Baruipur rape and murder case: CM Suvendu directs to submit report within 72 hours
x

ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ 

ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ: 72 ಗಂಟೆಗಳಲ್ಲಿ ವರದಿ ಸಲ್ಲಿಸಲು ಸಿಎಂ ಸುವೇಂದು ಸೂಚನೆ

ದೂರು ದಾಖಲಾದ ನಂತರ ಪೊಲೀಸರ ಕಡೆಯಿಂದ ಶೇಕಡಾ ಒಂದರಷ್ಟು ನಿರ್ಲಕ್ಷ್ಯ ನಡೆದಿದ್ದರೂ ಸಹ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸುವೇಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ


Click the Play button to hear this message in audio format

ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ನಡೆದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಯ ಕುರಿತು 72 ಗಂಟೆಗಳ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಿದ್ಧ್ ನಾಥ್ ಗುಪ್ತಾ ಅವರಿಗೆ ನಿರ್ದೇಶನ ನೀಡಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಚೇರಿಯಲ್ಲಿ ಸಂತ್ರಸ್ತ ಬಾಲಕಿಯ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಮಂಡಲ್‌ ಕುಟುಂಬಕ್ಕೂ ನ್ಯಾಯ

"ನಾವು ಸಂಪೂರ್ಣ ವಿಷಯದ ಪ್ರಾಥಮಿಕ ವಿಶ್ಲೇಷಣೆ ನಡೆಸಿದ್ದೇವೆ. ದೂರು ದಾಖಲಾದ ನಂತರ ಪೊಲೀಸರ ಕಡೆಯಿಂದ ಶೇಕಡಾ ಒಂದರಷ್ಟು ನಿರ್ಲಕ್ಷ್ಯ ನಡೆದಿದ್ದರೂ ಸಹ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆಯ ಬಳಿಕ ಉದ್ರಿಕ್ತ ಗುಂಪಿನಿಂದ ಹಲ್ಲೆಗೊಳಗಾಗಿ ಮೃತಪಟ್ಟ ಇಂದ್ರಜಿತ್ ಮಂಡಲ್ ಸಂಪೂರ್ಣ ನಿರಪರಾಧಿಯಾಗಿದ್ದಾರೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಮಂಡಲ್ ಕುಟುಂಬಕ್ಕೂ ನ್ಯಾಯ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ. ಪೊಲೀಸ್ ತನಿಖೆಯ ಪ್ರಗತಿಯ ಬಗ್ಗೆ ಬಾಲಕಿಯ ಕುಟುಂಬಸ್ಥರು ತೃಪ್ತಿ ವ್ಯಕ್ತಪಡಿಸಿದ್ದು, ಬಾಲಕಿಯ ಕುಟುಂಬದ ಮನವಿಯ ಮೇರೆಗೆ ಸುರ್ಜಾಪುರದಲ್ಲಿ ಮುಂದಿನ ವಾರ ನೂತನ ಪೊಲೀಸ್ ಹೊರಠಾಣೆಯನ್ನು ಉದ್ಘಾಟಿಸುವುದಾಗಿ ಘೋಷಿಸಿದ್ದಾರೆ.

ಸಾರ್ವಜನಿಕ ಆಸ್ತಿ ಧ್ವಂಸ

ಭಾನುವಾರ 11 ವರ್ಷದ ಬಾಲಕಿಯ ಶವ ಪತ್ತೆಯಾದ ನಂತರ ನಡೆದ ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಧ್ವಂಸಗೊಳಿಸಿದ, ಪೊಲೀಸ್ ವಾಹನಗಳು ಹಾಗೂ ರೈಲ್ವೆ ಹಳಿಗಳಿಗೆ ಹಾನಿ ಮಾಡಿದ ಸುಮಾರು 200 ಜನರನ್ನು ಈಗಾಗಲೇ ಗುರುತಿಸಲಾಗಿದೆ. ಹಿಂಸಾಚಾರದಲ್ಲಿ ಭಾಗಿಯಾದ ಒಬ್ಬ ವ್ಯಕ್ತಿಯನ್ನೂ ಬಿಡುವುದಿಲ್ಲ. ಎಲ್ಲರನ್ನೂ ಬಂಧಿಸಲಾಗುವುದು. ಅಮಾಯಕ ಯುವಕನ ಮೇಲಿನ ಗುಂಪು ಹಲ್ಲೆಯಲ್ಲಿ ಭಾಗಿಯಾದವರ ವಿರುದ್ಧ ಕೊಲೆ ಆರೋಪದಡಿ ಮೊಕದ್ದಮೆ ದಾಖಲಿಸಲು ಸೂಚಿಸಿದ್ದಾರೆ.

ರಾಜಕೀಯ ಪ್ರಚೋದನೆಗೆ ತಕ್ಕ ಪಾಠ

ಹಿಂಸಾಚಾರವನ್ನು ಪ್ರಚೋದಿಸಿದ ವಿರೋಧ ಪಕ್ಷಗಳ ನಾಯಕರು ಹಾಗೂ ಕೆಲವು ಮೂಲಭೂತವಾದಿ ಶಕ್ತಿಗಳ ವಿರುದ್ಧ ತನಿಖಾಧಿಕಾರಿಗಳು ಕರಾರುವಾಕ್ಕಾದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟವರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅಗ್ಗದ ಪ್ರಚಾರ ಪಡೆಯಲು ಯತ್ನಿಸುತ್ತಿರುವವರ ಕರೆ ದಾಖಲೆಗಳನ್ನು ಡಿಜಿಪಿ ನೇತೃತ್ವದ ಎಸ್‌ಟಿಎಫ್ ಸಂಗ್ರಹಿಸಿದ್ದು, ಸರ್ಕಾರ ಅವರಿಗೆ ಸರಿಯಾದ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸುಪ್ರೀಂ ಮಾರ್ಗಸೂಚಿ ಪಾಲನೆಗೆ ಸೂಚನೆ

ರಾಜ್ಯಾದ್ಯಂತ ಪೊಲೀಸ್ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿರುವ ಮುಖ್ಯಮಂತ್ರಿಗಳು, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್‌) ನಿಬಂಧನೆಗಳು, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ಮತ್ತು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಶಾಸನಬದ್ಧ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

Read More
Next Story