
ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಹಾಗೂ ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ 8 ಪ್ರಮುಖ ಗ್ಯಾರಂಟಿಗಳ ಸಮಗ್ರ ಪ್ಯಾಕೇಜ್ ಅನ್ನು ಘೋಷಿಸಿದೆ.
ಸರ್ಕಾರಿ ಶಾಲೆಗಳ ಸಮಗ್ರ ಕಾಯಕಲ್ಪ: ರಾಜ್ಯ ಸರ್ಕಾರದಿಂದ 8 ಗ್ಯಾರಂಟಿ ಘೋಷಣೆ
1ನೇ ತರಗತಿಯಿಂದಲೇ ಹಂತ ಹಂತವಾಗಿ ಕಂಪ್ಯೂಟರ್ ಶಿಕ್ಷಣವನ್ನು ಕಡ್ಡಾಯಗೊಳಿಸಲು ಹಾಗೂ 3ನೇ ತರಗತಿಯಿಂದ 'ಕೃತಕ ಬುದ್ಧಿಮತ್ತೆ' (AI) ಕುರಿತ ಪ್ರಾಥಮಿಕ ಜ್ಞಾನವನ್ನು ಬೋಧಿಸಲು ತೀರ್ಮಾನಿಸಲಾಗಿದೆ.
ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಐತಿಹಾಸಿಕ ಫಲಿತಾಂಶದ ಬೆನ್ನಲ್ಲೇ, ರಾಜ್ಯದ ಸರ್ಕಾರಿ ಶಾಲಾ ವ್ಯವಸ್ಥೆಗೆ 'ಮೇಜರ್ ಸರ್ಜರಿ' ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ, ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಹಾಗೂ ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ 8 ಪ್ರಮುಖ ಗ್ಯಾರಂಟಿಗಳ ಸಮಗ್ರ ಪ್ಯಾಕೇಜ್ ಅನ್ನು ಘೋಷಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ರೂಪಿಸಲಾಗಿರುವ ಈ ಸುಧಾರಣಾ ಯೋಜನೆ, ದೀರ್ಘಕಾಲ ಕಾಡುತ್ತಿರುವ ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಅಭಾವ ಹಾಗೂ ಹಳೇ ಕಾಲದ ಬೋಧನಾ ಪದ್ಧತಿಗಳಿಗೆ ಇತಿಶ್ರೀ ಹಾಡಲಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಗಳನ್ನು ಸಜ್ಜುಗೊಳಿಸಲು ಈ ನಿರ್ಣಾಯಕ ಹೆಜ್ಜೆ ಇಡಲಾಗಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷಕರ ಕೊರತೆಗೆ ಮುಕ್ತಿ:
ಸುಧಾರಣಾ ಕ್ರಮಗಳ ಪ್ರಮುಖ ಭಾಗವಾಗಿ ಶಿಕ್ಷಕರ ಕೊರತೆ ನೀಗಿಸಲು ಸರ್ಕಾರ ಬದ್ಧತೆ ತೋರಿದೆ. 5ನೇ ತರಗತಿಯವರೆಗೆ ಪ್ರತಿ ತರಗತಿಗೆ ಒಬ್ಬರಂತೆ ಕಾಯಂ ಶಿಕ್ಷಕರನ್ನು ಒದಗಿಸಲಾಗುವುದು. 6ನೇ ತರಗತಿಯಿಂದ ಮೇಲ್ಪಟ್ಟು ವಿಷಯವಾರು ತಜ್ಞ ಶಿಕ್ಷಕರನ್ನು ನೇಮಕ ಮಾಡಲಾಗುವುದು. ಈ ಮೂಲಕ ಒಬ್ಬರೇ ಶಿಕ್ಷಕರು ಹಲವು ತರಗತಿಗಳನ್ನು ನಿಭಾಯಿಸುವ ಅವೈಜ್ಞಾನಿಕ ವ್ಯವಸ್ಥೆಗೆ ಅಂತ್ಯ ಹಾಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಆಂಗ್ಲ ಮಾಧ್ಯಮಕ್ಕೂ ಒತ್ತು:
ಪೋಷಕರ ಬಹುಕಾಲದ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ, ಬೋಧನಾ ಮಾಧ್ಯಮದಲ್ಲಿ ಮಹತ್ವದ ಬದಲಾವಣೆ ತಂದಿದೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ಒದಗಿಸಲು ನಿರ್ಧರಿಸಲಾಗಿದ್ದು, ಗುಣಮಟ್ಟದ ಬೋಧನೆಗಾಗಿ ಶಿಕ್ಷಕರಿಗೆ ಈಗಾಗಲೇ ವಿಶೇಷ ತರಬೇತಿ ನೀಡಲಾಗುತ್ತಿದೆ. ಅಲ್ಲದೆ, ಸುಮಾರು 900 ಸರ್ಕಾರಿ ಶಾಲೆಗಳನ್ನು 'ಕರ್ನಾಟಕ ಪಬ್ಲಿಕ್ ಶಾಲೆ'ಗಳಾಗಿ (KPS) ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ದ್ವಿಭಾಷಾ ಶಿಕ್ಷಣ ಲಭ್ಯವಾಗಲಿದೆ.
ಡಿಜಿಟಲ್ ಶಿಕ್ಷಣದ ಕ್ರಾಂತಿ:
ವಿದ್ಯಾರ್ಥಿಗಳನ್ನು ಭವಿಷ್ಯದ ಡಿಜಿಟಲ್ ಯುಗಕ್ಕೆ ಸಜ್ಜುಗೊಳಿಸಲು ವಿಶೇಷ ಆದ್ಯತೆ ನೀಡಲಾಗಿದೆ. 1ನೇ ತರಗತಿಯಿಂದಲೇ ಹಂತ ಹಂತವಾಗಿ ಕಂಪ್ಯೂಟರ್ ಶಿಕ್ಷಣವನ್ನು ಕಡ್ಡಾಯಗೊಳಿಸಲು ಹಾಗೂ 3ನೇ ತರಗತಿಯಿಂದ 'ಕೃತಕ ಬುದ್ಧಿಮತ್ತೆ' (AI) ಕುರಿತ ಪ್ರಾಥಮಿಕ ಜ್ಞಾನವನ್ನು ಬೋಧಿಸಲು ತೀರ್ಮಾನಿಸಲಾಗಿದೆ. ಈ ಬದಲಾವಣೆಗೆ ಪೂರಕವಾಗಿ ಎಲ್ಲಾ ಕೆಪಿಎಸ್ (KPS) ಶಾಲೆಗಳಿಗೆ ಪ್ರತ್ಯೇಕ ಕಂಪ್ಯೂಟರ್ ಶಿಕ್ಷಕರನ್ನು ನೇಮಕ ಮಾಡಲಾಗುವುದು.
ಸರ್ವಾಂಗೀಣ ವಿಕಾಸಕ್ಕೆ ಆದ್ಯತೆ:
ಕೇವಲ ಪಠ್ಯವಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯ ದೃಷ್ಟಿಯಿಂದ ದೈಹಿಕ ಶಿಕ್ಷಣ, ಕಲೆ ಮತ್ತು ಸಂಗೀತ ವಿಷಯಗಳಿಗೆ ಇದೇ ವರ್ಷದಲ್ಲಿ ವಿಶೇಷ ಶಿಕ್ಷಕರನ್ನು ನೇಮಿಸಿಕೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ. ಜೊತೆಗೆ, ಶಿಕ್ಷಕರು ಕೇವಲ ಬೋಧನೆಯತ್ತ ಮಾತ್ರ ಗಮನಹರಿಸಲು ಅನುಕೂಲವಾಗುವಂತೆ, ಶಾಲೆಯ ಆಡಳಿತಾತ್ಮಕ ಕೆಲಸಗಳಿಗಾಗಿ ಪ್ರತ್ಯೇಕ ಬೋಧಕೇತರ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದ್ದು, ಇದು ಶಿಕ್ಷಕರ ಮೇಲಿನ ಕಾರ್ಯಭಾರವನ್ನು ತಗ್ಗಿಸಲಿದೆ.
ನಿರಂತರ ಮೌಲ್ಯಮಾಪನ ಮತ್ತು ತರಬೇತಿ:
ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಅಳೆಯಲು ಪಾಠ-ಆಧಾರಿತ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಅಲ್ಲದೆ, ಪೋಷಕರೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಳ್ಳಲು ಹಾಗೂ ಪ್ರಗತಿ ಪರಿಶೀಲನೆಗಾಗಿ ಪ್ರತಿ ಎರಡು ತಿಂಗಳಿಗೊಮ್ಮೆ ಪೋಷಕ-ಶಿಕ್ಷಕರ ಸಭೆ (PTM) ಕಡ್ಡಾಯಗೊಳಿಸಲಾಗಿದೆ. ಉನ್ನತ ಶಿಕ್ಷಣ ಹಾಗೂ ಭವಿಷ್ಯದ ವೃತ್ತಿಜೀವನಕ್ಕೆ ಅನುಕೂಲವಾಗುವಂತೆ 6ನೇ ತರಗತಿಯಿಂದಲೇ ಕೌಶಲ್ಯಾಧಾರಿತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ.
"ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದದ್ದನ್ನು ನೀಡುವ ನಿಟ್ಟಿನಲ್ಲಿ ಸರ್ಕಾರ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದು ಕೇವಲ ಆರಂಭವಷ್ಟೇ, ಮುಂದಿನ ದಿನಗಳಲ್ಲಿ ಶಾಲೆಗಳ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತೇವೆ" ಎಂದು ಸಚಿವ ಮಧು ಬಂಗಾರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

