ದ್ವಿತೀಯ ಪಿಯುಸಿ ಪರೀಕ್ಷೆ: ಪ್ರಶ್ನೆ ಪತ್ರಿಕೆ ಲೀಕ್ ವದಂತಿ, ಸೈಬರ್ ದೂರು ದಾಖಲು
x

ದ್ವಿತೀಯ ಪಿಯುಸಿ ಪರೀಕ್ಷೆ: ಪ್ರಶ್ನೆ ಪತ್ರಿಕೆ ಲೀಕ್ ವದಂತಿ, ಸೈಬರ್ ದೂರು ದಾಖಲು

ಇನ್ನೆರೆಡು ಆರಂಭವಾಗಲಿರುವ ದ್ವಿತೀಯ ಪಿಯು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಸೋಷಿಯಲ್ ಮೀಡಿಯಾ ವದಂತಿಗಳನ್ನು ಕೆಎಸ್‌ಇಎಬಿ (KSEAB) ಅಧ್ಯಕ್ಷರು ಅಲ್ಲಗಳೆದಿದ್ದಾರೆ.


Click the Play button to hear this message in audio format

ರಾಜ್ಯಾದ್ಯಂತ ಶನಿವಾರದಿಂದ (ಫೆ.28) ಆರಂಭಗೊಳ್ಳಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ, ನಕಲಿ ಪ್ರಶ್ನೆ ಪತ್ರಿಕೆ ಹಾವಳಿ ಶುರುವಾಗಿದೆ. ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು, ನಕಲಿ ಪ್ರಶ್ನೆ ಪತ್ರಿಕೆ ಹರಿಬಿಡುತ್ತಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.

ಪರೀಕ್ಷೆಗೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನುವ ವದಂತಿಗಳು ಹರಿದಾಡುತ್ತಿವೆ. ಅದರಲ್ಲೂ 'Delta Kannadiga 37' ಎಂಬ ಖಾತೆಯಿಂದ ಕೇವಲ 100 ರೂ. ನೀಡಿದರೆ ಕನ್ನಡ, ಇಂಗ್ಲಿಷ್ ಮತ್ತು ಗಣಿತದ ಪ್ರಶ್ನೆ ಪತ್ರಿಕೆಗಳನ್ನು ನೀಡುವುದಾಗಿ ಪೋಸ್ಟ್ ಮಾಡಲಾಗಿದೆ. ಅಸ್ಪಷ್ಟವಾಗಿರುವ ಇಮೇಜ್‌ಗಳನ್ನು ತೋರಿಸಿ ವಿದ್ಯಾರ್ಥಿಗಳನ್ನು ನಂಬಿಸಲು ಪ್ರಯತ್ನ ನಡೆದಿದೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಕಷ್ಟಪಟ್ಟು ಓದುತ್ತಿರುವ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಯೇ ಎಂಬ ಭಯದಲ್ಲಿದ್ದಾರೆ. ಇದನ್ನೇ ಕೆಲವರು ನಂಬಿ ಹಣ ಕಳುಹಿಸಿದ್ದಾರೆ ಎನ್ನಲಾಗಿದೆ. ಆದರೆ, ಪರೀಕ್ಷೆ ಸಮಯದಲ್ಲಿ ಇಂತಹ ಕಿಡಿಗೇಡಿಗಳು ಹಣ ಮಾಡುವ ಉದ್ದೇಶದಿಂದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಥವಾ ನಕಲಿ ಪತ್ರಿಕೆಗಳನ್ನು ನೀಡಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಸಾಧ್ಯತೆ ಹೆಚ್ಚು. ಇಂತಹ ಜಾಲಗಳಿಗೆ ಸಿಲುಕಿ ಹಣ ಕಳೆದುಕೊಳ್ಳಬೇಡಿ ಮತ್ತು ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎನ್ನುತ್ತಿದೆ ಶಿಕ್ಷಣ ಇಲಾಖೆ.

ವಿದ್ಯಾರ್ಥಿಗಳ ದಾರಿ ತಪ್ಪಿಸುತ್ತಿರುವ ಇಂತಹ ಖಾತೆಗಳ ವಿರುದ್ಧ ಸೈಬರ್ ಪೊಲೀಸರಿಗೆ ದೂರು ನೀಡಲು ಪರೀಕ್ಷಾ ಮಂಡಳಿ ಮುಂದಾಗಿದೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಅವರು ಸ್ಪಷ್ಟನೆ ನೀಡಿದ್ದು, "ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದೆಲ್ಲಾ ಸುಳ್ಳು ಸುದ್ದಿ. ಶಿಕ್ಷಣ ಇಲಾಖೆಗೆ ಯಾವುದೇ ಭಯವಿಲ್ಲ, ಪರೀಕ್ಷೆಗಳು ಸುಗಮವಾಗಿ ನಡೆಯಲಿವೆ, ವಿದ್ಯಾರ್ಥಿಗಳು ಇಂತಹ ಸುಳ್ಳು ಸುದ್ದಿಗಳನ್ನು ನಂಬದೆ, ಆತ್ಮವಿಶ್ವಾಸದಿಂದ ಪರೀಕ್ಷೆಗೆ ಸಿದ್ಧರಾಗಬೇಕು" ಎಂದು ಅವರು ತಿಳಿಸಿದ್ದಾರೆ.

ಯಾವ್ಯಾವ ಪರೀಕ್ಷೆ ಭದ್ರತೆಗಳೇನು?

ಈ ಬಾರಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಮಂಡಳಿ ಸಜ್ಜಾಗಿದ್ದು, ಫೆ. 28 ರಿಂದ ಮಾ. 17ರ ವರೆಗೆ ಪರೀಕ್ಷೆ ನಡೆಯಲಿದೆ. ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 1,217 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ವೆಬ್ ಕಾಸ್ಟಿಂಗ್ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಮಂಡಳಿಯ ಕಚೇರಿಯಿಂದಲೇ ನೇರ ನಿಗಾ ಇಡಬಹುದಾಗಿದೆ. ಪ್ರತಿ ಪ್ರಶ್ನೆ ಪತ್ರಿಕೆಯ ಮೇಲೆ ವಿಶಿಷ್ಟವಾದ ಕ್ಯೂಆರ್ ಕೋಡ್ ಇರುತ್ತದೆ. ಒಂದು ವೇಳೆ ಯಾರಾದರೂ ಪೇಪರ್ ಫೋಟೋ ತೆಗೆದರೆ ಅದು ಯಾವ ಕೇಂದ್ರದಿಂದ ಲೀಕ್ ಆಗಿದೆ ಎಂದು ತಕ್ಷಣ ಪತ್ತೆ ಹಚ್ಚಬಹುದು.

ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಫೋನ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇದಕ್ಕಾಗಿ ಜಾಮರ್ ಅಳವಡಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ತರುವ ಮತ್ತು ವಿತರಿಸುವ ಸಮಯದಲ್ಲಿ ಪೊಲೀಸ್ ಭದ್ರತೆಯನ್ನು ಕಡ್ಡಾಯಗೊಳಿಸಲಾಗಿದೆ.

ಫೆ. 28ರಂದು ಕನ್ನಡ, ಅರೇಬಿಕ್ ಪರೀಕ್ಷೆಗಳು ನಡೆಯಲಿವೆ. ಮಾ. 3ರಂದು ಇಂಗ್ಲಿಷ್, 6ರಂದು ಭೌತಶಾಸ್ತ್ರ, 10ಕ್ಕೆ ಅರ್ಥಶಾಸ್ತ್ರ, 14ರಂದು ಲೆಕ್ಕಶಾಸ್ತ್ರ ಹಾಗೂ ಗಣಿತ, 16ರಂದು ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ, 17ರಂದು ಹಿಂದುಸ್ತಾನಿ ಸಂಗೀತ, ರೀಟೇಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ ಪರೀಕ್ಷೆಗಳು ನಡೆಯಲಿವೆ.

ಹಿಂದೆಯೂ ನಡೆದಿತ್ತು

ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯ ಗಣಿತ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಅಧಿಕಾರಿಗಳಿಗೆ ದೊಡ್ಡ ಆಘಾತ ನೀಡಿತ್ತು. ಶಿವಮೊಗ್ಗದ ಕಾಲೇಜುಗಳಿಗೆ ನೀಡಲಾಗಿದ್ದ ಪ್ರಶ್ನೆ ಪತ್ರಿಕೆಯ ಪ್ರತಿಯು ಪರೀಕ್ಷೆ ಆರಂಭವಾಗುವ ಮೊದಲೇ ವಾಟ್ಸಾಪ್ ಮೂಲಕ ಹರಿದಾಡಿತ್ತು. ಶಿವಮೊಗ್ಗದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPUE) ಕಾಲೇಜುಗಳಿಗೆ ಭೇಟಿ ನೀಡಿದಾಗ ಈ ವಿಚಾರ ಬಯಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಕೋಡ್ ಹೊಂದಿದ್ದ ಪ್ರಶ್ನೆ ಪತ್ರಿಕೆಯು ತುಮಕೂರು ಜಿಲ್ಲೆಯಲ್ಲೂ ಚಲಾವಣೆಯಲ್ಲಿದ್ದುದು ವರದಿಯಾಗಿತ್ತು.

2016ರಲ್ಲಿ ನಡೆದ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಹೀಗಾಗಿ ಒಂದೇ ವರ್ಷದಲ್ಲಿ ಎರಡು ಬಾರಿ ರಸಾಯನಶಾಸ್ತ್ರ ಪರೀಕ್ಷೆ ರದ್ದಾಗಿತ್ತು. 2016ರ ಮಾರ್ಚ್ 21ರಂದು ನಡೆಯಬೇಕಿದ್ದ ಪರೀಕ್ಷೆ ಲೀಕ್ ಆಗಿದ್ದರಿಂದ ರದ್ದಾಯಿತು. ಎರಡನೇ ಬಾರಿ ಮರುಪರೀಕ್ಷೆ ಮಾರ್ಚ್ 31ಕ್ಕೆ ನಿಗದಿಯಾಗಿತ್ತು. ಆದರೆ ಅಂದು ಬೆಳಿಗ್ಗೆಯೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಅಂತಿಮವಾಗಿ ಏಪ್ರಿಲ್ 12ರಂದು ಮೂರನೇ ಬಾರಿಗೆ ಪರೀಕ್ಷೆ ನಡೆಸಲಾಯಿತು. ಈ ಪ್ರಕರಣದಲ್ಲಿ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳು ಮತ್ತು ಪ್ರಭಾವಿ ವ್ಯಕ್ತಿಗಳನ್ನು ಸಿಐಡಿ ಬಂಧಿಸಿತ್ತು.

2012ರಲ್ಲಿ ಕೆಲವು ವಿಷಯಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಆರೋಪ ಕೇಳಿಬಂದಿತ್ತು. ಆಗಿನ ಶಿಕ್ಷಣ ಸಚಿವರು ಈ ಬಗ್ಗೆ ಕಟ್ಟುನಿಟ್ಟಿನ ತನಿಖೆಗೆ ಆದೇಶಿಸಿದ್ದರು. ಪ್ರತಿ ವರ್ಷವೂ ಪರೀಕ್ಷೆಗೆ ಒಂದು ದಿನ ಮುನ್ನ ಕಿಡಿಗೇಡಿಗಳು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಥವಾ ಮಾಡೆಲ್ ಪೇಪರ್‌ಗಳನ್ನು ಎಡಿಟ್ ಮಾಡಿ "ಇದೇ ಅಸಲಿ ಪೇಪರ್" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಸಾಮಾನ್ಯವಾಗಿದೆ.

Read More
Next Story