎಂಸಿಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡುವ ಪ್ರಕ್ರಿಯೆ ಪಾರದರ್ಶಕ ಮತ್ತು ವಸ್ತುನಿಷ್ಠವಾಗಿರಬೇಕು. ಉತ್ತಮ ಪ್ರಶಸ್ತಿ ಪಡೆದ ಶಾಲೆಗಳ ಯಶೋಗಾಥೆಗಳ ಸಂಕಲವನ್ನು ಪ್ರಕಟಣೆ ರೂಪದಲ್ಲಿ ಹೊರ ತರಬೇಕು.
* ಶಿಕ್ಷಣ ಹಕ್ಕು ಕಾಯಿದೆ 2009 ನ್ನು ಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಿಯಾ ಯೋಜನೆ ರೂಪಿಸಬೇಕು.
* ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಕನಿಷ್ಠ 8ನೇತರಗತಿಯವರೆಗೆ ಮಾತೃಭಾಷೆ ಕಲಿಕೆಯನ್ನು ಜಾರಿಗೊಳಿಸಬೇಕು.
* ಆಂಗ್ಲ ಭಾಷೆಯನ್ನು ಒಂದು ಭಾಷೆಯನ್ನಾಗಿ ಪ್ರಭುತ್ವದ ಮಟ್ಟಕ್ಕೆ ಕಲಿಸಲು ನುರಿತ ಆಂಗ್ಲ ಭಾಷಾ ಶಿಕ್ಷಕರನ್ನು ನೇಮಿಸಬೇಕು. ಅಗತ್ಯ ಸಂಪಂನ್ಮೂಲ ಮತ್ತು ತರಬೇತಿಯನ್ನು ನೀಡಬೇಕು.
* ರಾಜ್ಯದಲ್ಲಿ ತ್ರಿಭಾಷ ಸೂತ್ರದ ಬದಲು ದ್ವಿಭಾಷ ಸೂತ್ರವನ್ನು ಜಾರಿಗೊಳಿಸಬೇಕು.
* ಪದವಿ ಪೂರ್ವ ಶಿಕ್ಷಣದವರೆಗೆ ಸರ್ಕಾರಿ ಶಾಲೆ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಎಲ್ಲಾ ವೃತ್ತಿಪರ ಕೋರ್ಸ್‌ಗಳಲ್ಲಿ ಕನಿಷ್ಠ ಶೇ. 25 ರಷ್ಟು ಸೀಟುಗಳನ್ನು ಮೀಸಲಿಡಬೇಕು.
* ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ತುಂಬಬೇಕು.
* ಶಿಕ್ಷಕರ ತರಬೇತಿಯು ಪೋಷಕರು, ಎಸ್‌ಡಿಎಂಸಿ, ಸಮುದಾಯದ ಅಧಿಕಾರ , ಕರ್ತವ್ಯದ ವಿಷಯವನ್ನು ಒಳಗೊಂಡಿರಬೇಕು ಹಾಗೂ ಸಮುದಾಯದೊಂದಿಗೆ ಬಾಂಧವ್ಯವನ್ನು ಬೆಳೆಸುವುದು ಶಾಲೆ, ಶಿಕ್ಷಕರ ಕರ್ತವ್ಯ ಎಂಬುದನ್ನು ತರಬೇತಿ ಒಳಗೊಂಡಿರಬೇಕು.
* ಸರ್ಕಾರಿ ಶಾಲೆಗಳ ಬಗ್ಗೆ ಜನ ಸಾಮಾನ್ಯರಲ್ಲಿ ಭರವಸೆ ಮೂಡಿಸಲು ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು , ಎಲ್ಲಾ ಸರ್ಕಾರಿ ನೌಕರರು ಮತ್ತು ಜನ ಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಸೂಕ್ತ ಕಾನೂನನ್ನು ರೂಪಿಸಬೇಕು.
* ಒಂದರಿಂದ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಎಲ್ಲಾ ಶಾಲೆಗಳ ಸ್ಕೂಲ್ ಮ್ಯಾಪಿಂಗ್ ಕೈಗೊಳ್ಳಬೇಕು. ಅದರ ಅನ್ವಯ ಈಗಾಗಲೇ ಸರ್ಕಾರಿ, ಅನುದಾನಿತ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಿದ್ದಲ್ಲಿ, ಎಷ್ಟೇ ಒತ್ತಡವಿದ್ದರೂ ಖಾಸಗಿ ಅನುದಾನರಹಿತ ಶಾಲೆಗಳಿಗೆ ಅನುಮತಿ ನೀಡಬಾರದು. ಬದಲಿಗೆ ಸರ್ಕಾರಿ, ಅನುದಾನಿತ ಶಾಲೆಗಳನ್ನು ನೆರೆಹೊರೆಯ ಶಾಲೆಯನ್ನಾಗಿ ಅಭಿವೃದ್ಧಿಪಡಿಸಲು ಎಲ್ಲಾ ಬಗೆಯ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಹೊಸ ಶಾಲೆಗಳನ್ನು ಸರ್ಕಾರ ತೆರೆಯಬೇಕು.
* ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಎಲ್ಲಾ ಸುತ್ತೋಲೆ ಹಾಗು ಇತರೆ ಮಾಹಿತಿಗಳನ್ನು ಶಾಲೆಯ ಮುಖ್ಯ ಶಿಕ್ಷಕರ ಜೊತೆಗೆ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ವಾಟ್ಸ್‌ಆಪ್‌ನಲ್ಲಿ ಹಂಚಿಕೆ ಮಾಡಲು ಕ್ರಮವಹಿಸಬೇಕು.
* ಆಯಾ ಶಾಲೆಗಳ ಮುಖ್ಯ ಗುರುಗಳು ಪ್ರತೀ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರನ್ನು ಒಳಗೊಂಡ ವಾಟ್ಸ್‌ಆಪ್ ಗುಂಪನ್ನು ರಚಿಸಿ ಸರ್ಕಾರದಿಂದ ಬರುವ ಮಕ್ಕಳ ಕಲಿಕೆ, ಶಾಲಾ ನಿರ್ವಹಣೆ , ಶಾಲಾ ಅನುದಾನ ಮತ್ತು ಗುಣಮಟ್ಟ ಸುಧಾರಣೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಗುಂಪಿನಲ್ಲಿ ಹಂಚಿಕೊಳ್ಳುವಂತೆ ಆದೇಶಿಸಿಬೇಕು.
* ಯುಡೈಸ್, ಸ್ಯಾಟ್‌ಗಳ ಮೂಲಕ ಸಂಗ್ರಹಿಸುವ ಶಾಲಾ ಸಂಪನ್ಮೂಲಗಳ ಮಾಹಿತಿ, ಮೂಲಸೌಕರ್ಯ, ವಿದ್ಯಾರ್ಥಿ, ಶಿಕ್ಷಕರ ಇತ್ಯಾದಿ ಮಾಹಿತಿಯು ಈಗಾಗಲೇ ಮುಖ್ಯ ಶಿಕ್ಷಕರಿಗೆ ಲಭ್ಯವಿದ್ದು , ಈ ಎಲ್ಲಾ ಮಾಹಿತಿ ಎಸ್‌ಡಿಎಂಸಿ ಸದಸ್ಯರು, ಪೋಷಕರು ಮತ್ತು ಸಾರ್ವಜನಿಕರಿಗೆ ಲಭ್ಯವಾಗುವಂತೆ ಒಂದು ಆಪ್‌ನ್ನು ಅಭಿವೃದ್ಧಿಪಡಿಸಿ ಎಲ್ಲಾ ಸದಸ್ಯರಿಗೆ ಮತ್ತು ಪಾಲಕರಿಗೆ ಒದಗಿಸಬೇಕು .
ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರದ ಮೂಲ ವಾರಸುದಾರರಾದ ಪೋಷಕರು ಮತ್ತು ಎಸ್‌ಡಿಎಂಸಿಗಳ ಜೊತೆ ಸಮಾಲೋಚನೆ ನಡೆಸದೆ ಏಕಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಮಾರಕ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ರವರ ಅಧ್ಯಕ್ಷತೆಯಲ್ಲಿ ಸಭೆಯು ಅತೀವ ಕಳವಳ ವ್ಯಕ್ತಪಡಿಸಿದೆ.

