KCET-2026| CET Admit Card Released; Exam Starts from April 22
x

ಸಾಂದರ್ಭಿಕ ಚಿತ್ರ

KCET-2026| ಸಿಇಟಿ ಪ್ರವೇಶ ಪತ್ರ ಬಿಡುಗಡೆ; ಏಪ್ರಿಲ್ 22 ರಿಂದ ಪರೀಕ್ಷೆ ಆರಂಭ

ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ. 22ರಂದು ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಮಾತ್ರ ನಡೆಯಲಿದ್ದು, ಏ. 23 ಮತ್ತು 24ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ.


Click the Play button to hear this message in audio format

2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಬರೆಯಲಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಸುದ್ದಿ ನೀಡಿದೆ. ಏ. 23 ಮತ್ತು 24 ರಂದು ನಡೆಯಲಿರುವ ಸಿಇಟಿ ಪರೀಕ್ಷೆ ಹಾಗೂ ಏ. 22 ರಂದು ನಡೆಯಲಿರುವ ಕನ್ನಡ ಭಾಷಾ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪ್ರಾಧಿಕಾರವು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಅರ್ಜಿ ಸಲ್ಲಿಸಿ, ನಿಗದಿತ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪ್ರವೇಶ ಪತ್ರ ಪಡೆಯಬಹುದು. ಅಭ್ಯರ್ಥಿಗಳು ತಮ್ಮ ಲಾಗಿನ್ ವಿವರಗಳನ್ನು ನಮೂದಿಸಿ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಮಾರ್ಗಸೂಚಿಗಳನ್ನೂ ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.

ಪರೀಕ್ಷಾ ವೇಳಾಪಟ್ಟಿ

ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ. 22ರಂದು ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಮಾತ್ರ ನಡೆಯಲಿದ್ದು, ಏ. 23 ಮತ್ತು 24ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. "ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಗೆ ನೀಡಲಾಗಿರುವ ಸೂಚನೆಗಳನ್ನು ಮತ್ತು ಕಾರ್ಯವಿಧಾನಗಳನ್ನು ಕಡ್ಡಾಯವಾಗಿ ಓದಿಕೊಳ್ಳಬೇಕು ಹಾಗೂ ಪರೀಕ್ಷಾ ದಿನದಂದು ಅವುಗಳನ್ನು ತಪ್ಪದೇ ಪಾಲಿಸಬೇಕು" ಎಂದು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

ಅರ್ಜಿ ಸಂಖ್ಯೆ ಇಳಿಕೆ

2026ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಈವರೆಗೆ ಸುಮಾರು 3,15,713 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕೆ (2025) ಹೋಲಿಸಿದರೆ ನೋಂದಣಿ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಕಳೆದ ವರ್ಷ 3.30 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಬಾರಿಯ ಸಿಇಟಿಯಲ್ಲಿ ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಫಾರ್ಮಸಿ, ಪಶುಸಂಗೋಪನೆ ಮತ್ತು ಬಿ.ಎಸ್ಸಿ ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶವಿದೆ. ಅರ್ಜಿ ಸಲ್ಲಿಸಲು ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿತ್ತು, ಇದು ನಕಲಿ ಅರ್ಜಿಗಳನ್ನು ತಡೆಯಲು ಸಹಕಾರಿಯಾಗಿದೆ.

ಅಭ್ಯರ್ಥಿಗಳು ಕೊನೆಯ ಕ್ಷಣದ ಗೊಂದಲಗಳನ್ನು ತಪ್ಪಿಸಲು ಕೂಡಲೇ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿರುವ ತಮ್ಮ ಭಾವಚಿತ್ರ, ಸಹಿ ಮತ್ತು ಪರೀಕ್ಷಾ ಕೇಂದ್ರದ ವಿವರಗಳನ್ನು ಪರಿಶೀಲಿಸಿಕೊಳ್ಳಲು ಕೋರಲಾಗಿದೆ.

Read More
Next Story