
ಆರೋಪಿಗಳಾದ ಮೊಹಮ್ಮದ್ ನಿಶಾದ್ ಹಾಗೂ ಆದೇಶ್ ಪಿ ದಿಲೀಪ್
ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ; 21 ಕೆ.ಜಿ ಮಾದಕ ವಸ್ತು ಜಪ್ತಿ
ಯಲಹಂಕದ ಬಾಲಕರ ಹಾಸ್ಟೆಲ್ ರಸ್ತೆಯ ಫುಟ್‌ಪಾತ್ ಮೇಲೆ ಆರೋಪಿಗಳು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಯಲಹಂಕ ಉಪನಗರ ಪೊಲೀಸರು, ಬರೋಬ್ಬರಿ 21 ಕೆ.ಜಿ 125 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಏ.3 ರಂದು ಮಧ್ಯಾಹ್ನ ಸುಮಾರು 12.30ರ ವೇಳೆಗೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗನಾಯಕನಹಳ್ಳಿ ಸಮೀಪವಿರುವ ಹಾರೋಹಳ್ಳಿ ಗ್ರಾಮದ ಇಸ್ರೋ ಲೇಔಟ್ ಬಳಿ ಈ ದಾಳಿ ನಡೆದಿದೆ. ಇಲ್ಲಿನ ಬಾಲಕರ ಹಾಸ್ಟೆಲ್ ರಸ್ತೆಯ ಫುಟ್‌ಪಾತ್ ಮೇಲೆ ಆರೋಪಿಗಳು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ದಾಳಿ ನಡೆಸಿದ್ದಾರೆ.
10.50 ಲಕ್ಷ ರೂ. ಮೌಲ್ಯದ ಗಾಂಜಾ ವಶ
ಬಂಧಿತರನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಮಾರಸಂದ್ರ ನಿವಾಸಿಗಳಾದ ಮೊಹಮ್ಮದ್ ನಿಶಾದ್ (24) ಹಾಗೂ ಆದೇಶ್ ಪಿ.ದಿಲೀಪ್ (19) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಒಟ್ಟು 21.125 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದು,ಇದರ ಮಾರುಕಟ್ಟೆ ಮೌಲ್ಯ ಸುಮಾರು 10.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ಕಾರ್ಯಾಚರಣೆ
ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಜಿ.ಕೆ ಮಿಥುನ್ ಕುಮಾರ್ ಮಾರ್ಗದರ್ಶನ ಹಾಗೂ ಯಲಹಂಕ ಉಪವಿಭಾಗದ ಎಸಿಪಿ ನರಸಿಂಹಮೂರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ತಂಡದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸುಧಾಕರ್ ರೆಡ್ಡಿ ಸೇರಿ ಇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

